ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪೆಟ್ಟಿಗೆಯ ಬದುಕು

Last Updated 30 ಮೇ 2012, 19:30 IST
ಅಕ್ಷರ ಗಾತ್ರ

ತಾವು ಎಂದಾದರೂ ಅಮೇರಿಕೆಗೆ ಹೋಗಿ ಅಲ್ಲಿ  ನ್ಯೂಯಾರ್ಕಿಗೆ ಹೋದರೆ ಕೆಲವೊಂದು ಸುಂದರವಾದ ತಾಣಗಳನ್ನು ನೋಡಲು ಅವಕಾಶವಾಗುತ್ತದೆ. ಅಲ್ಲಿಯ ಟೈಮ್ ಸ್ಕ್ವೇರ್, ಎಂಪೈರ್ ಸ್ಟೇಟ್ ಗಗನಚುಂಬಿ ಕಟ್ಟಡ, ಬ್ರೂಕ್‌ಲಿನ್ ಸೇತುವೆಗಳನ್ನು ನೋಡುವುದರ ಜೊತೆಗೆ ಇನ್ನೊಂದನ್ನು ಮರೆಯಲು ಸಾಧ್ಯವಿಲ್ಲ. ಅದು ಸ್ವಾತಂತ್ರ್ಯದೇವಿಯ ಬೃಹತ್ ವಿಗ್ರಹ. ಅದೊಂದು ದ್ವೀಪದಲ್ಲಿ ಇದೆ. ಅಲ್ಲಿಗೆ ಹೋಗಬೇಕಾದರೆ ನಾವೆಯಲ್ಲಿ ಹೋಗಬೇಕು.
ದಿನಾಲು ಸಹಸ್ರಾರು ಜನ ಅಲ್ಲಿಗೆ ಹೋಗುವುದರಿಂದ ವ್ಯವಸ್ಥಿತವಾದ ನೌಕಾ ಸಾರಿಗೆಯನ್ನೇ ಮಾಡಿದ್ದಾರೆ. ಕೆಲವೊಮ್ಮೆ ಜನದಟ್ಟಣೆ ಹೆಚ್ಚಾಗಿದ್ದಾಗ ನಾವೆಯ ಸರದಿ ಬರುವವರೆಗೆ , ನೀವು ಟಿಕೆಟ್ ಪಡೆದು ಸಾಲಿನಲ್ಲಿ ಒಂದು ತಾಸಾದರೂ ನಿಲ್ಲಬೇಕು. 

ಹೇಗೂ ಜನ ಸುಮ್ಮನೇ ಸಾಲಿನಲ್ಲಿ ನಿಂತಿರುತ್ತಾರಲ್ಲ ಎಂದು ಕೆಲವರು ಯಾವ ಯಾವುದೋ ವಸ್ತುಗಳನ್ನು ಮಾರುತ್ತಾರೆ. ತಮಾಷೆ ಮಾಡುತ್ತಾರೆ. ಅಲ್ಲೊಂದು ಆಟ ನಿಮ್ಮ ಗಮನ ಸೆಳೆಯುವುದು ಖಂಡಿತ. ಅಲ್ಲಿ ಒಂದು ಪರಿವಾರದವರೋ, ಸ್ನೇಹಿತರೋ ಮೂರು ನಾಲ್ಕು ಜನ ಇರುತ್ತಾರೆ. ಅಲ್ಲೊಂದು ಪಾರದರ್ಶಕವಾದ ಪ್ಲ್ಯಾಸ್ಟಿಕ್ ಡಬ್ಬಿಯನ್ನು ಒಂದು ಸ್ಟ್ಯಾಂಡಿನ ಮೇಲೆ ನಿಲ್ಲಿಸಿರುತ್ತಾರೆ. ಆ ಡಬ್ಬಿಯ ಗಾತ್ರ ಎರಡೂವರೆ ಚದರ ಅಡಿಗಳಿಗಿಂತ ಹೆಚ್ಚಿಲ್ಲ. ಒಬ್ಬ ಮನುಷ್ಯ-ಸುಮಾರು ಐದೂ ಮುಕ್ಕಾಲು ಅಡಿ ಎತ್ತರದವನು - ನಿಧಾನವಾಗಿ ಆ ಡಬ್ಬಿಯಲ್ಲಿ ಸೇರತೊಡಗುತ್ತಾನೆ. ಅಷ್ಟು ಎತ್ತರದ ಮನುಷ್ಯ ಅದರೊಳಗೆ ಹೇಗೆ ಹೋದಾನು ಎಂದು ಆಶ್ಚರ್ಯವಾಗುತ್ತದೆ. ಅವನು ಹಾಗೆ ಹೀಗೆ ಮಡಿಚಿಕೊಂಡು, ಮುದ್ದೆ ಮುದ್ದೆಯಾಗಿ ಒಳ ಸೇರುತ್ತಾನೆ. ಅವನ ಸ್ನೇಹಿತ ಬಂದು ಆ ಡಬ್ಬಿಯ ಮುಚ್ಚಳವನ್ನು ಮುಚ್ಚಿಬಿಡುತ್ತಾನೆ. ಒಳಗೆ ಸೇರಿದ ವ್ಯಕ್ತಿ ಸ್ಪಷ್ಟವಾಗಿ ಹೊರಗೆ ಕಾಣುತ್ತಾನೆ. ಅವನ ಮುಖವೆಲ್ಲಿ, ಕಾಲು ಎಲ್ಲಿ, ಕೈಯೆಲ್ಲಿ ಎಂಬುದು ತಿಳಿಯದ ಹಾಗೆ ಮುದ್ದೆಯಾಗಿ ಕುಳಿತಿದ್ದಾನೆ.
ಅವನ ಮೈಯಲ್ಲಿ ಮೂಳೆಗಳಿರುವುದೇ ಅನುಮಾನ ಎನ್ನಿಸುತ್ತದೆ. ಅವನ ಸ್ನೇಹಿತ ಈ ಡಬ್ಬಿಯನ್ನು ಸ್ಟ್ಯಾಂಡಿನ ಮೇಲೆ ಗಿರಗಿರನೇ ತಿರುಗಿಸಿಬಿಡುತ್ತಾನೆ. ಜನ ಮೆಚ್ಚಿಗೆಯಿಂದ ಚಪ್ಪಾಳೆ ತಟ್ಟುತ್ತಾರೆ. ಕೆಲವರು ಸಂತೋಷದಿಂದ ಒಂದಷ್ಟು ಹಣ ನೀಡುತ್ತಾರೆ. ಆ ಪರಿವಾರದ ಜೀವನ ನಡೆಯುವುದು ಈ ಆಟದಿಂದಲೇ. ದಿನಕ್ಕೆ ಸುಮಾರು ಆರೆಂಟು ತಾಸು ಈ ಆಟವನ್ನು ಆಡುತ್ತಿರುತ್ತಾರೆ. ಅಂದರೆ ಆ ಮನುಷ್ಯ ದಿನವೂ ಅಷ್ಟು ಕಾಲ ಆ ಪುಟ್ಟ ಡಬ್ಬಿಯಲ್ಲೇ ಇರುತ್ತಾನೆ.

ಇತ್ತೀಚಿಗೆ ಆ ಮನುಷ್ಯನ ಬಗ್ಗೆ ಒಂದು ಲೇಖನವನ್ನು ಓದಿದೆ. ಅವನ ಹೆಸರು ಅಲೆಕ್ಸಾಂಡರ್ ವೊರ್ಟಲೀ. ಅವನು ಇತ್ತೀಚಿಗೆ ತೀರಿಕೊಂಡನಂತೆ. ಸಾಯುವಾಗ ಅವನ ವಯಸ್ಸು ಎಂಬತ್ತು ವರ್ಷ. ಅವನ ಬಗ್ಗೆ ಇನ್ನೊಂದು ವಿಶೇಷ ತಿಳಿದುಬಂತು. ದಿನವೂ ಆ ಆಟ ಮುಗಿಸಿ ಮನೆಗೆ ಹೋದ ಮೇಲೆ ಆತ ಕೋಣೆಯಲ್ಲಿ ಎಂದೂ ವಿರಾಮವಾಗಿ ಮಲಗಲಿಲ್ಲವಂತೆ. ಅವನು ತನಗೋಸ್ಕರ ಒಂದು ಪುಟ್ಟ ಡಬ್ಬಿಯನ್ನು ಮಾಡಿಸಿಕೊಂಡಿದ್ದ.

ಅದು ಆಟಕ್ಕೆ ಬಳಸಿದ ಡಬ್ಬಿಯಷ್ಟೋ, ಇಲ್ಲ ಸ್ವಲ್ಪ ದೊಡ್ಡದೋ ಇದ್ದಿರಬೇಕು. ಅವನು ಅದರಲ್ಲಿಯೇ ಮಲಗುತ್ತಿದ್ದ. ಯಾರು ಎಷ್ಟೇ ಹೇಳಿದರೂ ನನಗೆ ಇದೇ ಸರಿ, ಅಲ್ಲಿಯೇ ಚೆನ್ನಾಗಿರುತ್ತೇನೆ ಎಂದು ಹೇಳುತ್ತಿದ್ದನಂತೆ.  ಪುಟ್ಟ ಡಬ್ಬಿಯಲ್ಲೇ ಎಂಬತ್ತು ವರ್ಷದ ಜೀವನವನ್ನು ಮುಗಿಸಿಬಿಟ್ಟ. ಆ ಮನುಷ್ಯನ ಪ್ರಯತ್ನದ ಬಗ್ಗೆ, ಛಲದ ಬಗ್ಗೆ ಅಭಿಮಾನ ಬಂದರೂ ನನಗೊಂದು ಚಿಂತೆ ಕಾಡುತ್ತದೆ. ನಾವೂ ಬಹಳಷ್ಟು ಜನ ಅವನ ಹಾಗೆಯೇ ಇಲ್ಲವೇ. ಅವನು ದೈಹಿಕವಾಗಿ ಪುಟ್ಟ ಡಬ್ಬಿಯಲ್ಲೇ ಇರುವುದನ್ನು ಅಭ್ಯಾಸಮಾಡಿಕೊಂಡಿದ್ದ ಹಾಗೆ, ನಾವೂ ಮಾನಸಿಕವಾಗಿ ನಾವೇ ಆರಿಸಿಕೊಂಡ ಪುಟ್ಟ ಪುಟ್ಟ ಕೋಶಗಳಲ್ಲಿ ಕಳೆದು ಹೋಗಿಲ್ಲವೆ. ನಮ್ಮ ದಾರಿಯೇ ಸರಿ, ನಮ್ಮ ಚಿಂತನೆಯೇ ಸರಿ, ನಮ್ಮ ಜಾತಿಯೇ ಸರಿ, ನಮ್ಮ ಧರ್ಮವೇ ಶ್ರೇಷ್ಠ ಎನ್ನುವ ವಿಚಾರಗಳೆಲ್ಲ ಪುಟ್ಟ ಪುಟ್ಟ ಡಬ್ಬಿಗಳೇ ಅಲ್ಲವೆ. ಈ ಡಬ್ಬಿಗಳಿಂದ, ಕೋಶಗಳಿಂದ ಸಿಡಿದು ಹೊರಬಂದಾಗ ಅತ್ಯದ್ಭುತವಾದ ಚಿಂತನೆಗಳು, ವಿಚಾರಗಳು ನಮ್ಮ ಮನಸ್ಸನ್ನು ವಿಸ್ತಾರಗೊಳಿಸಲಾರವೇ. ತಲೆತಲಾಂತರದಿಂದ ಬಂದ ಚಿಂತನೆಗಳು ಶ್ರೇಷ್ಠವಿರಬಹುದು. ಆದರೆ, ಅವುಗಳನ್ನು ಪರೀಕ್ಷೆ ಮಾಡದೇ ಕಣ್ಣುಮುಚ್ಚಿ ಒಪ್ಪಿಕೊಂಡು ನಡೆದಾಗ, ಪುಟ್ಟಪೆಟ್ಟಿಗೆಯಲ್ಲಿ ದೇಹವನ್ನು ತೂರಿಸಿ ಗಿರಕಿ ಹೊಡೆಯುತ್ತಿದ್ದ ಅಲೆಕ್ಸಾಂಡರ್ ವೋರ್ಟಲೀಗಿಂತ ನಾವು ಹೇಗೆ ಭಿನ್ನವಾಗುತ್ತೇವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT