ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಮಕಾಲೀನ ಸಾಹಿತ್ಯ ಸಮಸ್ಯೆಗಳು

Last Updated 6 ಅಕ್ಟೋಬರ್ 2012, 19:30 IST
ಅಕ್ಷರ ಗಾತ್ರ


Bah! I have sung women in three cities,
But it is all the same;
And I will sing of the sun.
  --Ezra Pound, “Cino”

ಎಷ್ಟೊಂದು ನಗರಗಳು, ಎಷ್ಟೊಂದು ಬೀದಿಗಳು, ಎಷ್ಟೊಂದು ವರ್ಷಗಳು ಕಳೆದಿವೆ! ಎಷ್ಟೊಂದು ಜನಗಳು, ಎಷ್ಟೊಂದು ನುಡಿಗಳು, ಎಷ್ಟೊಂದು ವಿಚಾರಗಳು! ತೆರೆಯುತ್ತಿವೆ, ಮುಚ್ಚುತ್ತಿವೆ, ದಿಗಂತದಂತೆ.

ನಿನ್ನೆ ಅರಳಿದ ಗುಲಾಬಿಯ ಪಕಳೆಗಳು ಇಂದು ಉದುರಿದಾಗಲೂ ಒಂದು ಯುಗ ಉರುಳಿದಂತೆ ತೋರುತ್ತದೆ. ಇವೆಲ್ಲವನ್ನೂ ಇಲ್ಲದಂತೆ ನಟಿಸಿ ಯುನಿವರ್ಸಲ್ ಆಗಿ ನಾನು ಸಾಹಿತ್ಯದ ಬಗ್ಗೇ ಆಗಲಿ, ನನ್ನ ಅನುಭವಗಳ ಬಗ್ಗೇ ಆಗಲಿ, ಒಂದು ಕವಿತೆಯನ್ನೇ ಆಗಲಿ ಬರೆಯುವುದು ಹೇಗೆ ತಾನೆ ಸಾಧ್ಯ?

ಅದಕ್ಕೇ ಕೆಲವು ಸಲ ಮಾತಿಗಿಂತಲು ಮೌನವೇ ವಾಸಿ ಎನಿಸುತ್ತದೆ. ಮೌನವೊಂದು ಇಲ್ಲದಿರುತ್ತಿದ್ದರೆ ಮನುಷ್ಯ ಮಾತು ಬಂದಾಗಲೇ ಫಡ್ಚ ಆಗುತ್ತಿದ್ದ. ಇಂಥ ಮೌನಗಳನ್ನೂ ನನ್ನ ಬರಹಗಳಲ್ಲಿ ಇರಿಸುವುದು ನನಗೆ ಇಷ್ಟ.

ಮೌನಗಳೆಂದರೆ ಎಡೆಗಳು, ಬಿರುಕುಗಳು; ಕೆಲವೊಮ್ಮೆ ಅಲ್ಲಿ ತಂಗಬೇಕು; ಮನುಷ್ಯರ ನಿಜವಾದ ಸ್ವಾತಂತ್ರ್ಯ ಇರುವುದೇ ಅಲ್ಲಿ. ಒಬ್ಬ ಲೇಖಕನಾಗಿ ಹಲವಾರು ಪ್ರಶ್ನೆಗಳನ್ನು ಎದುರಿಸಿದ್ದೇನೆ; ಅವು ಕೆಲವೊಮ್ಮೆ ನನ್ನೊಳಗಿಂದಲೇ ಬಂದಿವೆ, ಕೆಲವೊಮ್ಮೆ ಹೊರಗಿನಿಂದ.

ಕೆಲವು ಮೊನಚು ಕಲ್ಲುಗಳಂತೆ ಎಡವಿ ಘಾಸಿ ಉಂುಮಾಡಿವೆ. ಬಸವನ ಹುಳ ನನಗೆ ಪ್ರಿಯವಾದ ಪ್ರಾಣಿ; ಅದು ನೋವಾದಾಗ ತನ್ನ ಕೊಂಬುಗಳನ್ನು ಒಳಗೆಳೆದುಕೊಳ್ಳುತ್ತದೆ, ಸ್ಥಗಿತವಾಗುತ್ತದೆ. ಎಂದರೆ  ನಿಷ್ಕ್ರಿಯ ಎಂದಲ್ಲ, ಅದು ಸ್ಪಂದಿಸುತ್ತದೆ, ಯೋಚಿಸುತ್ತದೆ, ಕಾಯುತ್ತದೆ. ಕೆಲವರಿಗೆ ಗೂಳಿಯ ಹಾಗೆ ಮುನ್ನುಗ್ಗುವುದು ಇಷ್ಟ. ಅವರವರಿಗೆ ಅವರವರ ಸತ್ಯ.

ಕವಿ ತಾನು ಎಷ್ಟು ಮುಕ್ತವಾಗಿ ಬರೆಯಬೇಕೆನಿಸಿದರೂ ಅದು ಸಾಧ್ಯವಾಗುವುದಿಲ್ಲ. ಸಂಪೂರ್ಣ ಮುಕ್ತತೆ ಎನ್ನುವುದೇ ಇಲ್ಲ. ಪರಿಪೂರ್ಣತೆಯೂ ಇಲ್ಲ. ಭಾಷೆಯಿಂದಲೇ ಈ ಸಮಸ್ಯೆ ಸುರುವಾಗುತ್ತದೆ. ಭಾಷೆ ಮನುಷ್ಯನಿಗೆ ದತ್ತವಾದುದು; ಈ ದತ್ತವಾದ ಸಂಗತಿಗಳೆಲ್ಲವೂ ಮನುಷ್ಯನಿಗೆ ಆಕರಗಳೂ ಹೌದು, ಸವಾಲುಗಳೂ ಹೌದು.

ಹ್ಹಾ! ಈ ವ್ಯಾಕರಣ ಇರುವ ತನಕ ದೇವರನ್ನು ಏನೂ ಮಾಡುವ ಹಾಗಿಲ್ಲವಲ್ಲ ಎನ್ನುತ್ತಾನೆ ನೀತ್ಸೆ. ಕವಿತೆಯೆಂದರೆ ವ್ಯಾಕರಣವನ್ನು ಮೀರುವ ಪ್ರಯತ್ನ.  ಕವಿತೆಯೆಂದರೆ... ಇದಕ್ಕೊಂದು ವಿವರಣೆ ಕೊಡುತ್ತ ನಾನು ತಪ್ಪು ಮಾಡುತ್ತಿದ್ದೇನೆ ಎನಿಸುತ್ತದೆ. ಯಾಕೆಂದರೆ ಕವಿತೆ ಯಾವ ವಿವರಣೆಗೂ ಸಿಗುವಂಥದಲ್ಲ - ಈ ಮಾತಿನ ವಿರೋಧಾಭಾಸದ ಜತೆಯೂ ನಾವು ಬದುಕಬೇಕಾಗಿದೆ. ಈ ಅಮೂರ್ತ ವಿಚಾರಗಳ ನಂತರ ನಾನೊಂದು ಮೂರ್ತ ಉದಾಹರಣೆಗೆ ಬರುತ್ತೇನೆ:

ಟಿ. ಎಸ್. ಎಲಿಯೆಟ್‌ನ ಸುಪ್ರಸಿದ್ಧ ಪ್ರಬಂಧ Tradition and Individual Talent `ಪರಂಪರೆ ಮತ್ತು ವೈಯಕ್ತಿಕ ಪ್ರತಿಭೆ  ಇದೆ. 19ನೇ ಶತಮಾನದ ರೊಮ್ಯೋಂಟಿಕ್ ಕವಿ ವಿಲಿಯಮ್ ವರ್ಡ್ಸ್‌ವರ್ತ್‌ನ ‘Poetry is the spontaneous overflow of powerful feelings: it takes its origin from emotion recollected in tranquillity’ ಎಂಬ ಹೇಳಿಕೆಯನ್ನು ಖಂಡಿಸಲೆಂದೇ ಬರೆದ ಪ್ರಬಂಧ ಇದು,

ಹಾಗೂ ಕವಿತೆಯ ಕುರಿತಾದ ತನ್ನದೇ ವ್ಯಾಖ್ಯೆಯನ್ನು ನೀಡುವುದಕ್ಕೆಂದು. ಎಲಿಯೆಟ್ ಈ ಸುದೀರ್ಘ ಪ್ರಬಂಧದಲ್ಲಿ ಕವಿತೆ, ಪರಂಪರೆ, ವ್ಯಕ್ತಿಪ್ರತಿಭೆ ಮುಂತಾದವುಗಳ ಕುರಿತು ಅನೇಕ ವಿಚಾರಗಳನ್ನು ಚರ್ಚಿಸುತ್ತಾನೆ. ಆದರೆ ಅವನ ಮುಖ್ಯ ಆಸಕ್ತಿ ಇರುವುದು ತನ್ನ ಅಭಿಜಾತ ಮಾರ್ಗವನ್ನು ಸಮರ್ಥಿಸುವುದರಲ್ಲಿ.

ಕವಿತೆಯ ಬಗೆಗಿನ ಅವನ ವ್ಯಾಖ್ಯೆಯನ್ನು ಈ ಮಾತುಗಳಿಂದ ತಿಳಿದುಕೊಳ್ಳಬಹುದು:  Poetry is not a turning loose of emotion, but an escape from emotion; it is not the expression of personality, but an escape from personality’~ ವರ್ಡ್ಸ್‌ವರ್ತನ ಮಾತುಗಳು ಅವನ Lyrical Ballads    (1802) ಮುನ್ನುಡಿಯಲ್ಲಿ  ಬರುತ್ತವೆ.

ಎಲಿಯಟ್‌ನ ಪ್ರಬಂಧ The Sacred Wood  (1921) ಎಂಬ ಅವನ ಲೇಖನ ಸಂಗ್ರಹದಲ್ಲಿ ಬರುತ್ತದೆ. ಈ ಎರಡೂ ಉಲ್ಲೇಖಗಳ ನಡುವೆ ಒಂದು ಶತಮಾನಕ್ಕಿಂತ ಹೆಚ್ಚಿನ ಕಾಲಾವಧಿಯಿದೆ ಎನ್ನುವುದು ಗಮನಾರ್ಹ.

ಇಬ್ಬರೂ ಕವಿಗಳು ತಮ್ಮದೇ ಕಾಲದಲ್ಲಿ ಕ್ರಾಂತಿಕಾರಿಗಳೇ. ಇಂದು ಓದುವವರಿಗೆ ಯಾರ ಮಾತು ಸರಿ, ಯಾರ ಮಾತು ತಪ್ಪು? ಎಲಿಯೆಟ್ ಇಮೋಶನ್ ವೈಯಕ್ತಿಕವಾಗಬಾರದು ಎನ್ನುತ್ತಾನೆ. ಒಳ್ಳೇ ಇಮೋಶನ್, ಕೆಟ್ಟ ಇಮೋಶನ್ ಎಂದು ಪ್ರತ್ಯೇಕಿಸುತ್ತಾನೆ.

ಹಾಗೂ ಇಮೋಶನ್ ಅಲ್ಲದೆ ಫೀಲಿಂಗ್ಸ್ ಕೂಡಾ ಗುರುತಿಸುತ್ತಾನೆ, ಆದರೆ ಅವನ ದೃಷ್ಟಿಯಲ್ಲಿ ಫೀಲಿಂಗ್ಸ್ ಎನ್ನುವುದು ಇಮೋಶನಿನಷ್ಟು ಉತ್ತಮ ಭಾವವಲ್ಲ; ಫೀಲಿಂಗ್ಸ್ ಹೆಚ್ಚು ಹಗುರವಾದ್ದು, ಕ್ಷಣಿಕವಾದ್ದು.

ಹಾಗೂ ಕವಿಗೆ ಮರುಸ್ಮರಣೆಗಿಂತ (ರಿಕಲೆಕ್ಷನ್) ಏಕಾಗ್ರತೆ (ಕಾನ್ಸೆಂಟ್ರೇಶನ್), ಭಾವಕ್ಕಿಂತ (ಇಮೋಶನ್)ಮಾಧ್ಯಮದ (ಮೀಡಿಯಂ) ಮೇಲೆ ಹಿಡಿತ ಮುಖ್ಯ ಎನ್ನುತ್ತಾನೆ. ನಿಜ, ಇಂಥ ಮಾತಿನಲ್ಲಿ    ವರ್ಡ್ಸ್‌ವರ್ತ್ ಎಲಿಯೆಟ್‌ನನ್ನು ಸರಿಗಟ್ಟಲಾರ.

ಯಾಕೆಂದರೆ ಆತ ಹೆಚ್ಚು ಓದಿದವನಲ್ಲ, ಅಕಡೆಮಿಕ್ ಅಂತೂ ಅಲ್ಲವೇ ಅಲ್ಲ. ಆದರೆ ಅವನ ಇನ್ನೊಂದು ಜೀವದಂತಿದ್ದ ಕಾಲರಿಜ್ ಮಾತ್ರ ಇಂಥ ಅಮೂರ್ತತೆಗಳ ಕೂದಲು ಸೀಳಬಲ್ಲವನಾಗಿದ್ದ.

ಕಾಲರಿಜ್ ಇಮ್ಯೋಜಿನೇಶನ್ ಮತ್ತು ಫ್ಯಾನ್ಸಿ ಎಂದು ಮುಂತಾಗಿ ಸೃಜನಾತ್ಮಕತೆಯ ಬಗ್ಗೆ ಸಾಕಷ್ಟು ಹೇಳಿದ್ದಾನೆ. ಕಲ್ಪನೆ(ಇಮ್ಯೋಜಿನೇಶನ್) ಪ್ರೈಮರಿ ಮತ್ತು ಸೆಕೆಂಡರಿ ಎಂಬುದಾಗಿ ಎರಡು ಬಗೆಯದು ಎನ್ನುತ್ತಾನೆ.

ಪ್ರೈಮರಿ ಕಲ್ಪನೆ ಅಪ್ರಜ್ಞಾಪೂರ್ಣವಾದುದು, ಅದು ಹೊಸ ವಿಚಾರಗಳನ್ನು ತಾನೇ ತಾನಾಗಿ (ಸ್ಪಾಂಟೇನಿಯಸ್) ಸೃಷ್ಟಿಸಬಲ್ಲುದು; ಸೆಕೆಂಡರಿ ಕಲ್ಪನೆ ಹೆಚ್ಚು ಸ್ವಯಂಪ್ರಜ್ಞೆಯುಳ್ಳದ್ದು (ಸೆಲ್ಫ್ ಕಾನ್ಶಿಯಸ್), ಆದ್ದರಿಂದ ಅದರ ಮೂಲಕ ಸೃಷ್ಟಿಯಾದುದು ಪರಿಪೂರ್ಣವಲ್ಲ (ಇಂಪರ್ಫೆಕ್ಟ್). ಇನ್ನು ಫ್ಯಾನ್ಸಿ ಎನ್ನುವುದು ಕೆಳದರ್ಜೆಯ ಕಾಲ್ಪನಿಕತೆ;

ಫ್ಯಾನ್ಸಿಯನ್ನು ಬಳಸಿ ಬರೆದ ಕವಿತೆ ಈಗಾಗಲೇ ಇರುವ ವಿಚಾರಗಳನ್ನು ಎತ್ತಿಕೊಂಡು, ಅವನ್ನು ಇನ್ನೊಂದು ರೀತಿಯಲ್ಲಿ ರಚಿಸಬಹುದು, ಅಥವಾ ಅವುಗಳ ಮಧ್ಯೆ ಹೊಸದೊಂದು ಸಂಬಂಧವನ್ನು ಸೂಚಿಸಬಹುದು; ಆದರೆ ಅದು ಸೃಷ್ಟಿ ಎನಿಸದು.

ಎಲಿಯೆಟ್ ನಮ್ಮ ಕಾಲಕ್ಕೆ ಹತ್ತಿರ ಇರುವ ಕಾರಣ ಸಹಜವಾಗಿಯೇ ನಮಗೆ ಅವನು ಬಳಸುವ ಪರಿಭಾಷೆ ಹೆಚ್ಚು ಇಷ್ಟವಾಗಬಹುದು, ಆದ್ದರಿಂದ ಅವನ ಮಾತುಗಳೇ ಹೆಚ್ಚು ಸರಿ ಎನಿಸಬಹುದು. ಅದರೂ ಕವಿತೆಯೆಂದರೇನು, ಅದು ಹೇಗೆ ಮೂಡಿಬರುತ್ತದೆ ಎಂದು ಮುಂತಾದ ಮೂಲಭೂತ ಪ್ರಶ್ನೆಗಳನ್ನು ಯಾರೇ ಉತ್ತರಿಸಲು ಯತ್ನಿಸಿದರೂ ಅತೃಪ್ತಿಯೊಂದು ಉಳಿಯುತ್ತದೆ.

ಅತೃಪ್ತಿಗಿಂತಲೂ ಹೆಚ್ಚಾಗಿ, ಇಂಥ ಜಿಜ್ಞಾಸೆಯ ನಿರರ್ಥಕತೆ. ಕಾವ್ಯಸೃಷ್ಟಿಯ ಬಗೆಗೆ ಎಷ್ಟೇ ಲೇಖನಗಳನ್ನು ಓದಿದರೂ, ಅದೇನೆಂದು ಖಚಿತವಾಗಿ ನಮಗೆ ತಿಳಿಯುವುದಿಲ್ಲ. ಅರಿಸ್ಟಾಟಲ್‌ನಿಂದ ಹಿಡಿದು ಇಂದಿನ ತನಕದ ಎಲ್ಲಾ ಕಾವ್ಯ ಚಿಂತಕರ ಬರಹಗಳ ಬಗ್ಗೆಯೂ ಇದು ಹೀಗೆಯೇ.

ಒಂದು ವೇಳೆ ನಮಗೆ ಪಂಪ ರನ್ನರೇ ಭೇಟಿಯಾಗಲು ಸಿಕ್ಕಿದರೂ, ಈ ನಿಟ್ಟಿನಲ್ಲಿ ಏನೂ ಉಪಯೋಗವಿಲ್ಲ. ಅದೇ ರೀತಿ ಒಬ್ಬ ಚಿತ್ರಕಲಾವಿದನಿಗೂ ತನ್ನ ಚಿತ್ರದ ನಿಜವಾದ ಮರ್ಮವೇನು ಎನ್ನುವುದು ತಿಳಿಯದು.

ಇದು ಸ್ವಯಂಪ್ರಜ್ಞೆಯ ಕಲ್ಪನೆಯಿಂದ ಮೂಡುವುದಲ್ಲ ಎಂದು ಕಾಲರಿಜ್ ಹೇಳಿದ್ದಾನೆ; ವರ್ಡ್ಸವರ್ತ್, ಎಲಿಯೆಟ್ ಕೂಡಾ ತಮ್ಮದೇ ಪರಿಭಾಷೆಗಳಲ್ಲಿ ಇದೇ ಮಾತನ್ನು ಹೇಳುತ್ತಾರೆ. ಎಂದ ಮೇಲೆ, ಕವಿತೆ ಹೇಗೆ ಮೂಡಿಬರುತ್ತದೆ ಎಂಬ ಪ್ರಶ್ನೆಯೇ ಅಪ್ರಸ್ತುತ.
*
To make a prairie it takes a clover
and one bee,—
One clover, and a bee,
And revery.
The revery a lone will do
If bees are few.

-Emily Dickinson

ಅನುಭವ ಎಂಬ ಮರೀಚಿಕೆ. ಲೇಖಕನಿಗೆ ಸಾಕಷ್ಟು ಅನುಭವಗಳು ಬೇಕು ಎನ್ನಲಾಗುತ್ತಿದೆ. ಹಾಗೂ ಆತ ತನ್ನ ಅನುಭವಗಳಿಗೆ ಸಾಚಾ ಆಗಿರಬೇಕು ಎಂದು. ಏನು ಹಾಗಂದರೆ? ನನಗೆ ಗೊತ್ತಿಲ್ಲ. ಯಾರೂ ಎಲ್ಲವನ್ನೂ ಅನುಭವಿಸುವುದು ಸಾಧ್ಯವಿಲ್ಲ.

ಅನುಭವ ಗಳಿಸಲು ಊರೂರು ಸುತ್ತುತ್ತೇನೆಂದು ಹೊರಡುವುದೂ ಒಂದು ಭ್ರಮೆ. ಇಮ್ಮೋನ್ಯುವೆಲ್ ಕಾಂಟ್ ಕೋನಿಗ್ಸ್‌ಬರ್ಗ್ ಎಂಬ ಚಿಕ್ಕ ಊರಿನಲ್ಲಿ ಇದ್ದುಕೊಂಡೇ ಲೋಕಪ್ರಸಿದ್ಧವಾದ ಪುಸ್ತಕಗಳನ್ನು ಬರೆದ. ಪ್ರತಿಯೊಬ್ಬನ ಅನುಭವವೂ ಆಯಾ ವ್ಯಕ್ತಿಗೆ ವಿಶಿಷ್ಟವಾಗಿರುತ್ತದೆ;

ಆದರೂ, ಲೇಖಕನೊಬ್ಬ ಬರೆದುದನ್ನು ಅರ್ಥಮಾಡಿಕೊಳ್ಳಬೇಕಾದರೆ ಆತ ಅನುಭವಿಸಿದ್ದನ್ನು ಓದುಗನೂ ಅನುಭವಿಸಿರಬೇಕು ಎಂದೇನೂ ನಾವು ಆಗ್ರಹಿಸುವುದಿಲ್ಲವಲ್ಲ! ಯಾಕೆ? ಯಾಕೆಂದರೆ ಅದು ಅಸಾಧ್ಯ. ಅಲ್ಲದೆ ಭಾಷೆ ನಮಗೆ ಗೊತ್ತಿಲ್ಲದುದನ್ನು, ಅಥವಾ ಸ್ವಲ್ಪವೇ ಗೊತ್ತಿರುವುದನ್ನು ಒದಗಿಸಿಕೊಡುತ್ತದೆ.ಇಲ್ಲದಿದ್ದರೆ ಓದು ಬರಹಗಳಿಗೆ ಯಾವ ಸಮರ್ಥನೆಯೂ ಇಲ್ಲ.

ಜನರ ನಡುವೆ ಇರಬೇಕು; ಇದ್ದೂ ಇಲ್ಲದಂತಿರಬೇಕು. ನಿಬಿಡತೆಯಲ್ಲೂ ಏಕಾಂತತೆ ಅನುಭವಿಸಬೇಕು. ಏಕಾಂತ ಅನುಭವಿಸಲಾರದ ವ್ಯಕ್ತಿ ಎಲ್ಲಿ  ಹೋದರೂ ಏನನ್ನೂ ಅನುಭವಿಸಲಾರ. ಇದು ಕನ್ನಡದ ಪರಿಸರದಿಂದ ದೂರವಿರುವ ನನ್ನಂಥ ಲೇಖಕರ ಮನಃಸ್ಥಿತಿ. ಅಂಥವರು ಹಲವರಿದ್ದಾರೆ. ಮುಂದಿನ ದಿನಗಳಲ್ಲಿ ಅವರ ಸಂಖ್ಯೆ ಗಣನೀಯವಾಗಿರುತ್ತದೆ.

ಅವರ ಬರಹಗಳಲ್ಲಿ ಪರಂಪರೆಯನ್ನು ಹುಡುಕುವ ಅಗತ್ಯವಿಲ್ಲ.
ಮುಖ್ಯವೆಂದರೆ ವಿಷಯಗಳು ನಮ್ಮದಾಗಬೇಕು, ಮನಸ್ಸನ್ನು ಕಾಡಬೇಕು, ನಮ್ಮ ಎಚ್ಚರ ನಿದ್ದೆಗಳಲ್ಲಿ ಕಲಕಬೇಕು. ನಮ್ಮನ್ನೇ ಮಾರ್ಪಡಿಸಬೇಕು. ಅಲ್ಲದಿದ್ದರೆ ಅವು ಇತರರನ್ನು ಏನೂ ಮಾಡಲಾರವು. ಹೀಗನ್ನುತ್ತ ನಾನೊಬ್ಬ ತತ್ವಪದಕಾರನಂತೆ ಹಾಡುವ ಸದ್ದು ನನಗೇ ಕೇಳಿ ಬೆಚ್ಚಿಬೀಳುತ್ತೇನೆ!

ಕೆಲವರು ಅನುಭಾವದ ಮೇಲೆ ಒತ್ತುಕೊಡುತ್ತಾರೆ; ಇನ್ನು ಕೆಲವರು ಅಧ್ಯಾತ್ಮದ ಮೇಲೆ. ಸದ್ಯ ನಮ್ಮ ಕನ್ನಡ ಕವಿಗಳಲ್ಲಿ ಹೊಸತೊಂದು ಭಕ್ತಿಪಂಥವೂ ತಲೆ ಎತ್ತುತ್ತಿರುವಂತೆ ಅನಿಸುತ್ತದೆ. ಸ್ವಲ್ಪ ಭಕ್ತಿ, ಸ್ವಲ್ಪ ಪ್ರಾದೇಶಿಕತೆ, ಸ್ವಲ್ಪ ದೇಸಿ, ಸ್ವಲ್ಪ ಜಾಗತೀಕರಣ ವಿರೋಧ- ಇದೇ ನವ್ಯೋತ್ತರದ ರೆಸಿಪಿ ಎಂಬ ಭಾವನೆ ಹಲವರಲ್ಲಿದೆ.

ನಾನಿದನ್ನೆಲ್ಲ ಅಚ್ಚರಿಯಿಂದ ನೋಡುತ್ತ ಇದ್ದೇನೆ. ಆದರೆ ಈ ಹೊಸ ಮೆಟಫಿಸಿಕ್ಸಿಗೆ ಮರುಳಾಗಲಾರೆ. ಕವಿತೆಗೆ ಮೆಟಫಿಸಿಕ್ಸಿನ ಅಗತ್ಯವಿದೆಯೆಂದು ನನಗೆ ಅನಿಸುವುದಿಲ್ಲ. ಅನುಭವ, ಚಿಂತನೆ, ತಲ್ಲಣಗಳ ಬಗ್ಗೆ ನನಗೆ ಗೊತ್ತಿದೆ. ಆದರೆ ಅನುಭಾವ, ಅಧ್ಯಾತ್ಮ, ಭಕ್ತಿ, ವೇದಾಂತಗಳ ಬಗ್ಗೆ ಗೊತ್ತಿಲ್ಲ.

ಅವೆಲ್ಲ ಹೊಸತೊಂದು ಮೆಟಫಿಸಿಕ್ಸಿನಂತೆ ನನಗನಿಸುತ್ತದೆ. ನನಗದರಲ್ಲಿ ಹೆಚ್ಚಿನ ಆಸಕ್ತಿಯಿಲ್ಲ. ಹೀಗೆ ಪ್ರತ್ಯೇಕವಾಗಿರುವುದರಿಂದ ಏನು ಬರುತ್ತದೆ? ಏನಿಲ್ಲವೆಂದರೂ ಪ್ರತ್ಯೇಕತೆ ಬರುತ್ತದೆ!

ಒಂದು ದಾಸವಾಳ ಹೂವಿನಲ್ಲಿ ದಳಗಳೆಷ್ಟೆಂದು ಗೊತ್ತಿಲ್ಲದ ವ್ಯಕ್ತಿ ಜೀವನವಿಡೀ ದೇವರ ಪೂಜೆ ಮಾಡಿಯೂ ಪ್ರಯೋಜನವಿಲ್ಲ. ಅಧ್ಯಾತ್ಮದಲ್ಲಿ ತಲ್ಲೆನನಾದವನಿಗೆ ತಾನು ನಿಂತ ನೆಲ ಕಾಣಿಸುವುದಿಲ್ಲ, ಹುಲ್ಲು ಕಾಣಿಸುವುದಿಲ್ಲ, ನೀರು ಕಾಣಿಸುವುದಿಲ್ಲ. ಎಲ್ಲದರಲ್ಲೂ ಇನ್ನೇನನ್ನೋ ಕಾಣುವವನು ವಸ್ತುಪ್ರಪಂಚವನ್ನು ಕಾಣುವುದು ಹೇಗೆ? ಇದನ್ನೆಲ್ಲ ಸರಿಪಡಿಸಲು ನಾನು ನನ್ನದೇ ರೀತಿಯಲ್ಲಿ ಪ್ರಯತ್ನಿಸಿದ್ದೇನೆ.

ಹಲವಾರು ಲೇಖನಗಳನ್ನು ಬರೆದಿದ್ದೇನೆ. ನನಗೆ ಗೊತ್ತಿರುವುದನ್ನೆಲ್ಲ ಕನ್ನಡಕ್ಕೆ ತರಲು ಶ್ರಮಿಸಿದ್ದೇನೆ. ಇದನ್ನು ತಿಳಿಯದವರು ಹೇಳುತ್ತಾರೆ: ನೀನು ಪಶ್ಚಿಮ ಮುಖಿ ಎಂದು. ಯಾಕೆ, ನಾನು ವಚನ ಸಾಹಿತ್ಯದ ಬಗ್ಗೆ ಬರೆದಿಲ್ಲ ಎಂದೇ? ಅದರ ಬಗ್ಗೆ ಬರೆಯುವ ಸಾವಿರ ಮಂದಿ ಇದ್ದಾರಲ್ಲ? ವಚನ ಸಾಹಿತ್ಯವನ್ನು ನಾನು ಪ್ರೀತಿಸುತ್ತೇನೆ ಅದರ ಓಘಕ್ಕೆ, ನುಡಿಗಟ್ಟಿಗೆ, ಬೀಸಿನ ಶೈಲಿಗೆ, ನಿರ್ಭಿಡತೆಗೆ, ವಸ್ತು ಪ್ರೀತಿಗೆ. ಆದರೆ ಇತರರಂತೆ ನಾನದರಲ್ಲಿ ಅಧ್ಯಾತ್ಮವನ್ನೋ ಅನುಭವವನ್ನೋ ಕಾಣುವುದಿಲ್ಲ.

ಕನ್ನಡದ ಇತರ ಕಾವ್ಯಗಳನ್ನೂ ಪ್ರೀತಿಸುತ್ತೇನೆ. ಆದರೆ ಇಂದು ನಾವು ಹಿಂದಿನವರಂತೆ ಬರೆಯುವುದು ಸಾಧ್ಯವಿಲ್ಲ; ಅವರು ಲೋಕವನ್ನು ಕಂಡ ದೃಷ್ಟಿಕೋನದಲ್ಲಿ ನಾವು ಕಾಣುವುದೂ ಸಾಧ್ಯವಿಲ್ಲ. ಇದನ್ನೆಲ್ಲ ಮತ್ತೆ ಮತ್ತೆ ಘೋಷಿಸುತ್ತ ಇರಬೇಕಾದ್ದಿಲ್ಲ.
ಹಾಗೂ ಆಧುನಿಕ ವ್ಯಕ್ತಿಯಾಗಿ ನಾವು ಎಲ್ಲಿ ಬೇಕಾದರೂ ಇರಬಹುದು. ಏನು ಬೇಕಾದರೂ ಓದಬಹುದು.

ಹೇಗೆ ಬೇಕಾದರೂ ಬದುಕಬಹುದು, ಬರೆಯಬಹುದು. ಅಲ್ಲದೆ ಪರಂಪರೆಯ ಸಾಹಿತ್ಯವನ್ನು ಓದದೆ ಬರೆಯುವುದು ಸಾಧ್ಯವಿಲ್ಲ ಎಂದು ಕೆಲವರು ಅಂದುಕೊಂಡಂತಿದೆ. ಅದೆಲ್ಲ ಸುಳ್ಳು.ಅದಲ್ಲದಿದ್ದರೆ ಕನ್ನಡ ಪಂಡಿತರು ಮಾತ್ರ ಬರೆಯಲು ಸಾಧ್ಯ. ಇನ್ನು ಪರಂಪರೆಯ ಜತೆ ಅನುಸಂಧಾನ ಎಂದು ಕೆಲವರು ಸಿದ್ಧಾಂತ ಮಾಡಿಕೊಂಡಿದ್ದಾರೆ. ಅಂಥ ಯಾವ ಸಂಧಾನದ ಅಗತ್ಯವೂ ಬೇಕಿಲ್ಲ.

ಅದು ಬೇಕಾದರೆ ಆಯಾ ಓದುಗರ ಮನಸ್ಸಿನಲ್ಲಿ ನಡೆಯುವ ಪ್ರಕ್ರಿಯೆ. ಕನ್ನಡದಲ್ಲಿ ಬರೆಯುವುದೇ ಅನುಸಂಧಾನ. ಅದಕ್ಕಿಂತ ಹೆಚ್ಚಿನದು ಏನಿಲ್ಲ. ಕ್ರಿಯೇಟಿವಿಟಿ ಅನುಸಂಧಾನವನ್ನು ಹುಡುಕುತ್ತ ಕೂತರೆ ಅದು ಕ್ರಿಯೇಟಿವಿಟಿ ಆಗಿ ಉಳಿಯದು.
ಸಮಕಾಲೀನರಲ್ಲಿ ಕೆಲವರಿದ್ದಾರೆ:

ಅವರಿಗೆ ಕವಿತೆಯೊಂದು ಪರಿಶುದ್ಧ ಸಂಗತಿ. ಅವರು ಕವಿತೆ ಬರೆಯುವುದನ್ನೊಂದು ವ್ರತದಂತೆ ಪಾಲಿಸುತ್ತ ಬರುವವರು. ಇನ್ನೇನನ್ನೂ ಅವರು ಮುಟ್ಟರು; ಮುಟ್ಟಿದರೂ ಒಡನೆಯೇ ಸ್ನಾನ ಮಾಡಿ ಬರುವರು.

ನನಗಾದರೆ ಈ ಲೋಕದಲ್ಲಿ ಶುದ್ಧವಾದ ಯಾವ ಸಂಗತಿಯೂ ಇಲ್ಲ; ಕವಿತೆ, ಸಾಹಿತ್ಯವಂತೂ ಅಲ್ಲವೇ ಅಲ್ಲ. ಎಲ್ಲವೂ ಈಗಾಗಲೇ ಸಂಕರ, ಮಿಶ್ರಿತ, ಮಿಶ್ರಧಾತು--ಭಾಷೆ, ಮನುಷ್ಯ, ಸಂಸ್ಕೃತಿ, ದೇಶ, ರಾಷ್ಟ್ರ, ಕಾಲ. ಕವಿತೆ, ಕಲೆ ಮತ್ತು ಸಾಹಿತ್ಯ ಮಾತ್ರ ಶುದ್ಧಾಂಗವಾಗಿರುವುದು ಹೇಗೆ?

I do not know which to prefer,
The beauty of inflections
Or the beauty of innuendoes,
The blackbird whistling
Or just after.
-Wallace Stevens,

(Thirteen Ways of Looking at a Blackbird)

ಕೆಲವೊಮ್ಮೆ ಹಾಗಾಗುತ್ತದೆ, ನಮಗೆ ಗೊತ್ತಿರೋದಿಲ್ಲ: ಒಂದು ಕವಿತೆ ಹೇಗೆ ಮೂಡುತ್ತದೆ, ಒಂದು ಕತೆ ಎಲ್ಲಿಂದ ಬರುತ್ತದೆ? ಯಾರ ಪ್ರಭಾವ? ಎಷ್ಟು ದೇಸಿ, ಎಷ್ಟು ವಿದೇಶಿ? ಈ ವ್ಯತ್ಯಾಸದ ಅರ್ಥವಾದರೂ ಏನು? ಯಾವುದು ನನಗೆ ಹಿತವಾದ್ದು? ನನ್ನ ಹಿತವೇ ಲೋಕ ಹಿತವೇ, ಅಥವಾ ಲೋಕ ಹಿತವೇ ನನ್ನ ಹಿತವೇ? ನಾವು ಡೆಮೋಕ್ರಸಿಯ ಯುಗದಲ್ಲಿದ್ದೇವೆ.

ಡೆಮೋಕ್ರಸಿಯ ಪ್ರಯೋಜನ ಎಲ್ಲರಿಗೂ ತಲಪಿಲ್ಲ ಎನ್ನುವುದೂ ನಿಜ. ಅದನ್ನು ತಲಪಿಸುವಲ್ಲಿ ನನ್ನ ಪಾಲೆಷ್ಟು? ಒಬ್ಬ ಕವಿಯಾಗಿಯೇ ಅಲ್ಲ, ಒಬ್ಬ ಮನುಷ್ಯನಾಗಿ? ಅಮೇರಿಕನ್ ಡೆಮೋಕ್ರಸಿಯ ಮೇಲೆ ಪುಸ್ತಕ ಬರೆದ ಅಲೆಕ್ಸಿಸ್ ದ ಟೋಕ್‌ವೀಯ್ ಅನ್ನುತ್ತಾನೆ: 

“Democracy shuts the past against the poet, but opens the future before him. As all the citizens who compose a democratic community are nearly equal and alike, the poet cannot dwell upon any one of them; but the nation itself invites the exercise of his powers.”

ಪ್ರಜಾಪ್ರಭುತ್ವದಲ್ಲಿ ಭೂತ ಮರೆಯಾಗುತ್ತದೆ, ಭವಿಷ್ಯ ತೆರೆಯುತ್ತದೆ, ವ್ಯಕ್ತಿಯೂ ಕರಗುತ್ತಾನೆ. ಕವಿ ತನ್ನ ಶಕ್ತಿಗಳನ್ನು ಬಳಸುವಂತೆ ರಾಷ್ಟ್ರವೇ ಅವನಿಗೆ ಕರೆಗೊಡುತ್ತದೆ. ರಾಷ್ಟ್ರವೆಂದು ಟೋಕ್‌ವೀಯ್ 19ನೇ ಶತಮಾನದಲ್ಲಿ ಉದ್ದೇಶಿಸಿದ್ದು ಅಮೇರಿಕ, ಇಂಗ್ಲೆಂಡ್, ಫ್ರಾನ್ಸ್ ಮುಂತಾದ ರಾಜಕೀಯ ಘಟಕಗಳನ್ನೇ ಆಗಿರಬಹುದು.

ಆದರೆ ಇಂದು ಇಂಥ ರಾಷ್ಟ್ರ ಘಟಕಗಳೂ ಕರಗುತ್ತಿರುವಾಗ  `ನೇಶನ್~  ಎನ್ನುವುದನ್ನು ಹೇಗೆ ತೆಗೆದುಕೊಳ್ಳಬೇಕು ಎನ್ನುವುದು ಅರ್ಥವಾಗುವುದಿಲ್ಲ.  ಡೆಮೋಕ್ರಾಟಿಕ್ ಕಮ್ಯೂನಿಟಿ  ಹೆಚ್ಚು ಅರ್ಥಪೂರ್ಣವಿದ್ದೀತು. ಇಂಥ ಕಮ್ಯೂನಿಟಿಯಲ್ಲಿ ಕವಿಗೆ ವಿಶಿಷ್ಟವಾದ ಶಕ್ತಿಗಳೇನಾದರೂ ಇವೆಯೇ? ನನಗೆ ತಿಳಿಯದು.

ಇಂದಿನ ಸಾಹಿತಿಯ ಮೇಲಣ ಒತ್ತಡಗಳನ್ನು ನೋಡಿ: ಹಲವಾರು ಚಳುವಳಿಗಳು, ಇಸಮುಗಳು (ಐಡಿಯಾಲಜಿಗಳು), ರಾಜಕೀಯಗಳು ಆತನ ಮೇಲೆ ಅಪರೋಕ್ಷವಾಗಿ ಒತ್ತಡ ಹಾಕುತ್ತಿವೆ. ಸಾಹಿತಿ ಬದ್ಧನಾಗಿರಬೇಕು ಎನ್ನಲಾಗುತ್ತಿದೆ. ಆದರೆ ಇಂಥ ಯಾವುದೇ ಬಾಹ್ಯ ಒತ್ತಡಗಳಿಂದ ಬರೆಯುವುದು ಕ್ರಿಯೇಟಿವಿಟಿಗೆ ವಿರುದ್ಧವಾಗುತ್ತದೆ.

ಬರೆಯುವುದು ಅಪ್ರಜ್ಞಾಪೂರ್ಣ ಕ್ರಿಯೆಯಾದರೆ ಅದನ್ನು ಹಾಗೆಯೇ ಇರಲು ಬಿಟ್ಟುಬಿಡಬೇಕು. ಕವಿಗಳು ಗಿಣಿಪಾಠ ಒಪ್ಪಿಸುವುದನ್ನಾಗಲಿ, ಸಮವಸ್ತ್ರ ಧರಿಸಿಕೊಂಡು ಕವಾಯತು ನಡೆಸುವುದನ್ನಾಗಲಿ, ರಾಜಕೀಯ ಪಕ್ಷಗಳ ಝಂಡಾ ಹಿಡಿದು ಕೂಗುವುದನ್ನಾಗಲಿ ಊಹಿಸಲು ಕಷ್ಟವಾಗುತ್ತದೆ.

ರಾಜಪ್ರಭುತ್ವದಲ್ಲಿ ಕವಿ ರಾಜನನ್ನು ಎದುರಿಸುತ್ತಾನೆ; ಪ್ರಜಾಪ್ರಭುತ್ವದಲ್ಲಿ ಆತ ಸಮೂಹದ ಹೆಸರಲ್ಲಿ ನಡೆಯುವ ವ್ಯಕ್ತಿ ಸ್ವಾತಂತ್ರ್ಯದ ಹರಣವನ್ನು ಎದುರಿಸಬೇಕಾಗುತ್ತದೆ; ಅರ್ಥಾತ್ ಆತ ಅನಾರ್ಕಿಸ್ಟ್ ಆಗುತ್ತಾನೆ. ಇದು ಅವನ ಭಾಷೆಯಲ್ಲಿ, ಅರ್ಥ ವ್ಯಾಕರಣಗಳ ಧಿಕ್ಕರಿಸುವಿಕೆಯಲ್ಲಿ ಕಾಣಿಸಿಕೊಳ್ಳುತ್ತದೆ.

ಜನರಿಗೆ ಅರ್ಥಮಾಡಿಕೊಡುವ ಯಾವ ಜವಾಬ್ದಾರಿಯೂ ಅವನಿಗೆ ಇರುವುದಿಲ್ಲ. ಸಾಹಿತ್ಯ ಪೂರ್ವನಿರ್ಧರಿತವಲ್ಲದ ಕಾರಣ ಅದು ಶುದ್ಧವಾಗಿರಬೇಕು, ಬದ್ಧವಾಗಿರಬೇಕು ಎನ್ನುವುದು ದಬ್ಬಾಳಿಕೆಯ ಮಾತಾಗುತ್ತದೆ.

ಮನುಷ್ಯನ ಮೇಲೆ ಈಗಾಗಲೇ ಸಾಕಷ್ಟು ನಿರ್ಬಂಧಗಳಿರುತ್ತ ಜತೆಗೆ ಇನ್ನಷ್ಟು ಹೇರುವುದು ಸೃಜನಶೀಲತೆಗೆ (ವಿಜ್ಞಾನದಲ್ಲಾಗಲಿ, ಸಾಹಿತ್ಯದಲ್ಲಾಗಲಿ) ತಕ್ಕುದಲ್ಲ. ಆದರೂ ಕೆಲವು ನಿರ್ಬಂಧಗಳು ಕೂಡ ಪರೋಕ್ಷವಾಗಿ ಉಪಯೋಗಕ್ಕೆ ಬರುತ್ತವೆ: ಸೃಜನಶೀಲತೆಯನ್ನು ಕೆಣಕುವುದರಿಂದ, ಆ ಮೂಲಕ ಉದ್ದೀಪನಗೊಳಿಸುವುದರಿಂದ. ಆದ್ದರಿಂದ ವಿರೋಧ ಯಾವತ್ತೂ ಅಗತ್ಯ. ಇವು ನಮ್ಮ ಕಾಲದ ದ್ವಂದ್ವಗಳು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT