ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರತಿಕೂಲವಾದ ವಿಧೇಯತೆ

Last Updated 2 ಜುಲೈ 2013, 19:59 IST
ಅಕ್ಷರ ಗಾತ್ರ

ನಮ್ಮ ಕಿಟ್ಟಣ್ಣ ಹುಟ್ಟಿದಾಗಿನಿಂದಲೂ ಹಾಗೆಯೇ. ಅವನು ಹುಟ್ಟಿದಾಗಲೇ ಅವನ ಕೈಯಲ್ಲಿ ಪ್ರತಿಭಟನೆಯ ಧ್ವಜವಿತ್ತೆಂದು ಸೂಲಗಿತ್ತಿ ಹೇಳುತ್ತಿದ್ದಳಂತೆ. ಅವನ ತಾಯಿ-ತಂದೆಯರು ಏನು ಹೇಳಿದರೂ ಅದಕ್ಕೆ ಸರಿಯಾಗಿ ವಿರುದ್ಧವಾಗಿ ಕೆಲಸ ಮಾಡುತ್ತಿದ್ದ. ಊಟಕ್ಕೆ ಬಾ ಎಂದರೆ ಎದ್ದು ಹೋಗುತ್ತಿದ್ದ. ಊಟಕ್ಕೆ ಇನ್ನೂ ಒಂದು ತಾಸಿದೆ  ಎಂದು ಅಮ್ಮ ಹೇಳಿದರೆ ತಟ್ಟೆ ತೆಗೆದುಕೊಂಡು ಅದನ್ನು ಬಡಿಯುತ್ತ ಸದ್ದು ಮಾಡುತ್ತ ಕುಳಿತಿರುತ್ತಿದ್ದ. ಎಡಕ್ಕೆ ತಿರುಗು ಎಂದು ಹೇಳಿದರೆ ತಕ್ಷಣ ಬಲಕ್ಕೆ ತಿರುಗಿ ಹೊರಡುವವನೇ. ಅವನ ಈ ಅವಿಧೇಯತೆಯನ್ನು ತಡೆಯುವುದು ಹೇಗೆ ಎಂಬುದು ತೋಚದೆ ಮನೆಯವರು ಕಂಗಾಲಾಗಿದ್ದರು.

ಒಂದು ದಿನ ಕಿಟ್ಟಣ್ಣ ಮತ್ತು ಅವನ ತಂದೆ ದಾಸಪ್ಪ ವ್ಯಾಪಾರಕ್ಕಾಗಿ ಪಕ್ಕದ ಊರಿಗೆ ಹೊರಟಿದ್ದರು. ಅವರು ಮಾರಾಟ ಮಾಡುವ ವಸ್ತು ಸಕ್ಕರೆ. ಅದನ್ನು ಸಣ್ಣ ಸಣ್ಣ ಮೂಟೆಗಳಲ್ಲಿ ಹಾಕಿಕೊಂಡು ಎರಡು ಕತ್ತೆಗಳ ಮೇಲೆ ಹೊರಿಸಿಕೊಂಡು ನಡೆದರು. ಮತ್ತೊಂದು ಊರಿಗೆ ಹೋಗುವಾಗ ಅವರೊಂದು ಸಣ್ಣ ನದಿಯನ್ನು ದಾಟಬೇಕಿತ್ತು. ಕಿಟ್ಟಣ್ಣ ಒಂದು ಕತ್ತೆಯನ್ನು ಹಿಡಿದುಕೊಂಡಿದ್ದ. ಅವನಪ್ಪ ಮತ್ತೊಂದು ಕತ್ತೆಯನ್ನು ನಿಭಾಯಿಸುತ್ತಿದ್ದ.
ಬೇಸಿಗೆ ಕಾಲವಾದ್ದರಿಂದ ನೀರು ಬಹಳಿಲ್ಲ. ಅದು ಒಂದು ತರಹದ ಕಾಲು ನದಿ. ಬಹಳ ಹೆಚ್ಚೆಂದರೆ ತೊಡೆಯವರೆಗೆ ನೀರು ಬರಬಹುದು.

ಅಂತಹ ಸೆಳೆವೇನೂ ಇರಲಿಲ್ಲ. ಎರಡೂ ಕತ್ತೆಗಳು ಮತ್ತು ಅವುಗಳ ಮಾಲಿಕರು ನೀರಿಗಿಳಿದರು. ನಿಧಾನವಾಗಿ ಮುಂದೆ ಹೋಗುತ್ತಿದ್ದಾಗ ಕತ್ತೆಗಳ ಹೊಟ್ಟೆಯವರೆಗೆ ನೀರು ಬಂದಿತು. ತನ್ನ ಕತ್ತೆಯನ್ನು ನೋಡಿಕೊಳ್ಳುತ್ತಲೇ ದಾಸಪ್ಪ ಕಿಟ್ಟಣ್ಣ ಕತ್ತೆಯ ಕಡೆಗೂ ಗಮನ ಕೊಡುತ್ತಿದ್ದ. ಆಗ ಆತ ನೋಡಿದ. ಕಿಟ್ಟಣ್ಣನ ಕತ್ತೆಯ ಬೆನ್ನ ಮೇಲೆ ಹೊರಿಸಿದ್ದ ಸಕ್ಕರೆ ಮೂಟೆ ಹೆಚ್ಚು ಬಲಗಡೆ ವಾಲುತ್ತಿದೆ. ಇನ್ನೊಂದಿಷ್ಟು ಕುಲುಕಾಟವಾದರೆ ಮೂಟೆ ನೀರಲ್ಲಿ ಬಿದ್ದು ಹೋಗಬಹುದು. ಕಿಟ್ಟಣ್ಣನಿಗೆ ಮೂಟೆಯನ್ನು ಸ್ವಲ್ಪ ಎಡಗಡೆಗೆ ಸರಿಸು ಎಂದರೆ ಅವನು ಖಚಿತವಾಗಿಯೂ ಬಲಗಡೆಗೇ ಸರಿಸುತ್ತಾನೆ. ಆಗ ಮೂಟೆ ನೀರಿನಲ್ಲಿ ಬಿದ್ದುಹೋಗುತ್ತದೆ. ಹಾಗಾದರೆ ಅವನಿಗೆ ಮೂಟೆಯನ್ನು ಬಲಗಡೆಗೆ ಸರಿಸು ಎಂದರೆ ಆತ ಎಡಗಡೆಗೆ ಸರಿಸುತ್ತಾನೆ, ಸಕ್ಕರೆ ಸುರಕ್ಷಿತವಾಗಿ ಉಳಿಯುತ್ತದೆ. ಹೀಗೆ ಯೋಚಿಸಿ ದಾಸಪ್ಪ ಕೂಗಿದ,  ಕಿಟ್ಟಣ್ಣ ನಿನ್ನ ಕತ್ತೆಯ ಬೆನ್ನ ಮೇಲಿನ ಚೀಲ ಜಾರುತ್ತಿದೆ. ಅದನ್ನು ಸ್ವಲ್ಪ ಬಲಗಡೆಗೆ ಸರಿಸು.

ಕಿಟ್ಟಣ್ಣ ಕತ್ತೆಯನ್ನೊಮ್ಮೆ, ಅಪ್ಪನನ್ನೊಮ್ಮೆ ನೋಡಿದ. ಕತ್ತೆಯ ಹತ್ತಿರ ಹೋಗಿ ಮೂಟೆಯನ್ನು ಬಲಗಡೆಗೇ ಸರಿಸಿದ. ಅದು ಜಾರಿ ನೀರಿನಲ್ಲಿ ಬಿದ್ದು ಹೋಯಿತು. ಅಪ್ಪ ಹೋ ಎಂದು ಕೂಗಿ ತನ್ನ ಕತ್ತೆಯನ್ನು ಎಳೆದುಕೊಂಡು ಕಿಟ್ಟಣ್ಣನ ಬಳಿಗೆ ಬಂದ. ಆತ ನಿರ್ವಿಕಾರವಾಗಿ ನಿಂತಿದ್ದಾನೆ! ಸಕ್ಕರೆ ನೀರಿನಲ್ಲಿ ಕರಗಿ ಹೋಗುತ್ತಿದೆ. ದಾಸಪ್ಪ ಮುಖ ಕಿವುಚಿಕೊಂಡು ಹೇಳಿದ, ಸಕ್ಕರೆ ಹಾಳು ಮಾಡಿದೆಯಲ್ಲೋ. ಮೊದಲನೇ ಬಾರಿಗೆ ನೀನು ವಿಧೇಯತೆಯನ್ನು ತೋರಿ ಹೇಳಿದಂತೆ ಮಾಡಿದೆಯಲ್ಲ. ಇದು ಆಶ್ಚರ್ಯ! ಕಿಟ್ಟಣ್ಣ ಒಡನೆಯೇ ನುಡಿದ, ಅಪ್ಪ ಮೊದಲನೇ ಬಾರಿಗೆ ನೀನು ಮೋಸ ಮಾಡಲು ಹೊರಟೆ. ನೀನು ಕೂಗಿದಾಗಲೇ ನಾನು ಸಕ್ಕರೆ ಮೂಟೆ ಬಲಗಡೆಗೆ ಜಾರುತ್ತಿರುವುದನ್ನು ಗಮನಿಸಿದೆ. ನನಗೆ ಗೊತ್ತಿತ್ತು ನೀನು ಮೂಟೆಯನ್ನು ಎಡಗಡೆಗೆ ಸರಿಸಲು ಹೇಳುತ್ತಿ ಎಂದು. ಆದರೆ ನೀನು ನನಗೆ ಮೋಸ ಮಾಡಲು ಬಲಗಡೆಗೆ ಸರಿಸಲು ಹೇಳಿದೆ. ನಾನು ಹಾಗೆಯೇ ಮಾಡಿದೆ. ಯಾಕೆಂದರೆ ಮೋಸದ ಅಪ್ಪಣೆಗೆ ವಿಧೇಯತೆಯೇ ಸರಿಯಾದ ಶಿಕ್ಷೆ.

ಪ್ರಾಮಾಣಿಕವಾದ ಅಪ್ಪಣೆಗೆ ವಿಧೇಯತೆ ಉತ್ತಮ ಪ್ರತಿಫಲ ನೀಡುತ್ತದೆ. ಆದರೆ ಅಪ್ಪಣೆ ಮೋಸದ್ದಾಗಿದ್ದರೆ, ಅಪ್ರಾಮಾಣಿಕವಾಗಿದ್ದರೆ ಅದರ ವಿಧೇಯ ಪರಿಪಾಲನೆ ಅಪ್ಪಣೆಗೇ ಪ್ರತಿಕೂಲವಾಗುತ್ತದೆ, ತಿರುಗು ಬಾಣವಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT