ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೋನಿಯಾ ಭೇಟಿಗೆ ಮರು ಯತ್ನ

Last Updated 15 ಅಕ್ಟೋಬರ್ 2012, 19:30 IST
ಅಕ್ಷರ ಗಾತ್ರ

ಬೆಂಗಳೂರು: ಕೆಪಿಸಿಸಿ ಅಧ್ಯಕ್ಷ  ಸ್ಥಾನಕ್ಕೆ ಪ್ರಯತ್ನಿಸುತ್ತಿರುವ ಕಾಂಗ್ರೆಸ್‌ನ ಲಿಂಗಾಯತ ಮುಖಂಡರು ಈಗ ಇತರ ಸಮುದಾಯಗಳ ಕೆಲ ಮುಖಂಡರನ್ನೂ ತಮ್ಮ ಜತೆ ಸೇರಿಸಿಕೊಂಡಿದ್ದು, ಇದೇ 18ರಂದು ಮಂಗಳೂರಿಗೆ ಬರಲಿರುವ ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರನ್ನು ಭೇಟಿ ಮಾಡಲು ಸಮಯಾವಕಾಶ ಕೋರಿದ್ದಾರೆ.

ಕೆಪಿಸಿಸಿಯ ಈಗಿನ ಅಧ್ಯಕ್ಷ ಡಾ.ಜಿ. ಪರಮೇಶ್ವರ್ ಅವರನ್ನು ಕೆಳಗಿಳಿಸಿ, ಲಿಂಗಾಯತ ಸಮುದಾಯಕ್ಕೆ ಸೇರಿದ ಪಕ್ಷದ ಹಿರಿಯ ಮುಖಂಡ ಶಾಮನೂರು ಶಿವಶಂಕರಪ್ಪ ಅವರನ್ನು ಅಧ್ಯಕ್ಷರನ್ನಾಗಿ ನೇಮಕ ಮಾಡಬೇಕು ಎಂದು ಪಕ್ಷದ ಒಂದು ಗುಂಪು ಸೋನಿಯಾ ಅವರಲ್ಲಿ ಇತ್ತೀಚೆಗೆ ಮನವಿ ಮಾಡಿತ್ತು.

ಆದರೆ ಜಾತಿ ಆಧಾರದಲ್ಲಿ ಕೆಪಿಸಿಸಿ ಅಧ್ಯಕ್ಷರ ಬದಲಾವಣೆಗೆ ಸೋನಿಯಾ ಒಪ್ಪಲಾರರು ಎಂಬುದನ್ನು ಅರಿತ ಈ ಗುಂಪು, ಈಗ ಇತರ ಸಮುದಾಯಗಳ ಮುಖಂಡರನ್ನೂ ತನ್ನ ತೆಕ್ಕೆಗೆ ಸೇರಿಸಿಕೊಂಡಿದೆ ಎಂದು ಮೂಲಗಳು ತಿಳಿಸಿವೆ.

ಭೇಟಿಗೆ ಅವಕಾಶ ಕೋರಿ ಸೋನಿಯಾ ಅವರಿಗೆ ಫ್ಯಾಕ್ಸ್ ಮೂಲಕ ಕಳುಹಿಸಿರುವ ಪತ್ರಕ್ಕೆ ಶಾಸಕರಾದ ಪಿ.ಎಂ. ಅಶೋಕ, ಬಿ.ಸಿ. ಪಾಟೀಲ್, ಅಮರೇಗೌಡ ಬಯ್ಯಾಪುರ, ಮಾಜಿ ಸಚಿವೆ ರಾಣಿ ಸತೀಶ್, ಮಾಜಿ ಶಾಸಕರಾದ ಕೆ.ಸಿ. ಕೊಂಡಯ್ಯ, ವಿ.ಎಸ್. ಉಗ್ರಪ್ಪ, ಸಲೀಂ ಅಹಮದ್, ಕೆಪಿಸಿಸಿ ಮಾಜಿ ಅಧ್ಯಕ್ಷ ಅಲ್ಲಂ ವೀರಭದ್ರಪ್ಪ ಮತ್ತಿತರರು ಸಹಿ ಮಾಡಿದ್ದಾರೆ.

`ಅಧ್ಯಕ್ಷರ ಬದಲಾವಣೆಯ ಬೇಡಿಕೆ ಇಟ್ಟಿರುವುದು ಲಿಂಗಾಯತ ಮುಖಂಡರು ಮಾತ್ರವಲ್ಲ~ ಎಂಬ ಸಂದೇಶವನ್ನು ಸೋನಿಯಾ ಅವರಿಗೆ ನೀಡುವುದು ಇದರ ಉದ್ದೇಶ ಎಂದು ಗೊತ್ತಾಗಿದೆ.

ಸದಸ್ಯತ್ವ ಅಭಿಯಾನ: ಕೆಪಿಸಿಸಿ ಸದಸ್ಯತ್ವ ಅಭಿಯಾನಕ್ಕೆ ಬೆಂಗಳೂರಿನಲ್ಲಿ ಮಂಗಳವಾರ ಚಾಲನೆ ದೊರೆಯಲಿದೆ. ಪರಮೇಶ್ವರ್, ವಿರೋಧ ಪಕ್ಷದ ನಾಯಕರಾದ ಸಿದ್ದರಾಮಯ್ಯ, ಎಸ್.ಆರ್. ಪಾಟೀಲ್, ಪಕ್ಷದ ರಾಜ್ಯ ಉಸ್ತುವಾರಿ ಹೊತ್ತಿರುವ ಮಧುಸೂದನ ಮಿಸ್ತ್ರಿ ಮತ್ತಿತರ ಮುಖಂಡರು ಇದರಲ್ಲಿ ಪಾಲ್ಗೊಳ್ಳಲಿದ್ದಾರೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT