ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಷ್ಟ ಜೀವನದಾಸೆ

Last Updated 4 ಜನವರಿ 2015, 19:30 IST
ಅಕ್ಷರ ಗಾತ್ರ

ರಷ್ಯಾದ ಮಹಾನ್ ದಾರ್ಶನಿಕ ಹಾಗೂ ಲೇಖಕ ಲಿಯೊ ಟಾಲ್‌­ಸ್ಟಾಯ್‌ನ ಅನೇಕ ಕಥೆಗಳು ಮನೋಜ್ಞವಾದವುಗಳು. ಅವುಗಳಲ್ಲಿ ಒಂದು ಹೀಗಿದೆ.

ಒಂದು ಊರಿನಲ್ಲಿ ಜಮೀನುದಾ­ರನಿದ್ದ. ಅವನಿಗೆ ತುಂಬು ಪರಿವಾರ.  ಅರಮನೆಯಂಥ ಮನೆ. ಇವನ ಇಷ್ಟಾನಿಷ್ಟಗಳನ್ನು ಪೂರೈಸಲು ಅನೇಕ ಸೇವಕರಿದ್ದರು. ಅವನ ನೂರಾರು ಎಕರೆ ಭೂಮಿಯಲ್ಲಿ ಬೆಳೆದ ಕೃಷಿ ಉತ್ಪನ್ನಗಳು ಅವನನ್ನು ಪ್ರತಿವರ್ಷ ಹೆಚ್ಚು ಶ್ರೀಮಂತನನ್ನಾಗಿ ಮಾಡುತ್ತಿದ್ದವು.  ಆದರೂ ಅವನಲ್ಲಿ ಏನೋ ಅತೃಪ್ತಿ, ದುಃಖ ಮನೆಮಾಡಿದ್ದವು. ಅವನಿಗೆ ತನ್ನ ಶ್ರೀಮಂತಿಕೆ ಸಾಲದೆಂಬ ಚಿಂತೆ. ತನ್ನ ಊರಿನಲ್ಲೇ ಇನ್ನೂ ಎಷ್ಟೊಂದು ಜಮೀನು ಖಾಲಿ ಇದೆ.  ಅದೆಲ್ಲ ತನ್ನದಾದರೆ ಎಷ್ಟು ಚೆಂದ! ಶ್ರೀಮಂತ ಚಿಂತಿಸಿ ರಾಜನ ಬಳಿಗೆ ಹೋದ. ಆ ರಾಜ ಮತ್ತು ತಾನು ಇಬ್ಬರೂ ಒಂದೇ ಶಾಲೆಯಲ್ಲಿ ಓದಿದವರು, ಆಗ ತುಂಬ ಆತ್ಮೀಯ ಸ್ನೇಹಿತರಾಗಿದ್ದವರು.  ಈಗಲೂ ಆ ಸ್ನೇಹ ಹಾಗೆಯೇ ಉಳಿದು­ಕೊಂಡಿತ್ತು. ಆ ಧೈರ್ಯದ ಮೇಲೆಯೇ ಶ್ರೀಮಂತ ರಾಜನ ಕಡೆಗೆ ಹೋದಾಗ ಅವನೂ ತುಂಬ ಸಲುಗೆ ತೋರಿಸಿದ.  ಆ ಮಾತು, ಈ ಮಾತು ಮುಗಿದ ಮೇಲೆ ರಾಜ ಬಂದ ವಿಷಯ ಕೇಳಿದ.  ಆಗ ಶ್ರೀಮಂತ ತನ್ನ ಬಯಕೆಯನ್ನು ತಿಳಿಸಿದ.  ರಾಜ ನಕ್ಕ, ಆಗಬಹುದು ಎಂದ. ಆದರೆ ಅದಕ್ಕೊಂದು ಷರತ್ತಿದೆ ಎಂದ. ನೆಲದ ಆಸೆಗೆ ಮನತೆತ್ತ ಶ್ರೀಮಂತ ಯಾವ ಷರತ್ತಿಗೂ ತಯಾರಿದ್ದ.     

ರಾಜ ಹೇಳಿದ, ‘ನೀನು ಬೇಕಾದಷ್ಟು ಭೂಮಿ­ಯನ್ನು ಪಡೆದುಕೋ. ಅದು ನಿನ್ನ ಶಕ್ತಿಯನ್ನು ಅವಲಂಬಿಸಿದೆ. ನಾಳೆ ಬೆಳಿಗ್ಗೆ ನಮ್ಮ ನಗರದ ಹೊರಭಾಗಕ್ಕೆ ಬಾ. ಸರಿಯಾಗಿ ಆರು ಗಂಟೆಗೆ ಅಲ್ಲಿಂದ ನೀನು ಹೊರಡಬೇಕು. ನೀನು ಎಷ್ಟು ದೂರ ನಡೆದರೂ, ಓಡಿದರೂ ಸರಿಯೇ. ಮರಳಿ ಸರಿಯಾಗಿ ಸಂಜೆ ಆರು ಗಂಟೆಗೆ ಅದೇ ಸ್ಥಳವನ್ನು ಸೇರಬೇಕು. ಅದೆಷ್ಟು ದೂರವನ್ನು ನೀನು ಕ್ರಮಿಸುತ್ತೀಯೋ ಅದೆಲ್ಲ ನಿನ್ನದೇ ಎಂದು ಶಾಸನ ಮಾಡುತ್ತೇವೆ’. ಶ್ರೀಮಂತನ ಸಂತೋ­ಷಕ್ಕೆ ಪಾರವೇ ಇಲ್ಲ. ಅಂದು ರಾತ್ರಿ ಸಂಭ್ರಮದಿಂದ ನಿದ್ರೆಯೇ ಬರಲಿಲ್ಲ. ಬೆಳಿಗ್ಗೆ ಐದೂವರೆಗೇ ಹೋಗಿ ನಿಶ್ಚಯ­ವಾದ ಜಾಗದಲ್ಲಿ ನಿಂತ.  ಸರಿಯಾದ ಸಮಯಕ್ಕೆ ರಾಜ ಬಂದ. ಆರು ಹೊಡೆದೊಡನೆ ಶ್ರೀಮಂತನ ನಡಿಗೆ ಪ್ರಾರಂಭವಾಯಿತು. ನಡೆದ ನೆಲವೆಲ್ಲ ತನ್ನದೇ ಎಂಬ ಸಂತೋಷ ಉಕ್ಕಿ ಬಂತು. ಆದಷ್ಟು ನೆಲವನ್ನು ತನ್ನದಾಗಿಸಿ­ಕೊಳ್ಳಬೇಕೆಂಬ ಉತ್ಸಾಹ ಗರಿಗೆದರಿತು. ಹೀಗೆ ನಡೆದರೆ ಸಾಲದೆಂದು ಓಡತೊಡಗಿದ. ಓಡಿದ, ಓಡಿದ, ಉಸಿರು ಎದೆಗೆ ಅಡರಿತು, ನಾಲಿಗೆ ಒಣಗಿತ್ತು.

ಅವನೇನು ಸಣ್ಣ ಹುಡುಗನೇ? ಓಡುವ ಅಭ್ಯಾಸ­ವಿದೆಯೇ? ಆದರೂ ಹೆಚ್ಚು ನೆಲವನ್ನು ಪಡೆಯುವ ಹುಚ್ಚು ಅವನನ್ನು ಓಡಿಸುತ್ತಿತ್ತು. ಅವನು ಲೆಕ್ಕ ಹಾಕಿದ. ತನಗಿರುವುದು ಒಟ್ಟು ಹನ್ನೆರಡು ತಾಸು. ಆದ್ದರಿಂದ ಆದಷ್ಟು ವೇಗವಾಗಿ ಆರು ತಾಸು ಓಡಿ ಹೆಚ್ಚು ನೆಲವನ್ನು ಆಕ್ರಮಿಸಬೇಕು, ನಂತರ ಅಷ್ಟೇ ವೇಗದಲ್ಲಿ ಮರಳಿ ಓಡಿ ಪ್ರಾರಂಭದ ಸ್ಥಳವನ್ನು ತಲುಪಬೇಕು.  ಬಿಸಿಲೇ­ರುತ್ತಿದೆ, ಶಕ್ತಿ ಕುಂದುತ್ತಿದೆ. ಆದರೂ ಮಧ್ಯಾಹ್ನ ಹನ್ನೊಂದರವರೆಗೆ ಓಡಿದ. ನಂತರ ಮರಳಿ ಓಡತೊಡಗಿದ. ಕಾಲು ನಡುಗತೊಡಗಿದವು, ಹೊಟ್ಟೆಯ ನರಗಳು ಎದ್ದಂತಾಗಿ ಸೆಳೆತ ಪ್ರಾರಂಭ­ವಾಯಿತು. ನೀರಡಿಕೆ ಪ್ರಾಣ ಹೀರುತ್ತಿತ್ತು.  ಆದರೆ ತಾನು ರಾಜ ನಿಂತಿದ್ದ ಸ್ಥಾನ ಮುಟ್ಟದಿದ್ದರೆ ಇಷ್ಟೆಲ್ಲ ಓಡಿದ್ದು ವ್ಯರ್ಥವಾಗುತ್ತದಲ್ಲ ಎಂದು ಸಂಕಟಪಟ್ಟು ಓಡಿದ.  ಕಣ್ಣು ಮಂಜಾದವು, ತಲೆ ಮಂಕಾಯಿತು. ಆದರೂ ಆಸೆಯ ಬಲದಿಂದ ಇದ್ದಬಿದ್ದ ಶಕ್ತಿಯನ್ನೆಲ್ಲ ಒಗ್ಗೂಡಿಸಿ ಓಡಿದ.

ಸಮಯ ಆರು ಗಂಟೆಯ ಹತ್ತಿರ ಬಂದಾಗ ರಾಜ ಮತ್ತು ಅವನ ಪರಿವಾರ ನಿಂತದ್ದು ಮಂಜಾಗಿ ಕಂಡಿತು.  ಆ ಗೆರೆ ಮುಟ್ಟಿದರೆ ಸಾಕು, ತಾನು ತಿರುಗಾಡಿದ್ದೆಲ್ಲ ತನ್ನದೇ. ಎದೆ ಬಡಿತ ವಿಪರೀತವಾಯಿತು. ಆತ ರಾಜ ನಿಂತಿದ್ದ ಗೆರೆಯ ಹತ್ತಿರ ಬಂದ. ಶಕ್ತಿಯೆಲ್ಲ ಬಸವಳಿದು ಕುಸಿದು ಬಿದ್ದ. ಮತ್ತೆ ಏಳಲೇ ಇಲ್ಲ. ಅವನು ಹೌಹಾರಿ ಓಡಾಡಿದ್ದೇ ಬಂತು, ನೆಲ ದಕ್ಕಲಿಲ್ಲ. ಚೆನ್ನಾಗಿಯೇ ಬದುಕಿದ್ದ ಮನುಷ್ಯ ದುರಾಸೆಗೆ ಬಲಿಯಾಗಿದ್ದ. ಅದಕ್ಕೇ ದಾಸರು ನಮ್ಮ ಬದುಕಿನ ಬಗ್ಗೆ ಹೇಳಿದರು. ‘ಇಷ್ಟು ದೊರಕಿದರೆ ಮತ್ತಷ್ಟು ಬೇಕೆಂಬಾಸೆ, ಅಷ್ಟು ದೊರಕಿದರು ಮತ್ತಷ್ಟರಾಸೆ. ಕಷ್ಟ ಬೇಡೆಂಬಾಸೆ, ಕಡುಸುಖವ ಕಾಂಬಾಸೆ, ನಷ್ಟ ಜೀವನದಾಸೆ ಪುರಂದರ ವಿಠಲ’. ಈ ಅತಿ ಆಸೆ, ಮತ್ತಷ್ಟರಾಸೆ ನಿಜವಾಗಿಯೂ ನಷ್ಟ ಜೀವನದ ಆಸೆಯೇ ಸರಿ, ಯಾಕೆಂದರೆ ಅದು ಸುಖೀ ಜೀವನವನ್ನು ನಷ್ಟ ಮಾಡುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT