ನವದೆಹಲಿ (ಪಿಟಿಐ): 2013–14ನೇ ಸಾಲಿನಲ್ಲಿ ರೈಲ್ವೆ ಇಲಾಖೆ ನಷ್ಟದಲ್ಲಿದ್ದರೂ ದೀಪಾವಳಿ ಹಬ್ಬಕ್ಕೆ ತನ್ನ ನೌಕರರಿಗೆ 78 ದಿನಗಳ ಬೋನಸ್ ನೀಡಲಿದೆ.
ರೈಲ್ವೆ ಸಚಿವಾಲಯ ತನ್ನ ನೌಕರರಿಗೆ ಉತ್ಪಾದನೆ ಆಧಾರಿತ ಬೋನಸ್ (ಪಿಎಲ್ಬಿ) ನೀಡಲು ನಿರ್ಧರಿಸಿದೆ. ಈ ಬಗ್ಗೆ ಆದೇಶ ಹೊರಡಿಸಲಾಗಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ಶನಿವಾರ ತಿಳಿಸಿದ್ದಾರೆ.
ಇದರಿಂದ ಪ್ರತಿ ನೌಕರರು ₨8,975 ಬೋನಸ್ ಪಡೆಯಲಿದ್ದು, 11.5 ಲಕ್ಷಕ್ಕೂ ಅಧಿಕ ಪತ್ರಾಂಕಿತರಲ್ಲದ ನೌಕರರಿಗೆ ಉಪಯೋಗವಾಗಲಿದೆ. ಇದಕ್ಕಾಗಿ ಇಲಾಖೆ ₨800 ಕೋಟಿ ಭರಿಸಬೇಕಾಗುತ್ತದೆ. ಈ ಆದೇಶಕ್ಕೆ ಸಚಿವ ಸಂಪುಟ ಇನ್ನಷ್ಟೇ ಅನುಮೋದನೆ ನೀಡಬೇಕಿದೆ.
ಪ್ರಧಾನಿ ನರೇಂದ್ರ ಮೋದಿ ಅವರು ಅಮೆರಿಕ ಪ್ರವಾಸದಲ್ಲಿರುವುದು, ಹಣಕಾಸು ಸಚಿವ ಅರುಣ್ ಜೇಟ್ಲಿ ಅವರು ಆಸ್ಪತ್ರೆಗೆ ದಾಖಲಾಗಿರುವುದು ಹಾಗೂ ರೈಲ್ವೆ ಸಚಿವ ಸದಾನಂದ ಗೌಡ ಅವರು ರಾಜಧಾನಿಯಿಂದ ಹೊರಗಿರುವುದರಿಂದ ಈ ಆದೇಶಕ್ಕೆ ನಂತರ ಸಚಿವ ಸಂಪುಟದ ಅನುಮೋದನೆ ಪಡೆದುಕೊಳ್ಳಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
‘ಕಳೆದ ವರ್ಷಕ್ಕೆ ಹೋಲಿಸಿದರೆ ಪ್ರಸಕ್ತ ವರ್ಷ ರೈಲ್ವೆ ಅಧಿಕ ಲಾಭ ಗಳಿಸಿದೆ. ನೌಕರರು ಹೆಚ್ಚು ಬೋನಸ್ ಪಡೆಯಬೇಕಾಗಿತ್ತು. ಮೂರು ವರ್ಷಗಳಿಂದ ಇಲಾಖೆ 78 ದಿನಗಳ ಬೋನಸ್ ಅಷ್ಟೇ ನೀಡುತ್ತಿದೆ’ ಎಂದು ಅಖಿಲ ಭಾರತ ರೈಲ್ವೆ ನೌಕರರ ಸಂಘದ ಕಾರ್ಯದರ್ಶಿ ಶಿವಗೋಪಾಲ್ ಮಿಶ್ರಾ ಆಕ್ಷೇಪಿಸಿದ್ದಾರೆ.
2011–12 ಹಾಗೂ 2012 –13ನೇ ಸಾಲಿನಲ್ಲೂ ರೈಲ್ವೆ ನೌಕರರಿಗೆ ಪಿಎಲ್ಬಿ ನೀಡಲಾಗಿತ್ತು. ಪ್ರತಿ ವರ್ಷ ದಸರಾ ಹಬ್ಬಕ್ಕಿಂತ ಮುಂಚಿತವಾಗಿ
ನೌಕರರಿಗೆ ಪಿಎಲ್ಬಿ ನೀಡಲಾಗುತ್ತದೆ.