ಶನಿವಾರ, ಜನವರಿ 16, 2021
28 °C

ಎಫ್‌ಎಂಸಿಜಿ ಉತ್ಪನ್ನಗಳ ಬೆಲೆ ಹೆಚ್ಚಳ ಸನ್ನಿಹಿತ?

ಪಿಟಿಐ Updated:

ಅಕ್ಷರ ಗಾತ್ರ : | |

ನವದೆಹಲಿ: ತ್ವರಿತವಾಗಿ ಬಿಕರಿಯಾಗುವ ಗ್ರಾಹಕ ಬಳಕೆ ವಸ್ತುಗಳ (ಎಫ್‌ಎಂಸಿಜಿ) ಕಂಪನಿಗಳು ತಮ್ಮ ಉತ್ಪನ್ನಗಳ ಬೆಲೆಯನ್ನು ಹೆಚ್ಚಿಸುವ ಆಲೋಚನೆ ಮಾಡುತ್ತಿವೆ. ಉತ್ಪನ್ನಗಳ ತಯಾರಿಕೆಗೆ ಅಗತ್ಯವಿರುವ ವಸ್ತುಗಳ ಬೆಲೆಯಲ್ಲಿ ಹೆಚ್ಚಳ ಆಗಿರುವುದೇ ಇದಕ್ಕೆ ಕಾರಣ.

ಮಾರಿಕೊ ಹಾಗೂ ಇತರ ಕೆಲವು ಎಫ್‌ಎಂಸಿಜಿ ಕಂಪನಿಗಳು ಈಗಾಗಲೇ ಬೆಲೆ ಹೆಚ್ಚಳ ಮಾಡಿವೆ. ಡಾಬರ್, ಪಾರ್ಲೆ, ಪತಂಜಲಿ ಹಾಗೂ ಇನ್ನಿತರ ಕಂಪನಿಗಳು ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಅವಲೋಕಿಸುತ್ತಿವೆ. ಕೊಬ್ಬರಿ ಎಣ್ಣೆ, ತಾಳೆ ಎಣ್ಣೆಯಂತಹ ಖಾದ್ಯ ತೈಲಗಳ ಬೆಲೆಯಲ್ಲಿ ಹೆಚ್ಚಳ ಆಗಿದ್ದರೂ, ಎಫ್‌ಎಂಸಿಜಿ ಕಂಪನಿಗಳು ತಾವೇ ಅದರ ಭಾರ ಹೊತ್ತುಕೊಳ್ಳುವ ಯತ್ನದಲ್ಲಿದ್ದವು. ಆದರೆ, ಹಾಗೆ ಮಾಡುವುದರಿಂದ ಲಾಭದ ಪ್ರಮಾಣ ತಗ್ಗಲಿರುವ ಕಾರಣ, ಈಗಿರುವ ಬೆಲೆಗೇ ಅವು ತಮ್ಮ ಉತ್ಪನ್ನಗಳ ಮಾರಾಟ ಮುಂದುವರಿಸುವ ಸಾಧ್ಯತೆ ಕಡಿಮೆ.

‘ಖಾದ್ಯ ತೈಲ ಹಾಗೂ ಇತರ ಕೆಲವು ಅಗತ್ಯ ವಸ್ತುಗಳ ಬೆಲೆಯಲ್ಲಿ ಗಣನೀಯ ಏರಿಕೆ ಮೂರರಿಂದ ನಾಲ್ಕು ತಿಂಗಳುಗಳಲ್ಲಿ ಆಗಿದೆ. ಇದು ನಮ್ಮ ಖರ್ಚು ಹಾಗೂ ಲಾಭದ ಪ್ರಮಾಣದ ಮೇಲೆ ಒತ್ತಡ ಸೃಷ್ಟಿಸುತ್ತಿದೆ. ನಾವು ಈ ಹಂತದಲ್ಲಿ ಬೆಲೆ ಹೆಚ್ಚಳದ ಬಗ್ಗೆ ತೀರ್ಮಾನ ತೆಗೆದುಕೊಂಡಿಲ್ಲ. ಆದರೆ, ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಅವಲೋಕಿಸುತ್ತಿದ್ದೇವೆ. ಪರಿಸ್ಥಿತಿ ಹೀಗೆಯೇ ಮುಂದುವರಿದರೆ ಬಹುಶಃ ಬೆಲೆ ಹೆಚ್ಚಳ ಮಾಡಬೇಕಾಗಬಹುದು’ ಎಂದು ಪಾರ್ಲೆ ಕಂಪನಿಯ ಹಿರಿಯ ಅಧಿಕಾರಿ ಮಯಾಂಕ್ ಶಾ ಹೇಳಿದರು.

ಬೆಲೆ ಹೆಚ್ಚಳವು ಶೇಕಡ 4ರಿಂದ ಶೇ 5ರಷ್ಟು ಇರಲಿದೆ ಎಂದು ಅವರು ತಿಳಿಸಿದರು. ‘ಹಣದುಬ್ಬರದ ಪರಿಣಾಮವು ಮುಂದಿನ ದಿನಗಳಲ್ಲಿ ಕೆಲವು ಪ್ರಮುಖ ಉತ್ಪನ್ನಗಳ ಮೇಲೆ ಆಗಲಿದೆ. ವೆಚ್ಚಗಳನ್ನು ನಿಯಂತ್ರಿಸುವ ಮೂಲಕ ನಾವು ಕಚ್ಚಾ ವಸ್ತುಗಳ ಬೆಲೆಯಲ್ಲಿ ಆಗಿರುವ ಹೆಚ್ಚಳವನ್ನು ನಿಭಾಯಿಸುವ ಯತ್ನ ಮಾಡುತ್ತೇವೆ. ಮಾರುಕಟ್ಟೆಯಲ್ಲಿನ ಸ್ಪರ್ಧಾತ್ಮಕ ಪರಿಸ್ಥಿತಿಯನ್ನು ಅವಲೋಕಿಸಿ, ನ್ಯಾಯಸಮ್ಮತವಾಗಿ ಬೆಲೆ ಹೆಚ್ಚಳ ಮಾಡುತ್ತೇವೆ’ ಎಂದು ಡಾಬರ್ ಇಂಡಿಯಾ ಕಂಪನಿಯ ಸಿಇಒ ಲಲಿತ್ ಮಲಿಕ್ ತಿಳಿಸಿದರು.

ಬೆಲೆ ಏರಿಕೆಯ ವಿಚಾರದಲ್ಲಿ ಅಂತಿಮ ತೀರ್ಮಾನ ಆಗಿಲ್ಲ, ‘ಕಾದು ನೋಡುವ ತಂತ್ರವನ್ನು ಅನುಸರಿಸಲಾಗುತ್ತಿದೆ’ ಎಂದು ಪತಂಜಲಿ ಆಯುರ್ವೇದ ಕಂಪನಿ ಹೇಳಿದೆ. ಆದರೆ, ಬೆಲೆ ಏರಿಕೆ ಕಡೆ ಒಲವು ಇದೆ ಎಂಬ ಸೂಚನೆಯನ್ನು ನೀಡಿದೆ. ‘ಮಾರುಕಟ್ಟೆಯಲ್ಲಿನ ಏರಿಳಿತಗಳನ್ನು ನಾವು ಗ್ರಾಹಕರಿಗೆ ತಕ್ಷಣ ವರ್ಗಾಯಿಸುವುದಿಲ್ಲ. ಆದರೆ, ಮಾರುಕಟ್ಟೆ ಪರಿಸ್ಥಿತಿಯು ಅನಿವಾರ್ಯತೆಯನ್ನು ಸೃಷ್ಟಿಸಿದರೆ, ಬೆಲೆ ಏರಿಕೆ ವಿಚಾರವಾಗಿ ಅಂತಿಮ ತೀರ್ಮಾನ ಕೈಗೊಳ್ಳುತ್ತೇವೆ’ ಎಂದು ಪತಂಜಲಿ ಕಂಪನಿಯ ವಕ್ತಾರರು ಹೇಳಿದ್ದಾರೆ.

ಸಫೋಲಾ ಮತ್ತು ಪ್ಯಾರಾಚೂಟ್‌ ಬ್ರ್ಯಾಂಡ್‌ಗಳ ಮಾಲೀಕತ್ವ ಹೊಂದಿರುವ ಮಾರಿಕೊ ಕಂಪನಿಯು ಹಣದುಬ್ಬರದ ಕಾರಣದಿಂದಾಗಿ ಉತ್ಪನ್ನಗಳ ಬೆಲೆ ಹೆಚ್ಚಳ ಮಾಡಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು