ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿದ್ದಾಂತಪ್ಪನ ಪಕ್ಸಾಂತರ ಪುರಾಣ

ವಾರದ ವಿನೋದ
Last Updated 20 ಏಪ್ರಿಲ್ 2013, 19:59 IST
ಅಕ್ಷರ ಗಾತ್ರ

ಪಂತರಪಾಳ್ಯದ ಕೆಂಗೇಶ ಶ್ಯಾನೆ ತಲೆ ಕೆಡಿಸಿಕೊಂಡು ಕುಳಿತಿದ್ದ. ಇದನ್ನು ಕಂಡ ಉಳ್ಳಾಡಿ `ಯಾಕ್ಲ ಕೆಂಗ, ಯೆಂಡ್ತಿ ಸತ್ತೋನ್ ತರ ತಲೆ ಮ್ಯೋಲೆ ಕೈವೊತ್ಕಂಡ್ ಕುಂತಿದಯಿ. ರಾತ್ರೆ ಆ ಪಾರ್ಟಿಯೋರು ಕೊಟ್ಟ ಕಲರ್ ಬಾಟ್ಲು ಔಸ್ದಿ ಜಾಸ್ತಿ ಆಯ್ತೊ' ಎಂದು ರೇಗಿಸಿದ. ಕೂಡಲೇ ಕೈಯಲ್ಲಿ ಮುದುರಿ ಹಿಡಿದುಕೊಂಡಿದ್ದ ಪೇಪರನ್ನು ಬಿಚ್ಚಿ ತೋರಿಸುತ್ತಾ `ಇಲ್ನೋಡು, ನಾನ್ ಬ್ಯಾಡ್ ಬ್ಯಾಡ ಅಂತ ಗಿಣಿಗೆ ಬುದ್ದಿ ಯೇಳ್ದಂಗೆ ಯೇಳಿದ್ರೂ ನನ್ ಮಾತು ಕೇಳ್ದೆ ಯಜ್ಜಾನ್ ಸಿದ್ದಾಂತಪ್ಪ ಮೊನ್ನೆ ಕೈ ಪಕ್ಷ ಸೇರ‌್ಕಂಡ್ರು. ಇವಾಗಾಗ್ಲೆ ಆಪ್ಲೇಸನ್ ಮಾಡಿಸೋಕೋ ರೆಡಿ ಆಗವ್ರೆ' ಅಂದ. ಇದರಿಂದ ದಿಗಿಲಾದ ಉಳ್ಳಾಡಿ `ಇದೇನ್ಲಾ ಕೆಂಗ, ಇಂಗ್ ಯೇಳ್ತಾ ಇದ್ದೀಯಾ? ನಿನ್ನೆ ಅಷ್ಟೆ ಸಿದ್ದಾಂತಪ್ಪನ್ನ ನಾನೇ ಮನೆತಾವ್ ಮಾತಾಡಿಸ್ದೆ. ಅಂಥ ಕಾಯ್ಲೆ ಏನಿತ್ತು?' ಅಂತ ಆತಂಕದಿಂದ ಕೇಳಿದ ಉಳ್ಳಾಡಿ. ಇದರಿಂದ ಕಸಿವಿಸಿಗೊಂಡ ಕೆಂಗೇಶ `ಥೂ ನಿನ್ನ. ನೀನು ಇನ್ನೂ ನಮ್ ಸ್ಟೇಟ್‌ನಾಗೇ ಇಲ್ಲ ಅನ್ಸುತ್ತೆ. ದಿನ ಬೆಳ್ಗೆ ಪೇಪರ‌್ನೋರು ಆಪ್ಲೇಸನ್ ಕಮಲ ಅಂತ ಬರಿತನೇ ಅವ್ರೆ. ಆ ಟೀವಿಯೋರು ಯಾವಾಗ್ಲೂ ಆಪ್ಲೇಸನ್ ಕಮ್ಲ ಕಮ್ಲ ಅಂತ ಬಾಯಿ ನೋಯಮಟ್ಗೆ ಒದ್ರುತನೇ ಅವ್ರೆ. ಆದ್ರೂ ನೀನು ಆಪ್ಲೇಸನ್ ಅಂದ್ರೆ ಗಾಬ್ರಿ ಆಯ್ತಿಯಲ್ಲ. ಯಜ್ಮಾನ್ ಸಿದ್ದಾಂತಪ್ಪ ಆಪ್ಲೇಸನ್ ಮಾಡ್ತಾ ಇರೋರು ಕಮಲದೋರು' ಕೆಂಗೇಶ ಕೊಂಚ ಅಸಮಾಧಾನದಿಂದಲೇ ಹೇಳಿದ.

`ಓ ಈಗ ಗೊತ್ತಾಯ್ತು ಬುಡ್ಲ. ಅಂದ್ರೆ ಯಜ್ಮಾನ್ ಸಿದ್ದಾಂತಪ್ಪ ಇವತ್ತು ಕಮಲದ ಪಕ್ಸ ಸೇರ‌್ತಾ ಅವ್ರಾ?' ಉಳ್ಳಾಡಿ ಬ್ಯೂಬ್‌ಲೈಟ್ ಪಕಪಕೆ ಹತ್ತಿಕೊಂಡಂತೆ ಕೇಳಿದೆ. 'ಇನ್ನೇನ್ ಇಸ್ಟ್‌ವೊತ್ತು ಬಡ್ಕಂಡಿದ್ದು. ಇವ್ರಿಗೆ ವಸಿನಾದ್ರೂ ಮಾನ, ಮರ್ವಾದೆ ಇದ್ದತಾ? ಮೊನ್ನೆ ಕೈ ಅಂದ್ಬುಟ್ಟು ಈಗ ಕಮ್ಲ ಅಂದ್ರೆ ಜನ ಇವ್ರನ್ ಯಂಗ್ ನಂಬಾರು ಯೆಳಪ್ಪ' ಅಂತ ಕೆಂಗೇಶ ನೈತಿಕ ಪ್ರಶ್ನೆಯನ್ನು ಮುಂದಿಟ್ಟ.

`ಅದ್ಸಾರಿ ಕಣ್ಲಾ ಕೆಂಗ. ಆ ಯಜ್ಮಾನ್ ಸಿದ್ದಾಂತಪ್ಪ ಏನಾರ ಲಾಭ ಇಲ್ದೆ ಇಂಗೆಲ್ಲ ಮಾಡೋ ಆಸಾಮಿಯೇ ಅಲ್ಲ, ಏನಾರ ಯವಾರ-ಗಿವಾರ ಆಗಿದಲ್ಲಾ?' ಎಂದು ಉಳ್ಳಾಡಿ ಧ್ವನಿ ತಗ್ಗಿಸಿ ಕೇಳಿದ.

`ಆವತ್ತು ನಾನೇ ಜೊತೆಲಿದ್ದೆ. ಕೈನೋರು ಕೈಬಿಸಿ ಮಾಡುದ್ರು. ಅದಕ್ಕೆ ಅವ್ರ ಆನೆ ಪಕ್ಸ ಬಿಟ್ಟು ಕೈಗೆ ಜೈ ಅಂದ್ರು. ಕೈ ಲೀಡ್ರು ಜೊತೆ ಒಂದೇ ವೂನಾರಾ ಆಕಿಸ್ಕಂಡ್ ಪೇಪರ್‌ನೋರ್ ಮುಂದೆ ಹಲ್‌ಕಿರುದ್ರು. ಅದೇ ಫೋಟೋ ಇವತ್ನ ಪೇಪರ್‌ನಲಿ ಬಂದಿರುದು. ಅದ್ರು ಪಕ್ದಲೇ ಪಂತರ್‌ಪಾಳ್ಯದ ಗ್ರಾಮ್ ಪಂಚಾಯ್ತಿ ಅಧ್ಯಕ್ಷ ಯಜ್ಮಾನ್ ಸಿದ್ದಾಂತಪ್ಪ ಆಪ್ಲೇಸನ್ ಕಮ್ಲಕ್ಕೆ ಒಳ್ಗಾಗಿದ್ದು. ಕೂಡ್ಲೆ ಕಮ್ಲ ಪಕ್ಸ ಸೇರ‌್ತಾರೆ ಅಂತ ಬಂದದೆ' ಎಂದು ಗೊಣಗಿದ.

`ಥೂ, ಇವ್ರಿಗೆ, ವಸಿನೂ ನಾಚ್ಗೆ ಆಗುದಿಲ್ವಾ? ಆನೆ ಪಕ್ಸ ಬುಟ್ಟು ಕೈ ಪಕ್ಷ ಸೇರು ದಿನ ನಾನು ಪಂಚಾಯ್ತಿ ಕಟ್ಟೆತಾವೆ ಇದ್ದೆ. ಆನೆ ಪಕ್ಸದಲ್ ಇದ್ರೆ ಆನೆ ಬಲ ಬತ್ತುದೆ ಅಂತ ಆ ಪಕ್ಸ ಸೇರ‌್ಕಂಡಿದ್ದೆ. ಒಂದ್ ವಾರ‌್ದಲ್ಲೇ ಗೊತ್ತಾಯ್ತು. ಅಲ್ಲಿ ಆನೆ ಬಲ ಇರ‌್ಲಿ, ಇಲಿ ಬಲನೂ ಬರುದಿಲ್ಲ ಅಂತ. ಕೈ ಪಕ್ಸುಕ್ಕೆ ದೊಡ್ ಇತಿಯಾಸ ಅದೆ. ಕೈ ಪಕ್ಸದಿಂದ್ ಮಾತ್ರ ಈ ದೇಸ ಉದ್ದಾರ ಮಾಡೋಕ್ ಸಾಧ್ಯ. ಆದ್ರಿಂದಲೇ ಈ ಪಕ್ಸದ್ ತತ್ವ, ಸಿದ್ದಾಂತ ಮೆಚ್ಕಂಡು ಸೇರ‌್ತಾ ಇವ್ನಿ  ಅಂದ್ನಲ್ಲಾ?' ಎಂದ ಉಳ್ಳಾಡಿ ಸೋಜಿಗದಿಂದಲೇ ಕೇಳಿದ.

`ಅದೇ ನೋಡು ಯಜ್ಮಾನ್ ಸಿದ್ದಾಂತಪ್ಪನ ನರಿಬುದ್ದಿ. ಇದೇ ಸಿದ್ದಾಂತಪ್ಪ ಗೌಡ್ರು ಪಕ್ಸ ಬುಟ್ಟು ಆನೆ ಪಕ್ಸ ಸೇರುವಾಗ ಏನೇಳ್ದ ಅಂತ ವಸಿ ಗೆಪ್ತಿ ಮಾಡ್ಕೊ?' ಅಂತ ಕೆಂಗೇಶ ಉಳ್ಳಾಡಿಗೆ ಹೇಳಿದ.

ಆಗ ತಲೆ ಕೆರೆದುಕೊಂಡ ಉಳ್ಳಾಡಿಗೆ ಏನೋ ನೆನಪಾಗಲಿಲ್ಲ. ಚೆಡ್ಡಿ ಜೇಬಿಗೆ ಕೈ ಹಾಕಿ ಎರಡು ಗಣೇಶ ಬೀಡಿ ತೆಗೆದು ಒಂದನ್ನು ಕೆಂಗೇಶನಿಗೂ, ಮತ್ತೊಂದನ್ನು ತನ್ನ ಬಾಯಿಗಿಟ್ಟು ಬೆಂಕಿ ತೋರಿಸಿ ಜೋರಾಗಿ ದಮ್ ಎಳೆದು ಏನೇ ನೆನಪಾದವನಂತೆ `ಲೇ ಕೆಂಗ, ಈಗ ಗೆಪ್ತಿ ಆಯ್ತು ಕಂಡ್ಲ. ಆವತ್ತು ಅದೇ ಗ್ರಾಮ್ ಪಂಚಾಯ್ತಿ ಕಟ್ಟೆ ತಾವ್ ನಡ್ದ ಪಂಕ್ಸನ್‌ನಲ್ಲಿ ಗೌಡ್ರುನಾ ನಂಬ್ಕಂಡು ನಾನು ಮೂವತ್‌ವರ್ಸ ರಾಜ್ಕೀಯ ಮಾಡ್ದೆ. ಗೌಡ್ರು ಪಕ್ಸುಕ್ಕಾಗಿ ತನು, ಮನ, ದನವನ್ನೆಲ್ಲಾ ಅರ್ಪಿಸ್ದೆ.

ಆದ್ರೆ ಅವ್ರ ಮಾತ್ರ ನಂಗೆ ಏನೂ ಮಾಡ್ಲಿಲ್ಲ. ನಂಗೆ ಸಕ್ತಿ ಇದುದ್ರಿಂದ ಗ್ರಾಮ್ ಪಂಚಾಯ್ತಿ ಮೆಂಬರ್ ಆಗಿ, ಈಗ ಪ್ರಸಿಡೆಂಟೂ ಆಗಿವ್ನಿ. ಗೌಡ್ರುಗೆ ತಾವು, ತಮ್ ಕುಟುಂಬ ಮಾತ್ರ ಮುಕ್ಯ. ಅವ್ರ್ ಕುಟುಂಬಕ್ಕೆ ಅದ್ಕಾರ ಸಿಕ್ರೆ ಪಾರ್ಟಿಲಿರೋರ‌್ಗೆಲ್ಲಾ ಸಿಕ್ಕಂಗೆ. ಅವರ್ ಕುಟುಂಬ ರಾಜ್‌ಕಾರ‌್ಣ ನೋಡಿ ನೋಡಿ ಸಕತ್ ಬೇಜಾರಾಗಿ ಅಪ್ಪ ಮಕ್ಳು ಪಕ್ಸ ಬುಟ್ಟು, ಆನೆ ಪಕ್ಸ ಸೇರ‌್ತಾ ಅವ್ನಿ ಅಂದಿದ್ದ ಕಣ್ಲಾ ಕೆಂಗ' ಎನ್ನುವಷ್ಟರಲ್ಲಿ ಕೆಂಗೇಶನ ಮುಖ ಸೂರ್ಯಕಾಂತಿ ಹೂವಿನಂತೆ ಅರಳಿನಿಂತಿತ್ತು. 'ನಿಂಗೆ ನೆಪ್ಪು ಜೋರಾಗೇ ಅದೆ. ಆವತ್ತು ಯಜ್ಮಾನ್ ಸಿದ್ದಾಂತಪ್ಪ ಯೇಳಿದ್ ಒಂದೊಂದ್ ಮಾತೂ ತಪ್ಪೇ ಯೇಳ್ದೆ ಬುಡು' ಅಂತ ಕಂಗೇಶ ಮೆಚ್ಚುಗೆ ವ್ಯಕ್ತಪಡಿಸಿದ.

ಇದರಿಂದ ಫುಲ್ ಖುಷಿಯಾದ ಉಳ್ಳಾಡಿ `ಯೇ ಕೆಂಗ, ಅದ್ಸಾರಿ, ಯಜ್ಮಾನ್ ಸಿದ್ದಾಂತಪ್ಪ ಅದ್ಯಾಕ್ಲಾ ಕಮಲದ ಪಕ್ಸ ಸೇರ‌್ತಾ ಇದ್ದಾನು' ಎಂದು ಆಶ್ಚರ್ಯದಿಂದಲೇ ಕೇಳಿದ.

`ಅದೇ ಇವತ್ತಿನ್ ರಾಜ್ಕೀಯ ಅನ್ನೋದು. ಒತ್ತಾರೆ ಒಂದ್ ಪಕ್ಸ, ಸೂರ್ಯ ನೆತ್ತಿ ಮ್ಯೋಕೆ ಬರೋ ಹೊತ್ಗೆ ಇನ್ನೊಂದ್ ಪಕ್ಸ. ಹೊತ್ ಮುಳುಗೋವೊತ್ಗೆ ಮತ್ತೊಂದ್ ಪಕ್ಸ. ಇಂಗೆ ಪಕ್ಸಾಂತರ ಮಾಡೋರ‌್ನ ಕರ‌್ದು ಯಾಕ್ ಹಿಂಗ್ ಮಾಡ್ತಿದೀರಿ ಅಂದ್ರೆ, ಎಲ್ಲಾ ದೇಸುಕ್ಕಾಗಿ, ತತ್ವ, ಸಿದ್ದಾಂತಕ್ಕಾಗಿ ಅಂತಾರೆ' ಎಂದು ಕೆಂಗೇಶ ಉಳ್ಳಾಡಿಯತ್ತ ಕೈಚಾಚಿ 'ಇನ್ನೊಂದ್ ಬೀಡಿ ಕೊಡು. ಮೊದ್ಲು ಕೊಟ್ಟಿದ್ದು ಸರಿಯಾಗಿ ಒಗೇನೇ ಬರ‌್ಲಿಲ್ಲಾ' ಅಂದ.

`ಥೂ ನಿನ್ನ, ನಿಂಗೂ ನಿಮ್ ಯಜ್ಮಾನ್ ಸಿದ್ದಾಂತಪ್ಪನ ಗಾಳಿ ಸುತ್ಕಂಡದೆ ಅನ್ಸುತ್ತೆ. ನನ್ ಕಣ್ ಎದ್ರುಗೆ ರೈಲ್ವೆ ಯಂಜಿನ್ ಒಗೆಬುಟ್ಟಂಗೆ ಬುಟ್ಟೆ. ಈಗ್ ನೋಡಿದ್ರೆ ಒಗನೇ ಬರ‌್ಲಿಲ್ಲಾ ಅಂತೀಯಲ್ಲ' ಎಂದು ಉಳ್ಳಾಡಿ ಕೆಂಗೇಶನಿಗೆ ದೆವ್ವ ಬಿಡಿಸಿದ. ಇದರಿಂದ ಕೊಂಚವೂ ಬೇಸರಗೊಳ್ಳದ ಕೆಂಗೇಶ ರಾತ್ರಿ ತಿಂದ ಮಾಂಸದ ಎಳೆ ಹಲ್ಲಿಗೆ ಸಿಕ್ಕಿಕೊಂಡಿದ್ದನ್ನು ಬೆಂಕಿಕಡ್ಡಿಯಿಂದ ತೆಗೆಯುತ್ತಲೇ ಮಾತನಾಡುತ್ತಾ `ಇದೇ ಯಜ್ಮಾನ್ ಸಿದ್ದಾಂತಪ್ಪ ನಾಳೆ ಅದೇ ಗ್ರಾಮ್ ಪಂಚಾಯ್ತಿ ಕಟ್ಟೆ ತಾವ್ ಪೆಂಡಾಲ್ ಹಾಕಿಸ್ತಾರೆ. ಕಮಲದ ಪಕ್ಸದ ಲೀಡ್ರು ಜೊತೆ ಒಂದೇ ವೂಹಾರ ಆಕಿಸ್ಕಂಡ್ ಏನ್ ಯೇಳ್ತಾರೆ ಗೊತ್ತಾ' ಎಂದು ಕೆಂಗೇಶ ಉಳ್ಳಾಡಿಗೆ ಸವಾಲು ಹಾಕುವವನಂತೆ ನೋಡಿದ. ಇದರಿಂದ ಉಳ್ಳಾಡಿ ರವಷ್ಟು ಸಿಟ್ಟಾದವನಂತೆ ನೋಡಿ, 'ಲೇ ಕಂಡಿದೀನಿ ಸುಮ್ಕೆ ಇರ‌್ಲಾ. ಆ ಸಿದ್ದಾಂತಪ್ಪ ಯೇಳೋದು' ಎಂದು ದಬಾಯಿಸಿದ. ಉಳ್ಳಾಡಿ ಸಿಟ್ಟಾಗಿರುವುದನ್ನು ಕಂಡ ಕೆಂಗೇಶ ವಸಿ ಮಜಾ ತೆಗೆದುಕೊಳ್ಳುವ ಸಲುವಾಗಿಯೇ `ಅದೇನ್  ಯೇಳಪ್ಪ ನೋಡುಮ' ಎಂದು ಮತ್ತೆ ಚುಡಾಯಿಸಿದ.

ಆಗ ಉಳ್ಳಾಡಿ, ಸಿದ್ದಾಂತಪ್ಪ ಭಾಷಣ ಮಾಡುವ ಶೈಲಿಯಲ್ಲೇ `ಕೈ ಪಕ್ಸದಿಂದ ಈ ದೇಸ ಉದ್ದಾರ ಆಗುದಿಲ್ಲ. ಯಾಕಂದ್ರೆ ಆ ಪಕ್ಸುದಲ್ಲಿ ಊಸ್ ಬೇಕಾದ್ರೂ, ಕೆಮ್‌ಬೇಕಾದ್ರೂ ಐಕಮಾಂಡ್ ಕೇಳ್ಬೇಕು. ಅವ್ರ ಪರ್ಮಿಸನ್ ಕೊಟ್ರೆ ಉಂಟು ಇಲ್ದೆಯೋದ್ರೆ ಸುಮ್ಕೆ ಇರ‌್ಬೇಕು. ಯಾವಾಗ್ಲೂ ಜೈ.. ಜೈ... ಅಂತಾನೇ ಇರ‌್ಬೇಕು. ಇಲ್ದೆವೋದ್ರೆ ಏನೂ ಸಿಗುದಿಲ್ಲ. ಈ ದೇಸುಕ್ಕೆ ಭವಿಷ್ಯ ಇರೋದೆ ಕಮಲದ ಪಕ್ಸುದಲ್ಲಿ. ದೇಸ ಬದ್ರುವಾಗಿರ‌್ಬೇಕು ಅಂದ್ರೆ ಕಮಲದ ಪಕ್ಸ ಅದ್ಕಾರಕ್ಕೆ ಬರ‌್ಬೇಕು. ಅದುಕ್ಕೆ ನಮ್ ಮುಖ್‌ಮಂತ್ರಿಗಳು ಆಪ್ಲೇಸನ್ ಕಮ್ಲ ಮಾಡ್ತಾವ್ರೆ. ಆ ಮೇಲೆ ಈ ಪಕ್ಸುದ್ ತತ್ವ, ಸಿದ್ದಾಂತ ಬೇರೆ ಯಾವ ಪಕ್ಸುದಲ್ಲೂ ಇಲ್ಲ. ಅದುಕ್ಕೆ ಈ ಪಕ್ಸುಕ್ಕೆ ಮಾರುವೋಗಿವ್ನಿ. ಇಲ್ಲಿ ಯಾವ ಸರತ್ತು, ಆಮಿಸ, ಯಾವ್ದೆ ಇಲ್ಲ. ಆದ್ರೆ ನಾನೇನ್ ಸನ್ಯಾಸಿ ಅಲ್ಲ. ನನ್ ಕೆಪಾಕಿಟಿ ನೋಡಿ ಸ್ಥಾನಕೊಟ್ರೆ ನಿಬಾಯಿಸ್ತೀನಿ'.

ಕೆಂಗೇಶ ಜೋರಾಗಿ ಚಪ್ಪಾಳೆ ತಟ್ಟುತ್ತಾ `ಸಬ್ಬಾಸ್. ಥೇಟ್ ಯಜ್ಮಾನ್ ಸಿದ್ದಾಂತಪ್ಪನ ತರನೇ ಮಾತಾಡ್ದೆ. ಆದ್ರೆ ಈ ವಯ್ಯ ನಾಳೆ ತಿರ‌್ಗಾ ಗೌಡ್ರು ಪಕ್ಸ ಸೇರುದಿಲ್ಲ ಅನ್ನೋದಿಕ್ಕೆ ಏನ್ ಗ್ಯಾರಂಟಿ?' ಅಂತ ಅನುಮಾನದಿಂದಲೇ ಕೇಳಿದ.

`ಲೇ ಕೆಂಗ, ನೀನು ಆ ಸಿದ್ದಾಂತಪ್ಪನ ಸಿಸ್ಯ. ಸೀದಾ ವೋಗ್ಬುಟ್ಟು, ಮೊದ್ಲು ನಿನ್ ನಾಲ್ಗೆ ತೋರಿಸಿ ಎಸ್ಟ್ ನಾಲ್ಗೆ ಅವೆ ಯೇಳಿ ಅಂತ ಕೇಳು. ಒಂದು ಅಂತನೆ. ಆ ಮೇಲೆ ನಿಮ್ ನಾಲ್ಗೆ ತೋರ‌್ಸಿ ಅನ್ನು. ಯಾಕೆ ಅಂತನೆ. ನಿಮ್ಗೆ ಎಸ್ಟ್ ನಾಲ್ಗೆ ಅವೆಅಂತ ನೋಡ್ಬೇಕಿತ್ತು ಅನ್ನು. ಥೂ, ಇವ್ರ ಜನ್ಮಕ್ಕೆ ಇಸ್ಟ್ ಬೆಂಕಿ ಆಕ' ಎಂದು ಉಳ್ಳಾಡಿ ಕುದಿಯುತ್ತಲೇ ಇದ್ದ. ಕೆಂಗೇಶ ದೂಸ್ರಾ ಮಾತಾಡದೇ ಹಲ್ಲಿಗೆ ಸಿಕ್ಕಿದ್ದ ಮಾಂಸದ ಚೂರನ್ನು ತೆಗೆಯುವಲ್ಲಿ ಬ್ಯುಸಿಯಾದ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT