ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೈಜುಸ್‌ ಹೂಡಿಕೆದಾರರ ಸಭೆ; ರವೀಂದ್ರನ್‌, ಕುಟುಂಬಸ್ಥರ ಪದಚ್ಯುತಿ ಸಾಧ್ಯತೆ?

Published 22 ಫೆಬ್ರುವರಿ 2024, 23:52 IST
Last Updated 22 ಫೆಬ್ರುವರಿ 2024, 23:52 IST
ಅಕ್ಷರ ಗಾತ್ರ

ನವದೆಹಲಿ: ಬೈಜುಸ್‌ ಕಂಪನಿಯ ಮಾತೃಸಂಸ್ಥೆಯಾದ ಥಿಂಕ್‌ ಆ್ಯಂಡ್‌ ಲರ್ನ್‌ ಆಡಳಿತ ಮಂಡಳಿಯಿಂದ ಸಿಇಒ ಬೈಜು ರವೀಂದ್ರನ್‌ ಹಾಗೂ ಅವರ ಕುಟುಂಬದ ಸದಸ್ಯರನ್ನು ಪದಚ್ಯುತಿಗೊಳಿಸುವ ಸಂಬಂಧ ಫೆಬ್ರುವರಿ 23ರಂದು ಷೇರುದಾರರ ವಿಶೇಷ ಸಾಮಾನ್ಯ ಸಭೆ (ಇಜಿಎಂ) ನಡೆಯಲಿದೆ.

ರವೀಂದ್ರನ್‌ ಹಾಗೂ ಕುಟುಂಬಸ್ಥರು ಕಂಪನಿಯ ನಿರ್ವಹಣೆಯಲ್ಲಿ ವೈಫಲ್ಯ ಕಂಡಿದ್ದಾರೆ ಎಂದು ಆರೋಪಿಸಿ ಕೆಲವು ಹೂಡಿಕೆದಾರರು ಸಭೆಯಲ್ಲಿ ನಿರ್ಣಯ ಮಂಡಿಸಲಿದ್ದಾರೆ. ಇದರ ಪರವಾಗಿ ಷೇರುದಾರರು ಮತ ಚಲಾಯಿಸಲಿದ್ದಾರೆ ಎಂದು ಹೇಳಲಾಗಿದೆ. ‌

ಆಡಳಿತ ಮಂಡಳಿಯಲ್ಲಿ ರವೀಂದ್ರನ್‌, ಅವರ ಪತ್ನಿ ಹಾಗೂ ಸಹ ಸಂಸ್ಥಾಪಕಿ ದಿವ್ಯಾ ಗೋಕುಲನಾಥ್‌, ಸಹೋದರ ರಿಜು ರವೀಂದ್ರನ್‌ ಇದ್ದಾರೆ.

ಕಂಪನಿಯಲ್ಲಿ ಶೇ 32ರಷ್ಟು ಷೇರು ಹೊಂದಿರುವ ಹೂಡಿಕೆದಾರರು ಕರೆದಿರುವ ಈ ಸಭೆಯ ಸಿಂಧುತ್ವ ಪ್ರಶ್ನಿಸಿ ರವೀಂದ್ರನ್‌ ಅವರು ಕರ್ನಾಟಕ ಹೈಕೋರ್ಟ್‌ನ ಮೆಟ್ಟಿಲೇರಿದ್ದಾರೆ. ಆದರೆ, ಈ ಸಭೆಗೆ ತಡೆಯಾಜ್ಞೆ ನೀಡಲು ಹೈಕೋರ್ಟ್‌ ನಿರಾಕರಿಸಿದ್ದು, ಮಾರ್ಚ್ 13ಕ್ಕೆ ವಿಚಾರಣೆಯನ್ನು ಮುಂದೂಡಿದೆ. ಹಾಗಾಗಿ, ಸಭೆಯಲ್ಲಿ ಯಾವುದೇ ತೀರ್ಮಾನ ಕೈಗೊಂಡರೂ ವಿಚಾರಣಾ ಅವಧಿವರೆಗೂ ಅದು ಅನ್ವಯಿಸುವುದಿಲ್ಲ ಎನ್ನಲಾಗಿದೆ.

ಕಂಪನಿಯಲ್ಲಿ ಶೇ 30ರಷ್ಟು ಷೇರುಗಳನ್ನು ಹೊಂದಿರುವ ಪ್ರಮುಖ ಆರು ಮಂದಿ ಹೂಡಿಕೆದಾರರು ಕೂಡ ಸಭೆಗೆ ಬೆಂಬಲ ಘೋಷಿಸಿದ್ದಾರೆ ಎಂದು ಹೇಳಲಾಗಿದೆ. ರವೀಂದ್ರನ್‌ ಹಾಗೂ ಕುಟುಂಬವು ಶೇ 26.3ರಷ್ಟು ಷೇರುಗಳ ಮೇಲೆ ಒಡೆತನ ಹೊಂದಿದೆ.

2022ರಲ್ಲಿ ₹1.82 ಲಕ್ಷ ಕೋಟಿಗೆ ತಲುಪಿದ್ದ ಬೈಜುಸ್‌ ಮಾರುಕಟ್ಟೆ ಮೌಲ್ಯವು ಈಗ ₹1,657 ಕೋಟಿಗೆ ಇಳಿಕೆಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT