ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಸಾಹಿತ್ಯಕ್ಕೆ ತಿರುವು ತಂದುಕೊಟ್ಟ ಸಾಹಿತಿ ಚಂದ್ರಶೇಖರ ಕಂಬಾರ’

Last Updated 3 ಜನವರಿ 2014, 20:10 IST
ಅಕ್ಷರ ಗಾತ್ರ

ಬೆಂಗಳೂರು: ‘ಈ ನೆಲದ ಬಹುದೊಡ್ಡ ಬರಹಗಾರರನ್ನು ಕೇವಲ ಕನ್ನಡದ ಸನ್ನಿ­ವೇಶದಲ್ಲಿಟ್ಟು ಮೌಲ್ಯಮಾಪನ ಮಾಡು­ತ್ತಿ­ರುವುದು ವಿಮರ್ಶಾ ವಲಯದ ದೋಷ’ ಎಂದು ವಿಮರ್ಶಕ ಡಾ.ರಾಜೇಂದ್ರ ಚೆನ್ನಿ ಅಭಿಪ್ರಾಯಪಟ್ಟರು.

ಅಂಕಿತ ಪುಸ್ತಕ ಪ್ರಕಾಶನವು ನಗರ­ದಲ್ಲಿ ಈಚೆಗೆ ಆಯೋಜಿಸಿದ್ದ ಕಾರ್ಯ­ಕ್ರಮದಲ್ಲಿ ಡಾ.ಸಿ.ಎನ್. ರಾಮ­ಚಂದ್ರನ್‌ ಅವರ ‘ ಇನ್ ಸರ್ಚ್‌ ಆಫ್ ಶಿವ–ಪುರ ಡಾ.ಚಂದ್ರಶೇಖರ ಕಂಬಾರ’ ಮತ್ತು ಚಂದ್ರಶೇಖರ ಕಂಬಾರ ಅವರ ‘ನಾದಗಳು ನುಡಿಯಾಗಲೇ’ ಪುಸ್ತಕ­ಗಳನ್ನು ಬಿಡುಗಡೆ ಮಾಡಿ ಮಾತನಾಡಿದರು.
‘ಭಾರತೀಯ ಸಾಹಿತ್ಯ ಅಧ್ಯಯನದ ಕ್ರಮದಲ್ಲಿ ಕನ್ನಡದ ಎಲ್ಲ ಶ್ರೇಷ್ಠ ಸಾಹಿತಿ­ಗಳು ಇರುವಂತೆ ವಿಮರ್ಶಾ ವಲಯ ನೋಡಿಕೊಳ್ಳಬೇಕು. ಸ್ವತಂತ್ರ ಭಾರತದ ಸಾಹಿತ್ಯಕ್ಕೆ ತಿರುವು ತಂದುಕೊಟ್ಟ ಸಾಹಿತಿಗಳಲ್ಲಿ ಕಂಬಾರರು ಒಬ್ಬರು’ ಎಂದು ಶ್ಲಾಘಿಸಿದರು.

ಹಾಡು ಹೇಳಿದ ಕಂಬಾರರು: ಇದೇ ಸಂದರ್ಭದಲ್ಲಿ ಡಾ.ಚಂದ್ರಶೇಖರ ಕಂಬಾರ 77ನೇ ಜನ್ಮದಿನಾಚರಣೆ­ಯನ್ನು ಆಚರಿಸಿಕೊಂಡರು. ‘ಬಿಸಿಲ ಕುದುರೆಯೇನೇರಿ ಹೋದ...ಕೈಮೀರಿ ಹೋದ’ ಎಂಬ ಸ್ವರಚಿತ ಕಾವ್ಯವನ್ನು  ರಾಗಬದ್ಧವಾಗಿ ಹಾಡುತ್ತ ನೋಡುಗರಲ್ಲಿ ಬೆರಗು ಮೂಡಿಸಿದರು.
ಸ್ವಾತಂತ್ರ್ಯ ಬಂದ ಮೇಲೆ ಸ್ವಾತಂತ್ರ್ಯ ಗೀತೆ: ನಂತರ ಮಾತನಾಡಿದ ಅವರು,

‘ಲಾವಣಿಕಾರರ ಪದ ಕೇಳುತ್ತಲೇ ಬೆಳೆ­ದ­ವನು ನಾನು. ಕೇಳುವ ಸಂಸ್ಕೃತಿಯಿಂದಲೇ ಕಾವ್ಯ ಕಟ್ಟುವ ಕಲೆಯನ್ನು ರೂಢಿಸಿ­ಕೊಂಡೆ. ಸ್ವಾತಂತ್ರ್ಯ ಬಂದ ಮೇಲೆ ಸ್ವಾತಂತ್ರ್ಯದ ಬಗ್ಗೆ ಗೀತೆ ಬರೆದೆ.  ಅದನ್ನೇ ಈಗ ಹಾಡುತ್ತೇನೆ’ ಎಂದು  ಹಾಡಲು ಮುಂದಾದರು.

ವಿಮರ್ಶಕ ಡಾ.ಗಿರಡ್ಡಿ ಗೋವಿಂದ­ರಾಜ, ‘ಇಂಗ್ಲಿಷ್ ಪ್ರಾಧ್ಯಾಪಕರು ಪುಸ್ತಕಗಳನ್ನು ಅನುವಾದಿಸುವ ಮೂಲಕ ಕನ್ನಡದ ಪ್ರತಿಭಾವಂತ ಲೇಖಕರನ್ನು ಜಾಗತಿಕ ಮಟ್ಟಕ್ಕೆ ಪರಿಚಯಿಸುತ್ತಿದ್ದಾರೆ’ ಎಂದು ಹೇಳಿದರು.

‘ಪು.ತಿ.ನರಸಿಂಹಚಾರ್, ಕೆ.ಎಸ್. ನರಸಿಂಹಸ್ವಾಮಿ ಅಂತಹ ಶ್ರೇಷ್ಠ ಕವಿ­ಗಳಿಗೂ ಜ್ಞಾನಪೀಠ ಪ್ರಶಸ್ತಿ ಬರಬೇಕಿತ್ತು. ಆದರೆ ಅವರ ಕೃತಿಗಳು ಇಂಗ್ಲಿಷ್ ಭಾಷೆಗೆ ತರ್ಜುಮೆಯಾಗದಿರುವುದೇ ಇದಕ್ಕೆ ಕಾರಣ’ ಎಂದು ಬೇಸರ ವ್ಯಕ್ತಪಡಿಸಿದರು.

‘ನಾದ ಪ್ರಧಾನವಾದ ಕಂಬಾರರ ಕಾವ್ಯವನ್ನು ಅನುವಾದ ಮಾಡುವುದು ತುಸು ಕಷ್ಟ. ಪದ್ಯವನ್ನು ಭಾಷೆಯಲ್ಲಿ ಹಿಡಿಯಬಹುದು. ಆದರೆ, ಅದರ ಜತೆಗೆ ಬೆಸೆದುಕೊಂಡಿರುವ ಲಯವನ್ನು  ಹಿಡಿಯಲು ಸಾಧ್ಯವೇ?’ ಎಂದು ಪ್ರಶ್ನಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT