ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾವೇರಿ: ಮಂಡಳಿ ಮಾದರಿ ಪ್ರಾಧಿಕಾರ ಸ್ಥಾಪನೆ ಇಂಗಿತ

Last Updated 14 ಮೇ 2018, 19:30 IST
ಅಕ್ಷರ ಗಾತ್ರ

ನವದೆಹಲಿ: ಕಾವೇರಿ ನದಿ ನೀರು ಹಂಚಿಕೆ ಕುರಿತ ಯೋಜನೆ (ಸ್ಕೀಂ) ರೂಪಿಸಲು ಸಿದ್ಧಪಡಿಸಲಾದ ‘ಕಾವೇರಿ ನೀರು ನಿರ್ವಹಣಾ ಯೋಜನೆ– 2018’ರ ಕರಡನ್ನು ಕೇಂದ್ರ ಸರ್ಕಾರವು ಸೋಮವಾರ ಸುಪ್ರೀಂ ಕೋರ್ಟ್‌ಗೆ ಸಲ್ಲಿಸಿದೆ.

ಕಾವೇರಿ ಜಲವಿವಾದ ನ್ಯಾಯಮಂಡಳಿ ಸೂಚಿಸಿದ್ದ ನದಿ ನೀರು ನಿರ್ವಹಣಾ ಮಂಡಳಿಯನ್ನೇ ಹೋಲುವ ಪ್ರಾಧಿಕಾರ ಸ್ಥಾಪನೆಗೆ ಮುಂದಾಗಿರುವ ಕೇಂದ್ರ ಸರ್ಕಾರದ ಈ ನಡೆಯಿಂದಾಗಿ, ಮಂಡಳಿ ರಚನೆಗೆ ವಿರೋಧ ವ್ಯಕ್ತಪಡಿಸಿದ್ದ ಕರ್ನಾಟಕಕ್ಕೆ ತೀವ್ರ ಹಿನ್ನಡೆ ಆದಂತಾಗಿದೆ.

ನೀರು ಹಂಚಿಕೆಗಾಗಿ ಅನ್ವಯವಾಗುವ ನಿಯಮ– ನಿಬಂಧನೆಗಳು ಮಂಡಳಿಯ ಮಾದರಿಯಲ್ಲೇ ಇರುವುದು ಸ್ಪಷ್ಟವಾಗಿದ್ದು, ಕಾವೇರಿ ನೀರಿನ ಮೇಲಿನ ಸಂಪೂರ್ಣ ಅಧಿಕಾರ ಕೇಂದ್ರ ಸರ್ಕಾರದ ವ್ಯಾಪ್ತಿಗೆ ಒಳಪಡಲಿದೆ. ಆದರೆ, ಜಲಾಶಯಗಳ ನಿರ್ವಹಣೆಯ ಜವಾಬ್ದಾರಿಯನ್ನು ಆಯಾ ರಾಜ್ಯ ಸರ್ಕಾರಗಳಿಗೇ ವಹಿಸಲಾಗಿದೆ.

ಯೋಜನೆಗೆ ಸಂಬಂಧಿಸಿದ ರೂಪುರೇಷೆ ಒಳಗೊಂಡ 14 ಪುಟಗಳ ಕರಡನ್ನು ಮುಖ್ಯ ನ್ಯಾಯಮೂರ್ತಿ ದೀಪಕ್‌ ಮಿಶ್ರಾ ಅವರಿದ್ದ ತ್ರಿಸದಸ್ಯ ಪೀಠಕ್ಕೆ, ಕೇಂದ್ರದ ಜಲಸಂಪನ್ಮೂಲ ಸಚಿವಾಲಯದ ಕಾರ್ಯದರ್ಶಿ ಉಪೇಂದ್ರ ಪ್ರಸಾದ್‌ ಸಿಂಗ್‌ ಖುದ್ದಾಗಿ ಸಲ್ಲಿಸಿದರು.

ಯೋಜನೆಯ ಕರಡಿನಲ್ಲಿ ಇರುವ ಅಂಶಗಳು ಹಾಗೂ ಅವುಗಳ ಪ್ರಾಮುಖ್ಯ ಕುರಿತು ಕಣಿವೆ ವ್ಯಾಪ್ತಿಯ ಎಲ್ಲ ರಾಜ್ಯಗಳ ಅಭಿಪ್ರಾಯ ಪಡೆಯುವ ಸಂಬಂಧ ಇದೇ 16ರಂದು ವಿಚಾರಣೆ ನಡೆಸಲು ನಿರ್ಧರಿಸಿರುವ ಪೀಠ, ‘ಕೋರ್ಟ್‌ ತೀರ್ಪಿನ ಅನುಷ್ಠಾನಕ್ಕೆ ವಿಳಂಬ ನೀತಿ ಅನುಸರಿಸಲಾಗಿದೆ’ ಎಂದು ದೂರಿ ಕೇಂದ್ರದ ವಿರುದ್ಧ ತಮಿಳುನಾಡು ಸಲ್ಲಿಸಿದ್ದ ನ್ಯಾಯಾಂಗ ನಿಂದನೆ ಅರ್ಜಿಯನ್ನೂ ಇತ್ಯರ್ಥಪಡಿಸಿದ್ದಾಗಿ ತಿಳಿಸಿತು.

ಪ್ರಾಧಿಕಾರದಲ್ಲಿ ಇರುವವರು ಯಾರು?
ನವದೆಹಲಿ:
ಕಾವೇರಿ ಜಲವಿವಾದ ನ್ಯಾಯಮಂಡಳಿ ಶಿಫಾರಸು ಮಾಡಿದ್ದ ನಿರ್ವಹಣಾ ಮಂಡಳಿ ಮಾದರಿಯಲ್ಲಿಯೇ ಈ ಪ್ರಾಧಿಕಾರವೂ ಒಟ್ಟು 9 ಸದಸ್ಯರನ್ನು ಒಳಗೊಳ್ಳಲಿದೆ.

ಈ ಪ್ರಾಧಿಕಾರದ ವಾರ್ಷಿಕ ಖರ್ಚು– ವೆಚ್ಚದ ಜವಾಬ್ದಾರಿಯನ್ನು ಕಣಿವೆ ವ್ಯಾಪ್ತಿಯ ಎಲ್ಲ ರಾಜ್ಯಗಳಿಗೆ ಹಂಚಿಕೆ ಮಾಡಲಾಗಿದ್ದು, ಕಾವೇರಿ ನೀರಿನಲ್ಲಿ ಸಿಂಹಪಾಲನ್ನು ಹೊಂದಿರುವ ಕರ್ನಾಟಕ ಮತ್ತು ತಮಿಳುನಾಡು ಸರ್ಕಾರಗಳು ಶೇ 40ರಷ್ಟು ವೆಚ್ಚ ಭರಿಸುವಂತೆ ಸೂಚಿಸಲಾಗಿದೆ.

ಹಿರಿಯ ಎಂಜಿನಿಯರ್ ಅಥವಾ ಜಲಸಂಪನ್ಮೂಲ ಇಲಾಖೆಯ ಕಾರ್ಯದರ್ಶಿ ಅಥವಾ ಹೆಚ್ಚುವರಿ ಕಾರ್ಯದರ್ಶಿ ಮಟ್ಟದ ಹಿರಿಯ ಐಎಎಸ್ ಅಧಿಕಾರಿಯೊಬ್ಬರು ಈ ಪ್ರಾಧಿಕಾರದ ಅಧ್ಯಕ್ಷರಾಗಿಲಿದ್ದಾರೆ.

ಅಧ್ಯಕ್ಷರ ಅಧಿಕಾರ ಅವಧಿಯು 5 ವರ್ಷ ಅಥವಾ 65 ವರ್ಷ ವಯಸ್ಸು ಆಗುವವರೆಗೆ ಇರಲಿದೆ. ಕೇಂದ್ರ ಸರ್ಕಾರವು ತನ್ನ ಇಬ್ಬರು ಕಾಯಂ ಸದಸ್ಯರನ್ನು 3 ವರ್ಷ ಅಥವಾ 5 ವರ್ಷದ ಅವಧಿಗೆ ನೇಮಿಸಲಿದ್ದು, ಕೇಂದ್ರ ಜಲ ಸಂಪನ್ಮೂಲ ಇಲಾಖೆಯ ಜಂಟಿ ಕಾರ್ಯದರ್ಶಿ ಶ್ರೇಣಿಯ ಇಬ್ಬರು ಅರೆಕಾಲಿಕ ಸದಸ್ಯರೂ ಪ್ರಾಧಿಕಾರದಲ್ಲಿ ಇರಲಿದ್ದಾರೆ. ಕಣಿವೆ ವ್ಯಾಪ್ತಿಯ ನಾಲ್ಕೂ ರಾಜ್ಯಗಳ ಜಲಸಂಪನ್ಮೂಲ ಇಲಾಖೆಯ ಕಾರ್ಯದರ್ಶಿಗಳು ಸದಸ್ಯತ್ವ ಪಡೆಯಲಿದ್ದಾರೆ.

ಈ ಪ್ರಾಧಿಕಾರದ ಅಧೀನದಲ್ಲೇ ಕಾವೇರಿ ನೀರು ನಿಯಂತ್ರಣ ಸಮಿತಿಯೂ ಕಾರ್ಯ ನಿರ್ವಹಿಸಲಿದೆ. ಪ್ರಾಧಿಕಾರದ ಕಾಯಂ ಸದಸ್ಯರೊಬ್ಬರು ಈ ಸಮಿತಿಯ ಮುಖ್ಯಸ್ಥರಾಗಿ ಕಾರ್ಯ ನಿರ್ವಹಿಸಲಿದ್ದಾರೆ. ಪ್ರಾಧಿಕಾರದ ಕಾರ್ಯದರ್ಶಿ, ನಾಲ್ಕೂ ರಾಜ್ಯಗಳ ಮುಖ್ಯ ಎಂಜಿನಿಯರ್‌ಗಳು, ಭಾರತೀಯ ಹವಾಮಾನ ಇಲಾಖೆ, ಕೇಂದ್ರ ಜಲ ಆಯೋಗ, ಕೃಷಿ ಇಲಾಖೆ ಮತ್ತು ರೈತ ಕಲ್ಯಾಣ ಇಲಾಖೆಗಳ ತಲಾ ಒಬ್ಬ ಅಧಿಕಾರಿ ಈ ಸಮಿತಿಯ ಸದಸ್ಯರಾಗಲಿದ್ದಾರೆ.

ಅಲ್ಲದೆ, ಪ್ರಾಧಿಕಾರವು ಅಗತ್ಯಕ್ಕೆ ಅನುಗುಣವಾಗಿ ಮತ್ತೆರಡು ಪ್ರತ್ಯೇಕ ಉಪ ಸಮಿತಿಗಳನ್ನು ನೇಮಕ ಮಾಡಿಕೊಳ್ಳುವ ಅಧಿಕಾರ ಹೊಂದಿದೆ.

ಪ್ರಾಧಿಕಾರದ ಅಧಿಕಾರ ವ್ಯಾಪ್ತಿ

* ಪ್ರಾಧಿಕಾರದ ಪ್ರಧಾನ ಕಚೇರಿ ಬೆಂಗಳೂರಿನಲ್ಲಿ

* ನೀರಿನ ಸಂಗ್ರಹ, ಹಂಚಿಕೆ, ನಿಯಂತ್ರಣದ ಉಸ್ತುವಾರಿ

* ಬಿಳಿಗುಂಡ್ಲು ಮಾಪನ ಕೇಂದ್ರದ ನಿರ್ವಹಣೆ ಹೊಣೆ

* ಅಧೀನ ಸಮಿತಿ ಸದಸ್ಯರ ನೇಮಕದ ಅಧಿಕಾರ

* ಒಳಹರಿವು, ಸಂಗ್ರಹ, ಬಳಕೆ ಪರಿಶೀಲನೆ

* ರಾಜ್ಯಗಳಿಗೆ ನೀರು ಪೂರೈಸುವ ಹೊಣೆ

* ಕುಡಿಯುವ ನೀರಿನ ಬೇಡಿಕೆ, ಕೈಗಾರಿಕೆ ಪೂರೈಕೆ

* ಸಂವಹನ ಜಾಲ ರೂಪಿಸಿ, ಅಂಕಿ–ಅಂಶ ಪೂರೈಕೆ ಹೊಣೆ

* ಬೇಡಿಕೆ ಪಟ್ಟಿಗೆ ಸಲ್ಲಿಸುವುದು ರಾಜ್ಯಗಳಿಗೆ ಕಡ್ಡಾಯ

* ಕಾಮಗಾರಿ ಪರಿಶೀಲನೆ ಹೊಣೆ ಪ್ರಾಧಿಕಾರಕ್ಕೆ

* ಸಮ್ಮತಿಸದ ರಾಜ್ಯಗಳಿಂದ ದೂರು ಸಲ್ಲಿಸಲು ಅವಕಾಶ

**

ಕಾವೇರಿ ನಿರ್ವಹಣಾ ಮಂಡಳಿ ಮಾದರಿಯಲ್ಲೇ ಪ್ರಾಧಿಕಾರ ಸ್ಥಾಪಿಸುವ ಕೇಂದ್ರದ ಈ ಅಸಮಂಜಸ ಪ್ರಸ್ತಾವವನ್ನು ನ್ಯಾಯಪೀಠದೆದುರು ಪ್ರಶ್ನಿಸಲಾಗುವುದು
– ಮೋಹನ್‌ ಕಾತರಕಿ, ರಾಜ್ಯ ಸರ್ಕಾರದ ಪರ ವಕೀಲ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT