‘ಪುಟಗೋಸಿ’ ಪದ ಬಳಕೆಗೆ ಖಂಡನೆ; ಎಚ್ಚರಿಕೆ

ಗುರುವಾರ , ಏಪ್ರಿಲ್ 25, 2019
31 °C

‘ಪುಟಗೋಸಿ’ ಪದ ಬಳಕೆಗೆ ಖಂಡನೆ; ಎಚ್ಚರಿಕೆ

Published:
Updated:

ವಿಜಯಪುರ: ಕೆಪಿಸಿಸಿ ಕಾರ್ಯದರ್ಶಿ ಸಂಗಮೇಶ ಬಬಲೇಶ್ವರ, ಶಾಸಕ ಎ.ಎಸ್.ಪಾಟೀಲ ನಡಹಳ್ಳಿ ಅವರಿಗೆ ‘ಪುಟಗೋಸಿ’ ಪದ ಬಳಸಿದ್ದು ಶೋಭೆಯಲ್ಲ ಎಂದು ಮುದ್ದೇಬಿಹಾಳದ ಬಿಜೆಪಿ ಮುಖಂಡರು ಸೋಮವಾರ ನಗರದಲ್ಲಿ ನಡೆದ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಖಂಡಿಸಿದರು.

‘ಮಮದಾಪುರದ ಸಂಗಮೇಶ ಬಬಲೇಶ್ವರ ಈ ಹಿಂದೆ ಏನಿದ್ದರು ಎಂಬುದು ಎಲ್ಲರಿಗೂ ಗೊತ್ತಿದೆ. ಸೌಹಾರ್ದ ಸಹಕಾರಿ ರಂಗದಲ್ಲಿ ಜನರಿಗೆ ವಂಚಿಸಿದ್ದಾರೆ. ಎಂ.ಬಿ.ಪಾಟೀಲರ ಹೆಸರಿನಲ್ಲಿ ಅಧಿಕಾರಿಗಳಿಗೆ ಬ್ಲ್ಯಾಕ್‌ ಮೇಲ್‌ ಮಾಡುತ್ತಿದ್ದಾರೆ. ಇಂಥಹವರಿಂದಲೇ ಗೃಹ ಸಚಿವರಿಗೆ ಕೆಟ್ಟ ಹೆಸರು ಬರುತ್ತಿದೆ’ ಎಂದು ಸೋಮನಗೌಡ ಬಿರಾದಾರ ತಿರುಗೇಟು ನೀಡಿದರು.

ಸೋಮನಗೌಡ ಆರೋಪಕ್ಕೆ ಸಂಬಂಧಿಸಿದಂತೆ ಪತ್ರಕರ್ತರು ದಾಖಲೆ ಪ್ರದರ್ಶಿಸಿ ಎಂದು ಪ್ರಶ್ನಿಸುತ್ತಿದ್ದಂತೆ, ನಮ್ಮ ಬಳಿ ಇದೀಗ ಯಾವ ದಾಖಲೆಗಳು ಇಲ್ಲ. ಮುಂದಿನ ದಿನಗಳಲ್ಲಿ ಬೇಕಿದ್ದರೆ ನೀಡುತ್ತೇವೆ ಎನ್ನುವ ಮೂಲಕ ತಮ್ಮ ಆರೋಪ ಸಮರ್ಥಿಸಿಕೊಳ್ಳಲು ಮುಂದಾಗಲಿಲ್ಲ.

‘ಶಾಸಕ ನಡಹಳ್ಳಿ ಜನಪ್ರಿಯತೆಯಿಂದಲೇ ಮೂರು ಬಾರಿ ಗೆದ್ದಿದ್ದಾರೆ. ಮತದಾರರ ಆಶೀರ್ವಾದ ಅವರಿಗಿದೆ. ಸಮಾಜ ಸೇವೆ ಜತೆ, ಅಭಿವೃದ್ಧಿ ಕೆಲಸಗಳನ್ನು ಮಾಡುತ್ತಿದ್ದಾರೆ. ನಡಹಳ್ಳಿ ಎಂ.ಬಿ.ಪಾಟೀಲ ವಿರುದ್ಧ ಅವಹೇಳನಕಾರಿಯಾಗಿ ಎಲ್ಲೂ ಮಾತನಾಡಿಲ್ಲ.

ವಿರೋಧ ಪಕ್ಷದ ಶಾಸಕನಾಗಿ ಆಡಳಿತಾರೂಢರ ವೈಫಲ್ಯಗಳನ್ನೇ ಟೀಕಿಸಿದ್ದಾರೆ. ಟೀಕೆಗೆ ಈ ಹಿಂದಿನ ಅವಧಿಯಲ್ಲಿ ಜಲಸಂಪನ್ಮೂಲ ಸಚಿವರಿದ್ದ ಎಂ.ಬಿ.ಪಾಟೀಲ ಘನತೆಗೆ ತಕ್ಕಂತೆ ಉತ್ತರಿಸಬೇಕಿತ್ತು. ಬಾಲಂಗೋಚಿಗಳ ಮೂಲಕ ಅವಹೇಳನಕಾರಿಯಾಗಿ ಮಾತನಾಡಿಸುವ ಅಗತ್ಯವಿರಲಿಲ್ಲ’ ಎಂದು ಬಿಜೆಪಿ ಮುಖಂಡ ಮಲಕೇಂದ್ರಗೌಡ ಪಾಟೀಲ ಅಸಮಾಧಾನ ವ್ಯಕ್ತಪಡಿಸಿದರು.

‘ಅವಹೇಳನಕಾರಿ ಪದ ಪ್ರಯೋಗ ನಮಗೂ ಬರುತ್ತದೆ. ಆದರೆ ನಮ್ಮ ಸಂಸ್ಕೃತಿ, ಬಿಜೆಪಿ ಸಂಸ್ಕೃತಿ ಅದಲ್ಲ. 63,000ಕ್ಕೂ ಹೆಚ್ಚು ಮತದಾರರು ನಡಹಳ್ಳಿಗೆ ಆಶೀರ್ವದಿಸಿದ್ದಾರೆ. ಸಂಗಮೇಶ ಹೇಳಿಕೆಯಿಂದ ಕ್ಷೇತ್ರದ ಮತದಾರರಿಗೆ ನೋವಾಗಿದೆ. ಈ ಹೇಳಿಕೆ ಖಂಡಿಸುತ್ತೇವೆ. ಬಬಲೇಶ್ವರ ತಮ್ಮ ವರ್ತನೆ ತಿದ್ದಿಕೊಳ್ಳದಿದ್ದರೆ ಹೋರಾಟಕ್ಕೂ ಸಿದ್ಧರಿದ್ದೇವೆ’ ಎಂದು ಚುನಾವಣಾ ಪ್ರಚಾರ ಸಮಿತಿ ಅಧ್ಯಕ್ಷ ಶಂಕರಗೌಡ ಹಿರೇಗೌಡರ ತಿಳಿಸಿದರು.

ಮನೋಹರ ತುಪ್ಪದ, ಪಾಪುಸಿಂಗ್ ರಜಪೂತ ಪತ್ರಿಕಾಗೋಷ್ಠಿಯಲ್ಲಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !