ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಬೈಜೂಸ್‌ನಿಂದ ಭಾರತಕ್ಕೆ ಹೆಚ್ಚು ಎಫ್‌ಡಿಐ: ರವೀಂದ್ರನ್

Published 30 ಏಪ್ರಿಲ್ 2023, 15:29 IST
Last Updated 30 ಏಪ್ರಿಲ್ 2023, 15:29 IST
ಅಕ್ಷರ ಗಾತ್ರ

ನವದೆಹಲಿ: ಭಾರತಕ್ಕೆ ವಿದೇಶಿ ನೇರ ಬಂಡವಾಳ (ಎಫ್‌ಡಿಐ) ತರುವುದರಲ್ಲಿ ಬೇರೆ ನವೋದ್ಯಮಗಳಿಗೆ ಹೋಲಿಸಿದರೆ ಬೈಜೂಸ್‌ ಪಾಲು ಹೆಚ್ಚಿಗೆ ಇದೆ ಎಂದು ಕಂಪನಿ ಸಿಇಒ ಬೈಜು ರವೀಂದ್ರನ್‌ ಅವರು ಉದ್ಯೋಗಿಗಳಿಗೆ ಬರೆದಿರುವ ಪತ್ರದಲ್ಲಿ ತಿಳಿಸಿದ್ದಾರೆ.

ವಿದೇಶಿ ವಿನಿಮಯ ನಿರ್ವಹಣೆಗೆ ಸಂಬಂಧಿಸಿದ ಎಲ್ಲ ನಿಯಮಗಳನ್ನು ಕಂಪನಿ ಅನುಸರಿಸಿದೆ ಎಂದೂ ಹೇಳಿದ್ದಾರೆ.

ಅತಿ ಹೆಚ್ಚು ಎಫ್‌ಡಿಐ ಆಕರ್ಷಿಸಿದ್ದರಿಂದಾಗಿ 55 ಸಾವಿರಕ್ಕೂ ಅಧಿಕ ಪ್ರತಿಭಾನ್ವಿತ ವೃತ್ತಿಪರರಿಗೆ ಉದ್ಯೋಗಾವಕಾಶ ಸೃಷ್ಟಿಸಲು ಸಾಧ್ಯವಾಯಿತು. ಇದರಿಂದಾಗಿಯೇ ನವೋದ್ಯಮಗಳ ಪೈಕಿ ಭಾರತದ ಅತಿದೊಡ್ಡ ಉದ್ಯೋಗದಾತ ಕಂಪನಿ ಆಗಿ ಹೊರಹೊಮ್ಮಲು ಸಾಧ್ಯವಾಯಿತು ಎಂದು ರವೀಂದ್ರನ್‌ ತಿಳಿಸಿದ್ದಾರೆ.

ವಿದೇಶಿ ವಿನಿಮಯ ನಿರ್ವಹಣೆ ಕಾಯ್ದೆ ಉಲ್ಲಂಘನೆ ಸಂಬಂಧ ಜಾರಿ ನಿರ್ದೇಶನಾಲಯವು ರವೀಂದ್ರನ್‌ ಅವರ ಮನೆ ಮತ್ತು ಕಚೇರಿಗಳ ಮೇಲೆ ಜಾರಿ ಶನಿವಾರ ದಾಳಿ ನಡೆಸಿದೆ.

ಭಾರತದ ಅತ್ಯಂತ ಮೌಲ್ಯಯುತ ನವೋದ್ಯಮ, ಬೈಜೂಸ್‌ ಒಮ್ಮೆ ₹ 1.80 ಲಕ್ಷ ಕೋಟಿ ಮಾರುಕಟ್ಟೆ ಮೌಲ್ಯ ಹೊಂದಿತ್ತು. ಜನರಲ್‌ ಅಟ್ಲಾಂಟಿಕ್‌, ಬ್ಲಾಕ್‌ ರಾಕ್‌ ಮತ್ತು ಸಿಕೊಯಾ ಕ್ಯಾಪಿಟಲ್‌ ತರಹದ ಜಾಗತಿಕ ಹೂಡಿಕೆದಾರರನ್ನೂ ಆಕರ್ಷಿಸಿತ್ತು.

2011ರಿಂದ 2023ರ ನಡುವಿನ ಅವಧಿಯಲ್ಲಿ ಕಂಪನಿಯು ₹ 28 ಸಾವಿರ ಕೋಟಿಯಷ್ಟು ಎಫ್‌ಡಿಐ ಆಕರ್ಷಿಸಿದೆ. ಇದೇ ಅವಧಿಯಲ್ಲಿ ಕಂಪನಿಯು ವಿವಿಧ ದೇಶಗಳಿಗೆ ₹ 9,754 ಕೋಟಿಯನ್ನು ಕಡಲಾಚೆಗಿನ ನೇರ ಹೂಡಿಕೆಯ ಹೆಸರಿನಲ್ಲಿ ಪಾವತಿಸಿದೆ.

‘70ಕ್ಕೂ ಅಧಿಕ ಪ್ರಭಾವಿ ಹೂಡಿಕೆದಾರರು ಕಂಪನಿಯಲ್ಲಿ ಹಣ ತೊಡಗಿಸಿದ್ದಾರೆ. ನಮ್ಮ ಕಾರ್ಯಾಚರಣೆ ಮತ್ತು ವಿದೇಶಿ ವಿನಿಮಯ ನಿರ್ವಹಣೆ ಬಗ್ಗೆ ಅವರು ತೃಪ್ತಿ ಹೊಂದಿದ್ದಾರೆ. ಜಾರಿ ನಿರ್ದೇಶನಾಲಯವು ಸಹ ಅದೇ ರೀತಿಯ ನಿರ್ಣಯಕ್ಕೆ ಬರುವ ವಿಶ್ವಾಸವಿದೆ’ ಎಂದು ಶನಿವಾರ ತಡರಾತ್ರಿ ಉದ್ಯೋಗಿಗಳಿಗೆ ಬರೆದಿರುವ ಪತ್ರದಲ್ಲಿ ರವೀಂದ್ರನ್‌ ಹೇಳಿದ್ದಾರೆ.

ಅಂತರರಾಷ್ಟ್ರೀಯ ಮಟ್ಟದಲ್ಲಿ ಹಲವು ಸ್ವಾಧೀನ ಪ್ರಕ್ರಿಯೆಗಳನ್ನು ಕೈಗೊಂಡಿದ್ದು, ಅದಕ್ಕಾಗಿ ಒಂದಿಷ್ಟು ಹಣವನ್ನು ಕಳುಹಿಸಲಾಗಿತ್ತು. ಕಂಪನಿಯ ಬೆಳವಣಿಗೆಯ ಭಾಗವಾಗಿ ₹ 9 ಸಾವಿರ ಕೋಟಿಗೂ ಹೆಚ್ಚು ಹೂಡಿಕೆ ಮಾಡಲಾಗಿದೆ ಎಂದು ಅವರು ಪತ್ರದಲ್ಲಿ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT