ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮ್ಯೂಚುಯಲ್ ಫಂಡ್‌ನಲ್ಲಿ ಹೂಡಿದ ಧನ ವೃದ್ಧಿ ಹೇಗೆ?

Published 31 ಮಾರ್ಚ್ 2024, 23:37 IST
Last Updated 31 ಮಾರ್ಚ್ 2024, 23:37 IST
ಅಕ್ಷರ ಗಾತ್ರ

ನಾನು ಈಕ್ವಿಟಿ ಮ್ಯೂಚುಯಲ್ ಫಂಡ್‌ನಲ್ಲಿ ಹೂಡಿಕೆ ಮಾಡಲು ಸಿದ್ಧ. ಆದರೆ, ಮ್ಯೂಚುಯಲ್ ಫಂಡ್ ಕಂಪನಿಗಳು ನಮ್ಮ ಹಣದೊಂದಿಗೆ ಏನು ಮಾಡುತ್ತವೆ? ನಾವು ತೊಡಗಿಸಿದ ಹಣ ಹೆಚ್ಚಳವಾಗುವಂತೆ ಹೇಗೆ ಕೆಲಸ ಮಾಡುತ್ತವೆ? ಶೇ 12ರಿಂದ ಶೇ 14ರಷ್ಟು ಅಥವಾ ಅದಕ್ಕಿಂತ ಹೆಚ್ಚಿಗೆ ಲಾಭಾಂಶವನ್ನು ಹೇಗೆ ತಂದುಕೊಡುತ್ತವೆ? ಹೀಗೆ ಹತ್ತಾರು ಪ್ರಶ್ನೆಗಳು ನನ್ನಲ್ಲಿವೆ ಎಂದು ಅನೇಕರು ಹೇಳುತ್ತಾರೆ. ಅವರೆಲ್ಲರ ಗೊಂದಲ, ಅನುಮಾನಗಳಿಗೆ ಉತ್ತರ ಕೊಡುವ ಪ್ರಯತ್ನ ಇಲ್ಲಿದೆ.

ಈಕ್ವಿಟಿ ಮ್ಯೂಚುಯಲ್ ಫಂಡ್‌ಗಳಲ್ಲಿ ಎಷ್ಟು ವಿಧ?:

ಈಕ್ವಿಟಿ ಮ್ಯೂಚುಯಲ್ ಫಂಡ್‌ಗಳು ಹೂಡಿಕೆದಾರರ ಬಹುಪಾಲು ಹಣವನ್ನು ಷೇರು ಮಾರುಕಟ್ಟೆಯಲ್ಲಿ ಇರುವ ಕಂಪನಿಗಳ ಮೇಲೆ ತೊಡಗಿಸುತ್ತವೆ. ಈ ಫಂಡ್‌ಗಳಲ್ಲಿ ಲಾರ್ಜ್ ಕ್ಯಾಪ್ ಫಂಡ್, ಮಿಡ್ ಕ್ಯಾಪ್ ಫಂಡ್, ಲಾರ್ಜ್ ಆ್ಯಂಡ್‌ ಮಿಡ್ ಕ್ಯಾಪ್ ಫಂಡ್, ಫ್ಲೆಕ್ಸಿ ಕ್ಯಾಪ್ ಫಂಡ್, ಮಲ್ಟಿಕ್ಯಾಪ್ ಫಂಡ್, ಸ್ಮಾಲ್ ಕ್ಯಾಪ್ ಫಂಡ್, ಇಎಲ್ಎಸ್ಎಸ್ ಫಂಡ್, ಡಿವಿಡೆಂಡ್ ಈಲ್ಡ್ ಫಂಡ್, ವ್ಯಾಲ್ಯೂ ಫಂಡ್, ಕಾಂಟ್ರಾ ಫಂಡ್, ಪೋಕಸ್ಟ್ ಫಂಡ್ ಮತ್ತು ಸೆಕ್ಟೋರಲ್ ಥಿಮ್ಯಾಟಿಕ್ ಫಂಡ್ ಸೇರಿ ಒಟ್ಟು 12 ಬಗೆಯ ಫಂಡ್‌ಗಳಿವೆ.

ಈಕ್ವಿಟಿ ಮ್ಯೂಚುಯಲ್ ಫಂಡ್‌ನಲ್ಲಿ ಹೂಡಿಕೆ ನಿಯಮ:

ಈಕ್ವಿಟಿ ಮ್ಯೂಚಯಲ್ ಫಂಡ್‌ಗಳಲ್ಲಿ 12 ಮಾದರಿಗಳಿದ್ದು, ಪ್ರತಿಯೊಂದಕ್ಕೂ ಪ್ರತ್ಯೇಕ ಹೂಡಿಕೆಯ ನಿಯಮವಿದೆ. ಭಾರತೀಯ ಷೇರುಪೇಟೆ ನಿಯಂತ್ರಣ ಮಂಡಳಿಯು (ಸೆಬಿ) ಇದನ್ನು ಜಾರಿಗೆ ತಂದಿದೆ.

ಲಾರ್ಜ್ ಕ್ಯಾಪ್ ಮ್ಯೂಚುಯಲ್ ಫಂಡ್‌ಗಳು ಹೂಡಿಕೆದಾರರ ಶೇ 80ರಷ್ಟು ಹಣವನ್ನು ಷೇರು ಮಾರುಕಟ್ಟೆಯಲ್ಲಿರುವ 100 ಅಗ್ರಮಾನ್ಯ ಲಾರ್ಜ್ ಕ್ಯಾಪ್ ಕಂಪನಿಗಳ ಮೇಲೆ ತೊಡಗಿಸಬೇಕಾಗುತ್ತದೆ. ಇನ್ನುಳಿದ ಶೇ 20ರಷ್ಟು ಹಣವನ್ನು ಷೇರು ಮಾರುಕಟ್ಟೆ, ಸರ್ಕಾರಿ ಸಾಲ ಪತ್ರಗಳು ಹಾಗೂ ಮತ್ತಿತರ ಸುರಕ್ಷಿತ ಹೂಡಿಕೆಗಳಲ್ಲಿ ಹಾಕುವ ಬಗ್ಗೆ ಫಂಡ್ ಮ್ಯಾನೇಜರ್ ತೀರ್ಮಾನ ತೆಗೆದುಕೊಳ್ಳಬಹುದು.

ಮಿಡ್ ಕ್ಯಾಪ್ ಮ್ಯೂಚುಯಲ್ ಫಂಡ್‌ಗಳು ಹೂಡಿಕೆದಾರರ ಶೇ 65ರಷ್ಟು ಹಣವನ್ನು ಷೇರು ಮಾರುಕಟ್ಟೆಯಲ್ಲಿ 101ರಿಂದ 250ನೇ ಕ್ರಮಾಂಕದಲ್ಲಿ ಬರುವ ಮಧ್ಯಮ ಗಾತ್ರದ (ಮಿಡ್ ಕ್ಯಾಪ್) ಕಂಪನಿಗಳ ಮೇಲೆ ಹೂಡಬೇಕಾಗುತ್ತದೆ. ಬಾಕಿ ಶೇ 35ರಷ್ಟು ಹಣವನ್ನು ಷೇರು ಮಾರುಕಟ್ಟೆಯ ಸರ್ಕಾರಿ ಸಾಲ ಪತ್ರಗಳ ಮೇಲೆ ತೊಡಗಿಸಲು ಅವಕಾಶವಿದೆ.

ಸ್ಮಾಲ್ ಕ್ಯಾಪ್ ಮ್ಯೂಚುಯಲ್ ಫಂಡ್‌ಗಳು ಹೂಡಿಕೆದಾರರ ಶೇ 65ರಷ್ಟು ಹಣವನ್ನು ಷೇರು ಮಾರುಕಟ್ಟೆಯಲ್ಲಿ ಇರುವ 251ರ ನಂತರದ ಕ್ರಮಾಂಕದಲ್ಲಿ ಬರುವ ಸ್ಮಾಲ್ ಕ್ಯಾಪ್ ಕಂಪನಿಗಳ ಮೇಲೆ ಹೂಡಬೇಕಾಗುತ್ತದೆ. ಲಾರ್ಜ್ ಆ್ಯಂಡ್‌ ಮಿಡ್ ಕ್ಯಾಪ್ ಮ್ಯೂಚುಯಲ್ ಫಂಡ್‌ನಲ್ಲಿ ಹೂಡಿಕೆದಾರರ ಶೇ 35ರಷ್ಟು ಹಣವನ್ನು ಲಾರ್ಜ್ ಕ್ಯಾಪ್ ಕಂಪನಿಗಳ ಮೇಲೆ ಮತ್ತು ಶೇ 35ರಷ್ಟು ಹಣವನ್ನು ಮಿಡ್ ಕ್ಯಾಪ್ ಕಂಪನಿಗಳ ಮೇಲೆ ಹಾಕಬೇಕಾಗುತ್ತದೆ.

ಫ್ಲೆಕ್ಸಿ ಕ್ಯಾಪ್ ಫಂಡ್‌ಗಳು ಒಟ್ಟಾರೆಯಾಗಿ ಹೂಡಿಕೆದಾರರ ಶೇ 65ರಷ್ಟು ಹಣವನ್ನು ಷೇರು ಮಾರುಕಟ್ಟೆಯಲ್ಲಿ ತೊಡಗಿಸಬೇಕು. ಫ್ಲೆಕ್ಸಿ ಕ್ಯಾಪ್ ಫಂಡ್‌ಗಳಲ್ಲಿ ಲಾರ್ಜ್ ಕ್ಯಾಪ್, ಮಿಡ್ ಕ್ಯಾಪ್ ಅಥವಾ ಸ್ಮಾಲ್ ಕ್ಯಾಪ್ ಕಂಪನಿಗಳಲ್ಲಿ ಹೂಡಿಕೆಗೆ ಅವಕಾಶವಿದೆ. ಯಾವುದರಲ್ಲಿ ಎಷ್ಟು ಹೂಡಿಕೆ ಮಾಡಬೇಕು ಎನ್ನುವುದು ಫಂಡ್ ಮ್ಯಾನೇಜರ್‌ನ ಆಯ್ಕೆಯಾಗಿರುತ್ತದೆ.

ಮಲ್ಟಿ ಕ್ಯಾಪ್ ಫಂಡ್‌ಗಳು ಹೂಡಿಕೆದಾರರ ಶೇ 75ರಷ್ಟು ಮೊತ್ತವನ್ನು ಷೇರು ಮಾರುಕಟ್ಟೆ ಆಧಾರಿತ ಹೂಡಿಕೆಗಳಲ್ಲಿ ಇಡಬೇಕು. ಇಎಲ್ಎಸ್ಎಸ್ ಫಂಡ್‌ಗಳು ಹೂಡಿಕೆದಾರರ ಶೇ 80ರಷ್ಟು ಹಣವನ್ನು ಷೇರು ಮಾರುಕಟ್ಟೆಯಲ್ಲಿ ಹೂಡಬೇಕು. ಲಾರ್ಜ್, ಮಿಡ್, ಸ್ಮಾಲ್ ಹೀಗೆ ಯಾವ ಮಾದರಿಯ ಫಂಡ್ ಕಂಪನಿಯನ್ನಾದರೂ ಇಲ್ಲಿ ಆಯ್ಕೆ ಮಾಡಿಕೊಳ್ಳುವ ಸ್ವಾತಂತ್ರ್ಯ ಫಂಡ್ ಮ್ಯಾನೇಜರ್‌ಗೆ ಇರುತ್ತದೆ.

ಡಿವಿಡೆಂಡ್ ಈಲ್ಡ್ ಮ್ಯೂಚುಯಲ್ ಫಂಡ್‌ಗಳು ಶೇ 65ರಷ್ಟು ಹಣವನ್ನು ಷೇರು ಮಾರುಕಟ್ಟೆಯಲ್ಲಿ ಹೆಚ್ಚು ಡಿವಿಡೆಂಡ್ ಕೊಡುವ ಕಂಪನಿಗಳ ಮೇಲೆ ತೊಡಗಿಸಬೇಕಾಗುತ್ತದೆ. ವ್ಯಾಲ್ಯೂ ಮ್ಯೂಚುಯಲ್ ಫಂಡ್‌ನಲ್ಲಿ ಹೂಡಿಕೆದಾರರ ಶೇ 65ರಷ್ಟು ಹಣವನ್ನು ಆಂತರಿಕ ಮೌಲ್ಯ ಹೊಂದಿರುವ, ಭವಿಷ್ಯದಲ್ಲಿ ಬೆಳವಣಿಗೆಯ ಮುನ್ನೋಟವಿರುವ ಕಂಪನಿಗಳಲ್ಲಿ ಹೂಡಿಕೆ ಮಾಡಬೇಕಾಗುತ್ತದೆ.

ಕಾಂಟ್ರಾ ಮ್ಯೂಚುಯಲ್ ಫಂಡ್‌ನಲ್ಲಿ ಷೇರು ಮಾರುಕಟ್ಟೆಯ ಲೆಕ್ಕಾಚಾರವನ್ನು ಮೀರಿ ಉತ್ತಮ ಲಾಭಾಂಶ ಕೊಡುವ ಕಂಪನಿಗಳನ್ನು ಆಯ್ಕೆ ಮಾಡಿ ಶೇ 65ರಷ್ಟು ಹಣವನ್ನು ಆ ಕಂಪನಿಗಳ ಮೇಲೆ ತೊಡಗಿಸಬೇಕಾಗುತ್ತದೆ.

ಫೋಕಸ್ಡ್ ಮ್ಯೂಚುಯಲ್ ಫಂಡ್‌ನಲ್ಲಿ ಶೇ 65ರಷ್ಟು ಹಣವನ್ನು ಷೇರು ಮಾರುಕಟ್ಟೆಯಲ್ಲಿ ಇರುವ ಉತ್ತಮ ಕಂಪನಿಗೆಳ ಮೇಲೆ ಹೂಡಿಕೆ ಮಾಡಬೇಕಾಗುತ್ತದೆ. ಸೆಕ್ಟೋರಲ್ ಥಿಮ್ಯಾಟಿಕ್ ಫಂಡ್‌ನಲ್ಲಿ ನಿರ್ದಿಷ್ಟ ವಲಯದ (ಉದಾಹರಣೆಗೆ ಮಾಹಿತಿ ತಂತ್ರಜ್ಞಾನ, ಬ್ಯಾಂಕಿಂಗ್) ಕಂಪನಿಗಳ ಮೇಲೆ ಶೇ 80ರಷ್ಟು ದುಡ್ಡು ಹಾಕಬೇಕಾಗುತ್ತದೆ.

ಹಣ ಹೂಡಿಕೆ ಹೇಗೆ?:

ಮ್ಯೂಚುಯಲ್ ಫಂಡ್‌ಗಳು ನಮ್ಮ ಹಣವನ್ನು ಹೇಗೆ ಹೂಡಿಕೆ ಮಾಡುತ್ತವೆ ಎನ್ನುವುದನ್ನು ಪರಾಗ್ ಪರೀಕ್ ಫ್ಲೆಕ್ಸಿ ಕ್ಯಾಪ್ ಫಂಡ್ ಅನ್ನು ಉದಾಹರಣೆಯನ್ನಾಗಿಟ್ಟುಕೊಂಡು ಅರ್ಥ ಮಾಡಿಕೊಳ್ಳೋಣ. ಪರಾಗ್ ಪರೀಕ್ ಫ್ಲೆಕ್ಸಿ ಕ್ಯಾಪ್ ಫಂಡ್ ಅತಿದೊಡ್ಡ ಫ್ಲೆಕ್ಸಿ ಕ್ಯಾಪ್ ಫಂಡ್ ಆಗಿದ್ದು, ಸುಮಾರು ₹59,000 ಕೋಟಿ ಮೊತ್ತದ ಹಣವನ್ನು ಹೂಡಿಕೆದಾರರು ತೊಡಗಿಸಿದ್ದಾರೆ. ಫ್ಲೆಕ್ಸಿ ಕ್ಯಾಪ್ ಫಂಡ್‌ಗಳು ಲಾರ್ಜ್, ಮಿಡ್ ಅಥವಾ ಸ್ಮಾಲ್ ಕ್ಯಾಪ್ ಕಂಪನಿಗಳ ಮೇಲೆ ಹೂಡಿಕೆ ಮಾಡಬಹುದು. ಇದಕ್ಕೆ ಯಾವುದೇ ನಿರ್ಬಂಧ ಇರುವುದಿಲ್ಲ.

ಫಂಡ್ ಮ್ಯಾನೇಜರ್ ತಮ್ಮ ವಿವೇಚನೆ ಬಳಸಿ ತೀರ್ಮಾನ ಕೈಗೊಳ್ಳಬಹುದು. ಈ ಫಂಡ್‌ನಲ್ಲಿ ₹10 ಸಾವಿರ ಹೂಡಿಕೆ ಮಾಡಿದ್ದೀರಿ ಎಂದು ಭಾವಿಸಿ. ₹10 ಸಾವಿರದಲ್ಲಿ ₹5,800 ಲಾರ್ಜ್ ಕ್ಯಾಪ್ ಕಂಪನಿಗಳ ಮೇಲೆ, ₹655 ಮಿಡ್ ಕ್ಯಾಪ್ ಕಂಪನಿಗಳ ಮೇಲೆ ಮತ್ತು ₹775 ಸ್ಮಾಲ್ ಕ್ಯಾಪ್ ಕಂಪನಿಗಳ ಮೇಲೆ ಮತ್ತು ₹2,770 ನಗದಿನ ರೂಪದಲ್ಲಿ ಇರುತ್ತದೆ.

ಫೆಬ್ರುವರಿ 29ರ ಮಾಹಿತಿಯಂತೆ ಪರಾಗ್ ಪರೀಗ್ ಫ್ಲೆಕ್ಸಿ ಕ್ಯಾಪ್ ಫಂಡ್ ಒಟ್ಟು 46 ಷೇರುಗಳ ಮೇಲೆ ಹೂಡಿಕೆ ಮಾಡಿದೆ. ಎಚ್‌ಡಿಎಫ್‌ಸಿ ಬ್ಯಾಂಕ್, ಬಜಾಜ್ ಹೋಲ್ಡಿಂಗ್ಸ್ ಆ್ಯಂಡ್‌ ಇನ್ವೆಸ್ಟ್‌ಮೆಂಟ್ಸ್ ಲಿಮಿಟೆಡ್‌, ಪವರ್ ಗ್ರಿಡ್ ಕಾರ್ಪೊರೇಷನ್ ಆಫ್ ಇಂಡಿಯಾ, ಮಾರುತಿ ಸುಜುಕಿ, ಎಚ್‌ಸಿಎಲ್ ಟೆಕ್ನಾಲಜೀಸ್ ಹೀಗೆ ಬೇರೆ ಬೇರೆ ಕಂಪನಿಗಳ ಮೇಲೆ ಈ ಫಂಡ್ ಹೂಡಿಕೆ ಮಾಡಿದೆ.

ಅಲ್ಲದೆ ಗೂಗಲ್, ಅಮೆಜಾನ್, ಫೇಸ್‌ಬುಕ್ ಮತ್ತು ಮೈಕ್ರೋಸಾಫ್ಟ್ನಂತಹ ಜಾಗತಿಕ ಕಂಪನಿಗಳ ಮೇಲೂ ಈ ಫಂಡ್ ಹೂಡಿದೆ. ಅಂದರೆ ಒಂದು ಮ್ಯೂಚುಯಲ್ ಫಂಡ್‌ನಲ್ಲಿ ಹೂಡಿಕೆ ಮಾಡಿದರೆ ಹತ್ತಾರು ಕಂಪನಿಗಳ ಮೇಲೆ ಹೂಡಿಕೆ ಮಾಡಿದಂತೆ ಆಗುತ್ತದೆ. ಹೂಡಿಕೆಯಲ್ಲಿ ವೈವಿಧ್ಯತೆ ಕಾಯ್ದುಕೊಳ್ಳಲು ಸಾಧ್ಯವಾಗುತ್ತದೆ. ಕಂಪನಿಗಳು ಪ್ರಗತಿ ಸಾಧಿಸಿದಂತೆ ಫಂಡ್‌ಗೆ ಲಾಭವಾಗುತ್ತದೆ. ಆ ಲಾಭ ಮ್ಯೂಚುಯಲ್ ಫಂಡ್ ಹೂಡಿಕೆದಾರರಿಗೂ ಸಿಗುತ್ತದೆ.

(ಲೇಖಕ: ಚಾರ್ಟರ್ಡ್ ಅಕೌಂಟೆಂಟ್)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT