ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಳೆದು ಹೋದ ಬಿಂಬದ ಹುಡುಕಾಟದಲ್ಲಿ...

Last Updated 24 ಸೆಪ್ಟೆಂಬರ್ 2011, 19:30 IST
ಅಕ್ಷರ ಗಾತ್ರ

ಮುಖ್ಯಮಂತ್ರಿ ಬಾಯಿ ತುಂಬ ನಗುತ್ತಿದ್ದರು. ನಮ್ಮ ಕಾರ್ಟೂನಿಸ್ಟ್ ಪಿ.ಮಹಮ್ಮದ್ ನಿತ್ಯ ಚಿತ್ರಿಸುವ ಸದಾನಂದಗೌಡರ ನಗೆಗಿಂತ ಅವರ ಬಾಯಿ ಇನ್ನೂ ದೊಡ್ಡದೇ ಇತ್ತು!
 
ಅವರು ಬರೀ ನಗುತ್ತಿರಲಿಲ್ಲ ಮನಸ್ಸು ಬಿಚ್ಚಿಯೂ ಮಾತನಾಡುತ್ತಿದ್ದರು. ಗೌಡರು ತಮ್ಮ ಗೃಹ ಕಚೇರಿ `ಕೃಷ್ಣಾ~ದಲ್ಲಿ ಬೆಂಗಳೂರಿನ ಪತ್ರಿಕೆಗಳ ಸಂಪಾದಕರನ್ನು ಚಹಾಕೂಟಕ್ಕೆ ಕರೆದಿದ್ದರು.

ಅವರು ಮಾತು ಮುಗಿಸಿದ ಮೇಲೆ, ಸಂಪಾದಕರು ಕೇಳಿದ ಕೆಲವು ಪ್ರಶ್ನೆಗಳಿಗೆ ಉತ್ತರ ಕೊಟ್ಟುದನ್ನು  ನೋಡಿದರೆ  `ಈ ಮನುಷ್ಯ ಪರವಾಗಿಲ್ಲ ತನ್ನ ಮಿತಿಗಳು ಏನು ಎಂದು ಗೊತ್ತಿದೆ~ ಎಂದು ಅನಿಸಿತು. `ಆ ಮಿತಿಗಳ ನಡುವೆಯೂ ಏನಾದರೂ ಮಾಡಬೇಕು ಎಂಬ ಕನಸು ಇದೆ~ ಎಂದೂ ಅನಿಸಿತು.

ಮುಖ್ಯಮಂತ್ರಿ ಡಿ.ವಿ.ಸದಾನಂದಗೌಡರು ಕುಳಿತಿರುವುದು ಮುಳ್ಳಿನ ಕುರ್ಚಿ. `ಕಳೆದ ಮೂರು ವರ್ಷಗಳ ಆಡಳಿತದಲ್ಲಿ ನಾವು ನಪಾಸಾಗಿದ್ದೇವೆ~ ಎಂಬುದನ್ನು ಅವರೇ ಒಪ್ಪಿಕೊಳ್ಳುತ್ತಾರೆ. ತಾವು ಕುಳಿತಿರುವ ಕುರ್ಚಿ ಎಷ್ಟು ತಿಂಗಳಿನದು ಎಂದು ಅವರಿಗೂ ಖಚಿತ ಇದ್ದಂತಿಲ್ಲ.
 
ಯಡಿಯೂರಪ್ಪ ಮತ್ತೆ ಅದೇ ಕುರ್ಚಿಯಲ್ಲಿ ಕುಳಿತುಕೊಳ್ಳಲು ಶಪಥ ತೊಟ್ಟಿದ್ದಾರೆ. `ಸದಾನಂದಗೌಡರು ಭರತನ ಹಾಗೆ  ಕುರ್ಚಿಯ ಮುಂದೆ ಕುಳಿತಿದ್ದಾರೆ, ಅದರ ಮೇಲೆ ಕುಳಿತಿಲ್ಲ~ ಎಂದು ವಿಶ್ಲೇಷಿಸುವವರೂ ಇಲ್ಲದಿಲ್ಲ.

ಆದರೂ ಅವರು ಅಧಿಕಾರ ವಹಿಸಿಕೊಂಡ ಮೊದಲ ದಿನವೇ ತಮ್ಮ ಮನೆಯವರಿಗೆ ಸರ್ಕಾರದ ವ್ಯವಹಾರದಲ್ಲಿ ಕೈ ಹಾಕಬೇಡಿ ಎಂದು ತಾಕೀತು ಮಾಡಿದ್ದಾರೆ. ದೀಪವನ್ನು ಸ್ವತಃ ಮುಟ್ಟಿ ನೋಡಿಯೇ ಅದು ಬಿಸಿ ಎಂದು ತಿಳಿದುಕೊಳ್ಳಬೇಕಿಲ್ಲ.

ಹಿಂದಿನ ಮುಖ್ಯಮಂತ್ರಿಗಳ ಅನುಭವ ಅವರಿಗೆ ನೆನಪು ಇದ್ದಿರಬಹುದು! ತಮ್ಮ ಮೇಲೆ ಭ್ರಷ್ಟಾಚಾರದ ಒಂದೇ ಒಂದು ಆರೋಪ ಬಂದರೂ ಈ ಕುರ್ಚಿಯ ಮೇಲೆ ಕುಳಿತುಕೊಳ್ಳುವುದಿಲ್ಲ ಎಂದೂ ಅವರು ಸಂಪಾದಕರ ಮುಂದೆ ಸ್ಪಷ್ಟಪಡಿಸಿದರು.

ಕಳೆದ 40-50 ದಿನಗಳ ಅವಧಿಯಲ್ಲಿ ಅವರು ಹಾಗೆಯೇ ನಡೆದುಕೊಂಡಿದ್ದಾರೆ.ಕಾನೂನುಬಾಹಿರವಾದ ಕೆಲಸ ಮಾಡಿಲ್ಲ. ಅಂಥ ಕೆಲಸ ಮಾಡಿಕೊಡಿ ಎಂದು ಕೇಳಿಬಂದವರಿಗೆ `ಆಗುವುದಿಲ್ಲ ಮಾರಾಯ್ರೆ~ ಎಂದು ಸಾಗಹಾಕಿದ್ದಾರೆ. ಈ ಸರ್ಕಾರಕ್ಕೆ ಇನ್ನೂ ಎರಡು ವರ್ಷಗಳ ಅವಧಿಯಿದೆ.
 
ಅದನ್ನು ಪೂರೈಸುತ್ತದೆಯೇ ಇಲ್ಲವೇ ಎಂಬುದು ಭವಿಷ್ಯಕ್ಕೆ ಸೇರಿದ ಪ್ರಶ್ನೆ.ಯಡಿಯೂರಪ್ಪನವರು ಮುಖ್ಯಮಂತ್ರಿಯಾಗಿದ್ದಾಗ ಏನಾದರೂ ಅಘಟಿತ ಘಟನೆ ನಡೆದು ಹಳಿಯ ಮೇಲೆ ಹೊರಟಿದ್ದ ಸರ್ಕಾರ ದಾರಿ ತಪ್ಪುತ್ತಿತ್ತು.
 
ಮತ್ತೆ ಹಳಿಯ ಮೇಲೆ ಬರಲು ವೇಳೆ ಹಿಡಿಯುತ್ತಿತ್ತು. ಆ ಮೂರು ವರ್ಷ ಸರ್ಕಾರ ಇತ್ತೇ ಎಂಬ ಪ್ರಶ್ನೆಗೆ ಉತ್ತರ ಕೊಡುವುದು ಕಷ್ಟವೇನೂ ಅಲ್ಲ. ಈಗ ಅದನ್ನು ನೂತನ ಮುಖ್ಯಮಂತ್ರಿಗಳೇ ಪರೋಕ್ಷವಾಗಿ ಒಪ್ಪಿಕೊಳ್ಳುತ್ತಿದ್ದಾರೆ.

ಯಡಿಯೂರಪ್ಪ ಮತ್ತು ಸದಾನಂದಗೌಡರ ಕಾರ್ಯಶೈಲಿಯಲ್ಲಿ ಬಹಳಷ್ಟು ಭಿನ್ನತೆಗಳು ಇವೆ. ಯಡಿಯೂರಪ್ಪನವರಿಗೆ ತಾವು ಈ ಸರ್ಕಾರವನ್ನು ಅಧಿಕಾರಕ್ಕೆ ತಂದವ ಎಂಬ ಹೆಮ್ಮೆ  ಇತ್ತು. ಅದು ಬರುಬರುತ್ತ ಸರ್ವಾಧಿಕಾರದ ವರ್ತನೆಯಲ್ಲಿ ಪರ್ಯವಸಾನವಾಯಿತು. ಸದಾನಂದಗೌಡರಿಗೆ ಆ ಹಮ್ಮು ಇಲ್ಲ. 

ಅವರಿಗೆ ಇದ್ದಕಿದ್ದಂತೆ ಅದೃಷ್ಟ ಒಲಿದು ಬಂದಿದೆ. `ಪುರುಷಸ್ಯ ಭಾಗ್ಯಂ...~ ಎನ್ನುವಂತೆ. ಯಡಿಯೂರಪ್ಪ ನಕ್ಕುದನ್ನು ನೋಡಿದವರು ಕಡಿಮೆ. ಅವರ ದೇಹಭಾಷೆಯಲ್ಲಿಯೇ ತೀವ್ರ ಬಿಗಿತ ಇತ್ತು. ಸದಾನಂದಗೌಡರು ಹಾಗೆ ಅಲ್ಲ.
 
ಯಡಿಯೂರಪ್ಪನವರಿಗಿಂತ ಹತ್ತು ವರ್ಷ ಚಿಕ್ಕವರಾದ ಅವರ ನಡಿಗೆಯಲ್ಲಿ ಬೀಸು ಇದೆ; ಹಗುರ ಇದೆ. ಸಂಭಾಷಣೆಯಲ್ಲಿ ಆತ್ಮೀಯತೆ ಇದೆ. ಉದ್ದೇಶಗಳಲ್ಲಿ ಪ್ರಾಮಾಣಿಕತೆ ಇದೆ.
 
ಆದರೆ, ಕಳೆದ 40-50 ದಿನಗಳ ಆಡಳಿತದ ಅವಧಿಯಲ್ಲಿ ಅವರಿಗೆ ಸಂಪುಟದ ಸಹೋದ್ಯೋಗಿಗಳಿಂದ ನಿರೀಕ್ಷಿತ ಸಹಕಾರ ಸಿಕ್ಕಿದೆಯೇ ಎಂದರೆ ಇಲ್ಲ ಎಂಬ ಉತ್ತರವೇ ಬರುತ್ತದೆ. ಪಕ್ಷದಲ್ಲಿನ ಗುಂಪುಗಾರಿಕೆ ಅದಕ್ಕೆ ಕಾರಣವಾದಂತಿದೆ.

`ವಾಜಪೇಯಿ ಕಟ್ಟಿದ ಪಕ್ಷದಲ್ಲಿ ಈಗ ನೂರೆಂಟು ಗುಂಪು~ ಎಂದು ಮೊನ್ನೆ ಪಕ್ಷದ ಸಭೆಯಲ್ಲಿ ಗೌಡರು ಗದ್ಗದಿತರಾದುದು ತಾವು ಎದುರಿಸುತ್ತಿರುವ ಈ ಸಮಸ್ಯೆಗಳ ಇಂಗಿತದಂತೆಯೇ ಇತ್ತು.

ಯಡಿಯೂರಪ್ಪ ಗುಂಪಿನವರಾಗಿಯೇ ಮುಖ್ಯಮಂತ್ರಿ ಹುದ್ದೆ ಹಿಡಿದಿರುವ ಸದಾನಂದಗೌಡರ ಜತೆಗೆ ಸೇರಿಕೊಂಡು ಕೆಲಸ ಮಾಡಲು ಅನಂತಕುಮಾರ್ ಗುಂಪಿನ ಜಗದೀಶ ಶೆಟ್ಟರ್ ಅವರಾಗಲೀ, ಪಕ್ಷದ ಅಧ್ಯಕ್ಷ ಕೆ.ಎಸ್.ಈಶ್ವರಪ್ಪ ಗುಂಪಿನವರಾಗಲೀ ಇನ್ನೂ ಸಿದ್ಧರಾದಂತೆ ಕಾಣುವುದಿಲ್ಲ.  ಕೊಪ್ಪಳದ ಉಪಚುನಾವಣೆ ಅದಕ್ಕೆ ಒಂದು ನೆಪವೂ ಇರಬಹುದು.

ಈ ಸಂಪುಟದಲ್ಲಿ ಯಡಿಯೂರಪ್ಪನವರಿಗೆ, ಅನಂತಕುಮಾರ್ ಅವರಿಗೆ, ಈಶ್ವರಪ್ಪ ಅವರಿಗೆ ನಿಷ್ಠರಾದ ಸಚಿವರು ಇದ್ದಾರೆ. ಆದರೆ, ಗೌಡರಿಗೇ ನಿಷ್ಠರಾದ ಸಚಿವರು ಇಲ್ಲ. ಖಾತೆ ಹಂಚಿಕೆಯಲ್ಲಿನ ಅಸಮಧಾನಗಳು ಇನ್ನೂ ಉಳಿದುಕೊಂಡಿವೆ.
 
ಬಹುತೇಕ ಸಚಿವರಿಗೆ  ಈ ಸರ್ಕಾರಕ್ಕೆ ಒಂದು ವರ್ಚಸ್ಸು ತಂದುಕೊಡಬೇಕು ಎಂಬ ಕಾಳಜಿ ಇಲ್ಲ. ಉನ್ನತ ಶಿಕ್ಷಣ ಸಚಿವ  ವಿ.ಎಸ್.ಆಚಾರ್ಯರು ಮಾತ್ರ ಭೀಷ್ಮನ ಹಾಗೆ ಗೌಡರಿಗೆ ಮಾರ್ಗದರ್ಶನ ಮಾಡುತ್ತಿದ್ದಾರೆ.

ನಗರಾಭಿವೃದ್ಧಿ ಸಚಿವ ಸುರೇಶಕುಮಾರ್ ಅವರೂ ಆಗಾಗ ಗೌಡರ ಜತೆಗೆ ಕಷ್ಟಸುಖ ಹಂಚಿಕೊಂಡು ನಿಂತಿದ್ದಾರೆ. ಒಂದು ಸರ್ಕಾರವನ್ನು ಸಮರ್ಥವಾಗಿ ನಡೆಸಲು, ಅದಕ್ಕೆ ಒಂದು ದಿಕ್ಕು ಒದಗಿಸಲು ಇಷ್ಟು ಸಾಲದು.
 
ಎಲ್ಲ ಸಚಿವರು ಒಂದು ತಂಡವಾಗಿ ಕೆಲಸ ಮಾಡುವಂತೆ ಆಗಬೇಕು. ಅವರನ್ನು ವಿಧಾನಸೌಧಕ್ಕೆ ಬರುವಂತೆ ಮಾಡುವುದರಲ್ಲಿಯೇ ಗೌಡರಿಗೆ ಸಾಕು ಸಾಕಾಗಿ ಹೋಗಿದೆ. ಅವರಿಗೆಲ್ಲ ರೂಢಿ ತಪ್ಪಿ ಹೋಗಿದೆ. ಹಳೆಯ ಚಾಳಿ ಬಿಡಿಸುವುದು ಬಹಳ ಕಷ್ಟ!

ವಿಧಾನಸೌಧದಲ್ಲಿ ಸಚಿವರು ಗಟ್ಟಿಯಾಗಿ ಕುಳಿತು ತಮ್ಮ ಕೆಲಸವನ್ನು ತಾವು ನಿಷ್ಠೆಯಿಂದ, ದಕ್ಷತೆಯಿಂದ ಮಾಡುವ ವರೆಗೆ ಆಡಳಿತ ಯಂತ್ರಕ್ಕೆ ಬಿಗಿ ಬರುವುದಿಲ್ಲ. ದೇವರಾಜ ಅರಸು, ವೀರೇಂದ್ರ ಪಾಟೀಲ, ರಾಮಕೃಷ್ಣ ಹೆಗಡೆ, ಎಚ್.ಡಿ.ದೇವೇಗೌಡ, ಎಸ್.ಎಂ.ಕೃಷ್ಣ ಅವರೆಲ್ಲ ದಕ್ಷ ಆಡಳಿತಕ್ಕೆ ಹೆಸರಾದವರು.
 
ತಮ್ಮ ವರ್ಚಸ್ಸಿನಿಂದ ಸರ್ಕಾರದ ಅರೆಕೊರೆಗಳನ್ನು ಮುಚ್ಚಿ ಹಾಕುವಂಥ ಸಮರ್ಥರು. ಜನರು ಒಂದು ಸರ್ಕಾರವನ್ನು ಚುನಾಯಿಸುವಾಗ ರಾಜ್ಯಕ್ಕೆ, ತನಗೆ ಏನಾದರೂ ಒಳ್ಳೆಯದಾದೀತು ಎಂಬ ನಿರೀಕ್ಷೆ ಇಟ್ಟುಕೊಂಡಿರುತ್ತಾರೆ.

ಹಾಗೆ ಜನರ ನಿರೀಕ್ಷೆಯ ಅಲೆಯ ಮೇಲೆ ಅಧಿಕಾರಕ್ಕೆ ಬಂದ ಸರ್ಕಾರ ಬಿಗಿಯಾದ ಆಡಳಿತ, ಆರ್ಥಿಕ ಶಿಸ್ತು, ಸಂಪನ್ಮೂಲದ ಕ್ರೋಡೀಕರಣ, ಜನಪರ ಯೋಜನೆಗಳ ಅನುಷ್ಠಾನ, ಭ್ರಷ್ಟಾಚಾರಕ್ಕೆ ಕಡಿವಾಣ ಮುಂತಾದ ಕ್ರಮಗಳ ಮೂಲಕ ಮತದಾರನ ನಿರೀಕ್ಷೆಗಳನ್ನು ಈಡೇರಿಸಲು ಪ್ರಯತ್ನ ಮಾಡಬೇಕಾಗುತ್ತದೆ.
 
ಆದರೆ, ಯಡಿಯೂರಪ್ಪ ಸರ್ಕಾರ ಭಿನ್ನಮತ, ಹಗರಣ ಮತ್ತು ಚುನಾವಣೆಗಳಲ್ಲಿ ಮುಳುಗಿ ಆಡಳಿತವನ್ನು ಬಿಗಿ ಮಾಡುವ ಕಡೆ ಗಮನ ಹರಿಸಲಿಲ್ಲ.

ಈಗ ಉಳಿದ ಎರಡು ವರ್ಷಗಳಲ್ಲಿ ಸದಾನಂದಗೌಡರು ಜನರ ಆಶೋತ್ತರಗಳು ಏನಿದ್ದುವು, ಅವುಗಳನ್ನು ಈಡೇರಿಸಲು ತಮ್ಮ ಸರ್ಕಾರ ಏನು ಮಾಡಬೇಕು ಎಂಬ ಕಡೆಗೆ ಗಮನ ಕೊಡಬೇಕಾಗಿದೆ.

ಯಾವಾಗಲೂ ಜೀವನದಲ್ಲಿ ಕಳೆದು ಹೋದ ಅವಧಿಯೇ ದೊಡ್ಡದಾಗಿರುತ್ತದೆ.ಉಳಿದಿರುವ ಅವಧಿ ಎಷ್ಟು ಎಂದು ಗೊತ್ತಿರುವುದಿಲ್ಲ.ಆಡಳಿತವನ್ನು ಸರಿದಾರಿಗೆ ತರಲು ಆರು ತಿಂಗಳು ಸಾಕು.

ಒಳ್ಳೆಯ ಸುದ್ದಿಗಳು ಕೆಟ್ಟ ದಿನಗಳನ್ನು ಮರೆಸುತ್ತವೆ ಎಂಬ ನಂಬಿಕೆಯಲ್ಲಿ ಮುಖ್ಯಮಂತ್ರಿಗಳು ಇದ್ದಾರೆ. ಆಡಳಿತದ ಕಡೆಗೆ ಹೆಚ್ಚು ಗಮನ ಕೊಡಬೇಕು ಎಂದು ಪಕ್ಷದ ಗೊಡವೆಗಳಿಂದ ದೂರವನ್ನು ಕಾಯ್ದುಕೊಳ್ಳಲೂ ಅವರು ಪ್ರಯತ್ನ ಮಾಡುತ್ತಿದ್ದಂತಿದೆ.

ಕೊಪ್ಪಳ ಚುನಾವಣೆ ನಿಮಗೆ ಎಷ್ಟು ಮುಖ್ಯ ಎಂಬ ಪ್ರಶ್ನೆಗೆ ಅವರು ಕೊಟ್ಟ ಉತ್ತರ ಅದೇ ಇಂಗಿತವನ್ನು ಕೊಡುವಂತೆ ಇತ್ತು. ಗೌಡರು, ಚುನಾವಣೆಯ ಫಲಿತಾಂಶ ತಮಗೆ ಅಷ್ಟು ಮುಖ್ಯವಲ್ಲ; ಪಕ್ಷಕ್ಕೆ ಬಹಳ ಮುಖ್ಯ ಎಂದರು.
 
ಅವರ ಸ್ಥಾನದಲ್ಲಿ ಯಡಿಯೂರಪ್ಪ ಇದ್ದರೆ ಇದೇ ಉತ್ತರವನ್ನು ಅವರು ಕೊಡುತ್ತಿರಲಿಲ್ಲ. ಅವರ ದೃಷ್ಟಿಯಲ್ಲಿ ಪಕ್ಷದ ಹೊಣೆಯೂ ಅವರದೇ ಆಗಿತ್ತು. ಸರ್ಕಾರದ ಹೊಣೆಯೂ ಅವರದೇ ಆಗಿತ್ತು. ಅವರು ಎರಡೂ ಕಡೆ `ಸುಪ್ರೀಂ~ ಆಗಿರಬೇಕು ಎಂದೇ ಬಯಸುತ್ತಿದ್ದವರು.

ಈಗಲೂ ಕೊಪ್ಪಳ ಚುನಾವಣೆ ಯಡಿಯೂರಪ್ಪ ಅವರಿಗೇ ಮುಖ್ಯ.  ಕೋರ್ಟಿನ ಕಟಕಟೆಯಲ್ಲಿ ನಿಂತಿರುವ ಯಡಿಯೂರಪ್ಪ, ಕೊಪ್ಪಳ ಚುನಾವಣೆಯ ಗೆಲುವು ತಮಗೆ ಒಂದು ಜನಾದೇಶ ಎಂದು ಭಾವಿಸಿದ್ದಾರೆ.

ಮತ್ತು ಅಲ್ಲಿ ಬಿಜೆಪಿ ಗೆದ್ದರೆ ಅದು ತಮಗೆ ಸಿಕ್ಕ ಜನಾದೇಶ ಎಂದು ಪ್ರಚಾರ ಮಾಡುವ ಯತ್ನದಲ್ಲಿ ಇದ್ದಾರೆ. ಯಡಿಯೂರಪ್ಪನವರಿಗೆ ಇದು ಪ್ರತಿಷ್ಠೆ ಎಂಬ ಕಾರಣಕ್ಕಾಗಿಯೇ ಈಶ್ವರಪ್ಪ, ಶೆಟ್ಟರ್ ಮುಂತಾದ ನಾಯಕರು ಕೈ ಸಡಿಲ ಬಿಟ್ಟಿದ್ದಾರೆ.

ಅನಂತ್‌ಕುಮಾರ್ ಹಾಜರಿ ಹಾಕಿ ಹೋಗಿದ್ದಾರೆ. ಕೊಪ್ಪಳದಲ್ಲಿ ಬಿಜೆಪಿ ಅಭ್ಯರ್ಥಿ ಸೋತರೆ ಅವರಿಗೆಲ್ಲ ಸಂತಸ! ದಿನಕಳೆದಂತೆ ಬಿಜೆಪಿ ನಾಯಕರಲ್ಲಿ ಆತ್ಮಹತ್ಯೆ ಪ್ರವೃತ್ತಿ ಹೆಚ್ಚುತ್ತಿದೆಯೇ ಹೊರತು ಕಡಿಮೆ ಆಗುತ್ತಿಲ್ಲ.

`ಸವತಿಯ ಗಂಡನ ಕಣ್ಣು ಹೋಗಲಿ~ ಎಂಬ ಮನಸ್ಸು ಇದು! ಲಿಂಗಾಯತರಾದ ಶೆಟ್ಟರ್ ಮತ್ತು ಕುರುಬರಾದ  ಈಶ್ವರಪ್ಪ ಜತೆಯಾಗಿ ಯಡಿಯೂರಪ್ಪ ಅಕ್ಕಪಕ್ಕ ನಿಂತರೆ ಕೊಪ್ಪಳದಲ್ಲಿ ಕರಡಿ ಸಂಗಣ್ಣ ಗೆಲ್ಲುವುದು ಬಹಳ ಕಷ್ಟವೇನೂ ಅಲ್ಲ.

ಹೇಗಿದ್ದರೂ ಯಡಿಯೂರಪ್ಪ ಸಂಪುಟದಲ್ಲಿ ಎರಡು ಪ್ರಮುಖ ಖಾತೆಗಳನ್ನು ಹೊಂದಿದ್ದ, ಈಗಲೂ ಅದೇ ಖಾತೆ ಹೊಂದಿರುವ ಇಬ್ಬರು ಸಚಿವರು ಸಂಗಣ್ಣ ಅವರಿಗೆ ಕೋಟಿ ಕೋಟಿ ಹಣವನ್ನು ಚುನಾವಣೆಗಿಂತ ಮುಂಚೆಯೇ ಕೊಟ್ಟಿದ್ದರು;  ಮತ್ತು ಅದನ್ನು ಸಂಗಣ್ಣ ಈಗಾಗಲೇ ಮನೆ ಮನೆಗೆ ಹಂಚಿದ್ದಾರೆ ಎಂಬ ಸುದ್ದಿ ಇದೆ!

ಒಂದು ದೃಷ್ಟಿಯಿಂದ ಕೊಪ್ಪಳದಲ್ಲಿ ಬಿಜೆಪಿ ಸೋಲು ಸದಾನಂದಗೌಡರಿಗೂ ಅನುಕೂಲ! ಯಡಿಯೂರಪ್ಪ ದುರ್ಬಲವಾದಷ್ಟು ಅವರಿಗೆ ಅನುಕೂಲ. ಇಲ್ಲವಾದರೆ ಯಡಿಯೂರಪ್ಪ ಹಿಂದಿನ ಸೀಟಿನ `ಚಾಲನೆ~ ಆರಂಭಿಸುತ್ತಾರೆ. ತಾವು ಹೇಳಿದ ಕೆಲಸ ಮಾಡಬೇಕು ಎಂಬ ದಿಕ್ಖತ್ತು ಕೊಡುತ್ತಾರೆ.
 
ಮುಂದಿನ ತಿಂಗಳು 3ರಂದು ಯಡಿಯೂರಪ್ಪ ಅವರ ಜಾಮೀನು ಅರ್ಜಿ ನ್ಯಾಯಾಲಯದ ಮುಂದೆ ವಿಚಾರಣೆಗೆ ಬರಲಿದೆ. ಯಡಿಯೂರಪ್ಪ ಅವರಿಗೆ ಅಲ್ಲಿ ಸೋಲಾದರೆ ಆಗಲೂ ಗೌಡರಿಗೆ ಅನುಕೂಲವಾಗುತ್ತದೆ. ಯಡಿಯೂರಪ್ಪ ಆಗ ಕಷ್ಟದಲ್ಲಿ ಸಿಲುಕಿಕೊಳ್ಳುತ್ತಾರೆ.

ಕಾನೂನಿನ ಕುಣಿಕೆಯಿಂದ ತಪ್ಪಿಸಿಕೊಂಡು ಬರಲು ಅವರಿಗೆ ಎಷ್ಟು ದಿನ ಬೇಕಾಗುತ್ತದೋ ಗೊತ್ತಿಲ್ಲ. ರೆಡ್ಡಿ ಸೋದರರ ಕೊರಳಿಗೆ ಒಂದಾದ ನಂತರ ಮತ್ತೊಂದು ಕುಣಿಕೆ ಬೀಳುತ್ತಿವೆ. ಒಂದು ಸಾರಿ ಮನುಷ್ಯ ಕಾರಾಗೃಹ ಸೇರಿಬಿಟ್ಟರೆ ಮತ್ತೆ ಹೊರಗೆ ಬರುವುದು ಬಹಳ ಕಷ್ಟ.

ಎ.ರಾಜಾ, ಕನಿಮೊಳಿ, ಕಲ್ಮಾಡಿಯವರನ್ನು ಈಗ ಯಾರು ನೆನಪಿಸಿಕೊಳ್ಳುತ್ತಾರೆ? ಕಾರಾಗೃಹದಲ್ಲಿ ನಮ್ಮ ಜತೆಗೆ ನಮ್ಮ ದುಸ್ಸಾಹಸಗಳು, ಕಹಿ ನೆನಪುಗಳು ಮಾತ್ರ ಇರುತ್ತವೆ. ನಮ್ಮ ಗಾಯಗಳನ್ನು ನಾವೇ ನೆಕ್ಕುತ್ತ ಇರಬೇಕಾಗುತ್ತದೆ. ಬದುಕು ಕ್ರೂರವಾದುದು.

ಯಡಿಯೂರಪ್ಪ ಅವರಿಗೆ ಕಷ್ಟಗಳು ಹೆಚ್ಚಾದಷ್ಟು ಅದು ಗೌಡರಿಗೆ ಅನುಕೂಲ. ಇದನ್ನು ಗೌಡರು ಸ್ವತಃ ಬಯಸುತ್ತಾರೆ ಎಂದು ಅಲ್ಲ. ಆದರೆ, ರಾಜಕೀಯದಲ್ಲಿ ನಡೆಯುವುದೇ ಹೀಗೆ. ಆಗುವುದೇ ಹಾಗೆ.

ಯಡಿಯೂರಪ್ಪ ಅವರಿಗೆ ಮತ್ತೆ ಮತ್ತೆ ನಿದ್ದೆಗೆಡಿಸುತ್ತಿದ್ದ ರೆಡ್ಡಿ ಸೋದರರು ಈಗ ಸ್ವತಃ ಕಷ್ಟದಲ್ಲಿ ಸಿಲುಕಿದ್ದಾರೆ. ಬಿಜೆಪಿ ಸರ್ಕಾರಕ್ಕಿಂತ ಯಡಿಯೂರಪ್ಪ ಸರ್ಕಾರ ಇರಬಾರದು ಎಂದು ಬದ್ಧವೈರ ಸಾಧಿಸುತ್ತಿದ್ದ ಕುಮಾರಸ್ವಾಮಿಯವರೂ ಈಗ ಸುಮ್ಮನಿರುವಂತೆ ಕಾಣುತ್ತದೆ.

ಕುಮಾರಸ್ವಾಮಿ ಮತ್ತು ಯಡಿಯೂರಪ್ಪ ಅವರು ಅದೃಷ್ಟವೋ ದುರದೃಷ್ಟವೋ ಇಬ್ಬರೂ ಒಂದು ದಿನ ಹಿಂದೆ, ಒಂದು ದಿನ ಮುಂದೆ ಒಂದೇ ನ್ಯಾಯಾಲಯದಲ್ಲಿ ಹಾಜರಾಗುತ್ತಿದ್ದಾರೆ. ದ್ವೇಷದ ರಾಜಕಾರಣದ ಫಲ ಅದು. ಅದು ಈಗ ದೇವೇಗೌಡರ ಕುಟುಂಬದಲ್ಲಿ ಒಬ್ಬೊಬ್ಬರಿಗೂ ಅಂಟಿಕೊಳ್ಳುವಂತೆ ಕಾಣುತ್ತಿದೆ.

ರಾಜ್ಯ ಸರ್ಕಾರಕ್ಕೆ ಒಳಗಿನಿಂದ ಮತ್ತು ಹೊರಗಿನಿಂದ ಕಿರುಕುಳ ಕೊಡುತ್ತಿದ್ದ ಶಕ್ತಿಗಳ ಗಮನ ಬೇರೆ ಕಡೆ ಹರಿಯುತ್ತಿರುವುದರಿಂದ ಸದಾನಂದಗೌಡರಿಗೆ ಆಡಳಿತದ ಕಡೆಗೆ ಗಮನ ಕೇಂದ್ರೀಕರಿಸಲು ಅನುಕೂಲಕರ ಸನ್ನಿವೇಶ ನಿರ್ಮಾಣವಾದಂತಿದೆ.

ಈ ಸರ್ಕಾರಕ್ಕೆ ಉಳಿದಿರುವ ಎರಡು ವರ್ಷಗಳ ಅವಧಿಯಲ್ಲಿ ಮತ್ತೆ ಆಡಳಿತವನ್ನು ಸರಿದಾರಿಗೆ ತಂದು ಜನರಿಗೆ ಒಂದಿಷ್ಟು ಒಳ್ಳೆಯದನ್ನು ಮಾಡಲು ಸಾಧ್ಯವಾದರೆ ಅದಕ್ಕಿಂತ ದೊಡ್ಡದು ಇನ್ನಾವುದೂ ಇಲ್ಲ. ಇದು ರಾಜ್ಯದಲ್ಲಿ ಆಡಳಿತದ ಚುಕ್ಕಾಣಿ ಹಿಡಿದಿರುವ ಪಕ್ಷದ ದೃಷ್ಟಿಯಿಂದ ಮುಖ್ಯ ಹೌದೋ ಅಲ್ಲವೋ ಗೊತ್ತಿಲ್ಲ.

ಆದರೆ, ಕರ್ನಾಟಕದ ಜನತೆಯ ಹಿತದ ದೃಷ್ಟಿಯಿಂದ ಮಾತ್ರ ಖಂಡಿತ ಆಗಬೇಕಾದ ಕೆಲಸ. ಸದಾನಂದಗೌಡರ ಮುಖದ ತುಂಬ ಬರೀ ನಗುವೇ ಇರಬಹುದು. ಆದರೆ, ಜನರ ಮುಖದಲ್ಲಿ ಕನಿಷ್ಠ ಮಂದಹಾಸವಾದರೂ ಬೇಡವೇ?

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT