ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೀರೆಯೆಂಬೋ ಸ್ಯಾಲೆ ಪುರಾಣ

ಸಂಕ್ರಾಂತಿ ಪ್ರಬಂಧ ಸ್ಪರ್ಧೆಯಲ್ಲಿ ಮೆಚ್ಚುಗೆ ಪಡೆದ ಪ್ರಬಂಧ
Last Updated 12 ಏಪ್ರಿಲ್ 2013, 19:59 IST
ಅಕ್ಷರ ಗಾತ್ರ

ಹೊಟ್ಯಾಗಳ ಕಳ್ಳೆಲ್ಲ ಅದರಿಸೋ ಸುಮ- ಸುಮುನೆಂದು ಕೊರೆಯುವ ಚಳಿಗೆ, ಮೊಣಕಾಲಿನವರೆಗೂ ಗೂಡ್ರಿಸಿಕೊಂಡು ಮುದುರಿ ಮಲಗಿದ್ದ ನನಗೆ, ಅಜ್ಜಿಯ ಹಳೇ ಕಲ್ಡೀ ಮಾರ್ಕಿನ ಸ್ಯಾಲೆ ಹೊದಿಸಿ, ರವ್ವ ರವ್ವನೆಂಬ ರಾತ್ರಿಗಳನ್ನ ಓಡಿಸಿದ್ದ, ಅವ್ವನ ಮನೆಯೊಳಗಿನ ಉಪ್ಪು- ಉಳಿಗೆ ಅಂಜಿ ಪತರುಗುಡುತ್ತಿದ್ದ ಬಡತನದ ನೆನಪು.

ಅವ್ವನ ತಲೆಮಾರಿನವರು ಹೊಟ್ಟೆಯ ಹೊಕ್ಕುಳದ ಮ್ಯಾಲೆ ಬಾಳೆಕಾಯೆಂಬ ಗಂಟು ಮಾಡಿ, ದೊಡ್ಡ ಪನ್ನವಿರುವ ಸೀರೆಯನ್ನುಟ್ಟು, ತೋಳಿನ ತುಂಬ ಕುಪ್ಪಸ ತೊಟ್ಟು, ತ್ವಾಟ ತುಡಿಕೆ ಕಸ ಮುಸುರೆಯೆಂಬ ಪೂರ್ವ ಕಾಲದ, ಪುಣ್ಯವಂತರು ಕಂಡಿಡಿದ ಬದುಕಲ್ಲಿ ಬಾಳೆಂಬ ಹೆಜ್ಜೆಗಳ ಮಹಾ ಪೂರವನ್ನೇ ಸವೆಸಿದ ಪುಣ್ಯಾತಗಿತ್ತೇರ ಬೆವರು ಸಾಲು ಲೆಕ್ಕವಿಲ್ಲದಷ್ಟು. ಆವತ್ತಿಗೆ ನೇಯುತ್ತಿದ್ದ ಕಾಟನ್ನು ಸ್ಯಾಲೆಗಳ, ಪನ್ನವೆಂಬೋದು ಉಡುತ್ತಿದ್ದರೆ ನೆರಿಗೆ ಉಯ್ಯುವಾಗ ತೋಳ ಬೆರಳುಗಳೇ ಸೋಲುತ್ತಿದ್ದವು. ಅಂತಹ ತೂಕದ ಸ್ಯಾಲೆಗಳಿಗೆ ದಪ್ಪದುಡಿಗಿಯರ ಉಸಿರು ಭಾರವಾಗಿ ಬುಸುಗುಟ್ಟೋರು. ಅಪೌಷ್ಟಿಕತೆಯ ಕಡ್ಡಿಯಂತ ಹೆಣು ಮಕ್ಕಳು ನೆಟ್ಟಗೆ ನಡೆಯಲಾರದೆ, ಸೀರೆಯ ಭಾರಕ್ಕೆ ಜೋಲಿ ಹೊಡೆಯುತ್ತಿದ್ದರು. ಆದ್ರಿವತ್ತು ಉಡೋ ಹೆಣ್ಣು ಮಕ್ಕಳ ಸ್ಯಾಲೆ ಒಳಗೆ ನಿಲುವು ಇಲ್ಲ, ಪನ್ನವೂ ಇಲ್ಲ, ತೂಕವೂ ಇಲ್ಲ. ಸುಮ್ಮನೆ ಬಣ್ಣಕ್ಕೆ, ಅದ್ರುಮ್ಯಾಲಿನ ಚಿತ್ರಕ್ಕೆ ಕಟ್ಟುಬಿದ್ದು ಉಡುತ್ತಾರೆ. `ಏನಂದ್ರೆ ಎಂತೋವೋ ಮರ್ಯಾದೆ ಮುಚ್ಚಕ ಬೇಕಲ್ಲ. ಅಂಗಾಗಿ ಉಡುತಾರೆ' ಅಂಬೋ ಅಜ್ಜಿಯರ ಹಳೆ ಕಣ್ಣುಗಳು ಇವತ್ತಿನ ರಂಗು ರಂಗಿನ ಸೀರೆಗಳನ್ನ, ಆ ಸೀರೆ ಉಡುವ ಚಿತ್ತಾರದುಡುಗಿಯರನ್ನ ಒಪ್ಪಿಕೊಳ್ಳುತ್ತಿಲ್ಲ. ಆದರೆ ಕಾಲವೆಂಬೋದು ಯಾರಿಗೂ ಕಾಯುತ್ತಿಲ್ಲ. ಬದಲಾವಣೆಯ ದಾರಿಯೊಳಗೆ, ಅವ್ವನ- ಅಜ್ಜಿಯ ಸೀರೆಗಳು ರೂಪಾಂತರಕ್ಕೆ ಕಟ್ಟುಬಿದ್ದು, ಎಲ್ಲರ ಮೈಮೇಲೂ ಲೆಕ್ಕವಿಲ್ಲದ ಬಣ್ಣದೊಳಗೆ,  ಡಿಸೈನಿನೊಳಗೆ, ಅಜ್ಜಿಯರ ಉಗುರು ಸೋಕದೆ, ಹುಡುಗಿಯರ ಹೊಕ್ಕಳು ಮುಚ್ಚದೆ ಯಾರ‌್ಯಾರ ದಾಳಕ್ಕೋ ಬಲಿಯಾಗುತ್ತಿವೆ.

`ನಿಮ್ಮ ತಾತ ಹೋದ್ ತಡ ಉಗಾದಿಲಿ ತಂದು ಕೊಟ್ಟಿರೋ ಸ್ಯಾಲಿಗೆ ಅಂಚು ಹೊಲಸಕಾಗದೆ, ಉಟ್ಟು ಉಟ್ಟು ಎಪ್ಪತ್ತಾರ್ ತಡ ನೀರ‌್ಗಾಕಿದ್ದಾಯಿತು ಅಂಬೋ ಲೆಕ್ಕಾಚಾರದೊಳಗಿದ್ದ ಸೀರೆ, ಇವತ್ತು ಜಿಗ್‌ಜಾಗ್ ಮಾಡಸದಿದ್ದ ಮ್ಯಾಲೆ, ಫಾಲ್ ಕಟ್ಟಸದಿದ್ದ ಮ್ಯಾಲೆ ಉಡಾಕೇ ಲಾಯಕ್ಕಿಲ್ಲ ಅಂಬೋ ಮಟ್ಟಕ್ಕೆ ಬೆಳೆದು ಬಂದೈತೆ' ಎಂದು ಅಮ್ಮ ನೆನ್ನೆ ಮದುವೆಯ ಹಸಿರು ಚಪ್ಪರವೊಂದರ ಕೆಳಗೆ, ಉಳಿದ ಹೆಂಗಸರಿಗೆಲ್ಲ ಹೇಳುತ್ತಿದ್ದಳು. `ಮೊನ್ನೆ ನಮ್ಮನೆ ಅಜ್ಜಿ ಒಂದು ಆ ಎದ್ರು ಮನೆ ಶ್ವೇತಾ ಹುಟ್ಟಿದ್ದ ಸೀರೆ ಒಳಗಿನ ಫಾಲ್ ನೋಡಿ ಇದ್ಯಾಕಮ್ಮಣ್ಣಿ ಈ ಹುಡುಗಿ ಸ್ಯಾಲೆ ಅಂಚಿನ ಕೆಳಕ್ಕೆ ಬಟ್ಟೆ ತ್ಯಾಪೆ ಕಟ್ಟವಳೆ ಅನ್ನುತ್ತಿತ್ತು' ಎಂದ ಅಮ್ಮನ ಮಾತಿಗೆ ಎಲ್ಲರೂ ಆ ಚಪ್ಪರವೆಲ್ಲ ನಡುಗುವಂತೆ ಗೊಳ್ಳೆಂದು ನಕ್ಕರು. ಹಿಂಗೆ ನಗುವ ಹೆಂಗಳೆಯರ ಸಾವಿರಾರು ಎದೆಯೊಳಗೆ ಈ ಸೀರೆಯಿಂದಾಗಿಯೇ ವರುಷ ಒಂಬತ್ತು ಕಾಲವೂ ಸಿಟ್ಟು ಸೋಲು ಎಪ್ಪಾಗಿ ನಿಂತು ಬಿಡುತ್ತದೆ. ಯಾಕೆಂದರೆ ಈ ಮದುವೆ, ನಾಮಕರಣ, ಗೃಹಪ್ರವೇಶ, ಗೌರಿ ಹಬ್ಬಗಳಂತ, ಸಂಪ್ರದಾಯದ ಕಾರ್ಯಕ್ರಮಗಳಲ್ಲಿ ಉಡುವ ಮತ್ತು ಕೊಡುವ ಶುಭ ಸಂಪ್ರದಾಯಗಳಿದ್ದಂತೆ, ಅಷ್ಟೇ ತಾರತಮ್ಯಗಳೂ ನಡೆಯುತ್ತಲೇ ಬಂದಿವೆ.

ದೊಡ್ಡೋಳ ಸ್ಯಾಲೆ ಗನವಾಗೈತೆ, ಚಿಕ್ಕೋಳ ಸ್ಯಾಲೆ ಒಂದು ಸತಿಗೆ ಬಣ್ಣ ಬಿಟ್ಟುಗಂತು ಅಂಬೋ ತಾಯಿ ಮಕ್ಕಳ ಒಡಲ ಅಸಮಾಧಾನಕ್ಕೂ ಕಾರಣವಾಗಿರುವ ಈ ಸ್ಯಾಲೆಯ ಮಹಿಮೆ ಒಂದೆರಡಲ್ಲ. `ನಾನು ಹೋದ್ ತಡ ಬೀಗತಿಗೆ ಅವಳ ಮಗನ ಮದುವೇಲಿ ಐನೂರು ರೂಪಾಯಿ ಸ್ಯಾಲೆ ಉಡಿಸಿದ್ದೆ. ಇವತ್ತು ನನ್ನ ಹೊಸ ಮನೆ ಬೂರಿಗೆ ಡ್ಯಾಮೇಜಾಗಿರೋ ಸ್ಯಾಲೆ ಕೊಟ್ಟವಳೆ' ಅಂತಲೋ `ನಮ್ಮಣ್ಣ ಸಲ ಸಲ ಗೌರಿ ಹಬ್ಬಕ್ಕೆ ಸಾವಿರ್ ರೂಪಾಯಿ ಸೀರೆ ಕೊಡುತ್ತಿದ್ದ. ಈಗ ಅತ್ತಿಗೆ ಅಂಬೋಳು ನಡಸ್‌ಬೇಕಲ್ಲ. ಬರಿ ಮುನ್ನೂರ್ ರೂಪಾಯಿಯ ಸೀರೆ ಕೊಡ್‌ತಾಳೆ' ಅಂಬೋ ಸಂಕಟಕ್ಕೂ ಸೀರೆಗಳು ಕಾರಣವಾಗಿವೆ.

ಮಹಿಳೆಯರ ವರ್ಚಸ್ಸನ್ನ ಬದಲಿಸುವಂತ, ಅವರ ವರ್ಚಸ್ಸನ್ನ ವೃದ್ಧಿಸುವಂತ ಸೀರೆಗಳು ಪೇಟೆಯ ಅಂಗಡಿಗಳಲ್ಲಿ ತರಾವರಿಯಾಗಿ ತೂಗಾಡುತ್ತಿರುತ್ತವೆ. ಕೆಲವೊಂದು ದೊಡ್ಡ ಅಂಗಡಿಗಳಲ್ಲಿ ಹೆಣ್ಣು ಬೊಂಬೆಯೊಂದಕ್ಕೆ ಸೀರೆಯುಡಿಸಿ ಗ್ರಾಹಕರ ಮನ ಸೆಳೆಯುವ ವಿಧಾನದಲ್ಲಿ, ಈಗ ಐದಾರು ವರ್ಷದ ಕೆಳಗಿನ ಮಾತೊಂದು ಈಗಲೂ ನೆನಪಾಗಿ ನಾವೆಲ್ಲ ತಿಳು- ತಿಳುಕಂಡು ನಗುತ್ತಲೇ ಇರುತ್ತೇವೆ. ನಮ್ಮೂರ ತಿಪ್ಪವ್ವನೆಂಬೋಳು ರಾಗಿ ಹೊಲದಾಗೆ ಕಳೆ ಕೀಳುತ, `ನಾನು ಹೋದ್‌ವಾರ ಸಿರಾದ ಸಂತೆಗೋಗಿದ್ದೆ. ಶೆಟ್ರಂಗಡಿ ಜವಳಿ ವಳಗೆ ಒಂದು ಹೆಂಗಸು ನಿಂತಿದ್ಲು. ಈ ತಡ ಸಂತೆಗೋದೆ. ಈಗ್ಲೂ ಅದೇ ಜಾಗದಾಗೆ ನಿಂತವಳೆ, ಕಣ್ಣು ಮಿಟುಕುಸಲ್ಲ. ಕೈನೂ ಕದ್ಲುಸಲ್ಲ. ಆವಮ್ಮಣ್ಣಿಗೆ ಕಾಲು ಗೀಲು ನೋವು ಬರಲ್ಲವೇ?' ಅಂಬೋ ಅಮಾಯಕ ಹೆಣ್ಣು ಮಕ್ಕಳು ತಮ್ಮ ಮಿತಿಯ ಪ್ರಜ್ಞೆಯೊಳಗೆ, ಅವಳ ಅತಂತ್ರದೊಳಗೆ ಹಾಗೂ ಅವಳ ಬದುಕಿನ ವ್ಯವಸ್ಥೆಯೊಳಗೆ, ಆ ಪರಿಸರದೊಳಗೆ ವರ್ಷ ದಾಟಿದರೂ ಒಂದು ಹೊಸ ಸೀರೆಯೆಂಬೋದು ಕಾಣದ ನೂರಾರು ಹೆಣ್ಣು ಮಕ್ಕಳು ನಮ್ಮ ಗ್ರಾಮೀಣ ಭಾಗದಲ್ಲಿದ್ದಾರೆ.

`ಉಟ್ಟೋವೆ ಉಡಬೇಕಮ್ಮಣ್ಣಿ. ನಾವು ಎಲ್ಲಾರಂಗೆ ಹಬ್ಬಬ್ಬುಕ್ಕೆ ಒಂದೊಂದು ಹೊಸ ಸ್ಯಾಲೆ ಉಡೋ ಯೋಗ ಪಡೆದು ಬಂದಿಲ್ಲ. ಅದ್ರಾಗೂ ಅಂತ ದೊಡ್ಡ ದೊಡ್ಡ ರೇಟಿನಾವು ಯಾವ ಜಲುಮುಕ್ಕುಡುತ್ತೀವೋ?' ಎಂದು ಕರುಬುವ ಹೆಣ್ಣು ಮಕ್ಕಳ ಮಧ್ಯೆ, ತಿಂಗಳಿಗೆ ಐದಾರು ಸೀರೆಗಳನ್ನು ಕೊಳ್ಳುವ, ಬರಿ ಸೀರೆಗಳಿಗೆ, ಕುಪ್ಪಸಗಳಿಗೆ ಹಣ ವ್ಯಯಿಸುವ, `ಇಡಲು ಜಾಗವಿಲ್ಲ, ಉಡಲು ವೇಳೆಯಿಲ್ಲ, ಆಸೆಗೆ ಮಿತಿಯಿಲ್ಲ, ಯಾರ‌್ಗಾದ್ರು ಕೊಡಾಕೆ ಕೈ ಬರಲ್ಲ' ಎಂದು ಹರಟೆ ಕೊಚ್ಚುವ, ಪೈಪೋಟಿ ನಡೆಸುವ, ತಲೆಕೆಡಿಸಿಕೊಳ್ಳುವ, ಕಾಲ ವ್ಯಯಿಸುವ ಆಧುನಿಕ ಹೆಣ್ಣು ಮಕ್ಕಳೂ ಇದ್ದಾರೆ. `ಅಮ್ಮಣ್ಣಿ ಬೆಂಗ್ಳೂರಿಗೆ ನಮ್ಮಮ್ಮಯ್ಯನ ಮನಿಗೋಗಿದ್ದೆ. ಯವ್ವ-ಯವ್ವ ಬೆಂಕಿ ಇಕ್ಕೀರೆ ಬೇಯೊವೊಸು ಸ್ಯಾಲೆ ಅವೆ ಕಣತಾಯಿ. ಅವೆಲ್ಲ ಏಸ್ ದಿನಕ್ಕುಡ್ತಳೋ, ಅವ್ರ ಗಂಡ ಹೆಣ್ತಿ ಅಂಬೋರು ಇನ್ಯಾತ್ರು ಮಾತುಗೂ ಜಗಳಾಡಲ್ಲ, ಬರೆ ಸ್ಯಾಲೆ ಮಾತ್‌ಗೆ ಜಗಳಾಡತಾರೆ' ಅಂಬೋ ನಮ್ಮ ಸೋದ್ರತ್ತೆ ನಂಜಮ್ಮನಂತವರೂ ಇದ್ದಾರೆ. ದ್ರೌಪದಿಯು ವಸ್ತ್ರಾಪಹರಣಕ್ಕೆ ಸಿಲುಕಿದಾಗ, ಶ್ರೀಕೃಷ್ಣ ಪರಮಾತ್ಮ ರಾಶಿಗಟ್ಟಲೆ ಸೀರೆ ಒದಗಿಸಿದನೆಂಬ ಹಿನ್ನೆಲೆಯೊಳಗೆ, ನಮ್ಮಳಗಿನ ಬಾಂಧವ್ಯಗಳು ಬೆಸುಗೆಯಾಗುವಂತ ಸೀರೆಗಳಿಗೆ ವಿಶೇಷ ಸ್ಥಾನಮಾನ, ಸಂಪ್ರದಾಯಗಳಿವೆ.

`ಅಲ್ಲಣೆ ನಾವುಟ್ಟಿರೊ ಸೀರೆ ಒಂದು ಭದ್ರವಾಗಿದ್ರೆ ಯಾವೋನೂ ಏನು ಮಾಡಲ್ಲ' ಎಂಬ ಮಹಿಳೆಯರ ಶೀಲ ರಕ್ಷಣೆಯ ಏಕೈಕ ಪಾತ್ರವಾದ ಸೀರೆಯ ಸೆರಗಿನಲ್ಲಿಯೇ ನೂರಾರು ಕತೆಗಳಿವೆ. ಶನಿ ಮಹಾತ್ಮನ ಪ್ರಭಾವಕ್ಕೆ ಒಳಗಾಗಿ ಕಾಡಿಗೋದ ನಳನು ದಮಯಂತಿಯ ಸೆರಗನ್ನೇ ಕತ್ತರಿಸಿಕೊಂಡು, ಅದನ್ನೇ ಮೈಗೆ ಸುತ್ತಿಕೊಂಡು ಅಹೋ ರಾತ್ರಿಯಲ್ಲಿ ಕಾಡೊಳಗೆ ಅಲೆದ ಕಥೆಯಿದೆ. ಹೀಗೆ ದೇಹವನ್ನು ರಕ್ಷಿಸುವ ಸೀರೆಯನ್ನುಟ್ಟು ಅನೇಕ ತಾಯಂದಿರು ಮಕ್ಕಳಿಗೆ ಹಾಲುಣಿಸುವಾಗ ಸೆರಗು ಮರೆ ಮಾಡಿ ಕುಡಿಸುತ್ತಾರೆ. ಎಳೆಯ ಮಕ್ಕಳ ಕಾಯಿಲೆ ವೇಳೆ ಅವ್ವಂದಿರು, ಅಜ್ಜಿಯರು ಸೆರಗಿನ ತುದಿಯನ್ನಿಡಿದು ಮಕ್ಕಳನ್ನು ನೀವಳಿಸಿದರೆ ಕಣ್ಣೆಸರು ಹೋಯಿತೆಂಬ ಗ್ರಾಮೀಣ ಭಾಗದ ನಂಬಿಕೆಯೊಳಗೆ ಸೆರಗು ಮಹತ್ತರ ಸ್ಥಾನ ಪಡೆದಿದೆ. ಅಂತ ಸೆರಗನ್ನು ಮೈತುಂಬ ಹೊದ್ದು ಬದುಕಿದರೆ ಮಾತ್ರ ಗೌರವವೆನ್ನುವ ಕಾಲಘಟ್ಟ ಕಣ್ಮರೆಯಾಗಿ, ಇವತ್ತು ನಮ್ಮ ಮೈಮಾಟಕ್ಕೆ ಮತ್ತು ಅಲಂಕಾರಕ್ಕೆ ಉಡಬೇಕೆನ್ನುವ ಮನಸ್ಸುಗಳೇ ಹೆಚ್ಚಾಗಿವೆ.

ಉಗಾದಿ ಹಬ್ಬದ ಹೋಳಿಗೆ ತಿಂದ ಮಾರನೇ ಬೆಳಿಗ್ಗೆ ಊರ ಮಾರಮ್ಮನಿಗೆ ಮನೆ ಮನೆಯ ಮಹಿಳೆಯರೆಲ್ಲ ಆರತಿ ಹಣ್ಣುಕಾಯಿ ಹೊತ್ತುಕೊಂಡು ಮುನ್ನಡೆಯುತ್ತಿದ್ದಾಗ, ನಾ ಮುಂದೆ ತಾ ಮುಂದೆಂದು ಪೈಪೋಟಿಯೊಳಗೆ, ಹರೆ, ಕೊಂಬು, ತಬಟೆಯವರ ಜೊತೆ ನುಗ್ಗುವಾಗ, ವತ್ತರಿಸಿ ವತ್ತರಿಸಿ ಹೋಗುತ್ತಿದ್ದ ಅಮ್ಮಾಜಕ್ಕಳ ಆರತಿಗೆ ಸಿಗಿಸಿದ್ದ ಊದು ಕಡ್ಡಿಯ ಬೆಂಕಿ, ಅವಳ ಮುಂದೆ ಹೋಗುತ್ತಿದ್ದ ಸಿದ್ಧಮ್ಮಳ ಸೆರಗಿಗೆ ತಾಕಿ ಅದು ಸರ ಸರನೆ ಸುಡಲಾರಂಭಿಸಿತು. ಯವ್ವ ಯವ್ವ ಸಿದ್ಧಮ್ಮ ನಿನ್ನ ಸೆರಗು ಸುಡತಾ ಐತೆಂಬ ಹೆಂಗಸರ ಗದ್ದಲದೊಳಗೆ ಅಮ್ಮಾಜಕ್ಕಳ ಊದು ಕಡ್ಡಿಯ ಕಾರಣ ತಿಳಿದು ಸಿದ್ಧಮ್ಮ ಮತ್ತು ಅಮ್ಮಾಜಮ್ಮ ಅವರವರ ಕೇರಿಯಾಗಿನ ಆರತಿಗಳು ನೆಲಕ್ಕುರುಳುವಂತೆ ಜಗಳವಾಡಿದ್ದರೂ ಬಿಡದೆ, ಅಮ್ಮಾಜಕ್ಕಳ ಗಂಡ ಮತ್ತು ಸಿದ್ಧಮ್ಮಳ ಗಂಡನೂ ಕೈ ಕೈ ಮಿಲಾಯಿಸಿ ಟೇಸನ್ನಿಗೋಗುವಂತೆ ಜಗಳ ವಿಶಿಷ್ಟ ರೂಪ ಪಡೆದಿತ್ತು.

`ನಾನೆ ಉಟ್ಟುಟ್ಟು ವಗಲಾಡಿರೆ ಕೊಟ್ಟೋರ ಮುಯ್ಯಿ ಕೊಡಬಾರದೇನಣೆ' ಎಂದು ನಮ್ಮ ಗ್ರಾಮೀಣ ಭಾಗದ ಹೆಣ್ಣು ಮಕ್ಕಳು ಕೊಡುವ ಮತ್ತು ತೆಗೆದುಕೊಳ್ಳುವ ಸಂಪ್ರದಾಯವನ್ನು, ಆ ಮೂಲಕ ಒಳ್ಳೊಳ್ಳೆಯ ಬೆಸುಗೆ, ಬಾಂಧವ್ಯಗಳನ್ನು ಈ ಸೀರೆಗಳಿಂದ ಉಳಿಸಿಕೊಂಡು ಬಂದಿದ್ದಾರೆ. ಇದೇ ಕೊಡುವ- ತೆಗೆದುಕೊಳ್ಳುವ ಸಂಪ್ರದಾಯದ ಅತಿರೇಕದಲ್ಲಿ ನಮ್ಮ ತಾಲ್ಲೂಕಿನಲ್ಲೊಮ್ಮೆ ಮಹಿಳಾ ಮಣಿಯೊಬ್ಬರು ಎಂ.ಎಲ್.ಎ. ಆಗಿ ಸ್ಪರ್ಧಿಸಲು ಕಣಕ್ಕಿಳಿದಾಗ, ಊರೂರಿಗೂ ಬಂದು ಮತ ಯಾಚಿಸುತ್ತಿದ್ದರು. ಕೆಲವು ಹಳ್ಳಿಗಳಲ್ಲಿ ಮಹಿಳಾಮಣಿಗೆ ಹೊಸ ಹೊಸ ಸೀರೆಗಳನ್ನು ಕೊಟ್ಟು, ಮಡ್ಲು ತುಂಬಿದ ಶಾಸ್ತ್ರ ಮಾಡಿದರು. ಈ ಸಂದರ್ಭದಲ್ಲಿ ಒಬ್ಬಳಿಗಿಂತ ಒಬ್ಬಳು ಪೈಪೋಟಿಯಲ್ಲಿ ಸೀರೆಗಳನ್ನ ಕೊಟ್ರು. ಜೀವಮಾನವೆಲ್ಲ ತೇಯ್ದರೂ ಅವರವರ ಮನೇಲಿ ಉಟ್ಟುಕೊಳ್ಳಲು ನೆಟ್ಟಗೆ ಹತ್ತು ಸೀರೆಯಿಲ್ಲದ ಮಹಿಳೆಯರು ಕೂಡ ಸಾಲ ಸೋಲ ಮಾಡಿ ಸೀರೆಗಳನ್ನು ತಂದು ಕೊಟ್ರು. ಐನೂರು ರೂಪಾಯಿ ಸೀರೆಗಳೆಂದರೆ ಇದೊಂದು ರೇಶಿಮೆ ಸೀರೆಯೇನೋ ಎಂಬಂತೆ ನಾಜೋಕು ಮಾಡುತ್ತಿದ್ದ ಬಡ ಮಹಿಳೆಯರು ಕೂಡ, ಐನೂರು ಆರನೂರು ದುಡ್ಡು ಹೊಂಚಿಕೊಂಡು ಒಳ್ಳೊಳ್ಳೆ ಸೀರೆ ತಂದು ಕೊಟ್ಟರು. `ಅವರು ಸಾದಾ ಸೀದಾ ಮೇಡ್ಮಮ್ನೊರಲ್ಲ. ಎಂ.ಎಲ್.ಎ. ಮೇಡಂನೋರಂದ್ರೆ ಹುಡುಗಾಟವೇನಣೆ. ಕೊಟ್ಟಮೇಲೆ ಚೆನ್ನಾಗಿರಾವ್ ಕೊಡಬೇಕು' ಎಂಬ ಹಿನ್ನೆಲೆಯೊಳಗೆ ಇಡೀ ಹೋಬಳಿಗೆ ಏಕೈಕವಾಗಿದ್ದ ಒಂದೇ ಒಂದು ಶೆಟ್ಟರ ಬಾಬಣ್ಣನ ಅಂಗಡಿ ಗಿಜಿ ಗಿಜಿ ಎನ್ನುವಂತಾಗಿತ್ತು. ಹಿಂಗೆ ಊರೂರಿಗೂ ಎಂ.ಎಲ್.ಎ. ಮೇಡಂನೋರಿಗೆ ಅವೇಸ್ ಅಕ್ಕಿ ಮೂಟೆ ಸಿಕ್ಕವೋ ಅದೇಸ್ ಸೀರೆ ಗಂಟಾದುವೋ? ತಗಿ ತಗಿ ಇವರೆಲ್ಲ ಒಣಗಿದ್ ತ್ವಾಟಕ್ಕೆ ನೀರ್ ಕಟ್ಲಿಲ್ಲ. ತುಂಬಿರೋ ಸಮುದ್ರಕ್ಕೋಗಿ ನೀರುಯ್ದಂಗಾತು.

ರಾಜಕೀಯ ರಾಡಿಯೊಳಗೆ ಸೇರಿಕೊಂಡಿರುವ ಸೀರೆಗಳ ಮಹಿಮೆ ಇನ್ನೂ ಅಪಾರವಾದದ್ದು. ಚುನಾವಣೆ ವೇಳೆ ಮತ ಯಾಚಿಸುವಾಗ ಮಹಿಳೆಯರ ಮನ ಒಲಿಸಲು ಸೀರೆ ಹಂಚುವ ಕುಟಿಲ ಪಕ್ಷಗಳೂ ಇವೆ. ಪುರುಷರಿಗೆ ಮದ್ಯದ ಬಾಟಲಿ, ಮಹಿಳೆಯರಿಗೆ ಒಂದೊಂದು ಸೀರೆ ಎಂಬ ಆಮಿಷಕ್ಕೆ ಬಲಿಯಾಗುತ್ತಿರುವ ನಮ್ಮ ಸಮಾಜ ಯಾವ ಯುಗಕ್ಕೆ ಬದಲಾಗುತ್ತಿದೆಯೋ ಯೋಚಿಸಬೇಕಾಗುತ್ತದೆ. ಭಾಗ್ಯಜ್ಯೋತಿ ಬಾಂಡ್ ಪಡೆದ ಮಹಿಳೆಯರಲ್ಲಿ ಕೂಡ ಸರ್ಕಾರ ಕೊಟ್ಟ ಸೀರೆಗಳನ್ನು ಪಡೆಯುವಾಗ ಆತುರ, ಗೊಂದಲ, ಅನುಮಾನ ಕಾಣುತ್ತದೆ.

ಗಾಡಿ ಮೇಲೆ ಕೂರುವ ಹೆಣ್ಣು ಮಕ್ಕಳು ಅಂಗೇನಾರ ಮರೆತು ಕುಂತು ಬಿಟ್ರು ಅಂದ್ರೆ, ಸೀರೆಯಾದ ಸೀರೆಯೆಲ್ಲ ಗಾಡಿಯ ಚಕ್ರಕ್ಕೆ ಸಿಗಾಕ್ಕಂಡು ಗಾಡೀನೇ ಸ್ಕಿಡ್ಡಾಗಿ ಬಿದ್ದು ಬಿಡತಾರೆ. ಅಂತದ್ದೊಂದು ಪ್ರಸಂಗ ನಮ್ಮ ಐಸ್ಕೂಲ್ ಲತಾ ಮೇಡಂನೋರಿಗೆ ನಡಿಯಿತು. ಮೇಡಂನೊರು ಬಸ್ಸಿಗೆ ಅಂತ ಕಾಯುತ್ತಿರುವಾಗ ದಾರಿಯಲ್ಲಿ ಬಂದ ಯಾರದೋ ಟಿ.ವಿ.ಎಸ್. ಮೇಲೆ ಕುಂತುಕೊಂಡರಂತೆ. ಅಲ್ಲಿ ಅರ್ಧ ದಾರಿಗೆ ಬರೋ ಹೊತ್ತಿಗೆ ಲತಾ ಮೇಡಂನ ಸೀರೆಯಾದ ಸೀರೆಯೆಲ್ಲ ಸುತ್ತಿಕೊಂಡು ಗಾಡಿ ಕೆಳಕ್ಕೆ ಬಿದ್ರಂತೆ. ಮೇಡಂನೋರ ಒಳ ಲಂಗವೊಂದೇ ಉಳಿದುಕೊಂಡು ಅವರು ಮನೆ ಸೇರಿದ ಪಾಡು ಯಾರಿಗೂ ಬ್ಯಾಡವಾಗಿತ್ತು.

ಅನಾದಿ ಕಾಲದಿಂದ ಮಹಿಳೆಯರ ದೇಹ ಮುಚ್ಚುವ, ಸೌಂದರ್ಯ ಹೆಚ್ಚಿಸುವ, ಮೈ ಬಣ್ಣಕ್ಕೆ ಮೆರುಗು ಕೊಡುವ ನಾನಾ ವಿಧವಾದ, ತರತರದ, ಇವತ್ತಿಗೆ ಎಲ್ಲ ಮಹಿಳೆಯರೂ ಉಡುವ, ಉಟ್ಟ ಬದುಕಿನ ಜೀವಾಳವಾಗಿರುವ ಸೀರೆಗಳು ನೂರಾರು ಕೊರಳುಗಳಿಗೆ ನೇಣಾಗಿ ಪರಿಣಮಿಸಲು ಅಲ್ಲಲ್ಲಿ  ಸಾಕ್ಷಿಯಾಗುತ್ತಿವೆ. ಸಂಪ್ರದಾಯವಾಗಿ ಅನೇಕ ದೇವತಾ ಕಾರ್ಯಗಳಿಗೂ ಬಳಕೆಯಾಗುತ್ತಿವೆ. ಇಂಥಾ ಸೀರೆಗಳನ್ನ ನಮ್ಮ ನಮ್ಮ ಬಾಹ್ಯ ಮತ್ತು ಆಂತರಿಕ ಪ್ರಜ್ಞೆಗೆ ಚ್ಯುತಿ ಬರದಂತ ದಿಸೆಯಲ್ಲಿ ನಾವೆಲ್ಲ ಉಟ್ಟು, ಉಡುತ್ತಾ ಆತ್ಮಾವಲೋಕನದೊಳಗೆ ಬದುಕು ಸವೆಸೋಣ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT