ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೈನುಗಾರಿಕೆ ಸ್ವಾವಲಂಬಿ ಬದುಕಿಗೆ ಸಹಕಾರಿ

Last Updated 18 ನವೆಂಬರ್ 2011, 5:35 IST
ಅಕ್ಷರ ಗಾತ್ರ

ಹರಪನಹಳ್ಳಿ: ಕೃಷಿ ಹಾಗೂ ಹೈನುಗಾರಿಕೆ ಎರಡು ಒಂದಕ್ಕೊಂದು ಅವಿನಾಭಾವ ಸಂಬಂಧದ ಬೆಸುಗೆ ಹೊಂದಿರುವುದರಿಂದ ಹಾಗೂ ಹೈನುಗಾರಿಕೆಯಲ್ಲಿ ಸ್ವಾವಲಂಬನೆ ಬದುಕಿನ ಜೀವಾಮೃತ ಅಡಗಿರುವುದರಿಂದ ಕೃಷಿಯ ಜತೆ ಹೈನುಗಾರಿಕೆಯನ್ನು ಅಳವಡಿಸಿಕೊಳ್ಳಬೇಕಾಗಿದೆ ಎಂದು ಡಿಡಿಸಿಸಿ ಬ್ಯಾಂಕ್ ಅಧ್ಯಕ್ಷ ಕೆ.ಜಿ. ರೇವಣಸಿದ್ದೇಶ್ವರ್ ಅಭಿಪ್ರಾಯಪಟ್ಟರು.

ಗುರುವಾರ ಇಲ್ಲಿನ ಜಗದ್ಗುರು ರೇಣುಕಾಚಾರ್ಯ ಕಲ್ಯಾಣ ಮಂಟಪದಲ್ಲಿ ಸಹಕಾರಿ ಇಲಾಖೆ, ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ, ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ ಹಾಗೂ ತಾಲ್ಲೂಕಿನ ವಿವಿಧ ಸಹಕಾರಿ ಸಂಘಗಳ ಆಶ್ರಯದಲ್ಲಿ 58ನೇ ಅಖಿಲ ಭಾರತ ಸಹಕಾರ ಸಪ್ತಾಹದ ಅಂಗವಾಗಿ ಹಮ್ಮಿಕೊಂಡಿದ್ದ `ಸಹಕಾರಿ ಸುಲಭ ಸಾಲ ಮತ್ತು ಇತರೆ ಆರ್ಥಿಕ ಸೇವಾ ದಿನಾಚರಣೆ~ಯ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.

ಹೈನುಗಾರಿಕೆ ಪುನಶ್ಚೇತನಕ್ಕಾಗಿ ಸಾಕಷ್ಟು ಯೋಜನೆಗಳನ್ನು ಸರ್ಕಾರ ಜಾರಿಗೆ ತಂದಿದೆ. ಜತೆಯಲ್ಲಿಯೇ ಡಿಸಿಸಿ ಬ್ಯಾಂಕ್‌ಗಳು ಹೈನುಗಾರಿಕೆಗೆ ಪ್ರೋತ್ಸಾಹ ನೀಡುತ್ತಿದೆ. ಆದರೂ, ನಿರೀಕ್ಷಿತ ಪ್ರಮಾಣದಲ್ಲಿ ಕ್ಷೀರ ಉತ್ಪಾದನೆಯಾಗುತ್ತಿಲ್ಲ. ಕಾರಣ ಹುಡುಕುತ್ತ ಹೋದರೆ, ಪದೇಪದೇ ಬರಗಾಲದ ದವಡೆಗೆ ತುತ್ತಾಗುತ್ತಿರುವ ಪರಿಣಾಮ ಹೈನುಗಾರಿಕೆ ಕುಂಠಿತಗೊಂಡಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ.

ಆದರೆ, ಕೋಲಾರ ಜಿಲ್ಲೆ ಪಕ್ಕಾ ಬೆಂಗಾಡು ಪ್ರದೇಶ. ಬರಗಾಲಕ್ಕೂ -ಕೋಲಾರಕ್ಕೂ ಬಿಡಿಸಲಾರದಷ್ಟು ನಂಟು. ಆದರೂ, ಅಲ್ಲಿ ಕ್ಷೀರ ಕ್ರಾಂತಿಯೇ ನಡೆದಿದೆ ಎಂದು ಪ್ರಶಂಸಿಸಿ, ಡಿಸಿಸಿ ಬ್ಯಾಂಕ್ ಹೈನುಗಾರಿಕೆಗೆ ಸಾಕಷ್ಟು ಉತ್ತೇಜನ ನೀಡುತ್ತಿದೆ. ಸಮರ್ಪಕವಾಗಿ ಬಳಕೆ ಮಾಡಿಕೊಳ್ಳಲು ರೈತರ ಮನವೊಲಿಸುವಂತೆ ಸಲಹೆ ನೀಡಿದರು.

ಜಿ.ಪಂ. ಸದಸ್ಯ ಆರ್. ಈಶ್ವರಪ್ಪ ಮಾತನಾಡಿ, ಬರಗಾಲಪೀಡಿತ ಪ್ರದೇಶ ಎಂದು ಘೋಷಣೆಯಾಗಿರುವ ಹಿನ್ನೆಲೆಯಲ್ಲಿ ಸಹಕಾರಿ ಸಂಘಗಳ ಮೂಲಕ ವಿವಿಧ ಬಗೆಯ ಸಾಲ ಪಡೆದುಕೊಂಡಿರುವ ಸಣ್ಣ ಹಾಗೂ ಅತಿಸಣ್ಣ ರೈತರ ಸಾಲ ಮನ್ನಾ ಮಾಡಲು ಡಿಸಿಸಿ ಬ್ಯಾಂಕ್ ಆಡಳಿತ ಮಂಡಳಿ ಮಾತೃಬ್ಯಾಂಕಿಗೆ ಒತ್ತಡ ಹೇರುವಂತೆ ಸಲಹೆ ನೀಡಿದರು.

ಡಿಡಿಸಿಸಿ ಬ್ಯಾಂಕ್ ನಿರ್ದೇಶಕ ಬಿ.ಎಚ್. ಬಸವರಾಜಪ್ಪ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಸಹಕಾರ ಯೂನಿಯನ್ ಬ್ಯಾಂಕ್ ಅಧ್ಯಕ್ಷ ಜಿ. ಗೋಪನಾಳು ಕರಿಬಸಪ್ಪ, ನಿರ್ದೇಶಕ ಎಚ್. ಕರಿಬಸಪ್ಪ, ಟಿಎಪಿಸಿಎಂಎಸ್ ಅಧ್ಯಕ್ಷ ಬೇಲೂರು ಸಿದ್ದೇಶ್, ಪಿಕಾರ್ಡ್ ಬ್ಯಾಂಕ್ ಅಧ್ಯಕ್ಷ ವೈ. ಬಸವರಾಜಪ್ಪ, ಆದರ್ಶ ಸೌಹಾರ್ದ ಪಟ್ಟಣ ಸಹಕಾರ ಬ್ಯಾಂಕ್ ಅಧ್ಯಕ್ಷ ಎ.ಜಿ. ವಿಶ್ವನಾಥ, ಸಹಕಾರ ಇಲಾಖೆಯ ಅಭಿವೃದ್ಧಿ ಅಧಿಕಾರಿ ಗೋವಿಂದರಾವ್, ಇಫ್ಕೋ ಸಂಸ್ಥೆಯ ಕ್ಷೇತ್ರ ಸಹಾಯಕ ಎಸ್.ಎನ್. ಹಾದಿಮನಿ, ಸಹಕಾರ ಇಲಾಖೆಯ ವಿವಿಧ ಅಧಿಕಾರಿಗಳು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT