ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ಪೀಕರ್ ವಿರುದ್ಧ ಆರೋಪ; ಜಿ.ಪಂ. ಸಭೆಯಲ್ಲಿ ಕೋಲಾಹಲ

Last Updated 16 ಸೆಪ್ಟೆಂಬರ್ 2011, 8:45 IST
ಅಕ್ಷರ ಗಾತ್ರ

ಮಡಿಕೇರಿ:  ಕಳಪೆ ಕಾಮಗಾರಿ ನಡೆಸುವ ನಿರ್ಮಿತಿ ಕೇಂದ್ರಕ್ಕೆ ವೀರಾಜಪೇಟೆ ತಾಲ್ಲೂಕಿನ ತಿತಿಮತಿ ಪಂಚಾಯಿತಿಯ ದೊಡ್ಡ ರೇಶ್ಮೆ ಹೊಸಕೆರೆ ಹತ್ತಿರ ಕಾಲುವೆ ನಿರ್ಮಾಣ ಹಾಗೂ ಕೆರೆ ಸುಧಾರಣೆ ಕಾಮಗಾರಿಯನ್ನು ವಹಿಸಿ ಕೊಟ್ಟಿರುವ ಹಿಂದೆ ವಿಧಾನಸಭಾಧ್ಯಕ್ಷ ಕೆ.ಜಿ. ಬೋಪಯ್ಯ ಅವರ ಕೈವಾಡ ಇದೆ ಎಂದು ಆರೋಪಿಸಿದ ಜಿ.ಪಂ. ಸದಸ್ಯೆ ಸರಿತಾ ಪೂಣಚ್ಚ ಅವರನ್ನು ಸಭೆಯಿಂದ ಹೊರಹಾಕಿದ ಘಟನೆ ಜಿ.ಪಂ. ಮಾಸಿಕ ಸಭೆಯಲ್ಲಿ ಗುರುವಾರ ನಡೆಯಿತು. 

 ಇಲ್ಲಿನ ಕೋಟೆ ವಿಧಾನಸಭಾಂಗಣದಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಸದಸ್ಯೆಯ ಆರೋಪ ತೀವ್ರ ಕೋಲಾಹಲ ಉಂಟು ಮಾಡಿತು.

ಸುಳ್ಳು ಆರೋಪಗಳನ್ನು ಮಾಡಿದ ಸರಿತಾ ಅವರು ತಕ್ಷಣ ಕ್ಷಮೆ ಕೋರಬೇಕು ಇಲ್ಲದಿದ್ದರೆ ಅವರನ್ನು ಅಮಾನತುಗೊಳಿಸಬೇಕೆಂದು ಆಡಳಿತ ಪಕ್ಷದ ಸದಸ್ಯರು ಒತ್ತಾಯಿಸಿದರು.

`ನಾನು ಯಾವುದೇ ಸುಳ್ಳು ಆರೋಪಗಳನ್ನು ಮಾಡುತ್ತಿಲ್ಲ. ಈ ಕಾಮಗಾರಿಯು ನಿರ್ಮಿತಿ ಕೇಂದ್ರಕ್ಕೆ ವಹಿಸಿಕೊಡುವಲ್ಲಿ ಸದಸ್ಯ ರಾಜಾರಾವ್, ಜಿ.ಪಂ. ಅಧ್ಯಕ್ಷ ರವಿ ಕುಶಾಲಪ್ಪ ಹಾಗೂ ವಿಧಾನಸಭಾಧ್ಯಕ್ಷ ಕೆ.ಜಿ.ಬೋಪಯ್ಯ ಅವರು ಷಾಮೀಲಾಗಿದ್ದಾರೆ. ಇದಕ್ಕೆ ನನ್ನ ಬಳಿ ದಾಖಲೆ ಗಳು ಇವೆ. ಚರ್ಚೆಗೆ ಅವಕಾಶ ಮಾಡಿಕೊಡಿ~ ಎಂದು ಸರಿತಾ ಮಾಡಿಕೊಂಡ ಮನವಿಯನ್ನು ರವಿ ಕುಶಾಲಪ್ಪ ತಳ್ಳಿಹಾಕಿದರು.

`ಮೊದಲು ಕ್ಷಮೆ ಕೋರಿ, ಇಲ್ಲವೇ ಹೊರ ನಡೆಯಿರಿ~ ಎಂದು ಅವರು ಖಡಾಖಂಡಿತವಾಗಿ ಹೇಳಿದರು. ಸರಿತಾ ಅವರ ಯಾವ ಹೇಳಿಕೆ ಗಳನ್ನೂ ಕಡತಕ್ಕೆ ಸೇರಿಸಬೇಡಿ ಎಂದು ಅಧಿಕಾರಿಗಳಿಗೆ ಸೂಚಿಸಿದರು.

`ನಿರ್ಮಿತಿ ಕೇಂದ್ರದವರು ಸಮರ್ಪಕವಾಗಿ ಯಾವ ಕಾಮಗಾರಿಗಳನ್ನೂ ಮಾಡುತ್ತಿಲ್ಲ ಎಂದು ಒಂದೆಡೆ ಜನಪ್ರತಿನಿಧಿಗಳು ದೂರುತ್ತಿದ್ದರೆ, ಮತ್ತೊಂದೆಡೆ ಅದೇ ಜನಪ್ರತಿನಿಧಿಗಳು ಕಾಮಗಾರಿಗಳನ್ನು ನಿರ್ಮಿತಿ ಕೇಂದ್ರದವರಿಗೆ ವಹಿಸಿಕೊಡುವಂತೆ ಆದೇಶಿಸುತ್ತಿದ್ದಾರೆ. ಇದರ ಹಿಂದಿನ ಮರ್ಮವೇನು?~ ಎಂದು ಅವರು ಪ್ರಶ್ನಿಸಿದರು.

ಸುಮಾರು ರೂ 1.20 ಕೋಟಿ ಮೊತ್ತದ ಈ ಕಾಮಗಾರಿಯಲ್ಲಿ ಅಕ್ರಮ ನಡೆದಿರುವುದು ಮೇಲ್ನೋಟಕ್ಕೆ ಕಾಣುತ್ತಿದೆ. ಇದನ್ನು ಪ್ರಶ್ನಿಸಿದ್ದು ತಪ್ಪೇ? ಅವ್ಯವಹಾರವನ್ನು ಬಯಲಿಗೆ ಎಳೆದಿದ್ದ ಕ್ಕಾಗಿ ಕ್ಷಮೆ ಕೋರಬೇಕೆ? ಎಂದು ಸರಿತಾ ಮರು ಸವಾಲು ಹಾಕಿದರು. 

 ಒಂದು ಹಂತದಲ್ಲಿ ಸರಿತಾ ಹಾಗೂ ಆಡಳಿತ ಪಕ್ಷದ ಸದಸ್ಯರ ವಾಗ್ವಾದ ತೀವ್ರ ಸ್ತರಕ್ಕೆ ತಲುಪಿತು. ಜಿ.ಪಂ. ಅಧ್ಯಕ್ಷರ ಆಸನದ ಎದುರು ಜಮಾಯಿಸಿದ ಸದಸ್ಯರು ಕೋಲಾಹಲ ಸೃಷ್ಟಿಸಿದರು.

ಪರಿಸ್ಥಿತಿ ಹತೋಟಿ ಮೀರಿ ಹೋಗುತ್ತಿ ರುವುದನ್ನು ಗಮನಿಸಿದ ಜಿ.ಪಂ. ಅಧ್ಯಕ್ಷ ರವಿ ಕುಶಾಲಪ್ಪ ಅವರು 15 ನಿಮಿಷಗಳವರೆಗೆ ಸಭೆಯನ್ನು ಮುಂದೂಡಿದರು. ನಂತರ ಸಭೆ ಸೇರಿದಾಗಲೂ ಸದಸ್ಯರ ನಡುವೆ ವಾಗ್ವಾದ ಮುಂದುವರೆಯಿತು. 

 ಸರಿತಾ ಅವರನ್ನು ಅಮಾನತುಗೊಳಿಸುವಂತೆ ಆಡಳಿತ ಸದಸ್ಯರು ಪಟ್ಟು ಹಿಡಿದಾಗ ಹಾಗೂ ಕ್ಷಮೆಯಾಚಿಸಲು ಸರಿತಾ ಅವರು ನಿರಾಕರಿಸಿ ದ್ದರಿಂದ ಅಧ್ಯಕ್ಷರು ಸರಿತಾ ಅವರನ್ನು ಸಭೆಯಿಂದ ಹೊರಹೋಗುವಂತೆ ಆದೇಶ ಹೊರಡಿಸಿದರು.

ಸಭೆಯಲ್ಲಿ ಅಸಭ್ಯ ವರ್ತನೆ ತೋರಿದ್ದಕ್ಕಾಗಿ ತಕ್ಷಣವೇ ಹೊರನಡೆಯಬೇಕು ಹಾಗೂ ಎಂದು ಅವರು ಆದೇಶಿಸಿದರು. 

 ಲೋಕಾಯುಕ್ತಕ್ಕೆ ದೂರು: ಸಭೆಯಿಂದ ಹೊರಬಂದ ನಂತರ ಸುದ್ದಿಗಾರರ ಜೊತೆ ಮಾತ ನಾಡಿದ ಸರಿತಾ ಅವರು, ಚರ್ಚೆಗೆ ಅವಕಾಶ ನೀಡದ ಜಿ.ಪಂ. ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದರು. 

 ಅವರು ನ್ಯಾಯಾಲಯದ ಮೆಟ್ಟಿಲು ಏರು ವುದಾಗಿ ಹೇಳಿದರು. ಲೋಕಾಯುಕ್ತಕ್ಕೆ ದೂರು ನೀಡುವುದರ ಬಗ್ಗೆಯೂ ಯೋಚಿಸುವುದಾಗಿ ತಿಳಿಸಿದರು.

ಇದಕ್ಕೂ ಮುಂಚೆ ನಡೆದ ಚರ್ಚೆಯಲ್ಲಿ ಕೊಡಂದೇರ ಬಾಂಡ್ ಗಣಪತಿ ಅವರು ನಿರ್ಮಿತಿ ಕೇಂದ್ರದ ಕಾರ್ಯವೈಖರಿ ಬಗ್ಗೆ ಆಕ್ಷೇಪ ವ್ಯಕ್ತ ಪಡಿಸಿದ್ದರು.

ನಿರ್ಮಿತಿ ಕೇಂದ್ರದ ಜಿಲ್ಲಾ ವ್ಯವಸ್ಥಾಪಕ ಯೋಗಾನರಸಿಂಹ ಸ್ವಾಮಿ ಅವರನ್ನು ಅಮಾನತು ಮಾಡಿ ಮತ್ತೇ ಅದೇ ಸ್ಥಾನದಲ್ಲಿ ಮುಂದು ವರಿಸಿದ್ದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದರು.

ಇದಕ್ಕೆ ಪ್ರತಿಕ್ರಿಯಿಸಿದ ಜಿ.ಪಂ. ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಎನ್.ಕೃಷ್ಣಪ್ಪ ಅವರು, ಯೋಗಾ ನರಸಿಂಹ ಸ್ವಾಮಿ ಅವರಿಗೆ ಜಿಲ್ಲಾಧಿಕಾರಿಗಳು ಕಾಲಾವಕಾಶ ನೀಡಿದ್ದು, ಅದೇ ಹುದ್ದೆಯಲ್ಲಿ ಮುಂದುವರಿಯಲು ಅವಕಾಶ ಕಲ್ಪಿಸಿದ್ದಾರೆ ಎಂದರು.

ಇದಕ್ಕೆ ಅಧ್ಯಕ್ಷ ರವಿಕುಶಾಲಪ್ಪ ಆಕ್ಷೇಪ ವ್ಯಕ್ತ ಪಡಿಸಿ, ಯೋಗಾನರಸಿಂಹ ಸ್ವಾಮಿ ಅವರನ್ನು ಅಮಾನತುಗೊಳಿಸಿ ಸತ್ಯನಾರಾಯಣ ಅವರಿಗೆ ಜವಾಬ್ದಾರಿ ವಹಿಸಿಕೊಡುವಂತೆ ಸೂಚಿಸಿದರು.

ನಂತರ, ನಿರ್ಮಿತಿ ಕೇಂದ್ರದ ಕಾರ್ಯವೈಖರಿ ಬಗ್ಗೆ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಒಂದು ವಾರದೊಳಗೆ ಸಭೆ ನಡೆಸಿ ನಿರ್ಮಿತಿ ಕೇಂದ್ರದ ಕಾರ್ಯವೈಖರಿ ಬಗ್ಗೆ ಚರ್ಚಿಸುವುದಾಗಿ ಅವರು ಹೇಳಿದರು.

ನಿರ್ಮಿತಿ ಕೇಂದ್ರದ ವಿರುದ್ಧ ಈ ರೀತಿ ಸಾಕಷ್ಟು ಆರೋಪಗಳು ಕೇಳಿಬರುತ್ತಿವೆ. ಇದೇ ರೀತಿ ಮುಂದುವರಿದರೆ ಈಗಾಗಲೇ ನೀಡಲಾಗಿರುವ ಕಾಮಗಾರಿಗಳನ್ನು ವಾಪಸ್ ಪಡೆದು ಇಲಾ ಖೆಯ ಎಂಜಿನಿಯರಿಂಗ್ ವಿಭಾಗದಿಂದ ಮಾಡಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT