ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೇಳಿಕೆ ತಿರುಚಿದ ಮಾಧ್ಯಮ: ಚಿದು ಕಳವಳ

Last Updated 11 ಜುಲೈ 2012, 19:30 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ):  `ಮಾಧ್ಯಮಗಳು ಉದ್ದೇಶಪೂರ್ವಕವಾಗಿ ನನ್ನ ಹೇಳಿಕೆಯನ್ನು ವಿರೂಪಗೊಳಿಸಿವೆ~ ಎಂದು ಗೃಹ ಸಚಿವ ಪಿ. ಚಿದಂಬರಂ ಕಳವಳ ವ್ಯಕ್ತಪಡಿಸಿದ್ದಾರೆ.

ಬೆಂಗಳೂರಿನಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ನಡೆದ ಸಂವಾದ ಕಾರ್ಯಕ್ರಮದಲ್ಲಿ ಸಚಿವರು ನೀಡಿದ ಉತ್ತರವನ್ನು ಉದ್ದೇಶಪೂರ್ವಕವಾಗಿಯೇ ತಿರುಚಲಾಗಿದ್ದು ಇದು ಅವರಿಗೆ ಆಘಾತ ನೀಡಿದೆ~ ಎಂದು ಗೃಹ ಸಚಿವಾಲಯದ ಹೇಳಿಕೆ ತಿಳಿಸಿದೆ.

`ಗೃಹ ಸಚಿವರು ವಾಸ್ತವ ಅಂಶಗಳನ್ನೇ ಹೇಳಿದ್ದು ಯಾರನ್ನೂ ಅಪಹಾಸ್ಯ ಮಾಡುವ ಉದ್ದೇಶ ಅವರಿಗಿರಲಿಲ್ಲ. ನೀವು ಅವರ ಸಂವಾದ ಕಾರ್ಯಕ್ರಮವನ್ನು ನೋಡಿದರೆ ಇದು ಸ್ಪಷ್ಟವಾಗುತ್ತದೆ~ ಎಂದು ಹೇಳಿಕೆ ತಿಳಿಸಿದೆ.
ರೂ 20  ಕೊಟ್ಟು ಕೋನ್ ಐಸ್‌ಕ್ರೀಂ ಖರೀದಿಸುವ ಜನರು ಅಕ್ಕಿ ಅಥವಾ ಗೋಧಿ ಬೆಲೆ ಒಂದು ರೂಪಾಯಿಯಷ್ಟು ಜಾಸ್ತಿಯಾದರೆ ಪ್ರತಿಭಟನೆ ನಡೆಸುವುದೇಕೆ? ಎಂದು ಚಿದಂಬರಂ ಸಂವಾದದಲ್ಲಿ ಹೇಳಿದ್ದರು ಎಂಬ ಪತ್ರಿಕಾ ವರದಿಯ ಹಿನ್ನೆಲೆಯಲ್ಲಿ ಸಚಿವಾಲಯ ಈ ಹೇಳಿಕೆ ನೀಡಿದೆ.

`ಆದರೆ ಚಿದಂಬರಂ ಅವರು ಹೇಳಿಕೆಯ ವೇಳೆ `ನಾವು~ ಎಂಬ ಪದವನ್ನು ಬಳಸಿದ್ದರೇ ಹೊರತು `ಅವರು~ ಏಕೆ ಪ್ರತಿಭಟನೆ ನಡೆಸುತ್ತಾರೆ ಎಂದು ಕೇಳಲಿಲ್ಲ. ಕೋನ್ ಐಸ್‌ಕ್ರೀಂಗೆ 20 ರೂ ಕೊಡಲು ಮುಂದಾಗುವ ನಾವು ಅಕ್ಕಿ ಅಥವಾ ಗೋಧಿಗೆ ಕಿಲೋ ಗ್ರಾಂ ಒಂದಕ್ಕೆ ಒಂದು ರೂ ಕೂಡ ಹೆಚ್ಚು ನೀಡುವುದಿಲ್ಲ~ ಎಂದು ಅವರು ಹೇಳಿರುವುದಾಗಿ ಸ್ಪಷ್ಟಪಡಿಸಿದೆ.

ಜೆಡಿಯು ಟೀಕೆ: ಮಾರುಕಟ್ಟೆ ಶಕ್ತಿಗಳನ್ನು ಬೆಂಬಲಿಸುವವರ ಬಾಯಿಂದ `ಆಕಸ್ಮಿಕ~ವಾಗಿ ಸತ್ಯ ಹೊರಬಂತು~ ಎಂದು ಗೃಹ ಸಚಿವ ಚಿದಂಬರಂ ಅವರ ವಿವಾದಾತ್ಮಕ ಹೇಳಿಕೆಗೆ ಜೆಡಿಯು ಕಟು ಟೀಕೆ ವ್ಯಕ್ತಪಡಿಸಿದೆ.
`ಚಿದಂಬರಂ ಹೇಳಿರುವುದರಲ್ಲಿ ತಪ್ಪೇನೂ ಇಲ್ಲ. ಅವರು ಮಾರುಕಟ್ಟೆ ಶಕ್ತಿಗಳನ್ನು ಬೆಂಬಲಿಸುತ್ತಿರುವುದರಿಂದ ಐಸ್‌ಕ್ರೀಂನ ಉದಾಹರಣೆಯನ್ನು ನೀಡಿದ್ದಾರೆ.

ನಮ್ಮ ದೇಶದಲ್ಲಿ ಎಷ್ಟು ಮಂದಿ ಬಡವರು ಐಸ್‌ಕ್ರೀಂ ತಿನ್ನುತ್ತಾರೆ? ಮಾರುಕಟ್ಟೆ ಶಕ್ತಿಗಳನ್ನು ಸಮರ್ಥಿಸಿಕೊಳ್ಳುವ ವೇಳೆ ಸಣ್ಣ ಸತ್ಯವೊಂದು ಆಕಸ್ಮಿಕವಾಗಿ ಅವರ ಬಾಯಿಂದ ಹೊರಬಿತ್ತು~ ಎಂದು ಜೆಡಿಯು ಅಧ್ಯಕ್ಷ ಶರದ್ ಯಾದವ್ ಪ್ರತಿಕ್ರಿಯಿಸಿದರು.

ಎನ್‌ಸಿಪಿ ತರಾಟೆ: ಅಕ್ಕಿ ಮತ್ತು ಗೋಧಿ ಬೆಲೆ ಏರಿಕೆ ವಿರುದ್ಧ ದೇಶದ ಮಧ್ಯಮ ವರ್ಗದ ಜನ ನಡೆಸುತ್ತಿರುವ ಪ್ರತಿಭಟನೆಗೆ ಟೀಕೆ ವ್ಯಕ್ತಪಡಿಸಿದ ಗೃಹ ಸಚಿವ ಪಿ. ಚಿದಂಬರಂ ಅವರ ಹೇಳಿಕೆಗೆ ಎನ್‌ಸಿಪಿ ತೀವ್ರ ವಿರೋಧ ವ್ಯಕ್ತಪಡಿಸಿದೆ.

ವಿದ್ಯಾವಂತ ಹಾಗೂ ಉತ್ತಮ ನಡವಳಿಕೆಯ ವ್ಯಕ್ತಿಯೊಬ್ಬರು ಇಂತಹ ಹೇಳಿಕೆಯನ್ನು ನೀಡಿರುವುದು ಅನಿರೀಕ್ಷಿತ ಮಾತ್ರವಲ್ಲ, ವಿರೋಧಾಭಾಸದಿಂದ ಕೂಡಿದೆ. ದೇಶದ ಸಾಮಾನ್ಯ ಪ್ರಜೆ ಕೂಡ ಚಿದಂಬರಂ ಅವರಷ್ಟೇ ಪ್ರಜ್ಞಾವಂತ ಎಂದು ನನಗನಿಸುತ್ತದೆ~ ಎಂದು ಎನ್‌ಸಿಪಿ ನಾಯಕ ಹಾಗೂ ವಕ್ತಾರ ಡಿ. ಪಿ. ತ್ರಿಪಾಠಿ ಎಂದು ಕುಟುಕಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT