ಗುರುವಾರ , ಸೆಪ್ಟೆಂಬರ್ 23, 2021
25 °C
ಭಗೀರಥ ಜಯಂತಿ

‘ಭಗೀರಥ’ ಪ್ರಯತ್ನದಿಂದ ಯಶಸ್ಸು ಸಾಧ್ಯ: ಜಿಲ್ಲಾಧಿಕಾರಿ ಬಿ.ಬಿ.ಕಾವೇರಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಾಮರಾಜನಗರ: ‘ಎಲ್ಲರೂ ತಮ್ಮ ಬದುಕಿನ ಗುರಿ ಮುಟ್ಟಬೇಕಾದರೆ ಅಲ್ಲಿ ‘ಭಗೀರಥ’ ಪ್ರಯತ್ನ ಇರಬೇಕು. ಭಗೀರಥರಿಗೆ ಅಂತಹ ಛಲವಿದ್ದುದರಿಂದ ಭೂಮಿಗೆ ಗಂಗೆಯನ್ನು ಕರೆಸಿದರು’ ಎಂದು ಜಿಲ್ಲಾಧಿಕಾರಿ ಬಿ.ಬಿ.ಕಾವೇರಿ ಅಭಿಪ್ರಾಯಪಟ್ಟರು.

ನಗರದ ಜೆ.ಎಚ್.ಪಟೇಲ್ ಸಭಾಂಗಣದಲ್ಲಿ ಶನಿವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಹಮ್ಮಿಕೊಂಡಿದ್ದ ಮಹರ್ಷಿ ಭಗೀರಥ ಜಯಂತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಜೀವನದಲ್ಲಿ ಸಾಧನೆ ಮಾಡಬೇಕಾದರೆ ಮಹರ್ಷಿ ಭಗೀರಥರ ಪ್ರಯತ್ನ ಅನುಸರಿಸಬೇಕು. ಸತತ ಪ್ರಯತ್ನಕ್ಕೆ ಪ್ರತಿಫಲ ಸಿಗಲಿದೆ ಎನ್ನುವುದಕ್ಕೆ ಗಂಗೆಯನ್ನೇ ಧರೆಗಿಳಿಸಿದ ಭಗೀರಥರೇ ಉತ್ತಮ ಉದಾಹರಣೆ ಎಂದರು.

ಛಲಬಿಡದ ಭಗೀರಥ: ಭಗೀರಥರು ಸಾವಿರಾರು ವರ್ಷ ತಪಸ್ಸು ಮಾಡಿ ಆಹಾರ, ಗಾಳಿ ತ್ಯಜಿಸಿ ಭೂಮಿಯನ್ನು ಪವಿತ್ರಗೊಳಿಸುವ ಉದ್ದೇಶದಿಂದ ಯಾವುದೇ ಅಡೆತಡೆ ಎದುರಾದರೂ ಛಲ ಬಿಡದೆ ಗಂಗೆಯನ್ನು ಭೂಮಿಗೆ ಕರೆತಂದರು. ಅಂತಹ ಪ್ರಯತ್ನವನ್ನು ನಾವು ಕೂಡ ನಮ್ಮ ಪಾರದರ್ಶಕ ಕೆಲಸದಲ್ಲಿ ಅಳವಡಿಸಿಕೊಳ್ಳಬೇಕು ಎಂದರು.

ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೆ.ಎಸ್.ಲತಾಕುಮಾರಿ ಮಾತನಾಡಿ, ‘ದಾರ್ಶನಿಕರ ಸಾಧನೆ ಅವರು ನಡೆದು ಬಂದ ಕಷ್ಟಗಳ ಹಾದಿಯನ್ನು ತಿಳಿಸುತ್ತದೆ. ಮಹಾರಾಜರಾಗಿದ್ದ ಭಗೀರಥರು ತ್ಯಾಗ, ಹಟ, ಛಲದಿಂದ ಸಾಧನೆ ಮಾಡಿದರು. ಪ್ರತಿಯೊಬ್ಬರೂ ತಮ್ಮ ಗುರಿ ಮುಟ್ಟಲು ಅಥವಾ ಸಾಧನೆ ಮಾಡಲು ಭಗೀರಥರ ಸತತ ಪರಿಶ್ರಮ, ತ್ಯಾಗ, ಛಲ, ಸದ್ಗುಣಗಳನ್ನು ಅನುಸರಿಸಬೇಕು. ಎಲ್ಲ ದಾರ್ಶನಿಕರ ಜೀವನ ಚರಿತ್ರೆ, ಜೀವನಗಾಥೆ, ಮೌಲ್ಯವನ್ನು ಪ್ರತಿಯೊಬ್ಬರೂ ಅಳವಡಿಸಿಕೊಳ್ಳಬೇಕು’ ಎಂದು ಸಲಹೆ ನೀಡಿದರು.

ಹೆಚ್ಚುವರಿ ಜಿಲ್ಲಾಧಿಕಾರಿ ಸಿ.ಎಲ್‌.ಆನಂದ್‌ ಮಾತನಾಡಿ, ‘ಪ್ರತಿಯೊಬ್ಬರೂ ತಮ್ಮ ತಮ್ಮ ಕ್ಷೇತ್ರಗಳಲ್ಲಿ ನಿಷ್ಠೆಯಿಂದ ಕೆಲಸ ನಿರ್ವಹಿಸಿದರೆ ದೇಶ ಅಭಿವೃದ್ಧಿಯಾಗುತ್ತದೆ. ಸತತ ಪ್ರಯತ್ನದಿಂದ ರೈತರು ಉತ್ತಮ ಫಸಲು ಬೆಳೆಯುತ್ತಾರೆ. ಅದರಂತೆ, ಅಧಿಕಾರಿಗಳು ಸೇರಿದಂತೆ ಎಲ್ಲರೂ ತಮ್ಮ ವೃತ್ತಿಯಲ್ಲಿ ಕುಗ್ಗದೆ ಕೆಲಸ ನಿರ್ವಹಿಸಿದರೆ ಸಮಾಜ ಅಭಿವೃದ್ಧಿಯಾಗುತ್ತದೆ’ ಎಂದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಎಚ್.ಚೆನ್ನಪ್ಪ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಅಧಿಕಾರಿ ಸೋಮಶೇಖರ್ ಇದ್ದರು.

ಪವಿತ್ರ ಗಂಗೆ ಕಲುಷಿತಗೊಂಡಿದ್ದಾಳೆ

ಕಥೆ, ಪುರಾಣ, ಇತಿಹಾಸದಿಂದ ಎಲ್ಲರೂ ಕಲಿಯಬೇಕಾದ್ದು ಬಹಳಷ್ಟಿದೆ. ಎಲ್ಲವನ್ನೂ ಅರ್ಥೈಸಿಕೊಳ್ಳಬೇಕು. ಭಗೀರಥ ಮಹರ್ಷಿ ಗಂಗೆಯನ್ನು ಭೂಮಿಗೆ ಏಕೆ ತಂದರು ಎನ್ನುವ ಅರಿವಿರಬೇಕು. ಆದರೆ, ಇಂದು ನಾವು ಆ ಗಂಗೆಯ ಮೌಲ್ಯ ತಿಳಿದಿದ್ದರೂ ಪವಿತ್ರವಾದ ನೀರನ್ನು (ಗಂಗೆ) ಕಲುಷಿತಗೊಳಿಸಿರುವುದು ದುರಂತದ ಸಂಗತಿ. ನೀರಿನ ಮಹತ್ವವನ್ನು ಎಲ್ಲರೂ ಅರಿಯಲೇಬೇಕು. ನೀರನ್ನು ಸಂರಕ್ಷಿಸಬೇಕು. ಶುದ್ಧ ನೀರಿನ ಕಲುಷಿತಕ್ಕೆ ಮುಂದಾಗಬಾರದು ಎಂದು ಕಾವೇರಿ ಕಿವಿಮಾತು ಹೇಳಿದರು.

ಜನಪ್ರತಿನಿಧಿಗಳಿದ್ದರೆ ಬೇರೆ ರೀತಿ: ಚುನಾವಣೆ ನೀತಿಸಂಹಿತೆ ಕಾರಣದಿಂದ ಭಗೀರಥ ಜಯಂತಿ ಸರಳವಾಗಿ ಜಿಲ್ಲಾಡಳಿತದಿಂದ ನಡೆಯುತ್ತಿದೆ. ಅಧಿಕಾರಿಗಳೇ ಭಾಷಣಕಾರರಾಗಿದ್ದೇವೆ. ಇದೇ ವೇದಿಕೆಯಲ್ಲಿ ಜನಪ್ರತಿನಿಧಿಗಳು, ಭಾಷಣಕಾರರು ಇದ್ದಿದ್ದರೆ ಬೇರೆ ರೀತಿಯಲ್ಲಿ ಕಾರ್ಯಕ್ರಮ ನಡೆಯುತ್ತಿತ್ತು. ಭಗೀರಥರನ್ನು ಯಾವುದೇ ಒಂದು ಸಮುದಾಯಕ್ಕೆ ಸೀಮಿತಗೊಳಿಸಬಾರದು. ಸಮುದಾಯವು ಶಿಕ್ಷಣಕ್ಕೆ ಆದ್ಯತೆ ನೀಡಬೇಕು. ಅದರಲ್ಲೂ ಹೆಣ್ಣುಮಕ್ಕಳ ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡಲು ಮುಂದಾಗಬೇಕು. ಪ್ರತಿಯೊಬ್ಬರೂ ಶಿಕ್ಷಣ ಪಡೆದು ಸೌಲಭ್ಯಗಳನ್ನು ಪಡೆಯಲು ಮುಂದೆ ಬರಬೇಕು. ಬಾಲ್ಯ ವಿವಾಹ ಸಂಪೂರ್ಣವಾಗಿ ನಿಲ್ಲಬೇಕು. ಮೌಢ್ಯ ತೊರೆಯಬೇಕು ಎಂದು ಅವರು ತಿಳಿಸಿದರು.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು