ಬುಧವಾರ, 28 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯೂರಿಯಾ ದರ ಕಡಿತಗೊಳಿಸಿಲ್ಲ: ಕೇಂದ್ರ ಸ್ಪಷ್ಟನೆ

Published 11 ಜನವರಿ 2024, 16:20 IST
Last Updated 11 ಜನವರಿ 2024, 16:20 IST
ಅಕ್ಷರ ಗಾತ್ರ

ನವದೆಹಲಿ: ಬೇವು ಲೇಪಿತ ಯೂರಿಯಾ ದರದಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ ಎಂದು ಕೇಂದ್ರ ಸರ್ಕಾರ ಗುರುವಾರ ಸ್ಪಷ್ಟಪಡಿಸಿದೆ.

ಯೂರಿಯಾ ದರ ಹೆಚ್ಚಿಸಿರುವುದರಿಂದ ರೈತರು ತೊಂದರೆಗೆ ಸಿಲುಕಿದ್ದಾರೆ ಎಂದು ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್‌ ಯಾದವ್‌ ಅವರ ಆರೋಪಕ್ಕೆ ಸಂಬಂಧಿಸಿದಂತೆ ಈ ಪ್ರತಿಕ್ರಿಯೆ ನೀಡಿದೆ.  

‘ಮಣ್ಣಿನಲ್ಲಿ ಗಂಧಕದ ಕೊರತೆ ನೀಗಿಸಲು ಹೊಸದಾಗಿ ಗಂಧಕ ಲೇಪಿತ ಯೂರಿಯಾವನ್ನು (ಯೂರಿಯಾ ಗೋಲ್ಡ್‌) ಸಂಶೋಧಿಸಲಾಗಿದೆ. ಈ ಗೊಬ್ಬರದ ಪ್ರಮಾಣಕ್ಕೆ ಅನುಗುಣವಾಗಿ ಬೆಲೆ ನಿಗದಿಪಡಿಸಲಾಗಿದೆ. ರೈತರನ್ನು ದಿಕ್ಕುತಪ್ಪಿಸುವುದು ಸರಿಯಲ್ಲ’ ಎಂದು ಕೇಂದ್ರ ರಾಸಾಯನಿಕ ಗೊಬ್ಬರಗಳ ಸಚಿವ ಮನುಸುಕ್‌ ಮಾಂಡವೀಯ ಹೇಳಿದ್ದಾರೆ.

ಆರೋಪ ಏನು?:  

ಬೇವು ಲೇಪಿತ ಯೂರಿಯಾದ ಪ್ರತಿ 45 ಕೆ.ಜಿ ತೂಕದ ಚೀಲಕ್ಕೆ ಸರ್ಕಾರವು ₹266.5 ದರ ನಿಗದಿಪಡಿಸಿದೆ. ಆದರೆ, ಗಂಧಕ ಲೇಪಿತ ಯೂರಿಯಾದ 40 ಕೆ.ಜಿ ತೂಕದ ಚೀಲಕ್ಕೂ ಇಷ್ಟೇ ದರ ನಿಗದಿಪಡಿಸಲಾಗಿದೆ. ತೂಕ ಕಡಿತಗೊಳಿಸಿದ್ದರೂ ದರ ಕಡಿಮೆ ಮಾಡಿಲ್ಲ. ಬಿಜೆಪಿಯ ಅಧಿಕಾರಾವಧಿಯಲ್ಲಿ ರೈತರ ಶೋಷಣೆ ಮುಂದುವರಿದಿದೆ ಎಂದು ಅಖಿಲೇಶ್‌ ಟೀಕಿಸಿದ್ದರು.

ಸಾಮಾನ್ಯ ಯೂರಿಯಾದಲ್ಲಿ ಶೇ 46ರಷ್ಟು ಸಾರಜನಕ ಇರುತ್ತದೆ. ‘ಯೂರಿಯಾ ಗೋಲ್ಡ್‌’ನಲ್ಲಿ ಶೇ 37ರಷ್ಟು ಸಾರಜನಕ ಮತ್ತು ಶೇ 17ರಷ್ಟು ಗಂಧಕವಿದ್ದು, ಎಣ್ಣೆಕಾಳು ಮತ್ತು ದ್ವಿದಳ ಧಾನ್ಯ ಬೆಳೆಗಳಿಗೆ ಅಗತ್ಯ ಪೋಷಕಾಂಶ ಒದಗಿಸುತ್ತದೆ ಎಂದು ಕೇಂದ್ರ ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT