ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

2023–24ನೇ ಹಣಕಾಸು ವರ್ಷದಲ್ಲಿ ಶೇ 8.4ರಷ್ಟು ಜಿಡಿಪಿ ದಾಖಲು

ಶೇ 7.6ರಷ್ಟು ಪ್ರಗತಿ ನಿರೀಕ್ಷೆ
Published 29 ಫೆಬ್ರುವರಿ 2024, 15:32 IST
Last Updated 29 ಫೆಬ್ರುವರಿ 2024, 15:32 IST
ಅಕ್ಷರ ಗಾತ್ರ

ನವದೆಹಲಿ: 2023–24ನೇ ಹಣಕಾಸು ವರ್ಷದ ಮೂರನೇ ತ್ರೈಮಾಸಿಕದಲ್ಲಿ ಭಾರತದ ಆರ್ಥಿಕ ಬೆಳವಣಿಗೆ ದರವು (ಜಿಡಿಪಿ) ಶೇ 8.4ರಷ್ಟು ದಾಖಲಾಗಿದೆ. 

ಆರ್ಥಿಕ ತಜ್ಞರು, ಹಣಕಾಸು ಸಂಸ್ಥೆಗಳು, ಕ್ರೆಡಿಟ್‌ ರೇಟಿಂಗ್‌ ಸಂಸ್ಥೆಗಳು ಅಂದಾಜಿಸಿದ್ದ ಲೆಕ್ಕಾಚಾರವನ್ನು ಮೀರಿ ಜಿಗಿತ ಕಂಡಿದೆ. 

ಕಳೆದ ಆರ್ಥಿಕ ವರ್ಷದ ಮೂರನೇ ತ್ರೈಮಾಸಿಕದಲ್ಲಿ ಜಿಡಿಪಿಯು ಶೇ 4.3ರಷ್ಟು ದಾಖಲಾಗಿತ್ತು. ತಯಾರಿಕಾ ವಲಯ, ಗಣಿಗಾರಿಕೆ ಮತ್ತು ನಿರ್ಮಾಣ ವಲಯವು ಸಕಾರಾತ್ಮಕ ಬೆಳವಣಿಗೆ ಕಂಡಿರುವುದೇ ಡಿಸೆಂಬರ್‌ ತ್ರೈಮಾಸಿಕದಲ್ಲಿ ಜಿಡಿಪಿ ಏರಿಕೆಗೆ ಕಾರಣವಾಗಿದೆ ಎಂದು ರಾಷ್ಟ್ರೀಯ ಸಾಂಖ್ಯಿಕ ಇಲಾಖೆಯು (ಎನ್‌ಎಸ್‌ಒ) ಗುರುವಾರ ಬಿಡುಗಡೆ ಮಾಡಿರುವ ವರದಿ ತಿಳಿಸಿದೆ.

ಅಲ್ಲದೆ, 2023–24ರ ಹಣಕಾಸು ವರ್ಷದಲ್ಲಿ ಜಿಡಿಪಿಯು ಶೇ 7.3ರಷ್ಟು ಪ್ರಗತಿ ಕಾಣಲಿದೆ ಎಂದು ಜನವರಿಯಲ್ಲಿ ಬಿಡುಗಡೆಗೊಂಡಿದ್ದ ಎನ್‌ಎಸ್‌ಒ ವರದಿಯಲ್ಲಿ ಅಂದಾಜಿಸಲಾಗಿತ್ತು. ಸದ್ಯ ಈಗಿನ ವರದಿಯಲ್ಲಿ ಇದನ್ನು ಪರಿಷ್ಕರಿಸಿದ್ದು, ಶೇ 7.6ರಷ್ಟು ‍ಬೆಳವಣಿಗೆ ದಾಖಲಿಸಲಿದೆ ಎಂದು ಹೇಳಿದೆ.  

ಕಳೆದ ಹಣಕಾಸು ವರ್ಷದ ಮೂರನೇ ತ್ರೈಮಾಸಿಕದಲ್ಲಿ ಶೇ 4.8ರಷ್ಟು ಬೆಳವಣಿಗೆ ಕಂಡಿದ್ದ, ತಯಾರಿಕಾ ವಲಯವು ಈ ಅವಧಿಯಲ್ಲಿ ಶೇ 11.5ರಷ್ಟು ಬೆಳವಣಿಗೆ ದಾಖಲಿಸಿದೆ. ಗಣಿಗಾರಿಕೆಯು ಶೇ 1.4ರಿಂದ ಶೇ 7.5ರಷ್ಟು ಬೆಳವಣಿಗೆ ಕಂಡಿದೆ. ನಿರ್ಮಾಣ ವಲಯವು ಶೇ 9.5ರಷ್ಟು  ಪ್ರಗತಿ ಸಾಧಿಸಿದೆ.‌

‌ಆದರೆ, ಕಳೆದ ಹಣಕಾಸು ವರ್ಷದ ಇದೇ ಅವಧಿಯಲ್ಲಿ ಶೇ 5.2ರಷ್ಟು ಬೆಳವಣಿಗೆ ಕಂಡಿದ್ದ ಕೃಷಿ ವಲಯವು, ಶೇ 0.8ರಷ್ಟು ಇಳಿಕೆ ದಾಖಲಿಸಿದೆ. ಉಳಿದಂತೆ ವಿದ್ಯುತ್‌, ಅನಿಲ, ನೀರು ಪೂರೈಕೆ ಸೇರಿದಂತೆ ಇತರೆ ಸೇವಾ ವಲಯಗಳು ಶೇ 8.7ರಿಂದ ಶೇ 9ರಷ್ಟು ಬೆಳವಣಿಗೆ ದಾಖಲಿಸಿವೆ.  

2022–23ರಲ್ಲಿ ₹269.50 ಲಕ್ಷ ಕೋಟಿ ಇದ್ದ ಜಿಡಿಪಿ ಗಾತ್ರವು 2023–24ರಲ್ಲಿ ₹293.90 ಕೋಟಿಗೆ ತಲುಪಲಿದೆ. ಕಳೆದ ಆರ್ಥಿಕ ವರ್ಷಕ್ಕೆ ಹೋಲಿಸಿದರೆ ಆರ್ಥಿಕತೆಯ ಗಾತ್ರವು ಶೇ 9.1ರಷ್ಟು ಏರಿಕೆಯಾಗಲಿದೆ ಎಂದು ವರದಿ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT