ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಷ್ಟ್ರೀಯ ಏಕಗವಾಕ್ಷಿ ವ್ಯವಸ್ಥೆ: ಪ್ಯಾನ್‌ ಬಳಸಿ ಅನುಮೋದನೆ

Last Updated 5 ಡಿಸೆಂಬರ್ 2022, 14:19 IST
ಅಕ್ಷರ ಗಾತ್ರ

ನವದೆಹಲಿ: ಕೇಂದ್ರ ಸರ್ಕಾರದ ಸಚಿವಾಲಯಗಳು ಹಾಗೂ ರಾಜ್ಯ ಸರ್ಕಾರದ ಇಲಾಖೆಗಳ ಅನುಮೋದನೆಯನ್ನು ಒಂದೆಡೆ ಒದಗಿಸುವ ಏಕಗವಾಕ್ಷಿ ವ್ಯವಸ್ಥೆಯ ಪ್ರಯೋಜನ ಪಡೆಯಲು ಉದ್ದಿಮೆಗಳು ಪ್ಯಾನ್ (ಶಾಶ್ವತ ಖಾತೆ ಸಂಖ್ಯೆ) ಮಾತ್ರ ಒದಗಿಸಿದರೆ ಸಾಕು ಎಂಬ ನಿಯಮ ಜಾರಿಗೆ ತರುವ ಬಗ್ಗೆ ಕೇಂದ್ರ ಸರ್ಕಾರ ಪರಿಶೀಲನೆ ನಡೆಸಿದೆ.

ಈಗ ಸರ್ಕಾರದ ಬೇರೆ ಬೇರೆ ಅನುಮೋದನೆಗಳನ್ನು ಪಡೆಯಲು ಇಪಿಎಫ್‌ಒ, ಇಎಸ್‌ಐಸಿ, ಜಿಎಸ್‌ಟಿಎನ್, ಟಿಐಎನ್‌, ಟಿಎಎನ್ ಮತ್ತು ಪ್ಯಾನ್ ಸೇರಿದಂತೆ 13ಕ್ಕೂ ಹೆಚ್ಚು ಗುರುತಿನ ಚೀಟಿಗಳನ್ನು ಬಳಸಲಾಗುತ್ತಿದೆ.

ಪ್ಯಾನ್‌ ಮಾತ್ರ ಬಳಸಿ ಅಗತ್ಯವಾದ ಎಲ್ಲ ಅನುಮೋದನೆಗಳನ್ನು ಪಡೆದುಕೊಳ್ಳುವುದನ್ನು ಸಾಧ್ಯವಾಗಿಸುವ ವಿಚಾರವಾಗಿ ಕೇಂದ್ರ ರೆವಿನ್ಯು ಇಲಾಖೆಯ ಜೊತೆ ಮಾತುಕತೆ ನಡೆಸಲಾಗಿದೆ ಎಂದು ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಪೀಯೂಷ್ ಗೋಯಲ್ ತಿಳಿಸಿದ್ದಾರೆ.

‘ಸರ್ಕಾರದ ಬಳಿ ಈಗಾಗಲೇ ಇರುವ ಯಾವುದಾದರೂ ಒಂದು ದತ್ತಾಂಶ ಕೋಶವನ್ನು ಮಾತ್ರ ಬಳಸುವತ್ತ ನಾವು ಹೆಜ್ಜೆ ಇರಿಸಿದ್ದೇವೆ. ಬಹುಶಃ, ಪ್ಯಾನ್‌ ಆ ಉದ್ದೇಶಕ್ಕೆ ಬಳಕೆ ಆಗಬಹುದು. ಪ್ಯಾನ್‌ ಬಳಸಿ ಕಂಪನಿಯ ಬಗ್ಗೆ ಕೆಲವು ಮೂಲಭೂತ ವಿವರಗಳನ್ನು, ಅದರ ನಿರ್ದೇಶಕರ ಹೆಸರನ್ನು, ಕಂಪನಿಯ ವಿಳಾಸವನ್ನು ಮತ್ತು ಇತರ ಹಲವು ಮಾಹಿತಿಯನ್ನು ಪಡೆಯಬಹುದು’ ಎಂದು ಗೋಯಲ್ ಅವರು ಸುದ್ದಿಗಾರರಿಗೆ ತಿಳಿಸಿದ್ದಾರೆ.

ರಾಷ್ಟ್ರೀಯ ಏಕಗವಾಕ್ಷಿ ವ್ಯವಸ್ಥೆಯು (ಎನ್‌ಎಸ್‌ಡಬ್ಲ್ಯುಎಸ್) ವಿವಿಧ ಸಚಿವಾಲಯಗಳಿಗೆ, ಇಲಾಖೆಗಳಿಗೆ ಒಂದೇ ಮಾಹಿತಿಯನ್ನು ಪ್ರತ್ಯೇಕವಾಗಿ ಸಲ್ಲಿಸಬೇಕಾದ ಅಗತ್ಯವನ್ನು ನಿವಾರಿಸುವ ಉದ್ದೇಶ ಹೊಂದಿದೆ. ಆ ಮೂಲಕ ಉದ್ಯಮ ಆರಂಭಿಸುವ ಹಾಗೂ ಉದ್ಯಮ ಮುನ್ನಡೆಸುವ ಪ್ರಕ್ರಿಯೆಯನ್ನು ಸರಳಗೊಳಿಸುವ ಉದ್ದೇಶವನ್ನು ಕೂಡ ಇದು ಹೊಂದಿದೆ.

ವ್ಯಕ್ತಿಯೊಬ್ಬರು ಪ್ಯಾನ್‌ ಸಂಖ್ಯೆ ನಮೂದಿಸಿ ಒಂದು ಏಕಗವಾಕ್ಷಿ ವ್ಯವಸ್ಥೆಯ ಮೂಲಕ ಒಂದು ಅರ್ಜಿ ಸಲ್ಲಿಸಿದಾಗ, ಇತರ ಪೂರಕ ಹಾಗೂ ಅಗತ್ಯ ಅರ್ಜಿಗಳು ‍ಆ ಪ್ಯಾನ್ ಸಂಖ್ಯೆಯ ಆಧಾರದಲ್ಲಿ ಸ್ವಯಂಚಾಲಿತವಾಗಿ ಭರ್ತಿಯಾಗುವ ಸೌಲಭ್ಯ ಒದಗಿಸಲು ಸಾಧ್ಯವಾಗಲಿದೆ ಎಂದು ಗೋಯಲ್ ಹೇಳಿದ್ದಾರೆ.

ಏಕಗವಾಕ್ಷಿಯ ವ್ಯವಸ್ಥೆಯ ಅಡಿಯಲ್ಲಿ ಈಗ ಕೇಂದ್ರ ಸರ್ಕಾರಕ್ಕೆ ಸೇರಿದ 26 ಸಚಿವಾಲಯ ಹಾಗೂ ಇಲಾಖೆಗಳ 248 ಬಗೆಯು ಅನುಮೋದನೆಗಳನ್ನು ಒದಗಿಸಲಾಗುತ್ತಿದೆ. ರಾಜ್ಯ ಸರ್ಕಾರಗಳು ಕೊಡುವ ಕೆಲವು ಅನುಮೋದನೆಗಳನ್ನೂ ಈ ವ್ಯವಸ್ಥೆಯ ಅಡಿಯಲ್ಲಿ ನೀಡಲಾಗುತ್ತಿದೆ.

ಕರ್ನಾಟಕ ಸೇರಿದಂತೆ 19 ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳು ಏಕಗವಾಕ್ಷಿ ವ್ಯವಸ್ಥೆಯನ್ನು ಅಳವಡಿಸಿಕೊಂಡು, ಅದಕ್ಕೆ ಪ್ರಾಯೋಗಿಕವಾಗಿ ಚಾಲನೆ ನೀಡಿವೆ. ಗೋಯಲ್ ಅವರು ಎನ್‌ಎಸ್‌ಡಬ್ಲ್ಯುಎಸ್‌ ಬಗ್ಗೆ ಪರಿಶೀಲನಾ ಸಭೆ ನಡೆಸಿದ ನಂತರ ಸುದ್ದಿಗಾರರ ಜೊತೆ ಮಾತನಾಡಿದರು.

ಪರವಾನಗಿ ನವೀಕರಣ ಸೇವೆಯನ್ನು ಕೂಡ ಈ ವ್ಯವಸ್ಥೆಯ ಅಡಿಯಲ್ಲಿ ತರಲಾಗುತ್ತದೆ. ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯ, ಗ್ರಾಹಕರ ವ್ಯವಹಾರಗಳ ಸಚಿವಾಲಯ, ಆಹಾರ ಮತ್ತು ಸಾರ್ವಜನಿಕ ವಿತರಣೆ, ಜವಳಿ ಸಚಿವಾಲಯ ಆರಂಭಿಕವಾಗಿ ಈ ಸೇವೆ ಒದಗಿಸಲು ಜೊತೆಯಾಗಿವೆ ಎಂದು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT