ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇವ ನಮ್ಮವ ಎಂದೆನಿಸಬೇಡಯ್ಯಾ!

Last Updated 28 ಅಕ್ಟೋಬರ್ 2015, 19:36 IST
ಅಕ್ಷರ ಗಾತ್ರ

ಆವತ್ತೊಂದು ದಿನ ಮಾನಸಗಂಗೋತ್ರಿಯ ಹಚ್ಚ ಹಸಿರನ್ನು ಕಣ್ತುಂಬಾ ತುಂಬಿಕೊಂಡು ಗೆಜ್ಜೆ ಕಾಣದ ಕಾಲನ್ನು ಸುಮ್ಮ ಸುಮ್ಮನೇ ಕುಣಿಸಿಕೊಂಡು ಬರುತ್ತಿರುವಾಗ ವಿಜಿಯ ತಲೆ ತುಂಬಾ ತಾವು ಪ್ಲಾನ್ ಮಾಡಿದ್ದ ಗೋವಾ ಟ್ರಿಪ್ಪೇ ತುಂಬಿತ್ತು.

ಇವಳ ವಿನಾಕಾರಣ ಸಂತೋಷವನ್ನು ನೋಡಿ ಹಾಸ್ಟೆಲಿನಲ್ಲಿ ಯಾರೋ ಕೇಳಿಯೂ ಬಿಟ್ಟರು. ‘ಏನ್ ವಿಜಿ? ಮದ್ವೆ ಫಿಕ್ಸ್ ಆಯ್ತಾ?’ ಹಾಗೆ ಕೇಳುವಾಗ ಇಂದುಮತಿಯೂ ಪಕ್ಕದಲ್ಲಿ ಇದ್ದಳು. ಇಬ್ಬರೂ ಒಬ್ಬರನ್ನೊಬ್ಬರು ನೋಡಿಕೊಂಡು ಹುಚ್ಚಾಪಟ್ಟೆ ನಕ್ಕು ‘ಅಲ್ಕಣೆ ಮದ್ವೆ ಫಿಕ್ಸ್ ಆದ್ರೆ ಕುಣೀತಾರಾ? ದಿನಾ ಬೆಳಿಗ್ಗೆ ಎದ್ದು ಈರುಳ್ಳಿ ಹೆಚ್ಬೇಕಲ್ಲಪ್ಪಾ ಅಂತ ಬೇಜಾರಾಗಲ್ವಾ’ ಎಂದು ಕೇಳಿ ಇಂದುಮತಿ ಪ್ರಶ್ನೆ ಕೇಳಿದವರನ್ನ ತಬ್ಬಿಬ್ಬಾಗಿಸಿದಳು. ಅವರು ಪಾಪ ಯಾಕಾದರೂ ಇವರನ್ನ ಮಾತನಾಡಿಸಿದೆನೋ ಎಂದು ಸುಮ್ಮನೆ ಮುಂದಕ್ಕೆ ಹೋದರು.

ಇಂದುಮತಿಯ ವಿವಾಹ ಸಂಬಂಧಿತ
ಜ್ಞಾನೋದಯದ ನಂತರ ಆ ಸಂತೋಷವನ್ನು ಆಚರಿಸಲಿಕ್ಕಂತ ಐದಾರು ಜನ ಹುಡುಗಿಯರು ಸೇರಿ ಶೇರಿಂಗ್ ವ್ಯವಸ್ಥೆ ಮೇಲೆ ಗೋವಾಕ್ಕೆ ಟ್ರಿಪ್ ಹಾಕಿಕೊಂಡಿದ್ದರು. ಮೈಸೂರಿನಿಂದ ಗೋವಾಕ್ಕೆ ಭರ್ಜರಿ ದೂರವಾದರೂ, ಆ ವಯಸ್ಸಿನಲ್ಲಿ ಅದೆಲ್ಲ ಎಲ್ಲಿ ಲೆಕ್ಕಕ್ಕೆ ಬಂದೀತು?

ಭಾರತಕ್ಕೆ ಯೋಗ ಕಲಿಯಲೋ, ಮತ್ಯಾವುದಕ್ಕೋ ಬಂದು ರಸ್ತೆಯಲ್ಲಿ ಮಲಗಿರುವ ಎಮ್ಮೆ ಹಸುಗಳನ್ನು ನೋಡಿ ಅಪರಿಮಿತ ರೋಮಾಂಚನಕ್ಕೊಳಗಾಗಿ ‘ಈಂಡಿಯಾ ಈಸ್ ಎ ಕೊಂತ್ರೆ ಆಫ್‌ ಸೂರ್ಪ್ರೈಸೀಸ್’ (ಇಂಡಿಯಾ ಈಸ್ ಎ ಕಂಟ್ರಿ ಆಫ್ ಸರರ್ಪ್ರೈಸೆಸ್! ಭಾರತ ಅಚ್ಚರಿಗಳ ದೇಶ) ಎಂದು ಕಣ್ಣರಳಿಸುತ್ತಾ ಮಾತನಾಡುತ್ತಿದ್ದ ಫ್ರೆಂಚ್ ಹುಡುಗಿ ಐರೀನ್ ಇವರ ಗುಂಪಿಗೆ ಇತ್ತೀಚೆಗೆ ಪರಿಚಯವಾಗಿ ಈ ಗೋವಾ ಟ್ರಿಪ್ಪಿಗೆ ಕಾರಣೀಭೂತಳಾದದ್ದು ಮಾತ್ರ ಆಕಸ್ಮಿಕವಾಗಿತ್ತು.

ಗೋಕುಲಂಗೆ ಪಟ್ಟಾಭಿ ಜೋಯಿಸರ ಹತ್ತಿರ ‘ಯೋವ್ ಗ್ಯ’ (ಯೋಗ) ಕಲಿಯಲು ಬಂದಿಳಿದಿದ್ದ ಐರೀನ್ ಇಪ್ಪತ್ತು ಇಪ್ಪತ್ತೆರಡು ವರ್ಷದವಳಿರಬಹುದು. ಆಗಲೇ ಅರ್ಧ ಜಗತ್ತು ಸುತ್ತಿದ್ದಳು. ಅದಕ್ಕೆಲ್ಲ ದುಡ್ಡು ಹೇಗೆ ಸಂಪಾದಿಸಿದೀ ಎಂದು ಕೇಳಿದರೆ ‘ಸಮರ್ ಜಾಬ್ಸ್’ ಮಾಡಿ ದುಡಿದೆ ಎನ್ನುತ್ತಿದ್ದಳು. ಇಂದುಮತಿಗೆ ಈ ದೇಶದ ಬಗ್ಗೆ ಅಭಿಮಾನವಿದ್ದರೂ ‘ನೋಡೇ ಲೌಡೀನಾ, ಬರೀ ಸಮ್ಮರ್‌ನಲ್ಲಿ ದುಡಿಮೆ ಮಾಡಿ ಪ್ರಪಂಚ ಸುತ್ತಿದೆ ಅಂತಾಳೆ. ಈ ದೇಶ್ದಲ್ಲಿ ನಾವ್ ಸಮ್ಮರ್‌ನಲ್ಲಿ ದುಡುದ್ರೆ ದಿನಾ ಎಳ್ನೀರು ತೊಗೊಳಕ್ಕೂ ದುಡ್ಡಿರಲ್ಲ’ ಎಂದು ನಿಟ್ಟುಸಿರು ಬಿಡುತ್ತಿದ್ದಳು.

ಆಗೆಲ್ಲ ದೊಡ್ಡ ಸಂಬಳದ ಕಾಲ ಅಲ್ಲ. ಐಟಿ–ಬಿಟಿ ಸಂಬಳಗಳು ಇನ್ನೂ ಉಳಿದವರಿಗೆ ಕೀಳರಿಮೆ ಹುಟ್ಟಿಸುವಂತೆ ಇರಲಿಲ್ಲ. ಒಂದು ನ್ಯೂಸ್ ಪೇಪರ್ ಆಫೀಸಿನಲ್ಲಿ ಹತ್ತು ಹದಿನೈದು ವರ್ಷ ದುಡಿದವರ ಸಂಬಳ ಕೂಡ ಜಾಸ್ತಿ ಎಂದರೆ ಇಪ್ಪತ್ತೈದು ಸಾವಿರದೊಳಗೇ ಇರುತ್ತಿತ್ತು ಎಂದರೆ ಸಂಬಳ ಹೆಚ್ಚಾಗುತ್ತಿದ್ದುದು ಹಕ್ಕಿನ ಪ್ರಶ್ನೆ ಎನ್ನುವ ಆಲೋಚನೆ ಅಪರೂಪದ್ದು ಎನ್ನುವುದು ನಿಮಗೆ ಅರ್ಥವಾಗಬಹುದು. ಅದಕ್ಕೂ ಹೆಚ್ಚಾಗಿ ಸಮ್ಮರ್ ಜಾಬ್ ಎನ್ನುವ ಪರಿಕಲ್ಪನೆಯೇ ಇರಲಿಲ್ಲ.

ಆ ದಿನಗಳಲ್ಲಿ ಎರಡು ಮೂರು ತಿಂಗಳ ಮಟ್ಟಿಗೆ ಕೆಲಸ ಸಿಕ್ಕುವುದೇ ಅಪರೂಪ. ಸಿಕ್ಕರೂ ಹೆಚ್ಚೆಂದರೆ ತಿಂಗಳಿಗೆ ಎರಡು ಸಾವಿರ ಕೊಟ್ಟಾರು ಅಷ್ಟೆ. ಅಲ್ಲಿಗೆ ಹೋಗಿ ಬರಲು ಪೆಟ್ರೋಲು, ಹಾಕಿಕೊಳ್ಳಲು ತಕ್ಕಮಟ್ಟಿಗಿನ ಬಟ್ಟೆಗಳು, ತಿಂಡಿ-ತೀರ್ಥ-ಟೀ ಎಲ್ಲ ಖರ್ಚು ಕಳೆದು ಎಂಟುನೂರು ರೂಪಾಯಿ ಮಿಕ್ಕಿದರೆ ಹೆಚ್ಚಾಯಿತು. ಆಗ ಮಾಲುಗಳಿಲ್ಲದ ಬೆಂಗಳೂರಿಗೆ ಬಂದು ಸಂಬಂಧಿಗಳ ಮನೆಯಲ್ಲಿ ಉಳಿದರೆ ಸಾವಿರ ರೂಪಾಯಿಯಲ್ಲಿ ಆರಾಮಾಗಿ ಎರಡು ವಾರ ಕಾಲ ಹಾಕಬಹುದಿತ್ತು.

ಹೀಗಿದ್ದ ಒಂದು ಪರ್ವ ಕಾಲದಲ್ಲಿ ಫ್ರೆಂಚ್ ಹುಡುಗಿಯೊಬ್ಬಳ ಸ್ನೇಹ ಮಾಡಿ ಎಲ್ಲರೂ ಗೋವಾಕ್ಕೆ ಹೊರಟಿದ್ದರು. ಬೆಂಗಳೂರಿಗೆ ಹೋಗಿ ಅಲ್ಲಿಂದ ಗೋವಾಕ್ಕೆ ಹೋಗುವುದು ಅಂತ ತೀರ್ಮಾನವಾಗಿತ್ತು. ಅಷ್ಟರಲ್ಲಿ ಒಂದು ಘಟನೆ ನಡೆಯಿತು. ಒಂದು ಬೆಳಿಗ್ಗೆ ಕ್ಲಾಸಿಗೆ ತಯಾರಾಗುತ್ತಿರುವಾಗ ವಿಜಿಯನ್ನು ಅಟೆಂಡರ್ ಮೋಹನ ಕೂಗಿದ. ‘ಇಜಿಯಮ್ಮಾ... ಯಾರೋ ಇಜಿಟರ್ ಅವ್ರ ನಿಮ್ಗ’. ವಿಸಿಟರ್ ಎನ್ನುವ ಪದ ಮೋನನ ಬಾಯಲ್ಲಿ ಇಜಿಟರ್ ಆಗುತ್ತಿತ್ತು.

ಇವಳೂ ರೂಮಿನಿಂದಲೇ ಕೂಗಿದಳು. ‘ನನ್ಗಾ ಮೋನಾ? ಬೆಳ್ ಬೆಳಿಗ್ಗೆನೇ?’
ಹೊರಗೆ ಇದ್ದವರಿಗೆ ಕೇಳುವಂತೆಯೇ ಹೇಳಿದ ಮೋನ. ‘ನಾ ಯಂಗ ಕ್ಯೋಳಕ್ಕಾಯ್ತದ ಬೆಳ್ ಬೆಳಿಗ್ಗೆ ಯಾಕ್ ಬಂದ್ರಿ ಅಂತವ. ನೀವೇ ಬಂದು ಕ್ಯೋಳ್ಕಳಿ’
ವಿಜಿ ಧಡ ಭಡ ಎಂದು ತುಂಡು ಕೂದಲಿಗೆ ಹೇರ್ ಪಿನ್ನು ಸಿಕ್ಕಿಸಿಕೊಳ್ಳುತ್ತಲೇ ಹೊರಗೆ ಬಂದಳು. ಬಂದಿದ್ದವರನ್ನು ನೋಡಿ ಒಂದು ನಿಮಿಷ ಎದೆ ಬಡಿತ ಹೆಚ್ಚಾಯಿತು. ಕಂಡರೂ ಕಾಣದಂತೆ ಸ್ವಲ್ಪ ಹೊತ್ತು ಅತ್ತಿತ್ತ ನೋಡಿದಂತೆ ನಟಿಸಿದಳು.

‘ಇಜಿಟರ್’ ರಘುವೇ ಮುಂದುವರೆದು ಮಾತಾಡಿದ. ‘ಹಲೋ ವಿಜಯಾ, ಹೇಗಿದ್ದೀರಿ?’
‘ನಾನು ಆರಾಮ್. ನೀವು? ಏನು ಇಲ್ಲೀತನಕ ಬಂದದ್ದು?’
‘ನಿಮ್ಮನ್ನೇ ಹುಡುಕಿಕೊಂಡು ಬಂದೆ’
‘ನನ್ನಾ? ಯಾಕೆ?’

ರಘು ದಾವಣಗೆರೆಯವನು. ಹಿಂದೆ ಅವನ ವಿಚಾರಕ್ಕೆ ಅವನ ಗರ್ಲ್ ಫ್ರೆಂಡ್ ಗಿರಿಜಾಗೂ, ವಿಜಿಗೂ ಜಗಳ ಹತ್ತಿ ಬಂದಿತ್ತು. ಯಾವ ಕಾರಣಕ್ಕೆ ಎಂದು ಈವತ್ತಿನ ಸೀರಿಯಲ್ ನಿರ್ದೇಶಕರುಗಳಿಗೆ ಗೊತ್ತಾದರೆ ಬರೀ ‘ಠಡಂಗ್ ಠಡಂಗ್ ಠಡಂಗ್’ ಎಂದು ಹಿನ್ನೆಲೆ ನಗಾರಿ ಬಡಿತ ಕೊಟ್ಟು ರಿಯಾಕ್ಷನ್ ಶಾಟ್‌ಗಳದ್ದೇ ಒಂದು ಎಪಿಸೋಡ್ ಮಾಡಿಬಿಡುವಷ್ಟು ಸರಕು ಇತ್ತು. ಪುಣ್ಯ ಆವತ್ತಿನ ಸಂದರ್ಭದಲ್ಲಿ ಸ್ಕ್ರಿಪ್ಟುಗಳು ಅಷ್ಟೆಲ್ಲ ಮೋಸವಾಗಿರುತ್ತಿರಲಿಲ್ಲ. ಅದು ಒತ್ತಟ್ಟಿಗಿರಲಿ. ಗಿರಿಜಾಗೂ ವಿಜಿಗೂ ಜಗಳ ಬರಲು ಕಾರಣ ರಘುವೇ. ಹಾಗಂತ ಅವರು ಸುರಸುಂದರ ಅಂದುಕೊಂಡರೆ ದೊಡ್ಡ ಉತ್ಪ್ರೇಕ್ಷೆಯಾದೀತು.

ಬಹಳ ಸಾಧಾರಣವಾಗಿದ್ದ ರಘು ಗಿರಿಜಾ ಕಣ್ಣಿಗೆ ಮಾತ್ರ ‘ಬಾಯ್ ಫ್ರೆಂಡ್’ ಥರಾ ಕಾಣಿಸುತ್ತಿದ್ದ. ವಿಜಿಯನ್ನೂ ಸೇರಿಸಿ ಉಳಿದೆಲ್ಲ ಹುಡುಗಿಯರಿಗೆ ಅವನು ಅಂಥಾ ಆಸಕ್ತಿಯನ್ನೇನೂ ಹುಟ್ಟಿಸುತ್ತಿರಲಿಲ್ಲ. ಬಿ.ಕಾಂ ಅರ್ಧಕ್ಕೆ ಸಲಾಮು ಹೊಡೆದು ಉಂಡಾಡಿ ತಿರುಗಾಡಿಕೊಂಡಿದ್ದ ರಘುವನ್ನು ಅವನ ಭಾವ ತಮ್ಮ ಅಂಗಡಿಯಲ್ಲಿ ಕೆಲಸಕ್ಕೆ ಸೇರಿಸಿಕೊಂಡಿದ್ದರು. ವಾಹನಗಳ ಬಿಡಿಭಾಗ ಮಾರಾಟ ಮಾಡುವ ವ್ಯವಹಾರ ಅವರದ್ದು. ಅಂಗಡಿಯಲ್ಲಿ ಕೂರ ಬೇಕೆಂದಾಗ ವಯೋಸಹಜವಾಗಿ ರಘು ಇದರ ವಿರುದ್ಧ ಸಿಡಿದೆದ್ದರೂ, ಭಾವನ ಮರ್ಜಿಯಲ್ಲಿರಬೇಕಾಗಿ ಬಂದದ್ದರಿಂದ ಅನ್ಯಮನಸ್ಕನಾಗಿಯೇ ಅಲ್ಲಿಗೆ ಹೋಗುತ್ತಿದ್ದ.

ಇವನು ಅಂಗಡಿಯಲ್ಲಿ ಇರುತ್ತಾನೆ ಎನ್ನುವ ನಂಬಿಕೆಯ ಮೇಲೆ ಅವನ ಭಾವ ಆಗಾಗ ಅಂಗಡಿ ಬಿಟ್ಟು ಹೊರಗಿನ ವ್ಯವಹಾರಗಳಿಗೆ, ವ್ಯಾಪಾರ ವಿಸ್ತರಿಸಲು ಹೊರಗಿನ ಊರುಗಳಿಗೆ ಹೋಗಲು ಆರಂಭಿಸಿದರು. ಆಗೆಲ್ಲ ರಘುವಿಗೆ ಹಬ್ಬ. ಅಂಗಡಿಗೆ ಹೋಗುತ್ತಲೇ ಇರುವಾಗ ಅವನಿಗೆ ಒಂದು ಜ್ಞಾನೋದಯವಾಯಿತು. ಇಡೀ ದಿನ ಏಕಾಂತ ಮತ್ತು ಅವಿರತ ಟೆಲಿಫೋನ್ ಸಿಗುತ್ತಿತ್ತು. ಜೊತೆಗೆ ಸ್ವಲ್ಪ ಆರ್ಥಿಕ ವ್ಯವಸ್ಥೆ ಮಾಡಿಕೊಳ್ಳಬಹುದಿತ್ತು. ಅಂದರೆ ಆಗಾಗ ದಿನದ ಕೊನೆಗೆ ಅಂಗಡಿ ಲೆಕ್ಕದಲ್ಲಿ ಸ್ವಲ್ಪ ಹಣ ಯಾಕೋ ಕಡಿಮೆ ಬರುತ್ತಿತ್ತು. ರಘುವಿನಿಂದ ಸಹಾಯ ಆಗುತ್ತಿದ್ದುದರಿಂದ ಅವನ ಭಾವನೇನೂ ಹೆಚ್ಚು ತಲೆ ಕೆಡಿಸಿಕೊಳ್ಳುತ್ತಿರಲಿಲ್ಲ, ಆದರೆ ಅವನ ಅಕ್ಕನಿಗೆ ಆಗಾಗ ಸೂಚ್ಯವಾಗಿ ಹೇಳುತ್ತಿದ್ದರು.

ಒಂದು ದಿನ ಅಂಗಡಿಗೆ ಬಂದ ಗಿರಿಜಾ ಕೈನೆಟಿಕ್ ಹೋಂಡಾ ಗಾಡಿಯ ಯಾವುದೋ ಪಾರ್ಟ್ ಕೇಳಿದಳು. ಅದು ಅಂಗಡಿಯಲ್ಲಿ ಇರಲಿಲ್ಲವೋ ಅಥವಾ ಇವನೇ ಬೇಕಂತ ಇಲ್ಲ ಅಂದನೋ ತಿಳಿಯದು. ‘ಎರಡ್ ದಿನ್ದಾಗ್ ಬರ್ತತಿ. ಫೋನ್ ನಂಬರ್ ಕ್ವಟ್ಟು ಹೋಗಿರ್ರಿ. ಬಂದಾಗ್ ಹೇಳ್ತನಿ’ ಅಂದ. ಅವನು ಫೋನ್ ಮಾಡಿದ ದಿನ ಗಿರಿಜಾನೇ ಫೋನ್ ಎತ್ತಿದಳು. ‘ನೀವ್ ಕೇಳಿದ್ ಪಾರ್ಟ್ ಬಂದತಿ. ಅಂಗ್ಡಿ ಕಡೀಗ್ ಬಂದಾಗ್ ತಗಂಡ್ ಹೋಗ್ರಿ’ ಎಂದ. ಅಲ್ಲಿಂದ ರಘುವಿನ ಜೀವನದಲ್ಲಿ ಗಿರಿಜಾ ಪರ್ವ ಶುರುವಾಯಿತು.

ಇಬ್ಬರೂ ಫೋನ್ ಸಂಭಾಷಣೆಯ ಮೂಲಕ ಹತ್ತಿರಾದಂತೆ ದಿನಗಳು ಸಾಲದಾದವು. ರಾತ್ರಿಗಳು ಉದ್ದವಾದವು. ಯಾವಾಗ ಬೆಳಗಾದೀತೋ ಎಂದು ಇಬ್ಬರೂ ಕಾಯುತ್ತಿದ್ದರು. ರಘು ಮೊದಮೊದಲಿಗೆ ಇದನ್ನೆಲ್ಲ ಅನುಭವಿಸಿ ಸಂತೋಷ ಪಟ್ಟನಾದರೂ ಆಮೇಲೆ ಗಿರಿಜಾಳ ಕಂಡೀಷನ್ನುಗಳು ತಲೆನೋವು ಎನಿಸತೊಡಗಿದವು. ದಿನಾ ಫೋನ್ ಮಾಡು ಅಂದ್ರೆ ಹೇಗೆ? ಭಾವ ಇಲ್ಲದಿರುವಾಗಲೇನೋ ಸರಿ. ಅವರಿದ್ದಾಗ ಮಾತಲ್ಲಿ ಮನೆ ಕಟ್ಟುವುದು ಸಾಧ್ಯವಿಲ್ಲದ ಮಾತು. ಇದನ್ನು ಹೇಳಿದರೆ ಗಿರಿಜಾ ಅರ್ಥ ಮಾಡಿಕೊಳ್ಳದೆ ಹಟಕ್ಕೆ ಬಿದ್ದಿದ್ದಳು.

ಒಂದು ದಿನ ರಘು ಗಾಡಿಯ ಮೇಲೆ ವಿಜಿ ಮನೆಯಿಂದ ಹಾದು ಮನೆಗೆ ಹೋಗುವಾಗ ಗಿರಿಜಾ ವಿಜಿಯ ಪಕ್ಕದ ಮನೆಯಲ್ಲಿ ಏನೋ ಕೆಲಸದ ಮೇಲೆ ಬಂದಿದ್ದಳು. ಅಕಸ್ಮಾತ್ತಾಗಿ ರಘು ವಿಜಿ ಮನೆ ಮುಂದೆ ಹಾದು ಹೋಗುವಾಗ ತನ್ನ ನಾಯಿಗೆ ಸ್ನಾನ ಮಾಡಿಸುತ್ತಾ ನಿಂತಿದ್ದ ವಿಜಿಯನ್ನು ನೋಡಿ ರಘು ನಕ್ಕ. ಅವನು ನಕ್ಕಿದ್ದು ನೋಡಿ ವಿಜಿಯೂ ನಕ್ಕಳು. ಇಬ್ಬರೂ ನಕ್ಕಿದ್ದನ್ನು ಗಿರಿಜಾ ನೋಡಿಬಿಟ್ಟಳು. ತಗೋ ಅಲ್ಲಿಗೆ ಶುರುವಾಯಿತು ವಿರಾಟ ಪರ್ವ.

‘ಆ ಹಾದ್ರಗಿತ್ತಿ ನಗತಾಳಂತ ನಿನಿಗ್ ಫೋನ್ ಮಾಡಾಕ್ ಪುರಸೊತ್ತಿಲ್ಲ ತಗೋ. ಅಲ್ಲೋ ನಿನ್ ಬುದ್ಧಿ ಗೊತ್ತಿಲ್ಲೇನ್ ನನಗ. ಟೈಮ್ ಪಾಸ್ ಮಾಡಿಕಂಡೀ ಏನ್ ನನ್ನ? ನಮ್ಮಣ್ಣಗ ಹೇಳಿ ವದಿಸಿಬಿಡ್ತನಿ’ ಅಂತೆಲ್ಲ ವದರಾಡಿ ರಘುವನ್ನು ಗಾಬರಿ ಮಾಡಿಬಿಟ್ಟಿದ್ದಳು. ಅವಳ ಅಣ್ಣನ ಹೆಸರನ್ನು ತಂದ ತಕ್ಷಣ ರಘು ಇವಳ ಸಾವಾಸ ಬಿಡಿಸಿಕೊಂಡರೆ ಸಾಕು ಎನ್ನುವಂತಾಗಿದ್ದ. ಮುಂದೆ ಸ್ವಲ್ಪ ದಿನದಲ್ಲಿ ಅವನು ಗಿರಿಜೆಯ ಸಂಪರ್ಕ ಕಡಿಮೆ ಮಾಡುತ್ತಿರುವಾಗ ಗಿರಿಜೆ ಇದಕ್ಕೆಲ್ಲ ವಿಜಿನೇ ಕಾರಣ ಎಂದು ನಿರ್ಧರಿಸಿ ಕಾಲೇಜಿನಲ್ಲಿ ಒಂದು ದಿನ ವಿಜಿಯನ್ನು ತಡವಿಕೊಂಡಳು. ವಿಜಿಗೆ ಇದ್ಯಾವುದರ ಬಗ್ಗೆಯೂ ಕಲ್ಪನೆ ಇರಲಿಲ್ಲ. ರಘು, ಗಿರಿಜಾ... ಮಧ್ಯದಲ್ಲಿ ತಾನು...ಈಗ ಇವಳು ಹೊರಿಸುತ್ತಿರುವ ಆರೋಪ... ಎಲ್ಲವೂ ಒಂದು ಥರಾ ಜಟಿಲವಾದ ಕೋರ್ಟ್ ಕೇಸಿನ ಹಾಗೆ ಕಂಡಿತು.

ಒಳ್ಳೆಯ ಮಾತಿನಲ್ಲಿ ವಿವರಣೆ ನೀಡಲು ಶುರುಮಾಡಿದ ವಿಜಿಗೆ ಇದ್ಯಾಕೋ ದಡ ಹತ್ತುವ ಹಾಗೆ ಕಾಣಿಸುವುದಿಲ್ಲ ಎನ್ನಿಸತೊಡಗಿತು. ತಾಳ್ಮೆ ಕಳೆದುಕೊಂಡು ಗಿರಿಜೆಗೆ ಜೋರು ಮಾಡಿದಳು. ‘ನಿಮ್ಮವ್ವನ್. ನಾನ್ ಆ ಹುಡುಗನ್ನ ಮಾತಾಡ್ಸಿಲ್ಲ ಅಂತ ಎಷ್ಟ್ ಸರ್ತಿ ಹೇಳಬಕೇ ಲೌಡಿ? ನಂಗ್ಯಾಕ ಅವ್ನ್ ಉಸಾಬರಿ. ನಮ್ಮನೀ ಮುಂದಿಂದ ದಿನಾ ನಾಕ್ ಸಾರಿ ಹೋಕ್ಕಾನಾ ಅಂದ್ರ ಇಡೀ ದಿವ್ಸ್ ಹಲ್ ಕಿರಕಂದು ನಿಂದ್ರಾಕ ಅವ್ನೇನ್ ಅಮೀರ್ ಖಾನಾ? ಸಲ್ಮಾನ್ ಖಾನಾ? ನಿನ್ ಹರುಕ್ ಮಕದ್ ಬಾಯ್ ಫ್ರೆಂಡು ನೋಡಾಕ್ ಬಸ್ ಸ್ಟ್ಯಾಂಡಿನ್ಯಾಗ ಹೇರ್ ಪಿನ್ನಾ ಟಿಕಳಿ ಮಾರಾ ಹುಡುಗ್ ಇದ್ದಂಗ್ ಐತಿ. ನನ್ ಹೆಸ್ರು ಅವ್ನ್ ಜತಿ ಹಚ್ಚಾಕ್ ಬಂದೀಯ? ಮುಚ್ಗ್ಯಂದ್ ಹೋಗ್, ಲೌಡೀನ್ ತಂದು’ ಎಂದು ಮುಖ ಮೂತಿ ನೋಡದೆ ಝಾಡಿಸಿಬಿಟ್ಟಿದ್ದಳು.

ಗಿರಿಜಾಗೆ ಆ ಕ್ಷಣದಲ್ಲಿ ಮನಃಪರಿವರ್ತನೆಯಾಯಿತು. ರಘುವಿನ ಮೇಲೆ ಅವಳಿಗೆ ನಂಬಿಕೆ ಬರುವ ಬದಲಾಗಿ, ಅವನ ಮೇಲಿನ ಆಸಕ್ತಿಯೇ ಹೊರಟುಹೋಯಿತು. ಹುಣ್ಣಿಮೆ ಚಂದ್ರನ ಪ್ರತಿಬಿಂಬ ಮುಸುರೆ ಬಾನಿಯಲ್ಲಿ ಬಿದ್ದರೂ ಅಷ್ಟೇ ಸುಂದರವಾಗಿ ಕಾಣುತ್ತದೆ. ಆದರೆ ಇಲ್ಲಿ ಬರೀ ಮುಸುರೆ ಬಾನಿ ಇದೆ, ಹುಣ್ಣಿಮೆ ಚಂದ್ರ ಇಲ್ಲ ಎನ್ನುವುದು ಗಿರಿಜೆಗೆ ಮನದಟ್ಟಾಯಿತು. ಅಂದಿನಿಂದ ಅವಳೂ ರಘುವಿನ ಬಗ್ಗೆ ತಲೆಕೆಡಿಸಿಕೊಳ್ಳದೆ ಬಂದವರೆದುರು ಉಪ್ಪಿಟ್ಟು ಕಾಫಿ ಸರಬರಾಜು ಮಾಡುವ ಕಾರ್ಯಕ್ರಮಕ್ಕೆ ಒಪ್ಪಿಕೊಂಡಳು. ಇದೆಲ್ಲ ಕಳೆದು ಎರಡು ವರ್ಷ ಆಗಿದ್ದಿರಬೇಕು. ಈಗ ಚರಿತ್ರೆಯ ಪಾತ್ರವೊಂದು ಜೀವ ತಳೆದು ನಿಂತಂತೆ ರಘು ಅವಳ ಮುಂದೆ ನಿಂತಿದ್ದ.

‘ಯಾಕ್ ಹುಡುಕ್ಕೊಂಡ್ ಬಂದ್ರೀ?’
‘ಇಲ್ಲಿ ಒಂದು ಕಂಪೆನಿಯಲ್ಲಿ ವೆಹಿಕಲ್ ಪಾರ್ಟ್ಸ್ ಸಪ್ಲೈ ಮಾಡಕ್ಕೆ ಟೆಂಡರ್ ಕರೆದಿದ್ರು. ನಾನು ಭಾವ ಸೇರಿಕಂಡು ಹಾಕಿದಿವಿ. ನಿಮ್ಮಿಂದ ಒಂದು ಹೆಲ್ಪ್ ಆಗಬೇಕಿತ್ತು. ಅದಕ್ಕೆ ಬಂದೆ’. ‘ಏನು ಹೆಲ್ಪು?’
‘ಅದೂ ಟೆಂಡರ್ ನಮಿಗೇ ಆಗೇತಿ. ಈವತ್ತೇ ಮೂವತ್ ಸಾವ್ರ ಕಟ್ಟಬೇಕು. ಇಲ್ಲಾಂದ್ರೆ ಕೈ ತಪ್ಪಿ ಹೋಕ್ಕತಿ. ಸ್ವಲ್ಪ ನಿಂ ಹತ್ರ ದುಡ್ ಇದ್ರೆ ಕೊಡ್ರೀ. ಊರಿಗ್ ಹೋದ್ ತಕ್ಷಣ ವಾಪಾಸ್ ಕಳಸ್ತನಿ’
‘ಮೂವತ್ ಸಾವ್ರ? ನನ್ ಹತ್ರ ಅಷ್ಟ್ ಇಲ್ಲ’
‘ಯಾರ್ ಹತ್ರಾನಾರೂ ಇಸ್ಕೊಡ್ರಿ. ಒಂದಿಪ್ಪತ್ ಸಾವ್ರ ಆದ್ರೂ ಅಡ್ಜಸ್ಟ್ ಮಾಡಿಕ್ಯಂತನಿ...ಇಲ್ಲ ಅನ್ನಬ್ಯಾಡ್ರಿ. ನಮ್ಮೂರೋರು ನೀವೊಬ್ರೇ ಇರದು ಅಂತ ಹುಡುಕ್ಯಂಡ್ ಬಂದೀನಿ. ನಾಳೆ ಬೆಳಿಗ್ಗೆ ಕಟ್ಟಿದ್ರೂ ಆಗ್ತತಿ’.

‘ಆತು ಸಾಯಂಕಾಲ ಬರ್ರಿ’
ಗೆಳತಿಯರು ಬಂದ ಮೇಲೆ ವಿಜಿ ಎಲ್ಲವನ್ನೂ ಅರುಹಿ ಎಲ್ಲರೂ ಇದಕ್ಕೆ ಸಹಾಯ ಮಾಡಬೇಕೆಂದು ಕೇಳಿಕೊಂಡಳು.
‘ನನ್ ಹತ್ರ ಗೋವಾಕ್ಕೆ ಅಂತ ಇಟ್ಟಿದ್ ಮೂರ್ ಸಾವ್ರ ಐತಿ. ಅದನ್ನೇ ಕೊಡ್ತೀನಿ. ನೀವೂ ನೋಡ್ರೇ... ನಮ್ಮೂರಿನ್ ಹುಡುಗ ಪಾಪ’. ಉಳಿದ ಎಲ್ಲರೂ ಇದಕ್ಕೆ ಅಪಸ್ವರ ಎತ್ತಿದರು.

‘ಊರಿಂದ ಯಾವನೋ ಕಳ್ಳ ಬಂದ್ರೂ
ನಮ್ಮೂರ್ನೋನು ಅಂತ ದುಡ್ ಕೊಟ್ಬಿಡ್ತೀಯೇನೆ? ಪೂರ್ತಿ ಕೊಡ್ಬೇಡ ಸುಮ್ನೆ ಇರು. ನೀನೆಷ್ಟು ಕೊಟ್ರೂ ತಗೊಂಡು ಹೋಗ್ತಾನವನು. ಟೆಂಡರ್ ಗಿಂಡರ್ ಎಲ್ಲ ಸುಳ್ಳು’ ಎಂದಳು ರಶ್ಮಿ,
ಮಾರನೇ ದಿನ ರಘು ಬಂದ. ವಿಜಿ ಎರಡು ಸಾವಿರ ಕೊಟ್ಟಳು. ಆಗಿನ ದಿನಕ್ಕೆ ಎರಡು ಸಾವಿರ ಎಂದರೆ ಮೂರು ಬೆಡ್ರೂಮಿನ ಮನೆ ಬಾಡಿಗೆಗೆ ಸಿಗುತ್ತಿತ್ತು.  ರಘು ಮರುಮಾತಾಡದೆ ಪ್ರಸನ್ನವದನನಾಗಿ ಹೊರಟ. ಅವನನ್ನು ಮರೆಯಲ್ಲೇ ನೋಡಿದ ಉಳಿದವರು ವಿಜಿಯ ದುಡ್ಡು ದೇವರ ಹುಂಡಿ ಸೇರಿದಂತೆ ಎಂದು ಜಳ ಜಳ ಹೇಳಿಬಿಟ್ಟರು. ರಘು ಕಾಣೆಯಾದ.

ದುಡ್ಡಿಲ್ಲ ಅನ್ನುವ ಕಾರಣಕ್ಕೆ ಗೋವಾ ಟ್ರಿಪ್ ಕ್ಯಾನ್ಸಲ್ ಆಯಿತು. ಅದೇ ರಜೆಗೆಂದು ದಾವಣಗೆರೆಗೆ ಹೋದಾಗ ವಿಜಿಯ ಮನೆ ಮುಂದಿಂದ ರಘುವಿನ ಗಾಡಿ ಹಾ­ಯಲಿಲ್ಲ. ಇವಳು ದುಡ್ಡು ಕೇಳಲು ರಘುವಿನ ಅಕ್ಕನ ಮನೆಗೆ ಹೋದಳು.
ರಘುವಿನ ಅಕ್ಕ ಸರಳವಾಗಿ ಇಲ್ಲ ಎಂದಳು. ‘ಅವ್ನ್ ಈಸ್ಕಂಡಿದ್ದಕ್ಕೂ ನೀ ಕೊಟ್ಟಿದ್ದಕ್ಕೂ ಸರಿ ಹೋತು. ಅವ್ನು ಮನಿ ಬಿಟ್ಟು ಆರ್ ತಿಂಗಳಾತು. ನಮ್ ಅಂಗಡ್ಯಾಗೂ ದುಡ್ ಕದ್ಕಂಡ್ ಹೋಗ್ಯಾನ.

ಆ ದುಡ್ಡು ನಿಂಗ್ ವಾಪಾಸ್ ಬರಾಂಗಿಲ್ಲ ತಿಳಕೋ’
ನಂಬಿಕೆಯ ಆಲದ ಮರಕ್ಕೆ ಪೆಟ್ಟೊಂದು ಬಿದ್ದು, ಕಲಿತ ಪಾಠದ ಬೇರು ಆಳಕ್ಕೆ ಇಳಿಯಿತು. ಅಲ್ಲೇ ಎಲೆಯೊಂದು ಚಿಗಿಯಿತು.

‘ಇವನಾರವ, ಇವನಾರವ,
ಇವನಾರವನೆಂದೆನಿಸದಿರಯ್ಯಾ
ಇವ ನಮ್ಮವ ಇವ ನಮ್ಮವ
ಇವ ನಮ್ಮವನೆಂದೆನಿಸಯ್ಯಾ’
ಸಾಲ ಕೊಡೋ ಪ್ರಮೇಯ ಒಂದು ಬರದಿದ್ರೆ ಎಲ್ಲರನ್ನೂ ನಮ್ಮೋರು ಅಂದ್ಕೋಬಹುದು. ಪಾಪ ಬಸವಣ್ಣನವರಿಗೇನು ಗೊತ್ತಾಗಬೇಕು ಲೋಕ ಜ್ಞಾನ. ಅವ್ರು ಎಂದೂ ಯಾರಿಗೂ ಸಾಲ ಕೊಟ್ಟಿರಲಿಲ್ಲವೇನೋ ಎಂದುಕೊಂಡಳು ವಿಜಿ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT