ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿಐಟಿಯುನಿಂದ ಬೃಹತ್‌ ಪ್ರತಿಭಟನೆ

Last Updated 21 ಸೆಪ್ಟೆಂಬರ್ 2013, 8:06 IST
ಅಕ್ಷರ ಗಾತ್ರ

ಕಾರವಾರ: ಕಾರ್ಮಿಕರ ಹಾಗೂ ಜನಸಾಮಾನ್ಯರ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ನಗರದಲ್ಲಿ ಶುಕ್ರವಾರ ಸೆಂಟರ್‌ ಆಫ್‌ ಇಂಡಿಯನ್‌ ಟ್ರೇಡ್‌ ಯೂನಿಯನ್ಸ್‌ (ಸಿಐಟಿಯು) ಉತ್ತರ ಕನ್ನಡ ಜಿಲ್ಲಾ ಸಮಿತಿಯು ಪ್ರತಿಭಟನೆ ನಡೆಸಿತು. ನಗರದ ಮಾಲಾದೇವಿ ಮೈದಾನದಿಂದ ಹೊರಟ ನೂರಾರು ಕಾರ್ಯಕರ್ತರು, ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆ ನಡೆಸಿ ಜಿಲ್ಲಾಧಿಕಾರಿ ಕಚೇರಿ ತಲುಪಿದರು. ದಾರಿಯುದ್ದಕ್ಕೂ ಸರ್ಕಾರ ವಿರುದ್ಧ ಘೋಷಣೆ ಕೂಗಿದರು.

‘ಅಂಗನವಾಡಿ ಕೇಂದ್ರಗಳ ಖಾಸಗೀಕರಣ, ಶಾಲೆಗಳ ಮಧ್ಯಾಹ್ನ ಬಿಸಿಯೂಟ ಯೋಜನೆಯ ಹೊರಗುತ್ತಿಗೆಗೆ ಮುಂದಾಗಿರುವ ಸರ್ಕಾರ, ಆಶಾ ಕಾರ್ಯಕರ್ತಕರಿಗೆ ಕನಿಷ್ಠ ವೇತನ ನಿಗದಿ ಮಾಡಿಲ್ಲ. ಬೆಲೆ ಏರಿಕೆ ನಿಯಂತ್ರಿಸದೆ ಬಸ್‌ ದರ, ಹಾಲಿನ ದರ ಏರಿಸಿ, ವಿದ್ಯುತ್‌ ದರ, ಕುಡಿಯುವ ನೀರಿನ ದರಗಳ ಹೆಚ್ಚಿಸಲು ಹೊಂಚುಹಾಕಿ ಕುಳಿತಿದೆ’ ಎಂದು ಪ್ರತಿಭಟನಾಕಾರರು ಆರೋಪಿಸಿದರು.

ಎಲ್ಲ ಕಾರ್ಮಿಕರಿಗೆ ಅಗತ್ಯ ಸಾಮಾಜಿಕ ಭದ್ರತಾ ನಿಧಿ ಸ್ಥಾಪಿಸಬೇಕು ಹಾಗೂ ರಾಷ್ಟ್ರೀಯ ನೆಲ­ಮಟ್ಟದ ಸಾಮಾನ್ಯ ಕನಿಷ್ಠ ವೇತನ ₨ 10 ಸಾವಿರ ನಿಗದಿ ಮಾಡಬೇಕು. ಕನಿಷ್ಠ ವೇತನ ಕಾಯ್ದೆ 1948ರ ತಿದ್ದುಪಡಿಗಳಿಗಾಗಿ ಮಹಾನಗರಗಳ ವ್ಯಾಪ್ತಿಯಲ್ಲಿ ಕನಿಷ್ಠ ವೇತನವನ್ನು ಗ್ರಾಹಕ ಬೆಲೆ ಸೂಚ್ಯಂಕ 5075 ಅಂಶಗಳವರೆಗೆ ₨ 15 ಸಾವಿರ ನಿಗದಿ ಮಾಡಬೇಕು ಎಂದು ಒತ್ತಾಯಿಸಿದರು.
ಗುತ್ತಿಗೆ ಕಾರ್ಮಿಕರಿಗೂ ಸಮಾನ ಕೆಲಸಕ್ಕೆ ಸಮಾನ ವೇತನಕ್ಕಾಗಿ ಗುತ್ತಿಗೆ ಕಾರ್ಮಿಕರ ಕಾಯ್ದೆ 1970ಕ್ಕೆ ತಿದ್ದುಪಡಿ ತರಬೇಕು.

ತಮಿಳುನಾಡು ಮತ್ತು ಅಸ್ಸಾಂ ರಾಜ್ಯಗಳಲ್ಲಿ ಅಂಗೀಕರಿಸಿರುವ ರೀತಿಯಲ್ಲಿ ಗುತ್ತಿಗೆ ಕಾರ್ಮಿಕರು, ಟ್ರೈನಿಗಳು ಮತ್ತಿತರರನ್ನು ಕಾಯಂಗೊಳಿಸಲು ರಾಜ್ಯ ಶಾಸನ ಸಭೆಯು ಕೈಗಾರಿಕೆ ಸಂಸ್ಥೆಗಳ ಕಾಯ್ದೆಯನ್ನು ಅಂಗೀಕರಿಸಬೇಕು ಎಂದು ಆಗ್ರಹಿಸಿದರು.
ಎಸ್ಮಾ ಕಾಯ್ದೆ ಮರು ಜಾರಿಗೊಳಿಸುತ್ತಿರು­ವುದನ್ನು ವಾಪಸ್‌ ತೆಗೆದುಕೊಳ್ಳಬೇಕು. ಬೆಲೆ ಏರಿಕೆ ನಿಯಂತ್ರಿಸಿ ಎಲ್ಲ ಕುಟುಂಬಗಳಿಗೆ ಪಡಿತರ ವ್ಯವಸ್ಥೆ ಕಲ್ಪಿಸುವ ಸಾರ್ವತ್ರಿಕ ಪಡಿತರ ವ್ಯವಸ್ಥೆ ಜಾರಿಗೊಳಿಸಬೇಕು ಎಂದು ಒತ್ತಾಯಿಸಿದರು. 

ಮನವಿ: ವಿವಿಧ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ಹೆಚ್ಚುವರಿ ಜಿಲ್ಲಾಧಿಕಾರಿ ವಿಜಯ ಮಹಾಂತೇಶ್‌ ಅವರಿಗೆ ಮನವಿ ಸಲ್ಲಿಸಲಾಯಿತು. ಸಿಐಟಿಯುನ ಪ್ರಧಾನ ಕಾರ್ಯದರ್ಶಿ ಯಮುನಾ ಗಾಂವ್ಕರ್‌, ಅಧ್ಯಕ್ಷ ಹರೀಶ ನಾಯ್ಕ, ಖಜಾಂಚಿ ಸುಭಾಷ್‌ ಕೊಪ್ಪೀಕರ್‌, ಶಾಂತಾರಾಮ ನಾಯ್ಕ ಮತ್ತಿತರರು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT