ವಿದೇಶಿ ಕರೆನ್ಸಿ ಆಸೆ ತೋರಿಸಿ ವಂಚನೆ: ಸೆರೆ

7
ಸೈಬರ್‌ ಕ್ರೈಂ ಪೊಲೀಸರ ಕಾರ್ಯಾಚರಣೆ; ಆಫ್ರಿಕಾ ಪ್ರಜೆ ಬಂಧನ

ವಿದೇಶಿ ಕರೆನ್ಸಿ ಆಸೆ ತೋರಿಸಿ ವಂಚನೆ: ಸೆರೆ

Published:
Updated:
ಡಿಂಗ್‌ಬಾಬ್ಡ್‌ ಕ್ಲುವಿಸ್

ಬೆಂಗಳೂರು: ಕಪ್ಪು ಬಣ್ಣದ ಕಾಗದಕ್ಕೆ ರಾಸಾಯನಿಕ ಸಿಂಪಡಿಸಿ, ವಿದೇಶಿ ಕರೆನ್ಸಿಯನ್ನಾಗಿ ಪರಿವರ್ತಿಸಿಕೊಡುವುದಾಗಿ ನಂಬಿಸಿ ವಂಚಿಸುತ್ತಿದ್ದ ಆರೋಪಿ ಡಿಂಗ್‌ಬಾಬ್ಡ್‌ ಕ್ಲುವಿಸ್ (28) ಎಂಬುವರನ್ನು ಸೈಬರ್‌ ಕ್ರೈಂ ಪೊಲೀಸರು ಬಂಧಿಸಿದ್ದಾರೆ.

ಆಫ್ರಿಕಾದ ಕ್ಲುವಿಸ್‌, ಪ್ರವಾಸಿ ವೀಸಾದಡಿ ಕೆಲ ವರ್ಷಗಳ ಹಿಂದೆ ಬೆಂಗಳೂರಿಗೆ ಬಂದಿದ್ದರು. ಬಾಣಸವಾಡಿಯ ಓಎಂಬಿಆರ್‌ ಲೇಔಟ್‌ನಲ್ಲಿ ವಾಸವಿದ್ದು ಕೃತ್ಯ ಎಸಗುತ್ತಿದ್ದರು. ಅವರಿಂದ ಬಣ್ಣದ ಪ್ರಿಂಟರ್, ಸ್ಕ್ಯಾನರ್, ನಕಲಿ ಅಮೆರಿಕನ್ ಡಾಲರ್, ಮೂರು ಲ್ಯಾಪ್‌ಟಾಪ್, ಎರಡು ಟ್ಯಾಬ್‌ಗಳು, ಹಾರ್ಡ್‌ಡಿಸ್ಕ್‌ ಹಾಗೂ ಐದು ಮೊಬೈಲ್ ಜಪ್ತಿ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದರು.

ಫೇಸ್‌ಬುಕ್, ಟ್ವಿಟರ್‌ ಸೇರಿದಂತೆ ಹಲವು ಸಾಮಾಜಿಕ ಜಾಲತಾಣಗಳ ಮೂಲಕ ಆರೋಪಿ ಸಾರ್ವಜನಿಕರನ್ನು ಸಂಪರ್ಕಿಸುತ್ತಿದ್ದರು. ಡಾ. ಡೇವಿಡ್, ಡಾ. ರೋಸ್ ಮೇರಿ ಸೇರಿದಂತೆ ಹಲವು ಹೆಸರುಗಳಿಂದ ಪರಿಚಯ ಮಾಡಿಕೊಳ್ಳುತ್ತಿದ್ದರು ಎಂದು ಹೇಳಿದರು.

‘ಕಪ್ಪು ಬಣ್ಣದ ಹೊದಿಕೆ ಇರುವ ಅಪಾರ ಪ್ರಮಾಣದ ವಿದೇಶಿ ಕರೆನ್ಸಿಯನ್ನು ಗುಪ್ತವಾಗಿ ಬೆಂಗಳೂರಿಗೆ ತಂದಿದ್ದೇನೆ. ಆ ಕಾಗದಕ್ಕೆ ರಾಸಾಯನಿಕ ಸಿಂಪಡಿಸಿದರೆ ನೈಜ ನೋಟುಗಳು ಸಿಗುತ್ತವೆ’ ಎನ್ನುತ್ತಿದ್ದರು. ಅದನ್ನು ನಂಬಿದ್ದ ಸಾರ್ವಜನಿಕರು, ಆತ ಹೇಳಿದ್ದ ಸ್ಥಳಕ್ಕೆ ಹೋಗುತ್ತಿದ್ದರು ಎಂದು ಪೊಲೀಸರು ಹೇಳಿದರು.

ಪೂರ್ವ ನಿಯೋಜನೆಯಂತೆ ಈ ಮೊದಲೇ ಪೆಟ್ಟಿಗೆಯಲ್ಲಿರುತ್ತಿದ್ದ ನೈಜ ನೋಟುಗಳನ್ನು ಹೊರಗೆ ತೆಗೆದು ನಂಬಿಸುತ್ತಿದ್ದರು. ನಂತರ, ‘ಹಣದ ಪರಿವರ್ತನೆಗೆ ರಾಸಾಯನಿಕದ ಅಗತ್ಯವಿದೆ. ನೀವು ಹಣ ಕೊಟ್ಟರೆ ತರುತ್ತೇನೆ’ ಎಂದು ಹೇಳಿ ಲಕ್ಷಾಂತರ ರೂಪಾಯಿ ಪಡೆಯುತ್ತಿದ್ದರು. ಕೆಲ ದಿನ ಬಿಟ್ಟು ಮೊಬೈಲ್‌ ಸ್ವಿಚ್ಡ್‌ ಆಫ್‌ ಮಾಡಿಕೊಂಡು ನಾಪತ್ತೆ ಆಗುತ್ತಿದ್ದರು ಎಂದು ಪೊಲೀಸರು ವಿವರಿಸಿದರು.

‘ಆರೋಪಿ ವಿರುದ್ಧ ಬೆಂಗಳೂರಿನ ನಿವಾಸಿಯೊಬ್ಬರು ದೂರು ನೀಡಿದ್ದರು. ಜಾಹೀರಾತು ನೀಡಿ ವಂಚನೆ: ‘ಇಂಡಿಯಾ ಮಾರ್ಟ್, ಎಕ್ಸ್‌ಪೋರ್ಟ್‌ ಇಂಡಿಯಾ ಜಾಲತಾಣಗಳಲ್ಲಿ ವಸ್ತುಗಳ ಮಾರಾಟ ಮಾಡುವುದಾಗಿ ಆರೋಪಿ ಜಾಹೀರಾತು ಪ್ರಕಟಿಸುತ್ತಿದ್ದರು. ವಸ್ತುಗಳನ್ನು ಕೊಂಡುಕೊಳ್ಳಲು ಇಚ್ಛಿಸುತ್ತಿದ್ದವರಿಂದಲೂ ಹಣ ಪಡೆದು ನಾಪತ್ತೆಯಾಗುತ್ತಿದ್ದರು’ ಎಂದು ಪೊಲೀಸರು ವಿವರಿಸಿದರು.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !