ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೃದಯದ ಆರೋಗ್ಯಕ್ಕೆ ಯೋಗ

Last Updated 23 ಸೆಪ್ಟೆಂಬರ್ 2011, 19:30 IST
ಅಕ್ಷರ ಗಾತ್ರ

ಹೃದಯದ ಸಮಸ್ಯೆಗಳ ಹತೋಟಿಗೆ ನಮ್ಮ ಭಾರತೀಯ ಸಂಸ್ಕೃತಿ ಕಲೆಯಾದ ಯೋಗ ಪ್ರಾಣಾಯಾಮ, ಧ್ಯಾನ ಹಾಗೂ ಸರಳ ವ್ಯಾಯಾಮಗಳು ಬಹಳಷ್ಟು ಸಹಕಾರಿಯಾಗುತ್ತವೆ.

ಆದರೆ ಯೋಗವನ್ನು ಗುರುಮುಖೇನವೇ ಕಲಿತು ಅಭ್ಯಾಸ ನಡೆಸಬೇಕು. ಧ್ಯಾನದಿಂದ ಮನಸ್ಸಿನ ಚಂಚಲತೆ ನಿವಾರಣೆಯಾಗಿ ಮನಸ್ಸಿಗೆ ಆಳ ವಿಶ್ರಾಂತಿ ದೊರೆಯುತ್ತದೆ. ಮನಸ್ಸು ಪರಿಶುದ್ಧವಾಗಿ, ನಿರ್ಮಲಗೊಂಡು ಪ್ರಸನ್ನತೆಯಿಂದ ಅರಳುತ್ತದೆ.

ಯಾವ ಕೆಲಸಗಳಲ್ಲಿ ದೈಹಿಕ ವ್ಯಾಯಾಮದ ಕೊರತೆ ಇದೆಯೋ ಅಂಥವರು ದಿನಕ್ಕೆ ಕಡಿಮೆ ಎಂದರೂ ಕೇವಲ ಅರ್ಧ ತಾಸುಗಳ ಕಾಲ 15ರಿಂದ 20 ಆಸನಗಳನ್ನು ಶಿಸ್ತು ಬದ್ಧವಾಗಿ ಕ್ರಮ ಪ್ರಕಾರವಾಗಿ ಉಸಿರಿನ ಗತಿಯೊಂದಿಗೆ ಮಾಡಿದರೆ ಸಾಕು. ಯೋಗಾಭ್ಯಾಸದಿಂದ ಪ್ರತಿಯೊಂದು ಅಂಗವೂ ಪ್ರಚೋದನೆ ಪಡೆದು, ಸ್ಫೂರ್ತಿಯುತವೂ, ಹಗುರವೂ ಆಗಿ ಆರೋಗ್ಯ ಬಲಗಳು ಲಭಿಸುತ್ತವೆ.
 
ಯೋಗಾಸನವು ಮನುಷ್ಯನ ಶರೀರದ ರಚನಾ ಶಾಸ್ತ್ರದ ಸಂಪೂರ್ಣ ಜ್ಞಾನದ ವೈಜ್ಞಾನಿಕ ಆಧಾರದ ಮೇಲೆ ನಿಂತಿದೆ. ಶಿಸ್ತುಬದ್ಧವಾಗಿ ಕ್ರಮವತ್ತಾಗಿ ಉಸಿರಿನ ಗತಿಯೊಂದಿಗೆ ಯೋಗಾಸನ ಮಾಡುವುದರಿಂದ ದೇಹದಲ್ಲಿ ರಕ್ತ ಪರಿಚಲನೆ ಸುಗಮವಾಗುವುದು.

ರಕ್ತ ಶುದ್ಧಿಯಾಗುವುದು, ರಕ್ತದೊತ್ತಡದ ಏರಿಳಿತಗಳು ಹಿಡಿತಕ್ಕೆ ಬರುತ್ತವೆ. ಅಲ್ಲದೆ ರಕ್ತದ ಸಕ್ಕರೆ ಅಗತ್ಯದಷ್ಟೇ ಮಿತಿಯಲ್ಲಿರುತ್ತದೆ.  ಮಂಡಿನೋವು, ಕಾಲು ಸೆಳೆತ, ಮಾನಸಿಕ ಒತ್ತಡ, ಮುಟ್ಟಿನ ಸಮಸ್ಯೆ ಇತ್ಯಾದಿಗಳ ನಿವಾರಣೆಗೆ ಯೋಗಾಸನಗಳು  ಸಹಕಾರಿ. ಯೋಗಾಸನವನ್ನು ಅಭ್ಯಾಸ ಮಾಡುವುದು ಜೀವನ ಸುಖಕ್ಕಾಗಿ.

ಹೃದಯದ ಆರೋಗ್ಯಕ್ಕೆ ಧಕ್ಕೆಯಾಗುವ ಕಾರಣಗಳು
ಹೃದಯದ ಸ್ನಾಯುಗಳು ಪಂಪಿನಂತೆ ಕೆಲಸಮಾಡಿ, ಸದಾಕಾಲವು ಶರೀರದ ಎಲ್ಲಾ ಭಾಗಗಳಿಗೂ ರಕ್ತವನ್ನು ಸರಬರಾಜು ಮಾಡುತ್ತದೆ. ಇಂತಹ ಹೃದಯ ರಕ್ತನಾಳಗಳು ಮುಚ್ಚಿ ಹೋಗಿ ರಕ್ತ ಸಂಚಾರ ನಿಂತು ಹೋದಲ್ಲಿ ಹೃದಯಾಘಾತವಾಗುತ್ತದೆ.
ಹೃದಯಕ್ಕೆ ಸಮರ್ಪಕವಾಗಿ ರಕ್ತಸಂಚಾರವಾಗದೆ ಇರುವ ಕಾರಣಗಳು:
ಧೂಮಪಾನ, ಅತಿಯಾದ ಮದ್ಯಪಾನ
ಹೆಚ್ಚಿನ ಕೊಲೆಸ್ಟ್ರಲ್
ಹೆಚ್ಚಿನ ರಕ್ತದೊತ್ತಡ
ಸ್ಥೂಲಕಾಯ
ಅತಿಯಾದ ಮಧುಮೇಹ
ಪದೇ ಪದೇ ಒತ್ತಡಕ್ಕೆ ಒಳಗಾಗುವುದು.

  ಹೃದಯದ ಆರೋಗ್ಯ ರಕ್ಷಣೆಗಾಗಿ ಇರುವ ಯೋಗಾಸನಗಳ ಸಂಕ್ಷಿಪ್ತ ಪಟ್ಟಿ ಈ ಕೆಳಗಿನಂತಿದೆ. (ಆದರೆ ಯೋಗಾಸನಗಳನ್ನು ಯಾವತ್ತೂ ವಿನ್ಯಾಸಗಳೊಂದಿಗೆ ಅಭ್ಯಾಸ ಮಾಡಬೇಕು. ವಿನ್ಯಾಸಗಳನ್ನು ಬಿಟ್ಟು ಅಭ್ಯಾಸ ಮಾಡಬಾರದು.)
ಆರಂಭದಲ್ಲಿ ಇಷ್ಟ ದೇವರ ಪ್ರಾರ್ಥನೆ
ಕುತ್ತಿಗೆ ಭುಜಗಳ ಸರಳ ವ್ಯಾಯಾಮ (ಗುರುಗಳ ಸಲಹೆ ಮೇರೆಗೆ)
ದೇಹದ ಜಡತ್ವ ಹೋಗಿ ಲಘುತ್ವ ಬರಲು ಕೆಲವು ಸರಳ ವ್ಯಾಯಾಮಗಳು
ತುಸು ವಿಶ್ರಾಂತಿ.

ಅಗತ್ಯ ಯೋಗಾಸನಗಳು
ತಾಡಾಸನ, ಅರ್ಧ ಚಕ್ರಾಸನ,  ಅರ್ಧ ಕಟಿ ಚಕ್ರಾಸನ, ಉತ್ಕಟಾಸನ, ತ್ರಿಕೋಣಾಸನ, ಬದ್ಧ ಕೋಣಾಸನ, ಪದ್ಮಾಸನ, , ವಜ್ರಾಸನ, ಶಶಾಂಕಾಸನ,  ಅರ್ಧಉಷ್ಟ್ರಾಸನ, ಮಾರ್ಜಾಲಾಸನ, ವಕ್ರಾಸನ, ಊರ್ಧ್ವ ಪ್ರಸಾರಿತ ಪಾದಾಸನ, ಪವನ ಮುಕ್ತಾಸನ, ಮಕರಾಸನ, ಇತ್ಯಾದಿ. ಶವಾಸನ, ಸರಳ ಪ್ರಾಣಾಯಾಮ ನಾಡಿಶುದ್ಧಿ ಪ್ರಾಣಾಯಾಮ, ಸರಳ ಧ್ಯಾನ. (ಹೃದಯದ ಸಮಸ್ಯೆ ಇದ್ದವರು ದಿನಕ್ಕೆ 3 ಬಾರಿ ಶವಾಸನ ಅಭ್ಯಾಸ ಮಾಡಬೇಕು.)

 ಪತಂಜಲಿ ಯೋಗ ಸೂತ್ರದಲ್ಲಿ `ಯೋಗಃ ಚಿತ್ತವೃತ್ತಿ ನಿರೋಧಃ~  ಎಂದು ತಿಳಿಸುತ್ತದೆ. ಚಿತ್ತದ ವೃತ್ತಿಗಳನ್ನು ಬಯಕೆಗಳನ್ನು ಸರ್ವಥಾ ತಡೆದು ನಿಲ್ಲಿಸಿ, ಏಕಾಗ್ರತೆ ಸಾಧಿಸುವುದು ಯೋಗ. ಪತಂಜಲಿಯವರು ಯೋಗದಲ್ಲಿ ಎಂಟು ಮೆಟ್ಟಿಲುಗಳನ್ನು ತಿಳಿಸಿದ್ದಾರೆ. ಅವು ಯಮ, ನಿಯಮ, ಆಸನ, ಪ್ರಾಣಾಯಾಮ, ಪ್ರತ್ಯಾಹಾರ, ಧಾರಣ, ಧ್ಯಾನ ಮತ್ತು ಸಮಾಧಿ. ಸೂಕ್ತ ತರಬೇತಿಯಿಂದ ಮಾಡಿದಲ್ಲಿ ಯೋಗದ ಮೂಲಕ ನಿಮ್ಮ ಹೃದಯದ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು.

(ಲೇಖಕರ ಮೊಬೈಲ್: 9448393987)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT