ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೈಕೊ ಶಂಕರ್ ಪರಾರಿ

30ಕ್ಕೂ ಹೆಚ್ಚು ಅತ್ಯಾಚಾರ ಮತ್ತು ಕೊಲೆಯಲ್ಲಿ ಭಾಗಿ
Last Updated 1 ಸೆಪ್ಟೆಂಬರ್ 2013, 20:13 IST
ಅಕ್ಷರ ಗಾತ್ರ

ಬೆಂಗಳೂರು: ಕೊಲೆ, ಅತ್ಯಾಚಾರ ಸೇರಿದಂತೆ 30ಕ್ಕೂ ಹೆಚ್ಚು ಹೇಯ ಅಪರಾಧ ಪ್ರಕರಣಗಳ ಆರೋಪಿ, `ಸೈಕೊ ಕಿಲ್ಲರ್' ಎಂಬ ಕುಖ್ಯಾತಿಯ ಜೈಶಂಕರ್ ಅಲಿಯಾಸ್ ಶಂಕರ್ (36) ನಗರದ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಿಂದ ಭಾನುವಾರ ಬೆಳಗಿನ ಜಾವ ಸಿನಿಮೀಯ ರೀತಿಯಲ್ಲಿ ತಪ್ಪಿಸಿಕೊಂಡಿದ್ದಾನೆ.

ಬಿಗಿ ಭದ್ರತೆಯ ಈ ಜೈಲಿನ 16 ವರ್ಷಗಳ ಇತಿಹಾಸದಲ್ಲಿ ಕೈದಿಯೊಬ್ಬ ತಪ್ಪಿಸಿಕೊಂಡಿದ್ದ ಇದೇ ಮೊದಲು. ಇದರಿಂದ ತೀವ್ರ ಮುಜುಗರಕ್ಕೆ ಒಳಗಾದ ಕಾರಾಗೃಹ ಇಲಾಖೆ, ಕರ್ತವ್ಯ ಲೋಪಕ್ಕಾಗಿ 11 ಸಿಬ್ಬಂದಿಯನ್ನು ಅಮಾನತು ಮಾಡಿದೆ. 

`ಶಂಕರ್‌ನನ್ನು ಕಾರಾಗೃಹದ ಆರೋಗ್ಯ ವಿಭಾಗದ ಕೊಠಡಿ ಸಂಖ್ಯೆ 26ರಲ್ಲಿ ಇರಿಸಲಾಗಿತ್ತು. ರಾತ್ರಿ ಸುರಿದ ಮಳೆಯಿಂದ ವಿದ್ಯುತ್ ವ್ಯತ್ಯಯ ಉಂಟಾಗಿತ್ತು. ಈ ಸಂದರ್ಭ ಬಳಸಿಕೊಂಡ ಆತ ನಕಲಿ ಕೀ ಬಳಸಿ ಬಾಗಿಲು ತೆರೆದಿದ್ದಾನೆ. ಬಳಿಕ ಪೊಲೀಸ್ ಸಮವಸ್ತ್ರ ಧರಿಸಿ, ಬೆಡ್‌ಶೀಟ್, ಖಾಲಿ ಬ್ಯಾಗ್, ಹ್ಯಾಂಡ್ ಗ್ಲೌಸ್ ಮತ್ತು ಬೆಲ್ಟ್‌ನೊಂದಿಗೆ ಉದ್ಯಾನಕ್ಕೆ ಹೋಗಿದ್ದಾನೆ. ಅಲ್ಲಿ ಬಳ್ಳಿ ಹಬ್ಬಿಸಲು ಗೋಡೆಗೆ ಒರಗಿಸಿಟ್ಟಿದ್ದ ಮರದ ಕಂಬದ ಸಹಾಯದಿಂದ 21 ಅಡಿ ಎತ್ತರದ ಗೋಡೆ ಏರಿದ್ದಾನೆ'.

`ನಂತರ ಆ ಗೋಡೆಯ ಮೇಲೆಯೇ ನಡೆದುಕೊಂಡು ಮುಖ್ಯ ಪ್ರವೇಶ ದ್ವಾರದಲ್ಲಿರುವ 30 ಅಡಿ ಎತ್ತರದ ಗೋಡೆ ತಲುಪಿದ್ದಾನೆ' ಎಂದು ಕಾರಾಗೃಹಗಳ ಇಲಾಖೆಯ ಎಡಿಜಿಪಿ ಕೆ.ವಿ.ಗಗನ ದೀಪ್‌`ಪ್ರಜಾವಾಣಿ'ಗೆ ತಿಳಿಸಿದರು.

`ಕೊಠಡಿಯಿಂದ ತಂದಿದ್ದ ಎಂಟು ಅಡಿ ಉದ್ದದ ಬೆಡ್‌ಶಿಟ್, ಬೆಲ್ಟ್ ಮತ್ತು ಬ್ಯಾಗನ್ನು ಒಂದಕ್ಕೊಂದು ಕಟ್ಟಿದ್ದಾನೆ. ಅಲ್ಲದೇ, ವಿದ್ಯುತ್ ಪ್ರವಹಿಸಬಾರದೆಂದು ಕೈಗೆ ಗ್ಲೌಸ್ ಹಾಕಿಕೊಂಡಿದ್ದಾನೆ'.

`ಬೆಲ್ಟನ್ನು ಗೋಡೆ ಮೇಲಿದ್ದ ಕಬ್ಬಿಣದ ಕಂಬಿಗೆ ಕಟ್ಟಿ, ಮತ್ತೊಂದು ತುದಿಯನ್ನು ಹಿಡಿದುಕೊಂಡು ಕೆಳಗೆ ಜಿಗಿದು ಪರಾರಿಯಾಗಿದ್ದಾನೆ. ಗೋಡೆಯ ಮೇಲೆ ಹಾಕಿರುವ ಗಾಜಿನ ಚೂರುಗಳು ಆತನ ಕಾಲಿಗೆ ಚುಚ್ಚಿರುವುದರಿಂದ ರಕ್ತದ ಕಲೆ ಗೋಡೆ ಮೇಲೆ ಬಿದ್ದಿದೆ. ರಾತ್ರಿ 2 ರಿಂದ 4 ಗಂಟೆಯ ನಡುವೆ ಆತ ಪರಾರಿಯಾಗಿದ್ದಾನೆ' ಎಂದು ಅವರು ಹೇಳಿದರು.

ಶಂಕರ್‌ನ ಕೊಠಡಿಯಲ್ಲಿರುವ ಮತ್ತೊಬ್ಬ ಕೈದಿ ಬೋರೇಗೌಡ, ಬೆಳಿಗ್ಗೆ ಏಳು ಗಂಟೆ ಸುಮಾರಿಗೆ ನಿದ್ರೆಯಿಂದ ಎಚ್ಚರಗೊಂಡಿದ್ದಾನೆ. ಈ ವೇಳೆ ಬಾಗಿಲು ತೆರೆದಿತ್ತು ಅಲ್ಲದೆ ಶಂಕರ್ ಕೊಠಡಿಯಲ್ಲಿ ಇರಲಿಲ್ಲ. ಇದರಿಂದ ಅನುಮಾನಗೊಂಡ ಆತ, ಸಿಬ್ಬಂದಿಗೆ ವಿಷಯ ತಿಳಿಸಿದ್ದಾನೆ. ಕೂಡಲೇ ಸಿಬ್ಬಂದಿ ಶೌಚಾಲಯ, ಉದ್ಯಾನ ಸೇರಿದಂತೆ ಆವರಣವಿಡೀ ಹುಡುಕಾಟ ನಡೆಸಿದ್ದಾರೆ. ಬಳಿಕ ಅವರು ಮುಖ್ಯ ಪ್ರವೇಶ ದ್ವಾರದ ಬಳಿ ಬಂದಾಗ ಗೋಡೆಯ ಮೇಲಿನ ಕಂಬಿಗೆ ಕಟ್ಟಿದ್ದ ಬೆಲ್ಟ್, ಅಲ್ಲಿದ್ದ ಮರದ ಬೊಂಬು ಮತ್ತು ರಕ್ತದ ಕಲೆಗಳು ಪತ್ತೆಯಾಗಿವೆ. ಆಗ ಸೈಕೊ ಶಂಕರ್ ಪರಾರಿಯಾಗಿರುವುದು ಗಮನಕ್ಕೆ ಬಂದಿದೆ.

ತುಮಕೂರು, ಚಿತ್ರದುರ್ಗ, ವಿಜಾಪುರ ಮತ್ತು ಬೆಂಗಳೂರು ಗ್ರಾಮಾಂತರ ಪ್ರದೇಶಗಳಲ್ಲಿ ಎಂಟು ಪ್ರಕರಣಗಳಲ್ಲಿ ಭಾಗಿಯಾಗಿದ್ದಾನೆ. ತಮಿಳುನಾಡಿನ ಸೇಲಂ, ಧರ್ಮಪುರಿ, ಕೊಯಮತ್ತೂರು, ಕೃಷ್ಣಗಿರಿ, ತಿರುಪ್ಪೂರ್, ಈರೋಡ್ ಮತ್ತು ನಾಮಕ್ಕಲ್‌ನಲ್ಲಿ ಈತನ ವಿರುದ್ಧ ಹಲವು ಅಪರಾಧ ಪ್ರಕರಣಗಳು ದಾಖಲಾಗಿವೆ.

ಸೈಕೊ ಶಂಕರ್‌ನನ್ನು 2011ರಲ್ಲಿ ವಿಜಾಪುರ ಬಳಿಯ ಝಳಕಿಯಲ್ಲಿ ಪೊಲೀಸರು ಬಂಧಿಸಿದ್ದರು. ನಂತರ ಅವನನ್ನು ಪರಪ್ಪನ ಅಗ್ರಹಾರದ ವಿಶೇಷ ಸೆಲ್‌ನಲ್ಲಿ ಇಡಲಾಗಿತ್ತು. ಪ್ರಕರಣವೊಂದರ ವಿಚಾರಣೆಗಾಗಿ ಶನಿವಾರ ಡಿವೈಎಸ್‌ಪಿ ನೇತೃತ್ವದ ತಂಡ ತುಮಕೂರು ನ್ಯಾಯಾಲಯಕ್ಕೆ ವಿಶೇಷ ಭದ್ರತೆಯೊಂದಿಗೆ ಕರೆದೊಯ್ದಿತ್ತು. ವಿಚಾರಣೆ ನಂತರ ಪುನಃ ಜೈಲಿಗೆ ವಾಪಸ್ ತಂದು ಬಿಟ್ಟಿತ್ತು.
 
ತನಿಖೆಗೆ ಸಮಿತಿ: ಆತನಿಗೆ `ನಕಲಿ ಕೀ ಮತ್ತು ಪೊಲೀಸ್ ಸಮವಸ್ತ್ರ ಸಿಕ್ಕಿರುವುದನ್ನು ಗಮನಿಸಿದರೆ ಕಾರಾಗೃಹದ ಸಿಬ್ಬಂದಿ ಇದರಲ್ಲಿ ಭಾಗಿಯಾಗಿರುವ ಸಾಧ್ಯತೆ ಇದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. 

11 ಸಿಬ್ಬಂದಿ ಅಮಾನತು: ಕಾರಾಗೃಹದ ಸಹಾಯಕ ಅಧೀಕ್ಷಕ ವಿ.ಎಸ್.ಮಠ್, ಜೈಲರ್‌ಗಳಾದ ಮಹಂತೇಶಪ್ಪ ಮತ್ತು ಮೋಹನ್‌ಕುಮಾರ್, ಸಿಬ್ಬಂದಿಗಳಾದ ಘೋರ್ಪಡೆ, ಶಶಿಧರ್ ಬಡಿಗಾರ್, ಶ್ರೀಶೈಲ, ಆರೋಗ್ಯ ವಿಭಾಗದ ಗೇಟ್ ಬಳಿ ಇದ್ದ ಜಯಕುಮಾರ್, ಮಲ್ಲಿಕಾರ್ಜುನ್ ಅಂತಕವರ್, ರಮೇಶ್ ಬಿ. ಪೂಜಾರ್ ಮತ್ತು ಮೃತ್ಯುಂಜಯ ಅವರನ್ನು ಸೇವೆಯಿಂದ ಅಮಾನತು ಮಾಡಲಾಗಿದೆ.

ಅತ್ಯಾಚಾರ ಇವನಿಗೆ ಸಲೀಸು: ಸೈಕೊ ಶಂಕರ್, ತಮಿಳುನಾಡಿನ ಈಡಪ್ಪಾಡಿ ತಾಲ್ಲೂಕಿನ ಕಟ್ಟುವಾಳ್ ಕನ್ನಿಯಾಪಟ್ಟಿ ಗ್ರಾಮದವನು. 2009ರ ಆ.3 ರಂದು ತಮಿಳುನಾಡಿನಲ್ಲಿ ಕಾನ್‌ಸ್ಟೆಬಲ್ ಎಂ.ಜಯಮ್ಮ ಎಂಬುವರ ಮೇಲೆ ಅತ್ಯಾಚಾರ ಎಸಗಿ ಕೊಲೆ ಮಾಡಿದ್ದ. ಆತನನ್ನು ಬಂಧಿಸಿದ್ದ ಸ್ಥಳೀಯ ಪೊಲೀಸರು, 2011ರ ಮಾ.18ರಂದು ಕೊಯಮತ್ತೂರು ಸೆಂಟ್ರಲ್ ಜೈಲಿನಿಂದ ಸೇಲಂ ನ್ಯಾಯಾಲಯಕ್ಕೆ ವಿಚಾರಣೆಗಾಗಿ ಕರೆದೊಯ್ಯುತ್ತಿದ್ದರು. ಆಗ ಸೇಲಂ ಬಸ್ ನಿಲ್ದಾಣದಿಂದ ತಪ್ಪಿಸಿಕೊಂಡಿದ್ದ. ಈ ವೇಳೆ ಆತನನ್ನು ನ್ಯಾಯಾಲಯಕ್ಕೆ ಕರೆದೊಯ್ಯುತ್ತಿದ್ದ ಕಾನ್‌ಸ್ಟೆಬಲ್ ಎಂ.ಚಿನ್ನಸ್ವಾಮಿ ನಂತರ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದರು. ಬಳಿಕ ಲಾರಿಯೊಂದರಲ್ಲಿ ರಾಜ್ಯಕ್ಕೆ ಬಂದ ಸೈಕೊ ಶಂಕರ್, ಇಲ್ಲಿ ತನ್ನ ದುಷ್ಕೃತ್ಯವನ್ನು ಮುಂದುವರಿಸಿದ್ದ.

ತಪ್ಪಿಸಿಕೊಂಡಿದ್ದು ಹೀಗೆ...
ಮರದ ಕಂಬದ ಮೂಲಕ 21 ಅಡಿ ಗೋಡೆ ಏರಿದ

ಅಲ್ಲಿಂದ 30 ಅಡಿ ಎತ್ತರದ ಇನ್ನೊಂದು ಗೋಡೆಗೆ ಜಿಗಿದ

ಬೆಡ್‌ಶಿಟ್, ಬೆಲ್ಟ್ ಕಟ್ಟಿಕೊಂಡು ಕೆಳಗೆ ಹಾರಿದ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT