ಸೋಮವಾರ, 15 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎ.ಐ ದುರ್ಬಳಕೆ: ಮೋದಿ ಆತಂಕ

ಕೃತಕ ಬುದ್ಧಿಮತ್ತೆ ಆಧಾರಿತ ವಿಡಿಯೊ, ಫೋಟೊಕ್ಕೆ ವಾಟರ್‌ಮಾರ್ಕ್‌ ಅಗತ್ಯ
Published 29 ಮಾರ್ಚ್ 2024, 16:00 IST
Last Updated 29 ಮಾರ್ಚ್ 2024, 16:00 IST
ಅಕ್ಷರ ಗಾತ್ರ

ನವದೆಹಲಿ: ‘ಕೌಶಲ ರಹಿತ ಹಾಗೂ ಸೂಕ್ತ ತರಬೇತಿ ಇಲ್ಲದವರ ಕೈಗೆ ಕೃತಕ ಬುದ್ಧಿಮತ್ತೆಯ (ಎ.ಐ) ತಂತ್ರಜ್ಞಾನ ಸಿಕ್ಕಿದರೆ ದುರ್ಬಳಕೆಯಾಗುವ ಸಾಧ್ಯತೆ ಹೆಚ್ಚಿದೆ’ ಎಂದು ಪ್ರಧಾನಿ ನರೇಂದ್ರ ಮೋದಿ ಪ್ರತಿಪಾದಿಸಿದ್ದಾರೆ.

ಮೈಕ್ರೊಸಾಫ್ಟ್‌ ಸಹ ಸಂಸ್ಥಾಪಕ ಬಿಲ್‌ ಗೇಟ್ಸ್ ಅವರೊಟ್ಟಿಗೆ ಶುಕ್ರವಾರ ಪ್ರಧಾನಿ ನಿವಾಸದಲ್ಲಿ ನಡೆದ ಮಾತುಕತೆ ವೇಳೆ ಎ.ಐ ತಂತ್ರಜ್ಞಾನಕ್ಕೆ ಸಂಬಂಧಿಸಿದ ಅಪಾಯಗಳ ಬಗ್ಗೆ ಮೋದಿ ಬಿಡಿಸಿಟ್ಟರು. 

‘ತಪ್ಪು ಮಾಹಿತಿ ಹಾಗೂ ಡೀಪ್‌ಫೇಕ್‌ಗಳಿಂದ ಸಮಾಜಕ್ಕೆ ಅಪಾಯ ಕಟ್ಟಿಟ್ಟಬುತ್ತಿ. ಹಾಗಾಗಿ, ಎ.ಐ ತಂತ್ರಜ್ಞಾನ ಬಳಸಿ ಸೃಷ್ಟಿಸುವ ವಿಡಿಯೊ ಮತ್ತು ಫೋಟೊಗಳ ಮೇಲೆ ಸ್ಪಷ್ಟವಾಗಿ ವಾಟರ್‌ಮಾರ್ಕ್‌ ಹಾಕಬೇಕಿದೆ’ ಎಂದು ಹೇಳಿದರು.

ಈ ತಂತ್ರಜ್ಞಾನ ಬಳಸಿ ಸೃಷ್ಟಿಸುವ ಡೀಪ್‌ಫೇಕ್‌ ಕಂಟೆಂಟ್‌ಗಳನ್ನು ಗುರುತಿಸಬೇಕಿದೆ. ಜೊತೆಗೆ, ಅದನ್ನು ಸೃಷ್ಟಿಸುವ ಮೂಲದ ಬಗ್ಗೆಯೂ ಬಹಿರಂಗಪಡಿಸಬೇಕಿದೆ. ಈ ಬಗ್ಗೆ ಕ್ರಮಕೈಗೊಳ್ಳುವುದು ಈಗ ಅನಿವಾರ್ಯವಾಗಿದೆ ಎಂದು ಹೇಳಿದರು.

‘ನಾವು ಯಾವುದನ್ನು ಮಾಡಬೇಕು ಮತ್ತು ಯಾವುದನ್ನು ಮಾಡಬಾರದು ಎಂಬ ಬಗ್ಗೆ ಪ್ರಕಟಿಸಬೇಕು. ಈ ನಿಟ್ಟಿನಲ್ಲಿ ಗಂಭೀರವಾಗಿ ಚಿಂತಿಸುವ ಅಗತ್ಯವಿದೆ. ಕೃತಕ ಬುದ್ಧಿಮತ್ತೆ ತಂತ್ರಜ್ಞಾನದ ದುರ್ಬಳಕೆಯನ್ನು ತಡೆಯಬೇಕಿದೆ ಎಂದು ಹೇಳಿದರು.

‘‌ಎ.ಐ ತಂತ್ರಜ್ಞಾನ ಬಳಸಿಕೊಂಡು ನನ್ನ ಧ್ವನಿಯನ್ನೇ ದುರುಪಯೋಗ ಪಡಿಸಿಕೊಳ್ಳಬಹುದು. ಆರಂಭದಲ್ಲಿ ಇಂತಹ ವರ್ತನೆಯು ಜನರನ್ನು ವಂಚಿಸುತ್ತದೆ. ಜೊತೆಗೆ ತಪ್ಪುದಾರಿಗೆ ಎಳೆಯುತ್ತದೆ. ಅಲ್ಲದೆ, ಸಮಾಜದಲ್ಲಿ ಕೋಲಾಹಲ ಸೃಷ್ಟಿಗೂ ಕಾರಣವಾಗುತ್ತದೆ’ ಎಂದು ಎಚ್ಚರಿಸಿದರು.

ಜನರು ಎ.ಐ ಅನ್ನು ಮ್ಯಾಜಿಕ್‌ ಸಾಧನವಾಗಿ ಅಥವಾ ಸೋಮಾರಿತನದಿಂದ ಬಳಸಿದರೆ ಗಂಭೀರ ಅನ್ಯಾಯಕ್ಕೆ ಎಡೆಮಾಡಿಕೊಡುತ್ತದೆ.‌ ಎ.ಐ ಮತ್ತು ಚಾಟ್‌ಜಿಪಿಟಿಯೊಂದಿಗೆ ಸ್ಪರ್ಧಿಸಿ ಅವುಗಳ ಸಾಮರ್ಥ್ಯವನ್ನು ಮೀರಲು ಶ್ರಮಿಸಬೇಕು ಎಂದು ಹೇಳಿದರು. 

ಇದೇ ವೇಳೆ ಮೋದಿ ಅವರು ನಮೊ ಆ್ಯಪ್‌ ಮೂಲಕ ಸೆಲ್ಫಿ ತೆಗೆದುಕೊಳ್ಳುವಂತೆ ಬಿಲ್‌ ಗೇಟ್ಸ್‌ ಅವರಿಗೆ ಕೋರಿದರು. ಈ ಆ್ಯಪ್‌ನಲ್ಲಿ ಅಳವಡಿಸಿರುವ ಎ.ಐ ಮತ್ತು ಮುಖ ಗುರುತಿಸುವಿಕೆ ತಂತ್ರಜ್ಞಾನದ ಬಗ್ಗೆ ವಿವರಿಸಿದರು. ಭಾರತದ ತಂತ್ರಜ್ಞಾನ ಕುರಿತು ಬಿಲ್‌ ಗೇಟ್ಸ್‌ ಮೆಚ್ಚುಗೆ ವ್ಯಕ್ತಪಡಿಸಿದರು.

ಕೃಷಿ ಶಿಕ್ಷಣ ಆರೋಗ್ಯ ಕ್ಷೇತ್ರದಲ್ಲಿ ತಂತ್ರಜ್ಞಾನದ ಪಾತ್ರ ಹಿರಿದು. ಎಲ್ಲರಿಗೂ ಅದರ ನೆರವು ಸಿಗಬೇಕಿದೆ. ಅದಕ್ಕಾಗಿ ಹಳ್ಳಿಗಳಿಗೆ ತಂತ್ರಜ್ಞಾನ ಕೊಂಡೊಯ್ಯಲು ಶ್ರಮಿಸುತ್ತಿದ್ದೇವೆ
ನರೇಂದ್ರ ಮೋದಿ ಪ್ರಧಾನಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT