ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸರಬ್ಜಿತ್ ಬಿಡುಗಡೆ ಶೀಘ್ರ?

Last Updated 5 ಜನವರಿ 2012, 19:30 IST
ಅಕ್ಷರ ಗಾತ್ರ

ಲಾಹೋರ್ (ಪಿಟಿಐ): 1990ರಲ್ಲಿ ನಡೆದ ಬಾಂಬ್ ದಾಳಿಗೆ ಸಂಬಂಧಿಸಿದಂತೆ ಮರಣದಂಡನೆ ಶಿಕ್ಷೆಗೆ ಗುರಿಯಾಗಿರುವ ಭಾರತದ ಪ್ರಜೆ ಸರಬ್ಜಿತ್ ಸಿಂಗ್ ಅವರ ಪರಿಷ್ಕೃತ ಕ್ಷಮಾದಾನ ಅರ್ಜಿಯ ಬಗ್ಗೆ ಪಾಕಿಸ್ತಾನದ ಅಧ್ಯಕ್ಷ ಅಸಿಫ್ ಅಲಿ ಜರ್ದಾರಿ ಅವರು ಸಕಾರಾತ್ಮಕ ಕ್ರಮ ತೆಗೆದುಕೊಳ್ಳುವ ಸಾಧ್ಯತೆಗಳು ಇವೆ ಎಂದು ಸಿಂಗ್ ಅವರ ವಕೀಲರು ತಿಳಿಸಿದ್ದಾರೆ.

ಸರಬ್ಜಿತ್ ಸಿಂಗ್ ಹೊಸದಾಗಿ ಸಲ್ಲಿಸಿರುವ ಕ್ಷಮಾದಾನ ಅರ್ಜಿಯು ಅಧ್ಯಕ್ಷರ ಗಮನವನ್ನು ಸೆಳೆದಿದೆ ಎಂದು ವಕೀಲ ಅವೈಸಿ ಶೇಖ್ ತಿಳಿಸಿದ್ದಾರೆ.

`ಅಧ್ಯಕ್ಷರು ಸಕಾರಾತ್ಮಕ ಕ್ರಮ ತೆಗೆದುಕೊಳ್ಳುವ ನಿರೀಕ್ಷೆ ಇರುವುದರಿಂದ ಸರಬ್ಜಿತ್ ಸಿಂಗ್ ಬಿಡುಗಡೆ ಸಮಯ ಸಮೀಪಿಸುತ್ತಿದೆ ಎಂದು ಹೇಳಬಹುದು. ಸಿಂಗ್ ಬಿಡುಗಡೆಯಾದರೆ ಎರಡೂ ರಾಷ್ಟ್ರಗಳ ಮಧ್ಯೆಯ ಶಾಂತಿ ಮಾತುಕತೆ ಪುನರಾರಂಭಕ್ಕೆ ಅನುಕೂಲವಾಗುತ್ತದೆ~ ಎಂದು ತಿಳಿಸಿದ್ದಾರೆ. 

 ಕಳೆದ ವರ್ಷ ಆಗಸ್ಟ್ 14ರಂದು ಭಾರತದ ಜೈಲಿನಲ್ಲಿರುವ ಪಾಕಿಸ್ತಾನದ ಪ್ರಜೆ ಖಲೀಲ್ ಚಿಸ್ತಿ ಬಿಡುಗಡೆಗೆ ಪ್ರತಿಯಾಗಿ ಸರಬ್ಜಿತ್ ಸಿಂಗ್ ಅವರನ್ನು ಬಿಡುಗಡೆ ಮಾಡಲು ಪಾಕಿಸ್ತಾನ ಒಪ್ಪಿಕೊಂಡಿತ್ತು. ಆದರೆ ಕೊನೇ ಗಳಿಗೆಯಲ್ಲಿ ಭಾರತ ಸರ್ಕಾರ ನಿರ್ಧಾರ ಬದಲಿಸಿದ್ದರಿಂದ ಸಿಂಗ್ ಪಾಕಿಸ್ತಾನದ ಜೈಲಿನಲ್ಲೇ ಉಳಿಯಬೇಕಾಯಿತು ಎಂದು ತಿಳಿಸಿದ್ದಾರೆ.

ಇತ್ತೀಚೆಗೆ ಭಾರತಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ತಾವು ಅಲ್ಲಿಯ ಅಧಿಕಾರಿಗಳ ಜತೆ ಮಾತನಾಡಿ ಭಾರತದ ಜೈಲಿನಲ್ಲಿರುವ ಪಾಕಿಸ್ತಾನದ ಪ್ರಜೆಗಳನ್ನು ಶೀಘ್ರ ಬಿಡುಗಡೆ ಮಾಡಿದರೆ ಸರಬ್ಜಿತ್ ಸಿಂಗ್ ಬಿಡುಗಡೆ ಸುಲಭವಾಗುತ್ತದೆ ಎಂದು ತಿಳಿಸಿದ್ದೆ ಎಂದು ಶೇಖ್ ಹೇಳಿದ್ದಾರೆ.

ಶಿಕ್ಷೆಯ ಅವಧಿಯನ್ನು ಪೂರೈಸಿರುವ ಕೈದಿಗಳನ್ನು ಬಿಡುಗಡೆ ಮಾಡುವಂತೆ ಅವರು ಪಾಕಿಸ್ತಾನ ಮತ್ತು ಭಾರತ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT