ಶುಕ್ರವಾರ, ನವೆಂಬರ್ 22, 2019
19 °C

‘ಸ್ವಚ್ಛ ಗ್ರಾಮ’ದ ಛಲಗಾರ್ತಿಯರು

Published:
Updated:

ನರೇಗಾವನ್ನು ಗ್ರಾಮದ ಅಭಿವೃದ್ಧಿ ಬಳಸಿಕೊಂಡು ಮಾದರಿಯಾದವರು ಮುಕ್ಕುಂದಾ ಗ್ರಾ.ಪಂ ಅಧ್ಯಕ್ಷೆ ಶಕುಂತಲಾ ರಮೇಶ್. ‘ಸ್ವಚ್ಛಗ್ರಾಹಿ’ ಈರಮ್ಮ, ತಲಮಾರಿ ಗ್ರಾಮವನ್ನು ಬಯಲು ಬಹಿರ್ದೆಸೆ ಮುಕ್ತ ಮಾಡುವಲ್ಲಿ ದಿಟ್ಟ ಹೆಜ್ಜೆ ಇಟ್ಟವರು. ಈರ್ವರ ಕಾರ್ಯ ಮೆಚ್ಚಿದ ಸ್ವಚ್ಛ ಭಾರತ್ ಮಿಷನ್‌, ಅ.2ರಂದು ಗುಜರಾತ್‌ನಲ್ಲಿ ನಡೆದ ‘ಸ್ವಚ್ಛಭಾರತ್ ದಿವಸ್‌’ ಉತ್ಸವಕ್ಕೆ ಆಹ್ವಾನಿಸಿತ್ತು.

ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ (ಮನ್‌ರೇಗಾ) ಎಂದರೆ ಕೂಲಿಗೆ ವೇತನ ಕೊಡುವ ಯೋಜನೆ ಎನ್ನುವಂತಾಗಿದೆ. ಆದರೆ, ರಾಯಚೂರು ಜಿಲ್ಲೆ ಸಿಂಧನೂರು ತಾಲ್ಲೂಕು ಮುಕ್ಕುಂದಾ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಉದ್ಯೋಗ ‘ಖಾತರಿ ಎಂದರೆ, ಬರೀ ವೇತನ ಮಾತ್ರವಲ್ಲ ಕಾಮಗಾರಿಯೂ ಖಾತರಿ’ ಎನ್ನುವಂತಹ ಬದಲಾವಣೆ ತಂದವರು ಪಂಚಾಯ್ತಿ ಅಧ್ಯಕ್ಷೆ ಶಕುಂತಲಾ ರಮೇಶ.

ನರೇಗಾ ಯೋಜನೆಯಡಿ, ಮುಕ್ಕುಂದಾ, ಸಿಂಗಾಪುರ ಮತ್ತು ಹೂಡಾ ಗ್ರಾಮಗಳಲ್ಲಿ ರಸ್ತೆಗಳು, ಚರಂಡಿಗಳು, ಅಂಗನವಾಡಿ ಕಟ್ಟಡಗಳು ನಿರ್ಮಾಣವಾದವು. ಕುಡಿಯುವ ನೀರು, ಶಾಲೆಗಳಿಗೆ ಆವರಣ ಗೋಡೆ, ಶಾಲೆಗಳಲ್ಲಿ ಶೌಚಾಲಯಗಳ ನಿರ್ಮಾಣ, ಶಾಲಾ ಆವರಣದಲ್ಲಿ ಸಸಿಗಳನ್ನು ನೆಡುವುದು, ಮುಖ್ಯವಾಗಿ ಗ್ರಾಮದ ಸುತ್ತಮುತ್ತ ಹರಿಯುವ ಹಳ್ಳಗಳಿಗೆ 15 ಕಡೆಗಳಲ್ಲಿ ಕಿರುಸೇತುವೆಗಳನ್ನು ನಿರ್ಮಾಣ ಮಾಡಿ ಸಂಚಾರಕ್ಕೆ ಅನುಕೂಲ ಮಾಡಿರುವುದು.. ಇವೆಲ್ಲವನ್ನೂ ಉದ್ಯೋಗ ಖಾತರಿಯಡಿ ಮಾಡಿಸಿದ್ದಾರೆ.
‘ಮಳೆಗಾಲದಲ್ಲಿ ಹಳ್ಳದ ಹತ್ತಿರ ಬೈಕ್‌ ನಿಲ್ಲಿಸಿ, ಈಜಿಕೊಂಡು ಹೊಲಕ್ಕೆ ಹೋಗಿ ಬರುವ ಪರಿಸ್ಥಿತಿ ಇತ್ತು. ಈಗ ಪಂಚಾಯ್ತಿಯಿಂದ ಸೇತುವೆ ಮಾಡಿಸಿದ್ದಾರೆ’ ಎಂದು ರೈತರು ಶಕುಂತಲಾ ಅವರ ಕಾರ್ಯವನ್ನು ಶ್ಲಾಘಿಸುತ್ತಿದ್ದಾರೆ. ‘ಅಧಿಕಾರ ಶಾಶ್ವತವಾಗಿ ಇರುವುದಿಲ್ಲ. ಅಧಿಕಾರ ಇದ್ದಾಗ ಶಾಶ್ವತವಾದ ಕೆಲಸ ಮಾಡಿಸಬೇಕು ಎನ್ನುವ ಗುರಿ ನನ್ನದು. ಎಲ್ಲ ಕಾರ್ಯಕ್ಕೂ ಜನರು ಸಹಕಾರ ನೀಡುತ್ತಿರುವುದು ತುಂಬಾ ಮುಖ್ಯ’ ಎನ್ನುತ್ತಾರೆ ಶಕುಂತಲಾ. ಉದ್ಯೋಗ ಖಾತರಿ ಯೋಜನೆಯಡಿ ಮುಕ್ಕುಂದಾದಲ್ಲಿ ಗೋದಾಮು ನಿರ್ಮಿಸಿದ್ದು, ಪಂಚಾಯಿತಿಗೆ ಶಾಶ್ವತ ಆದಾಯದ ಮೂಲವಾಗಿ ಪರಿಣಮಿಸಿದೆ.

ಅಧಿಕಾರವಿಲ್ಲದೆ ಅಭಿವೃದ್ಧಿ

ಜನ ಶೌಚಾಲಯ ಕಟ್ಟಿಸಿಕೊಳ್ಳುವುದಿಲ್ಲ ಎಂದು ಹಠ ಮಾಡಿ, ಬಹಿರ್ದೆಸೆಗಾಗಿ ಬಯಲಿಗೆ ಹೋಗುತ್ತಿದ್ದರು. ಅಂಥವರನ್ನು ಹಿಡಿದು ‘ಶೌಚಾಲಯ ಕಟ್ಟಿಸಿಕೊಳ್ಳಿ, ಸರ್ಕಾರ ಹಣ ಕೊಡುತ್ತದೆ’ ಎಂದು ಮನವೊಲಿಸುತ್ತಿದ್ದರು ‘ಸ್ವಚ್ಛಗ್ರಾಹಿ’ ಈರಮ್ಮ. 

ಹೀಗೆ ಬಹಿರ್ದೆಸೆಗೆ ಹೋಗುವವರೊಂದಿಗೆ ಮಾತಿಗಿಳಿಯುತ್ತಿದ್ದ ಈರಮ್ಮನನ್ನು ಕಂಡವರು, ‘ದಿನಾಲೂ ಬೆಳಿಗ್ಗೆ ಬಹಿರ್ದೆಸೆಗೆ ಹೋಗುವವರ ಹಿಂದೆ ಹೋದರೆ ಏನು ಸಿಗುತ್ತದೆ ಈ ಅಮ್ಮನಿಗೆ ಎಂದು ಗ್ರಾಮಗಳ ಜನರು ಮೂದಲಿಸುತ್ತಿದ್ದರು’.  ಅವರ ಪ್ರಶ್ನೆಗೆ ಈಗ ಉತ್ತರ ಸಿಕ್ಕಿದೆ. ತಲಮಾರಿ ಗ್ರಾಮ ಪಂಚಾಯ್ತಿಯ ಮೂರ್ನಾಲ್ಕು ಗ್ರಾಮಗಳಲ್ಲಿ 940 ಮನೆಗಳಲ್ಲಿ ಶೌಚಾಲಯ ನಿರ್ಮಾಣವಾಗಿದೆ. ಬಯಲು ಬಹಿರ್ದೆಸೆ ಮುಕ್ತ ಗ್ರಾಮಗಳಾಗುವತ್ತ ಸಾಗಿವೆ.

ತೆಲಂಗಾಣ ರಾಜ್ಯದ ಗಡಿ, ರಾಯಚೂರು ಜಿಲ್ಲೆಯ ಕೊನೆ ಗ್ರಾಮ ತಲಮಾರಿ. ಇಲ್ಲಿ ಸ್ತ್ರೀಶಕ್ತಿ ಸಂಘದ ಒಕ್ಕೂಟದಲ್ಲಿ ಸಕ್ರಿಯರಾಗಿದ್ದ ಈರಮ್ಮ ಶಿವಪ್ಪ ಅವರ ಪರಿಶ್ರಮದಿಂದಾಗಿ, ತಲಮಾರಿ ಗ್ರಾಮ 2017ರಲ್ಲಿ ರಾಯಚೂರು ಜಿಲ್ಲೆಯಲ್ಲೇ ಪ್ರಥಮ ‘ಬಯಲು ಬಹಿರ್ದೆಸೆ ಮುಕ್ತ ಗ್ರಾಮ’ ಎಂಬ ಹೆಗ್ಗಳಿಕೆ ಪಡೆಯಿತು. ನಂತರ ಇದೇ ಗ್ರಾಮ ಪಂಚಾಯ್ತಿಗೆ ಸೇರುವ ಗಿಲ್ಲೇಸುಗೂರು, ಎನ್‌.ಮಲ್ಕಾಪುರ ಹಾಗೂ ಗುಂಜಳ್ಳಿ ಗ್ರಾಮಗಳು ಬಯಲು ಬಹಿರ್ದೆಸೆ ಮುಕ್ತವಾಗಲು ಪ್ರಚಾರ ಮಾಡಿದರು. ಶೌಚಾಲಯ ಕಟ್ಟಿಕೊಳ್ಳಲು ಸಾಧ್ಯವಾಗದ ಬಡವರಿಗೆ ತಾವೇ ಮುಂಗಡ ಹಣ ಕೊಟ್ಟಿದ್ದರು. ಸರ್ಕಾರದಿಂದ ಫಲಾನುಭವಿಗೆ ಹಣ ಬಂದಮೇಲೆ, ಮುಂಗಡವಾಗಿ ಕೊಟ್ಟ ಹಣ ವಾಪಸ್‌ ಪಡೆದು, ಅದೇ ಹಣವನ್ನು ಬೇರೆಯವರು ಶೌಚಾಲಯ ಕಟ್ಟಿಕೊಳ್ಳುವುದಕ್ಕೆ ಕೊಡುತ್ತಿದ್ದರು. ಈ ಕಾಳಜಿಯನ್ನು ಗುರುತಿಸಿದ ಸಂಘ–ಸಂಸ್ಥೆಗಳು ಮತ್ತು ಸರ್ಕಾರ ಈರಮ್ಮನವರನ್ನು ಸನ್ಮಾನಿಸಿವೆ. ಪ್ರಶಸ್ತಿ ಪತ್ರಗಳನ್ನು ನೀಡಿ ಗೌರವಿಸಿವೆ.

ಇದೀಗ ಈರಮ್ಮ, ‘ಸ್ವಚ್ಛಗ್ರಾಹಿ’ ಹೆಸರಿನಲ್ಲಿ ಹೊಸ ಜವಾಬ್ದಾರಿ ಪಡೆದು, ಗ್ರಾಮಗಳಲ್ಲಿ ಶುಚಿತ್ವ ಕಾಪಾಡುವುದಕ್ಕೆ ಜನರನ್ನು ಪ್ರೇರೇಪಿಸುತ್ತಿದ್ದಾರೆ. ಇದರ ಫಲವಾಗಿ ತಲಮಾರಿ ಗ್ರಾಮದಲ್ಲಿ ಪಂಚಾಯ್ತಿಯಿಂದ ನಿತ್ಯ ಆಟೊಗಳ ಮೂಲಕ ಕಸ ಸಂಗ್ರಹಿಸಿ ವಿಲೇವಾರಿ ಮಾಡುವ ಪದ್ಧತಿ ರೂಢಿಗೆ ಬಂದಿದೆ.

ಗುಂಜಳ್ಳಿ ಗ್ರಾಮದ ಈರಮ್ಮನವರ ಕಾರ್ಯವೈಖರಿಯನ್ನು ಗುರುತಿಸಿದ ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯಾಗಿದ್ದ ಅಭಿರಾಂ ಶಂಕರ ಅವರು 2017ರಲ್ಲಿ ಸ್ವಚ್ಛ ಭಾರತ ಮಿಷನ್ ಅನುಷ್ಠಾನದಲ್ಲಿ ಪಾಲ್ಗೊಳ್ಳಲು ಪ್ರೋತ್ಸಾಹಿಸಿದ್ದರು. ಇದೇ ಅವರಿಗೆ ಮೂಲ ಪ್ರೇರಣೆ.

ಇದನ್ನೂ ಓದಿ: ಸ್ವಚ್ಛಗ್ರಾಮ; ಮಹಿಳೆಯರ ಪಾತ್ರ ಹಿರಿದು

ಪ್ರತಿಕ್ರಿಯಿಸಿ (+)