ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸುಸೂತ್ರ ಪರೀಕ್ಷೆಗೆ ಅಗತ್ಯ ಕ್ರಮ; ಡಿಸಿ

Last Updated 10 ಜುಲೈ 2012, 5:40 IST
ಅಕ್ಷರ ಗಾತ್ರ

ದಾವಣಗೆರೆ: ಜಿಲ್ಲೆಯಲ್ಲಿ ಸರ್ಕಾರಿ ಪ್ರೌಢಶಾಲಾ ಸಹಶಿಕ್ಷಕರ ನೇಮಕಾತಿಗೆ ಸಂಬಂಧಿಸಿದಂತೆ ಸಂಯುಕ್ತ ಸ್ಪರ್ಧಾತ್ಮಕ ಪರೀಕ್ಷೆ ಸುಸೂತ್ರವಾಗಿ ನಡೆಯಲು ಎಲ್ಲ ಅಧಿಕಾರಿಗಳು ಪರೀಕ್ಷಾ ಕೇಂದ್ರದ ಮೇಲ್ವಿಚಾರಕರು ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿ ಎಸ್.ಎಸ್. ಪಟ್ಟಣಶೆಟ್ಟಿ ಸೂಚಿಸಿದರು.

ಜಿಲ್ಲಾಧಿಕಾರಿ ಕಚೇರಿಯಲ್ಲಿ ಸೋಮವಾರ ಶಿಕ್ಷಕರ ನೇಮಕಾತಿ ಪರೀಕ್ಷೆಯ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು.


ಪರೀಕ್ಷಾ  ಸಾಮಗ್ರಿಗಳನ್ನು ಶಿಕ್ಷಣ ಇಲಾಖೆ ಉಪ ನಿರ್ದೇಶಕರು, ಜಿಲ್ಲಾಧಿಕಾರಿ ಅಥವಾ ನಿಯೋಜಿತ ನೋಡೆಲ್ ಅಧಿಕಾರಿ, ಮಾರ್ಗಾಧಿಕಾರಿಗಳ ಸಮಕ್ಷಮದಲ್ಲಿ ಜಿಲ್ಲಾ ಖಜಾನೆಯಲ್ಲಿಡಬೇಕು. ಪರೀಕ್ಷೆ ಆರಂಭವಾಗುವ ಒಂದೂವರೆ ಗಂಟೆ ಮೊದಲು ಪ್ರಶ್ನೆಪತ್ರಿಕೆಗಳನ್ನು ಖಜಾನೆಯಿಂದ ಜಿಲ್ಲಾ ಮಾರ್ಗಾಧಿಕಾರಿಗಳಿಗೆ ನೀಡಬೇಕು.

ಅಂಗವಿಕಲ ವಿದ್ಯಾರ್ಥಿಗಳು ಅಗತ್ಯವಿದ್ದಲ್ಲಿ ಬರಹಗಾರ ಸಹಾಯಕರ ಮೂಲಕ ಪರೀಕ್ಷೆ ಬರೆಯಬಹುದು. ಬೇರೆ ಬೇರೆ ಅವಧಿಗೆ ಬೇರೆ ಬರಹಗಾರರನ್ನೇ ತೆಗೆದುಕೊಳ್ಳಬೇಕು. ಅಂಗವಿಕಲತೆಯ ಪ್ರಮಾಣ ಅನುಸರಿಸಿ 30 ನಿಮಿಷಗಳ ಹೆಚ್ಚುವರಿ ಅವಧಿ ನೀಡಬಹುದು ಎಂದು ಜಿಲ್ಲಾಧಿಕಾರಿ ಸಲಹೆ ಮಾಡಿದರು.

ಪರೀಕ್ಷಾ ಕೇಂದ್ರಗಳಿಗೆ ಮೊಬೈಲ್ ತರುವುದನ್ನು ಸಂಪೂರ್ಣ ನಿಷೇಧಿಸಲಾಗಿದೆ. ಅಭ್ಯರ್ಥಿಗಳು ನೀಲಿ ಅಥವಾ ಕಪ್ಪು ಬಾಲ್ ಪಾಯಿಂಟ್ ಪೆನ್ನನ್ನೇ ಉಪಯೋಗಿಸಬೇಕು. ಅಭ್ಯರ್ಥಿಯ ಎಡಗೈ ಹೆಬ್ಬೆರಳಿನ ಗುರುತು ಕಡ್ಡಾಯ. ಅಕ್ರಮ ತಡೆಗಟ್ಟಲು ಪೊಲೀಸ್ ರಕ್ಷಣೆ ಒದಗಿಸಬೇಕು ಎಂದು ಡಿಸಿ ಸೂಚಿಸಿದರು.

ಡಿಡಿಪಿಐ ಬಿ.ಎ. ರಾಜಶೇಖರ, ಹೆಚ್ಚುವರಿ ಜಿಲ್ಲಾಧಿಕಾರಿ ಎಸ್.ಎಚ್. ವಿಜಯಕುಮಾರ್, ಪೊಲೀಸ್ ಇನ್‌ಸ್ಪೆಕ್ಟರ್ ರಮೇಶ್‌ರಾವ್, ವಿವಿಧ ಪರೀಕ್ಷಾ ಕೇಂದ್ರದ ಅಧಿಕಾರಿಗಳು ಮುಖ್ಯಶಿಕ್ಷಕರು ಹಾಜರಿದ್ದರು.
ಪರೀಕ್ಷಾ ಕೇಂದ್ರಗಳು: ಬಿಇಎ ಹೈಸ್ಕೂಲ್, ಬಿ.ಎಂ. ತಿಪ್ಪೇಸ್ವಾಮಿ ಸ್ಮಾರಕ ಪಿಯು ಕಾಲೇಜು, ಮೋತಿ ವೀರಪ್ಪ ಕಾಲೇಜು, ಡಿಆರ್‌ಆರ್ ಹೈಸ್ಕೂಲ್, ಈಶ್ವರಮ್ಮ ಇಂಗ್ಲಿಷ್ ಮೀಡಿಯಂ ಹೈಸ್ಕೂಲ್, ಹಳೇ ನಗರಸಭೆ ಪಿಯು ಕಾಲೇಜು, ಜೈನ್ ವಿದ್ಯಾಲಯ, ಲೂರ್ಡ್ಸ್ ಬಾಯ್ಸ ಹೈಸ್ಕೂಲ್, ಎಂಎಂಎಂ ಗರ್ಲ್ಸ್ ಹೈಸ್ಕೂಲ್, ಮಾಗನೂರು ಬಸಪ್ಪ ಹೈಸ್ಕೂಲ್, ಎಂಇಎಸ್ ಕಾನ್ವೆಂಟ್, ಎಸ್‌ವಿಎಸ್ ಹೈಸ್ಕೂಲ್, ಸೇಂಟ್ ಜಾನ್ ಹೈಸ್ಕೂಲ್, ಸಿದ್ದಗಂಗಾ ಹೈಸ್ಕೂಲ್, ವಿನಾಯಕ ಟ್ರಸ್ಟ್ ಹೈಸ್ಕೂಲ್, ಎಸ್‌ಬಿಸಿ ಪ್ರಥಮದರ್ಜೆ ಮಹಿಳಾ ಕಾಲೇಜು, ನೂತನ ಪಿಯು ಕಾಲೇಜು, ಬಿ.ಎಸ್. ಚನ್ನಬಸಪ್ಪ ಪ್ರಥಮದರ್ಜೆ ಕಾಲೇಜು, ಎವಿಕೆ ಕಾಲೇಜು, ಎಆರ್‌ಜಿ ಆರ್ಟ್ಸ್ ಅಂಡ್ ಕಾಮರ್ಸ್ ಕಾಲೇಜು, ಸರ್ಕಾರಿ ಪ್ರಥಮದರ್ಜೆ ಕಾಲೇಜು, ಡಿಆರ್‌ಎಂ ವಿಜ್ಞಾನ ಕಾಲೇಜು, ಅಂಜುಮ್ ಪಿಯು ಕಾಲೇಜು, ಸೊಮೇಶ್ವರ ಇಂಗ್ಲಿಷ್ ಹೈಸ್ಕೂಲ್, ಅಮೃತ ವಿದ್ಯಾಲಯಂ ಹೈಸ್ಕೂಲ್, ಸೆಂಟ್‌ಪಾಲ್ಸ್ ಗರ್ಲ್ಸ್ ಹೈಸ್ಕೂಲ್, ಎಸ್‌ಕೆಎಎಚ್ ಪಿಯು ಕಾಲೇಜು ಹಾಗೂ ತಿಮ್ಮೋರೆಡ್ಡಿ ಪಿಯು ಕಾಲೇಜು.
 

ಬೇಸ್ತು ಹೋದ ಜಿಲ್ಲಾಧಿಕಾರಿ
 

ಸಭೆಯಲ್ಲಿ ಜಿಲ್ಲಾ ಖಜಾನಾಧಿಕಾರಿ ಕಚೇರಿಯಿಂದ ಯಾರೂ ಹಾಜರಿರಲಿಲ್ಲ. ಡಿಸಿ ಪಟ್ಟಣಶೆಟ್ಟಿ ಅವರು ಇಒ ಕೃಷ್ಣಮೂರ್ತಿ ಅವರ ಮೊಬೈಲ್‌ನಿಂದ ಕರೆ ಮಾಡಿ ಸಿಕ್ಕಾಪಟ್ಟೆ ತರಾಟೆಗೆ ತೆಗೆದುಕೊಂಡರು.
ಡಿಸಿ: ನೀವಂತೂ ಸಭೆಗೆ ಬರಲಿಲ್ಲ. ಯಾರನ್ನಾದರೂ ಕಳುಹಿಸಬೇಕಿತ್ತಲ್ಲಾ? ನಿರ್ಲಕ್ಷ್ಯ ಏಕೆ?
ಅತ್ತ ಕಡೆಯಿಂದ: ಇಲ್ಲ ಸಾರ್... ನಮಗೆ ಹೇಳಿಯೇ ಇಲ್ಲ.

ಡಿಸಿ: ಕೃಷ್ಣಮೂರ್ತಿ ನಿಮಗೆ ಮೂರು ಬಾರಿ ಕರೆ ಮಾಡಿದ್ದರಂತಲ್ಲಾ?
 ಕೃಷ್ಣಮೂರ್ತಿ: ಹೌದು ಸಾರ್, ಬೇಕಾದ್ರೆ ನಂಬರ್ ನೋಡಿ.
ಡಿಸಿ: ಶಿಕ್ಷಕರ ನೇಮಕಾತಿ ಪರೀಕ್ಷೆಯ ಸಭೆ ಬಗ್ಗೆ ಗೊತ್ತಿಲ್ಲವೇನ್ರಿ?
ಅತ್ತ: ಗೊತ್ತು ಸಾರ್ ಆಗ್ಲೆ ಡಿಡಿಪಿಐ ಸಾಹೇಬ್ರು ಸಭೆಗೆ ಬಂದಿದ್ದಾರಲ್ಲಾ?
(ಜಿಲ್ಲಾ ಖಜಾನಾಧಿಕಾರಿಗೆ ಮಾಡಬೇಕಾದ ಕರೆ ಡಿಡಿಪಿಐ ಕಚೇರಿಗೇ ಹೋಗಿತ್ತು. ಕೋಪಗೊಂಡ ಡಿಸಿ ಆ ಮೊಬೈಲ್ ಎಸೆಯಿರಿ ಅಂದುಬಿಟ್ಟರು)
 

 ವೇಳಾಪಟ್ಟಿ
ದಿನಾಂಕ            ವಿಷಯ                                     ಸಮಯ

ಜುಲೈ 15     ಸಾಮಾನ್ಯ ಪತ್ರಿಕೆ-1                          ಬೆಳಿಗ್ಗೆ 10ರಿಂದ 12
ಜುಲೈ 15      ಕಲಾ ಶಿಕ್ಷಕರು ಪತ್ರಿಕೆ-2                     ಮಧ್ಯಾಹ್ನ 2- 4
ಜುಲೈ 16      ದೈಹಿಕ ಶಿಕ್ಷಕ ಗ್ರೇಡ್-1 ಪತ್ರಿಕೆ-2           ಬೆ.10-12
ಜುಲೈ 16      ಭೌತವಿಜ್ಞಾನ/ಜೀವ ವಿಜ್ಞಾನ ಪತ್ರಿಕೆ-2     ಮ. 2- 4
ಜುಲೈ 17      ಕನ್ನಡ ಭಾಷಾ ಶಿಕ್ಷಕರು ಪತ್ರಿಕೆ-2           ಬೆ.10-12
ಜುಲೈ 17       ಆಂಗ್ಲಭಾಷಾ ಶಿಕ್ಷಕರು ಪತ್ರಿಕೆ-2            ಮ. 2- 4
ಜುಲೈ 18       ಹಿಂದಿ ಭಾಷಾ ಶಿಕ್ಷಕರು ಪತ್ರಿಕೆ-2           ಬೆ. 10-12
ಜುಲೈ 18       ಸಂಸ್ಕೃತ/ಉರ್ದು/ತಮಿಳು/ಮರಾಠಿ ಪತ್ರಿಕೆ-2  ಮ. 2- 4

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT