ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಾವೇರಿಯಲ್ಲಿ ಕೆಜೆಪಿ ಸಮಾವೇಶದ `ಬಿಸಿ'

Last Updated 8 ಡಿಸೆಂಬರ್ 2012, 22:00 IST
ಅಕ್ಷರ ಗಾತ್ರ

ಹಾವೇರಿ: ಮಾಜಿ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ನೇತೃತ್ವದ ಕರ್ನಾಟಕ ಜನತಾ ಪಕ್ಷದ ಸಮಾವೇಶಕ್ಕೆ ಯಾಲಕ್ಕಿ ಕಂಪಿನ ಹಾವೇರಿ ನಗರ ಸಂಪೂರ್ಣ ಸಜ್ಜಾಗಿದೆ.

ರಾಜ್ಯದಲ್ಲಿ ಅತಿ ಕಡಿಮೆ ಉಷ್ಣಾಂಶ ಶುಕ್ರವಾರ ಹಾವೇರಿ ನಗರದಲ್ಲಿ ದಾಖಲಾದ ಬೆನ್ನ ಹಿಂದೆಯೇ ರಾಜಕೀಯ ಬಿಸಿ ತಾರಕಕ್ಕೇರಿದೆ. ರಾಜಕೀಯ ಕುರಿತ ಬಿಸಿ ಬಿಸಿ ಚರ್ಚೆಯ ನಡುವೆ ಪಕ್ಷದ ಉದ್ಘಾಟನೆ ಹಾಗೂ ರಾಜ್ಯ ಘಟಕದ ನೂತನ ಅಧ್ಯಕ್ಷರಾಗಿ ಯಡಿಯೂರಪ್ಪ ಅಧಿಕಾರ ಸ್ವೀಕರಿಸುವ ಸಮಾವೇಶಕ್ಕೆ ಕಾಲೇಜು ಆವರಣ ಹಾಗೂ ಸುತ್ತಮುತ್ತಲಿನ ಪ್ರದೇಶ ಮದುವಣಗಿತ್ತಿಯಂತೆ ಸಿಂಗಾರಗೊಂಡಿದೆ.

ವೇದಿಕೆಯಲ್ಲಿ ಯಡಿಯೂರಪ್ಪನವರ ಬೆಂಬಲಿಗ ಸಚಿವ, ಶಾಸಕರಲ್ಲಿ ಯಾರ‌್ಯಾರು ಭಾಗವಹಿಸಲಿದ್ದಾರೆ?

ನಿಜವಾಗಿಯೂ ಅವರ ಶಕ್ತಿ ಪ್ರದರ್ಶನ ನಡೆಯಲಿದೆಯೇ ಅಥವಾ ಸಮಾವೇಶ ಕೇವಲ ಕೆಜೆಪಿಯ ಉದಯಕ್ಕೆ ಮಾತ್ರ ಸೀಮಿತವಾಗಲಿದೆಯೇ ಇಲ್ಲವೇ ರಾಜ್ಯ ಸರ್ಕಾರದ ಏಳು ಬೀಳನ್ನು ನಿರ್ಧರಿಸಲಿದೆಯೇ ಎಂಬ ಕುತೂಹಲ ಮಾತ್ರ ಹಾಗೆ ಉಳಿದಿದೆ.

ವೇದಿಕೆಯಲ್ಲಿ 200 ಜನ: ವೇದಿಕೆಯಲ್ಲಿ 500 ಮಂದಿ ಕುಳಿತುಕೊಳ್ಳಲು ವ್ಯವಸ್ಥೆ ಮಾಡಲು ಉದ್ದೇಶಿಸಲಾಗಿತ್ತಾದರೂ ಈಗ 200 ಜನರಿಗೆ ಮಾತ್ರ ಅವಕಾಶ ಕಲ್ಪಿಸಲಾಗಿದೆ.

ಯಡಿಯೂರಪ್ಪ ಭಾವಚಿತ್ರವಿರುವ ಬೃಹತ್ ಬ್ಯಾನರನ್ನು ವೇದಿಕೆ ಮಧ್ಯ ಭಾಗದಲ್ಲಿ  ಹಾಕಲಾಗಿದೆ. ಅದರಲ್ಲಿ ಗಾಂಧಿ, ಅಂಬೇಡ್ಕರ್ ಹಾಗೂ ಜಯಪ್ರಕಾಶ ನಾರಾಯಣ ಅವರ ಭಾವಚಿತ್ರ ಹಾಗೂ `ಹೊಸ ಹುಟ್ಟು ಪಡೆಯೋಣ... ಹೊಸ ನಾಡು ಕಟ್ಟೋಣ' ಎನ್ನುವ ಘೋಷವಾಕ್ಯವಿದೆ. ಆ ಬ್ಯಾನರ್‌ನ ಎರಡೂ ಬದಿಯಲ್ಲಿ ಜನರ ಮಧ್ಯೆ ನಿಂತಿರುವ ಯಡಿಯೂರಪ್ಪನವರ ಬೃಹತ್ ಚಿತ್ರವಿದೆ.

5-6 ಲಕ್ಷ ಜನರ ನಿರೀಕ್ಷೆ: ರಾಜ್ಯದ ರಾಜಕೀಯ ಇತಿಹಾಸದಲ್ಲಿಯೇ ಅತಿ ದೊಡ್ಡ ಪೆಂಡಾಲ್ ಹಾಗೂ ಹೆಚ್ಚಿನ ಪ್ರಚಾರ ಮಾಡಿರುವ ಸಮಾವೇಶ ಎಂದು ಹೇಳಲಾಗುತ್ತಿರುವ ಕೆಜೆಪಿ ಸಮಾವೇಶಕ್ಕೆ ಸುಮಾರು ಐದಾರು ಲಕ್ಷ ಜನರು ಆಗಮಿಸುವ ನಿರೀಕ್ಷೆ ಇಟ್ಟುಕೊಳ್ಳಲಾಗಿದೆ. ಐದಾರು ಸಾವಿರ ಬಸ್, 25 ಸಾವಿರಕ್ಕೂ ಹೆಚ್ಚು ಕಾರು, ಜೀಪ್, 10 ಸಾವಿರದಷ್ಟು ಇತರೆ ವಾಹನಗಳಲ್ಲಿ ಜನರು ಬರಲಿದ್ದಾರೆ ಎಂದು ಸಮಾವೇಶದ ಉಸ್ತುವಾರಿ ನೋಡಿಕೊಳ್ಳುತ್ತಿರುವ ವಿಧಾನ ಪರಿಷತ್ ಸದಸ್ಯ ಶಿವರಾಜ ಸಜ್ಜನರ ಹೇಳುತ್ತಾರೆ.

ಆದರೆ, ಸುಮಾರು ಒಂದೂವರೆ ಲಕ್ಷ ಜನ ಕುಳಿತುಕೊಳ್ಳಲು ಆಸನದ ವ್ಯವಸ್ಥೆ ಮಾಡಲಾಗಿದೆ. ಸಮಾವೇಶದ ವೀಕ್ಷಣೆಗೆ ಅನುಕೂಲ ಕಲ್ಪಿಸಲು 25 ಎಲ್‌ಇಡಿ ಟಿವಿ ಅಳವಡಿಸಲಾಗಿದೆ. ಊಟಕ್ಕಾಗಿ ನಾಲ್ಕು ಪ್ರತ್ಯೇಕ ಪೆಂಡಾಲ್ ಹಾಕಲಾಗಿದೆ.

ಅಂದಾಜು ನಾಲ್ಕು ಲಕ್ಷ ಜನರಿಗೆ ಬೆಳಗಿನ ಉಪಾಹಾರ ಶಿರಾ-ಉಪ್ಪಿಟ್ಟು, ಮಧ್ಯಾಹ್ನ ಊಟಕ್ಕೆ ಪುಲಾವ್ ಮಾಡಲಾಗುತ್ತದೆ. 9.5 ಲಕ್ಷ ನೀರಿನ ಸ್ಯಾಶೆಗಳನ್ನು, ಮೂರು ಲಕ್ಷ ಮಜ್ಜಿಗೆ ಸ್ಯಾಶೆಗಳನ್ನು ಸಂಗ್ರಹಿಸಲಾಗಿದೆ ಎಂದು ಸಜ್ಜನರ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT