ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

`ಸ್ಪೋಕನ್' ಕನ್ನಡಕ್ಕೊಂದು ಕಾಲ!

Last Updated 13 ಡಿಸೆಂಬರ್ 2012, 4:57 IST
ಅಕ್ಷರ ಗಾತ್ರ

`ನಾವು ನಿಮಗೆ ಕನ್ನಡ ಕಲಿಸಿಕೊಡ್ತೀವಿ ಬನ್ನಿ' ಅಂತ ಆಸ್ಥೆಯಿಂದ ಕರೆಯುತ್ತಿದ್ದಾರೆ ನಾಲ್ಕು ಮಂದಿ ಐಟಿ ಉದ್ಯೋಗಿಗಳು. ಕನ್ನಡೇತರರಿಗೆ ಕನ್ನಡ ಕಲಿಸುವುದು ಹಾಗೂ ಮಾತೃಭಾಷೆಯ ಬಗ್ಗೆ ಮುಂದಿನ ಪೀಳಿಗೆಯವರಲ್ಲಿ ಒಲವು ಬೆಳೆಸುವ ಆಶಯ ಇರಿಸಿಕೊಂಡು ತಲೆಯೆತ್ತಿದ್ದೇ `ಕನ್ನಡ ಕಲಿಕೆಯ ಶಾಲೆ'.

ದೇಶದ ವಿವಿಧೆಡೆಯಿಂದ ಹಾಗೂ ವಿದೇಶದಿಂದ ವ್ಯಾಪಾರ, ವ್ಯವಹಾರಕ್ಕೆಂದು ಬೆಂಗಳೂರಿಗೆ ಸಾಕಷ್ಟು ಜನ ಬರುತ್ತಾರೆ. ಅವರಲ್ಲಿ ಕೆಲವರು ಇಲ್ಲಿಯೇ ನೆಲೆಸಲು ಒಲವು ತೋರುತ್ತಾರೆ. ಇಂಥವರನ್ನೇ ಗಮನದಲ್ಲಿರಿಸಿಕೊಂಡು ಅವರಿಗೆ ಕನ್ನಡ ಕಲಿಸಲು ಮುಂದಾಗಿರುವುದು ನಗರದ ಐಟಿ ಕಂಪೆನಿಯೊಂದರಲ್ಲಿ ಉದ್ಯೋಗಿಗಳಾಗಿರುವ ಯಾದಗಿರಿಯ ರಾಘವೇಂದ್ರ, ಬಳ್ಳಾರಿಯ ಅನುದೀಪ್, ಶಿವಮೊಗ್ಗದ ಮಧುಚಂದ್ರ ಹಾಗೂ ಸವದತ್ತಿಯ ಸಂಗಮೇಶ್.

ಕಳೆದ ಎರಡು ವರ್ಷಗಳಿಂದ ಕನ್ನಡ ಕಲಿಸುತ್ತಿರುವ ಇವರ ಕಸುಬು ತೀವ್ರಗೊಂಡಿದ್ದು ಆರು ತಿಂಗಳ ಹಿಂದೆ. ಇತರೆ ರಾಜ್ಯಗಳಿಂದ ಬರುವ ಉದ್ಯಮಿಗಳು ಇಲ್ಲೇ ನೆಲೆಸಲು ಬಯಸಿದಾಗ ಅವರಿಗೆ ಸ್ಥಳೀಯರೊಂದಿಗೆ ಒಡನಾಟ ಅನಿವಾರ್ಯವಾಗುತ್ತದೆ. ಕನ್ನಡ ಗೊತ್ತಿಲ್ಲದಿದ್ದರೆ ವ್ಯವಹರಿಸುವುದು ಕಷ್ಟ. ಎನ್‌ಜಿಒಗಳಲ್ಲಿ ಕೆಲಸ ಮಾಡುವವರಾದರೆ ಹಳ್ಳಿಗಳಿಗೆ ಭೇಟಿ ನೀಡುವ ಸಂದರ್ಭ ಹೆಚ್ಚಿರುತ್ತದೆ. ಅಲ್ಲಿ ಹಳ್ಳಿ ಜನರೊಂದಿಗೆ ಸಂವಹನ ನಡೆಸಬೇಕಾದರೆ ಕನ್ನಡ ಬೇಕೇಬೇಕು. ಈ ಎಲ್ಲ ಅಂಶಗಳನ್ನು ಗಮನದಲ್ಲಿ ಇರಿಸಿಕೊಂಡು ಕನ್ನಡ ಕಲಿಸುವ ಕಾರ್ಯಕ್ಕೆ ಚಾಲನೆ ನೀಡಿರುವ ಇವರು ಈವರೆಗೆ ಸಾವಿರಾರು ಜನರಿಗೆ ಇಲ್ಲಿನ ಭಾಷೆ ಕಲಿಸಿದ್ದಾರೆ.

ಇವರು ಕನ್ನಡವನ್ನು ವಾರಾಂತ್ಯಗಳಲ್ಲಿ ಮಾತ್ರ ಕಲಿಸುತ್ತಾರೆ. `ಸ್ಪೋಕನ್ ಕನ್ನಡ ಹಾಗೂ ಅಡ್ವಾನ್ಸ್ಡ್ ಕ್ಲಾಸ್ ಎಂದು ಎರಡು ಭಾಗವಾಗಿ ತರಗತಿಗಳನ್ನು ವಿಂಗಡಿಸಿದ್ದೇವೆ. ಸ್ಪೋಕನ್ ಕನ್ನಡದಲ್ಲಿ ಕನ್ನಡ ಬಾರದವರಿಗೆ ನಿತ್ಯ ಜೀವನಕ್ಕೆ ಬೇಕಾದ ಕನ್ನಡ ಮಾತನ್ನು ಕಲಿಸಿಕೊಡುತ್ತೇವೆ. ತರಕಾರಿಯವರೊಂದಿಗೆ, ಆಟೊ ಚಾಲಕರೊಂದಿಗೆ, ಬಿಎಂಟಿಸಿ ಕಂಡಕ್ಟರ್‌ಗಳ ಜತೆ, ಸರ್ಕಾರಿ ಕಚೇರಿಯಲ್ಲಿ ಅಧಿಕಾರಿಗಳ ಜತೆ ವ್ಯವಹರಿಸಲು ಬೇಕಾದ ಕನ್ನಡವನ್ನು ಕಲಿಸಿಕೊಡುತ್ತೇವೆ. ಇದಕ್ಕೆ ಪೂರಕವಾಗಿ ಅಸೈನ್‌ಮೆಂಟ್‌ಗಳನ್ನು ನೀಡುತ್ತೇವೆ. ಕಲಿಕಾರ್ಥಿಗಳು ನಿತ್ಯ ಜೀವನದಲ್ಲಿ ತಮ್ಮನ್ನು ಪ್ರಾಯೋಗಿಕ ಕಲಿಕೆಗೆ ಒಡ್ಡಿಕೊಳ್ಳುತ್ತಾರೆ. ಇದರಿಂದ ಕಲಿಕೆ ಸುಲಭವಾಗುತ್ತದೆ. ಈ ಶಾಲೆ ಸೇರಲು ವಯಸ್ಸಿನ ಮಿತಿ ಇಲ್ಲ' ಎನ್ನುತ್ತಾರೆ ರಾಘವೇಂದ್ರ.

ಹದಿನಾರು ಗಂಟೆಗಳ ಸ್ಪೋಕನ್ ಕನ್ನಡ ತರಗತಿಯು ಕನ್ನಡೇತರರಿಗೆ ಸ್ಥಳೀಯರೊಂದಿಗೆ ಬೆರೆಯುವ ಅವಕಾಶ ಕಲ್ಪಿಸಿಕೊಟ್ಟರೆ, ಅಡ್ವಾನ್ಸ್ಡ್ ಕ್ಲಾಸ್ ಇಪ್ಪತ್ತು ಗಂಟೆಗಳ ಅವಧಿಯದ್ದು. ಇಲ್ಲಿ ಕಲಿಕಾರ್ಥಿಗಳಿಗೆ ಕನ್ನಡವನ್ನು ಓದುವುದು ಹಾಗೂ ಬರೆಯುವುದನ್ನು ಕಲಿಸಿಕೊಡಲಾಗುತ್ತದಂತೆ. `ಅಡ್ವಾನ್ಸ್ಡ್ ಕ್ಲಾಸ್‌ನಲ್ಲಿ ಕನ್ನಡದಲ್ಲೇ ಮಾತನಾಡಲು ಅವಕಾಶ ಕಲ್ಪಿಸಿಕೊಡಲಾಗುತ್ತದೆ. ಕೆಲವು ವಿಷಯಗಳನ್ನು ಕೊಟ್ಟು, ಅವುಗಳ ಕುರಿತು ಕನ್ನಡದಲ್ಲಿ ಬರೆದು ತರುವಂತೆ ಅವರಿಗೆ ಸೂಚಿಸುತ್ತೇವೆ. ಕಲಿಕಾರ್ಥಿಗಳು ಪ್ರತಿ ಅಕ್ಷರವನ್ನು ಬಿಡಿಬಿಡಿಯಾಗಿ ಗಟ್ಟಿಯಾಗಿ ಉಚ್ಚರಿಸುತ್ತಾ ಓದುವಾಗ ಅವರು ಖುಷಿಪಟ್ಟುಕೊಳ್ಳುತ್ತಾರೆ. ಆಗ ನಮಗೂ ಕಲಿಸಿದ ಸಾರ್ಥಕ ಭಾವ ಉಂಟಾಗುತ್ತದೆ' ಎಂಬುದು ರಾಘವೇಂದ್ರ ಅವರ ಮಾತು.

ಸ್ಪೋಕನ್ ಕನ್ನಡ ಹಾಗೂ ಅಡ್ವಾನ್ಸ್ಡ್ ಕ್ಲಾಸ್‌ಗೆ ಅವಶ್ಯಕವಾಗಿರುವ ಪಠ್ಯದ ಸ್ವರೂಪವನ್ನು ಈ ಹುಡುಗರೇ ಕಾಳಜಿವಹಿಸಿ ಸಿದ್ಧಪಡಿಸಿದ್ದಾರೆ. `ಮೊದಲೆಲ್ಲಾ ಅಪಾರ್ಟ್‌ಮೆಂಟ್‌ಗಳಿಗೆ ಹೋಗಿ ಉಚಿತವಾಗಿ ಕನ್ನಡ ಕಲಿಸುತ್ತಿದ್ದೆವು. ಆದರೆ, ಅಲ್ಲಿಗೆ ಹೋದಾಗ ಕೆಲವರು ಸಬೂಬು ನೀಡುತ್ತಾ ಮುಂದಿನ ವಾರ ಬನ್ನಿ ಎನ್ನುತ್ತ್ದ್ದಿದರು. ಉಚಿತವಾಗಿ ಕಲಿಸಲು ಹೋದರೆ ಕಲಿಯುವವರಿಗೆ ಆಸಕ್ತಿ ಹುಟ್ಟುವುದಿಲ್ಲ ಅಂತ ಅನ್ನಿಸಿದ್ದು ಆಗಲೇ. ಅಂದಿನಿಂದ ಸ್ಪೋಕನ್ ಕನ್ನಡಕ್ಕೆ ಒಂದು ಸಾವಿರ ರೂಪಾಯಿ, ಅಡ್ವಾನ್ಸ್ಡ್ ಕ್ಲಾಸ್‌ಗೆ ಎರಡು ಸಾವಿರ ರೂ. ಶುಲ್ಕ ನಿಗದಿ ಮಾಡಿದೆವು. ಈಗ ಬರುವವರು ಆಸಕ್ತಿ ಇಟ್ಟು ಕಲಿಯುತ್ತಾರೆ' ಎನ್ನುತ್ತಾರೆ ಅವರು. 

ಅಂದಹಾಗೆ, ರಾಘವೇಂದ್ರ 2013ನೇ ವರ್ಷದ ಟೇಬಲ್ ಕ್ಯಾಲೆಂಡರ್ ಒಂದನ್ನು ಸಿದ್ಧಪಡಿಸಿದ್ದಾರೆ. `ಹೊಸವರ್ಷಕ್ಕೆ ಕನ್ನಡಿಗರಿಗೆ ನಾವು ನೀಡುತ್ತಿರುವ ವಿಶೇಷ ಉಡುಗೊರೆ ಇದು' ಎಂದು ಅಭಿಮಾನದಿಂದ ಹೇಳುತ್ತಾರೆ. `ಕ್ಯಾಲೆಂಡರ್‌ನ ಅಂಕಿಗಳೆಲ್ಲಾ ಕನ್ನಡದಲ್ಲೇ ಇವೆ. ನಾಡಿನ ಸಾಹಿತಿಗಳು, ಕಲಾವಿದರು, ಕವಿಗಳು ಈ ಕ್ಯಾಲೆಂಡರ್‌ನಲ್ಲಿದ್ದಾರೆ (ಅವರವರು ಹುಟ್ಟಿದ ದಿನಗಳ ದಿನಾಂಕಗಳಿರುವ ಸ್ಥಳದಲ್ಲಿ). ಕನ್ನಡ ಭಾಷೆಯನ್ನು ಉತ್ತುಂಗಕ್ಕೆ ಕೊಂಡೊಯ್ದ ಅಪೂರ್ವ ಪ್ರತಿಭೆಗಳು ನಿತ್ಯ ಕಣ್ಣಿಗೆ ಬೀಳುತ್ತಿದ್ದರೆ ಎಲ್ಲರಲ್ಲೂ ಭಾಷೆಯ ಬಗ್ಗೆ ಪ್ರೀತಿ ಬೆಳೆಯುತ್ತದೆ. ಕ್ಯಾಲೆಂಡರ್‌ನ ಕೆಳಭಾಗದಲ್ಲಿ ಕವಿಗಳ ಜನಪ್ರಿಯ ಮಾತುಗಳನ್ನು ಮುದ್ರಿಸಲಾಗಿದೆ. ಈ ಕ್ಯಾಲೆಂಡರ್‌ಗಳು ಟೋಟಲ್ ಕನ್ನಡ ಹಾಗೂ ಮುನ್ನುಡಿ ಮಳಿಗೆಯಲ್ಲಿ ಸಿಗುತ್ತವೆ. ವಿಶೇಷ ಕಾಳಜಿ ಇಟ್ಟು ರೂಪಿಸಿರುವ ಈ ಕ್ಯಾಲೆಂಡರ್ ಒಂದು ವಿನೂತನ ಪ್ರಯೋಗ' ಎನ್ನುತ್ತಾರೆ ರಾಘವೇಂದ್ರ.

ಬೆಂಗಳೂರಿನಲ್ಲಿ ಕನ್ನಡ ಕಣ್ಮರೆಯಾಗುತ್ತಿರುವ ದಿನದಲ್ಲಿ ಕನ್ನಡ ಕಲಿಕೆ ಶಾಲೆ ತೆರೆದು ಯಶಸ್ವಿಯಾಗಿರುವ ಈ ಹುಡುಗರು ಮುಂದೆಯೂ ಮತ್ತಷ್ಟು ಜನರಿಗೆ ಕನ್ನಡ ಕಲಿಸುವ ಉತ್ಸಾಹದಲ್ಲಿದ್ದಾರೆ. “ನಮ್ಮ ಶಾಲೆಗೆ ಬಂದು ಕನ್ನಡದಲ್ಲಿ ವ್ಯವಹರಿಸುವ ಕೌಶಲ ಕಲಿತ ಅನೇಕರು ಕೊನೆಯಲ್ಲಿ ಒಂದು ಪ್ರಶ್ನೆ ಎತ್ತುತ್ತಾರೆ: `ನಾವಿಲ್ಲಿ ಕನ್ನಡ ಕಲಿತಾಯ್ತು; ಆದರೆ ಕನ್ನಡವನ್ನು ಯಾರ ಜತೆ ಮಾತನಾಡೋಣ?' ಅದಕ್ಕೆ ನಮ್ಮ ಬಳಿ ಉತ್ತರವಿಲ್ಲ” ಎಂದು ವಿಷಾದಿಸುತ್ತಾರೆ ರಾಘವೇಂದ್ರ.
ಮಾಹಿತಿಗೆ:www.kannadalearningschool.com, 099005 77225.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT