ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಿಯ ಗುರುಗಳೆ, ನಿಮ್ಮನ್ನು ಹೇಗೆ ನೆನಪಿಸಿಕೊಳ್ಳಬೇಕು?

Last Updated 25 ಆಗಸ್ಟ್ 2015, 19:35 IST
ಅಕ್ಷರ ಗಾತ್ರ

ಮುಖ್ಯ ಶಿಕ್ಷಕಿ ಕಾಶೀಬಾಯಿ ಬಸರಕೋಡ ಅವರಿಗೆ ಆತಂಕ.
ಮೂರು ದಿನವಾದರೂ ಸಂತೋಷ ರಾಠೋಡ ಶಾಲೆಗೆ ಗೈರು ಆಗಿರುತ್ತಾನೆ. ತರಗತಿ ಮುಗಿಸಿ ಆತನ ಮನೆಯತ್ತ ಓಡುತ್ತಾರೆ. ಆತ ಅಲ್ಲಿ ಆಟವಾಡುತ್ತಿರುತ್ತಾನೆ. ‘ಶಾಲೆಗೆ ಏಕೆ ಬರುತ್ತಿಲ್ಲ’ ಎಂದು ಕಾಶೀಬಾಯಿ ವಿಚಾರಿಸುತ್ತಾರೆ. ‘ನೋಟ್‌ಬುಕ್‌ ಇರಲಿಲ್ಲ, ಹೋಂ ವರ್ಕ್‌ ಮಾಡಿರಲಿಲ್ಲ’ ಎಂದು ಚಕ್ಕರ್‌ ಹಾಕಿರುವುದಕ್ಕೆ ಸಕಾರಣ ಕೊಡುತ್ತಾನೆ.

ಕಾಶೀಬಾಯಿಗೆ ಆ ರಾತ್ರಿ ನಿದ್ರೆ ಬರುವುದೇ ಇಲ್ಲ. ಏಕೆಂದರೆ ಈ ಹುಡುಗನ ಪೋಷಕರು ದುಡಿಯಲು ವಲಸೆ ಹೋಗಿರುತ್ತಾರೆ. ಈತ ಅಜ್ಜಿಯೊಂದಿಗೆ  ಉಳಿದುಕೊಂಡಿರುತ್ತಾನೆ.

ತಾಂಡಾದ ಬಹುತೇಕರು ವಲಸೆ ಹೋಗುತ್ತಾರೆ. ಅವರ ಮಕ್ಕಳು ಸಂತೋಷನಂತೆಯೇ ಶಾಲೆಗೆ ಚಕ್ಕರ್‌ ಹಾಕುತ್ತವೆ. ಈ ಸಮಸ್ಯೆಗೆ ಪರಿಹಾರವೇನು? ಕಾಶೀಬಾಯಿ ತಲೆಕೆಡಿಸಿಕೊಳ್ಳುತ್ತಾರೆ. ಆಗ ಇವರಿಗೆ ‘ಶಾಲಾ ಬ್ಯಾಂಕ್‌’ ಪರಿಕಲ್ಪನೆ ಹೊಳೆಯುತ್ತದೆ. ‘ಶಾಲಾ ಬ್ಯಾಂಕ್‌’ ನಲ್ಲಿ ನೋಟ್‌ಪುಸ್ತಕ, ಪೆನ್ನು, ಪೆನ್ಸಿಲ್‌, ಸ್ಲೇಟು, ಬಳಪ, ಕಾಪಿ ಪುಸ್ತಕ, ಮಗ್ಗಿ ಪುಸ್ತಕಗಳನ್ನು ತಮ್ಮದೇ ಹಣದಲ್ಲಿ ತಂದು ಇಡುತ್ತಾರೆ. ಅಗತ್ಯವಿರುವ ಮಕ್ಕಳಿಗೆ ಕೊಟ್ಟು ಲೆಕ್ಕ ಬರೆದುಕೊಳ್ಳುತ್ತಾರೆ. ಪೋಷಕರು ಊರಿಗೆ ಬಂದಾಗ ಹಣವನ್ನು ವಾಪಸು ಪಡೆಯುತ್ತಾರೆ. ಕಾಶೀಬಾಯಿ ಅವರ ಈ ಬ್ಯಾಂಕ್‌  ಬಡ್ಡಿ ಇಲ್ಲದೆ ಫಲಕೊಡಲು ಶುರು ಮಾಡುತ್ತದೆ.

ಯಾದಗಿರಿ ಜಿಲ್ಲೆ ಸುರಪುರ ತಾಲ್ಲೂಕಿನ ಗಡ್ಡದತಾಂಡಾ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಹನ್ನೊಂದು ವರ್ಷಗಳಿಂದ ಕಾಶೀಬಾಯಿ ಹೀಗೆಯೇ ಕೆಲಸ ಮಾಡುತ್ತಿದ್ದಾರೆ.

ಶುರುವಿನಲ್ಲಿ ಮಕ್ಕಳು ಶಾಲೆಗೆ ವಿರಳ ಎನ್ನುವಂತೆ ಬರುತ್ತಿರುತ್ತವೆ. ಇದಕ್ಕೆ ಕಾರಣ ಭಾಷೆ! ಪೋಷಕರು ಮತ್ತು ಮಕ್ಕಳಿಗೆ ಕನ್ನಡವೇ ಬರುವುದಿಲ್ಲ. ಸಂವಹನದ ಸಮಸ್ಯೆ ಹೆಚ್ಚಾಗುತ್ತದೆ. ಆಗ ಕಾಶೀಬಾಯಿ ಧೈರ್ಯಗೆಡುವುದಿಲ್ಲ. ತಾವೇ ಲಂಬಾಣಿ ಭಾಷೆ ಕಲಿಯುತ್ತಾರೆ. ತಾಂಡಾದ ಜನರೊಂದಿಗಿನ ಮಾತುಕತೆ ಸಲೀಸಾಗುತ್ತದೆ. ಮಕ್ಕಳು ಶಾಲೆಗೆ ಬರುವುದೂ ಸಹ.

ಈ ಶಾಲೆಗೆ ಅಕ್ಕಪಕ್ಕ ತಾಂಡಾ, ಕ್ಯಾಂಪ್‌ಗಳಿಂದಲೂ ಮಕ್ಕಳು ಬರತೊಡಗುತ್ತವೆ. ಈಗ ಶಾಲೆಯಲ್ಲಿ ಎಪ್ಪತ್ತೆರಡು ಮಕ್ಕಳು ಕಲಿಯುತ್ತಿದ್ದು, ಹಾಜರಾತಿ ನೂರರಷ್ಟಿದೆ!

ಕಾಶೀಬಾಯಿ ಹಾಜರಾತಿ ಹೆಚ್ಚಿಸಿದ ಸಮಾಚಾರ ದೆಹಲಿ ಮುಟ್ಟುತ್ತದೆ. ಭುವನೇಶ್ವರದಲ್ಲಿ ನಡೆದ ‘ಮಕ್ಕಳ ಹಾಜರಾತಿ ಹೆಚ್ಚಿಸುವುದು ಹೇಗೆ? ಕಾರ್ಯಾಗಾರದಲ್ಲಿ ಪಾಲ್ಗೊಂಡು ಉಪನ್ಯಾಸ ನೀಡುತ್ತಾರೆ.

ಬೀದರ್‌ ತಾಲ್ಲೂಕಿನ ಚಿಲ್ಲರ್ಗಿ ಸರ್ಕಾರಿ ಪ್ರೌಢಶಾಲೆಯ ಹೆಡ್‌ಮಾಸ್ತರ್‌ ಗೋಪಾಲರಾವ್‌ ಪಡವಳಕರ್‌ ಕರಪತ್ರ ಹಿಡಿದು ಊರಿನ ಮನೆ ಮನೆ ಬಾಗಿಲಿಗೆ ಹೋಗುತ್ತಾರೆ. ‘ನಿಮ್ಮ ಮಕ್ಕಳನ್ನು ನಮ್ಮ ಶಾಲೆಗೇ ಸೇರಿಸಿ’ ಎಂದು ಕೋರುತ್ತಾರೆ. ‘ನಿಮ್ಮ ಶಾಲೆಯಲ್ಲಿ ಡೊನೇಷನ್‌ ಎಷ್ಟು’ ಎಂದು ಪೋಷಕರು ಕೇಳುತ್ತಾರೆ. ‘ನಮ್ಮದು ಸರ್ಕಾರಿ ಶಾಲೆ. ನಿಮ್ಮದೇ ಊರಿನಲ್ಲಿದೆ’ ಎಂದು ಹೇಳುತ್ತಾರೆ. ಹೆಡ್‌ಮಾಸ್ತರ್‌ ಕರಪತ್ರವನ್ನು ಪೋಷಕರಿಗೆ ಕೊಡುತ್ತಾರೆ. ಅವರು ಓದಲು ಕಷ್ಟಪಡುತ್ತಾರೆ. ಹೆಡ್‌ಮಾಸ್ತರ್‌ ತಾವೇ ಓದಲು ಮುಂದಾಗುತ್ತಾರೆ.

‘ಮೂರು ಅಂತಸ್ತಿನ ಸುಸಜ್ಜಿತ ಶಾಲಾ ಕಟ್ಟಡ, ವಿಶಾಲವಾದ ಆಟದ ಮೈದಾನ, ಅಚ್ಚುಕಟ್ಟಾದ ಗ್ರಂಥಾಲಯ, ಪ್ರಯೋಗಾಲಯ, ಉಚಿತ ಕರಾಟೆ ತರಬೇತಿ, ಪ್ರತಿ ವಿದ್ಯಾರ್ಥಿ ಕುರಿತು ವಿಶೇಷ ನಿಗಾ, ಪಾಲಕರೊಂದಿಗೆ ದೂರವಾಣಿ, ನೇರ ಭೇಟಿ, ಶುದ್ಧ ಕುಡಿಯುವ ನೀರು, ಶೌಚಾಲಯ, ಗುಣಮಟ್ಟದ ಶಿಕ್ಷಣ...’

ಇವುಗಳ ಆಕರ್ಷಣೆಗೆ ಅಕ್ಕಪಕ್ಕದ ಊರಿನ ಹಾಗೂ ಖಾಸಗಿ ಶಾಲೆಗೆ ಹೋಗುತ್ತಿದ್ದ ಮಕ್ಕಳು ಇದೇ ಶಾಲೆಗೆ ಹೋಗುತ್ತೇವೆ ಎಂದು ಹಟ ಹಿಡಿಯುತ್ತವೆ.

ಗೋಪಾಲರಾವ್‌ ಶಾಲೆಗೆ ಸ್ವಂತ ಕಟ್ಟಡ ಮಾಡುವ ಕಾರ್ಯಕ್ಕೆ ಕೈ ಹಾಕುತ್ತಾರೆ. ಪದೇಪದೇ ಗ್ರಾಮಸ್ಥರ ದಂಡನ್ನು ಕಟ್ಟಿಕೊಂಡು ಕಚೇರಿಗೆ ಹೋಗುತ್ತಲೇ ಇರುತ್ತಾರೆ. ಕಚೇರಿಯ ಎಲ್ಲರೂ  ಗೋಪಾಲರಾವ್‌ ಅವರನ್ನು ಹೆಸರು ಹಿಡಿದು ಕರೆಯುವಷ್ಟರ ಮಟ್ಟಿಗೆ ಪರಿಚಿತರಾಗುತ್ತಾರೆ. ಇವರ ಸತತ ಪ್ರಯತ್ನಕ್ಕೆ ಯಶ ದೊರಕುತ್ತದೆ.

ಕಾಶೀಬಾಯಿ ಮತ್ತು ಗೋಪಾಲರಾವ್‌ ಅವರಿಗೆ ಇದು ಹೇಗೆ ಸಾಧ್ಯವಾಯಿತು? ಉತ್ತರ ಸರಳ. ಇವರೊಳಗೆ ಕ್ರಿಯಾಶೀಲ, ಪ್ರಯೋಗಶೀಲ ಗುಣಗಳು ಸದಾ ಜಾಗೃತವಾಗಿರುತ್ತವೆ. ಆದ್ದರಿಂದಲೇ ಶಾಲೆಯ ಸಮಸ್ಯೆಗಳನ್ನು ಅವಲೋಕಿಸಿ ಅವುಗಳಿಗೆ ಪರಿಹಾರ ಕಂಡುಕೊಳ್ಳುತ್ತಾರೆ. ಕಾಶೀಬಾಯಿ ಮತ್ತು ಗೋಪಾಲರಾವ್‌ ಎಂದಿಗೂ ಗಡಿಯಾರ ನೋಡಿ ಕೆಲಸ ಮಾಡುವುದಿಲ್ಲ.

ಸರ್ಕಾರಿ ಶಾಲೆಗಳು ಖಾಸಗಿ ಶಾಲೆಗಳಿಗೆ ಮುಖಾಮುಖಿಯಾಗಲು ಕ್ರಿಯಾಶೀಲ ಮತ್ತು ಪ್ರಯೋಗಶೀಲ ಶಿಕ್ಷಕರು ಬೇಕು. ಕಾಶೀಬಾಯಿ ಮತ್ತು ಗೋಪಾಲರಾವ್‌ ಅವರ ಹಾದಿಯನ್ನು ಉಳಿದವರೂ ತುಳಿದರೆ ಸರ್ಕಾರಿ ಶಾಲೆಗಳಲ್ಲಿ ಗುಣಾತ್ಮಕ ಬದಲಾವಣೆ ಸಾಧ್ಯವಾಗುತ್ತದೆ. ಇವರನ್ನು ಅನುಸರಿಸಲು ‘ಅಹಂ’ ಸಹಕರಿಸದೇ ಹೋದರೆ ಅಂಥವರು ಯಾರೂ ತುಳಿದ ಹಾದಿಯನ್ನು ತಾವೇ ಸವೆಸಬಹುದು. ಇದಕ್ಕೆ ಬೇಕಿರುವುದು ವೃತ್ತಿ ಅಭಿಮಾನ ಮತ್ತು ಕಡುಮೋಹ.

ಇಲ್ಲೊಂದು ಘಟನೆ ನೆನಪಾಗುತ್ತದೆ.
ಇವರ ಹೆಸರು ಬಸವರಾಜ ಬಿ. ಕುಂಟೋಜಿ. ಕಲಬುರ್ಗಿ ಜಿಲ್ಲೆ ಆಳಂದ ತಾಲ್ಲೂಕಿನ ಜವಳಗಾ (ಜೆ) ಗ್ರಾಮದ ಸರ್ಕಾರಿ ಶಾಲೆಯ ಮುಖ್ಯ ಶಿಕ್ಷಕರು. ಈಚೆಗೆ ನಿವೃತ್ತರಾದರು. ಇಡೀ ಊರು ಹಬ್ಬ ಎನ್ನುವಂತೆ ಸಿಂಗಾರಗೊಂಡಿತು. ಊರು ತುಂಬ ಮೆರವಣಿಗೆ ನಡೆಯಿತು. ಭರ್ಜರಿ ಸತ್ಕಾರವೂ ನೆರವೇರಿತು. ಗ್ರಾಮಸ್ಥರೆಲ್ಲ ಒಟ್ಟಿಗೆ ಕುಳಿತು ಊಟ ಮಾಡಿದರು.

ಏಕೆಂದರೆ ಬಸವರಾಜ ಅವರು ಇಡೀ ಊರಿನಲ್ಲಿ ‘ಸಿಂದಗಿ ಮಾಸ್ತರ್‌’ ಎಂದೇ ಹೆಸರಾಗಿರುತ್ತಾರೆ. ಊರು ಮತ್ತು ಮಕ್ಕಳೊಂದಿಗೆ ಬಾಂಧವ್ಯ ಬೆಳೆಸಿಕೊಂಡಿರುತ್ತಾರೆ. ಪ್ರತಿಭಾವಂತ ಮಕ್ಕಳಿಗೆ ತಮ್ಮದೇ ಹಣದಿಂದ ಬೆಳ್ಳಿ ಪದಕ ಕೊಟ್ಟು ಉತ್ತೇಜಿಸುತ್ತಿರುತ್ತಾರೆ.
ಎರಡು ದಶಕಗಳಿಂದ ಸರ್ಕಾರಿ ಶಾಲೆ ಎಂದರೆ ಬಡವರು, ಕೂಲಿ ಕಾರ್ಮಿಕರ ಮಕ್ಕಳ ಶಾಲೆ ಎನ್ನುವಂತಾಗಿದೆ. ಹಿಂದೆ ಜಮೀನ್ದಾರನ ಮಗನೂ, ಅದೇ ಊರಿನ ಚಮ್ಮಾರನ ಮಗನೂ ಒಂದೇ ಶಾಲೆಯಲ್ಲಿ, ಒಂದೇ ಬೆಂಚಿನಲ್ಲಿ ಅಕ್ಕಪಕ್ಕ ಕುಳಿತು ಕಲಿಯುತ್ತಿದ್ದರು. ಈಗ ಶ್ರೀಮಂತರು, ಮಧ್ಯಮ ವರ್ಗದವರು, ಬಡವರಿಗೆ ಬೇರೆ ಬೇರೆಯೇ ಶಾಲೆಗಳು ಇರುವಂತೆ ಭಾಸವಾಗುತ್ತದೆ.

ಇಂಥ ದಿನಗಳಲ್ಲಿ ಸರ್ಕಾರಿ ಶಾಲೆಗಳು ಉಳಿಯುವುದು ತುಂಬಾ ಮುಖ್ಯ. ಏಕೆಂದರೆ ಖಾಸಗಿ ಶಾಲೆಗೆ ಕಳುಹಿಸಲು ಶಕ್ತಿ ಇಲ್ಲದವರು ಮಕ್ಕಳನ್ನು ಶಾಲೆ ಬಿಡಿಸುವುದು ತಪ್ಪುತ್ತದೆ. ಇಲ್ಲದೇ ಹೋದರೆ  ‘ಇಂಥ ವರ್ಗ’ ದ ಮಕ್ಕಳಿಗೆ ಕನಿಷ್ಠ ಶಿಕ್ಷಣವೂ ಸಿಗದಂತಾಗುತ್ತದೆ. ಇದನ್ನು ಅರಿತು ಸರ್ಕಾರ ಶಾಲೆಗಳನ್ನು ಮುಚ್ಚುವ ವಿಚಾರವನ್ನು ಮರೆಯುವುದು ಒಳ್ಳೆಯದು.

ಸೋಮಾರಿಗಳು, ರಾಜಕಾರಣಿಗಳ ನೆರಳಿನಂತಿರುವವರು, ಕಾಲೆಳೆಯುವವರು, ಅಸೂಯೆಪಡುವವರು, ಸಂಬಳಕ್ಕಾಗಿಯೇ ಇರುವವರು, ನಿಷ್ಕ್ರಿಯ ಶಿಕ್ಷಕರು ‘ಇಂಥ ಸಮಾಜ’ದಲ್ಲಿ ‘ಖಳ’ ರಾಗುತ್ತಾರೆ. ಕಾಶೀಬಾಯಿ, ಗೋಪಾಲರಾವ್‌, ಸಿಂದಗಿ ಮಾಸ್ತರ್‌ ‘ಹೀರೋ’ ಆಗುತ್ತಾರೆ.

ಇದು ಒಂದು ವರ್ಷದ ಹಿಂದೆ ನಡೆದ ಘಟನೆ.

ಹೊಲದಲ್ಲಿ ಗಳೆ ಹೊಡೆಯುತ್ತಿದ್ದ ರೈತರೊಬ್ಬರು ಕೃಷಿ ಚಟುವಟಿಕೆ, ಮಳೆ, ಬೆಳೆ ಕುರಿತು ಉತ್ಸಾಹದಿಂದಲೇ ಮಾತನಾಡಿದರು. ಫೋಟೊ ತೆಗೆಯಲು ಹೋದಾಗ ಚೆಂಗನೆ ಹಾರಿ ಪಕ್ಕಕ್ಕೆ ನಿಂತುಕೊಂಡರು. ಎಷ್ಟೇ ಮನವಿ ಮಾಡಿದರೂ ಒಪ್ಪದೆ ಮುಖ ತಿರುಗಿಸಿದರು!
ಚೌಕಾಸಿ ನಡೆಯಿತು. ‘ಫೋಟೊ ಇಳಸಬ್ಯಾಡ್ರಿ ಸಾಹೇಬ್ರ.. ಅದನ್ ಬಿಟ್ಟ ಬ್ಯಾರೆ ಏನರ ಹೇಳ್ರಿ, ಕೇಳ್ರಿ’ ಎಂದರು. ‘ಏಕೆ’ ಎಂದು ಕೇಳಿದಾಗ ಕೊನೆಗೆ ಬಾಯಿಬಿಟ್ಟರು. ‘ಸಾಹೇಬ್ರ, ನಾ ಸರ್ಕಾರಿ ಸಾಲಿ ಮಾಸ್ತರೀ, ಸಾಲಿಗೆ ಹೋಗದ ಇಲ್ಲಿ ಗಳೆ ಹೊಡ್ಯಾಕತೀನಿ, ಅದಕ್ಕ ಪೇಪರ್‌ನ್ಯಾಗ ನನ್ನ ಫೋಟೊ ಬ್ಯಾಡ್ರಿ’ ಎಂದು ವಿನಂತಿಸಿಕೊಂಡರು.

ತುಂಬಾ ವರ್ಷಗಳ ನಂತರವೂ ವಿದ್ಯಾರ್ಥಿಗಳ ಮನಸ್ಸಿನಲ್ಲಿ ಕಾಶೀಬಾಯಿ, ಗೋಪಾಲರಾವ್‌, ಸಿಂದಗಿ ಮಾಸ್ತರ್‌ನಂಥವರು ಉಳಿಯುತ್ತಾರೆ. ಬೆಳೆಯುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT