ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಳ್ಳಿಗೆ ಬಂತು ಪೇಟೆ ತರಕಾರಿ !

Last Updated 8 ಜನವರಿ 2014, 6:43 IST
ಅಕ್ಷರ ಗಾತ್ರ

ಶ್ರೀನಿವಾಸಪುರ: ಹಳ್ಳಿಯಿಂದ ಪೇಟೆಗೆ ತರಕಾರಿ ತೆಗೆದುಕೊಂಡು ಹೋಗಿ ಮಾರಾಟ ಮಾಡುವುದು ಸಾಮಾನ್ಯ. ಆದರೆ ಇದಕ್ಕೆ ವಿರುದ್ಧವಾಗಿ ಪೇಟೆ ವ್ಯಾಪಾರಿಗಳು ಸೊಪ್ಪು ಹಾಗೂ ತರಕಾರಿ ಹೊತ್ತು ಹಳ್ಳಿಯತ್ತ ಹೆಜ್ಜೆ ಹಾಕಿದ್ದಾರೆ.

ಸುಗಟೂರು ಗ್ರಾಮದ ತರಕಾರಿ ವ್ಯಾಪಾರಿ ಮುನಿಸ್ವಾಮಿ ಗೌಡ, ಕೋಲಾರದ ಎಪಿಎಂಸಿ ಮಾರುಕಟ್ಟೆಯಲ್ಲಿ ಸೊಪ್ಪು ಹಾಗೂ ತರಕಾರಿ ಖರೀದಿಸಿ, ಟೆಂಪೋದಲ್ಲಿ ತುಂಬಿಕೊಂಡು ಜನಸಂದಣಿ ಇರುವ ಹಳ್ಳಿಗಳಿಗೆ ಕೊಂಡೊಯ್ದು ಮಾರಾಟ ಮಾಡುತ್ತಿದ್ದಾರೆ.

ಸಾಕಷ್ಟು ನೀರು ಸಿಗುತ್ತಿದ್ದ ಕಾಲದಲ್ಲಿ ರೈತರು ವಿಧವಿಧವಾದ ತರಕಾರಿ ಬೆಳೆದು ನಗರ ಹಾಗೂ ಪಟ್ಟಣದ ಮಾರುಕಟ್ಟೆಗಳಿಗೆ ಕೊಂಡೊಯ್ದು ಮಾರುತ್ತಿದ್ದರು. ಹಳ್ಳಿಗರು ತರಕಾರಿ ಖರೀದಿಸುವ ಗೋಜಿಗೆ ಹೋಗುತ್ತಿರಲಿಲ್ಲ. ಏಕೆಂದರೆ ಹಳ್ಳಿಗಳಲ್ಲೇ ಹೇರಳವಾಗಿ ತರಕಾರಿ ಬೆಳೆಯಲಾಗುತ್ತಿತ್ತು. ಆದರೆ  ಈಗ ಪರಿಸ್ಥಿತಿ ಬದಲಾಗಿದ್ದು, ಹಳ್ಳಿಗಳಲ್ಲಿ ಕೊಳವೆ ಬಾವಿಗಳು ಭರಿದಾಗುತ್ತಿವೆ. ಜತೆಗೆ ಕೃಷಿಯೂ ಕಡಿಮೆಯಾಗುತ್ತಿದೆ.

ಮನೆಗೆ ತರಕಾರಿ, ಸೊಪ್ಪು ಬೇಕೆಂದರೆ ಚೀಲ ಹಿಡಿದು ಸಮೀಪದ ಪೇಟೆಯ ಮಾರುಕಟ್ಟೆಗೆ ಹೋಗಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಪಟ್ಟಣದ ತರಕಾರಿ ವ್ಯಾಪಾರಿಗಳು ಪರಿಸ್ಥಿತಿಯ ಲಾಭ ಪಡೆದು, ಮಾರುಕಟ್ಟೆಗೆ ರೈತರು ತರುವ ಸೊಪ್ಪು ಹಾಗೂ ತರಕಾರಿ ಖರೀದಿಸಿ ನೇರವಾಗಿ ಹಳ್ಳಿಗಳಿಗೆ ಕೊಂಡೊಯ್ದು ಮಾರಾಟ ಮಾಡಿ, ಹೆಚ್ಚಿನ ಲಾಭ ಪಡೆಯುತ್ತಿದ್ದಾರೆ.

ವ್ಯಾಪಾರಿಗಳು ಹಳ್ಳಿಗೆ ಬಂದು ತರಕಾರಿ ಮಾರುವುದರಿಂದ ಪೇಟೆಗೆ ಹೋಗುವ ಖರ್ಚು ಹಾಗೂ ಶ್ರಮ ತಪ್ಪಿದೆ. ಕೆಜೆ ಮೇಲೆ ಒಂದೆರಡು ರೂಪಾಯಿ ಹೆಚ್ಚಾದರೂ ಪರವಾಗಿಲ್ಲ. ಕೃಷಿ ಕಾರ್ಮಿಕರ ಕೊರತೆ ಇರುವ ದಿನಗಳಲ್ಲಿ ಕೆಲಸವಾದರೂ ನಡೆಯು­ತ್ತದೆ ಎಂಬುದು ಕೃಷಿಕ ಮಹಿಳೆ ಮುನಿಯಮ್ಮ ಅವರ ಅಭಿಪ್ರಾಯ.

ಹಳ್ಳಿಗಳಲ್ಲಿ ಎಲ್ಲ ತರದ ತರಕಾರಿಗಳಿಗೂ ಬೇಡಿಕೆ ಇದೆ. ಶಾಲೆ ಬಿಸಿಯೂಟಕ್ಕೂ ಖರೀದಿಸುತ್ತಾರೆ. ಅವರಿಗೆ ಸಮಯ ಉಳಿತಾಯ­ವಾಗುತ್ತದೆ. ನಮಗೂ ನಾಲ್ಕು ಕಾಸು ಸಿಗುತ್ತದೆ ಎನ್ನುತ್ತಾರೆ ಚಿಲ್ಲರೆ ತರಕಾರಿ ವ್ಯಾಪಾರಿ ಮುನಿಸ್ವಾಮಿ ಗೌಡ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT