ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾಧ್ಯತೆಗಳ ವಿಸ್ತರಣೆ

Last Updated 18 ಅಕ್ಟೋಬರ್ 2011, 19:30 IST
ಅಕ್ಷರ ಗಾತ್ರ

ಕೆಲವು ವರ್ಷಗಳ ಕೆಳಗೆ ಇಂಥದ್ದೊಂದು ಜೋಕ್ ತುಂಬ ಪ್ರಚಲಿತವಿತ್ತು.
ಒಬ್ಬ ಮನುಷ್ಯ ಹಡಗಿನಲ್ಲಿ ಹೋಗುತ್ತಿರುವಾಗ ಬಿರುಗಾಳಿ ಬೀಸಿತಂತೆ. ಹಡಗು ನಾಯಕನ ನಿಯಂತ್ರಣವನ್ನು ಮೀರಿ ಗಾಳಿ ಬೀಸಿದತ್ತ ಕೊಚ್ಚಿಕೊಂಡು ಹೋಯಿತು.

ನಂತರ ಒಂದು ಭಾರಿ ಬಂಡೆಗಲ್ಲಿಗೆ ಅಪ್ಪಳಿಸಿ ಛಿದ್ರಛಿದ್ರವಾಗಿ ಒಡೆದು ಮುಳುಗಿ ಹೋಯಿತು. ಹಡಗಿನಲ್ಲಿದ್ದ ನೂರಾರು ಜನರು ನೀರುಪಾಲಾದರು.
 
ನಮ್ಮ ಕಥಾನಾಯಕನಾದ ಮನುಷ್ಯ ಭಗವಂತನ ಕೃಪೆಯಿಂದ ಕೈಗೆ ಸಿಕ್ಕ ಹಲಗೆಯ ತುಂಡು ಹಿಡಿದುಕೊಂಡು ಪಾರಾದ. ಆದರೂ ಗಾಳಿ, ತೆರೆಗಳು ಅವನನ್ನು ಸೆಳೆದುಕೊಂಡು ಒಂದು ದ್ವೀಪಕ್ಕೆ ತಂದು ಎಸೆದುಬಿಟ್ಟವು.

ಅದೊಂದು ನಿರ್ಜನವಾದ ದ್ವೀಪ. ಬಹುಶಃ ಅದುವರೆಗೂ ಮನುಷ್ಯ ಪ್ರಾಣಿ ಆ ನೆಲದ ಮೇಲೆ ಕಾಲು ಇಟ್ಟಿರಲಿಕ್ಕಿಲ್ಲ. ಈತನಿಗೆ ಎದೆ ಒಡೆದುಹೋಯಿತು. ಮತ್ತೆ ಆದಿ ಮಾನವನಂತೆ ಬದುಕಲು ಅಭ್ಯಾಸ ಮಾಡಿಕೊಂಡ. ದಿನಗಳು ಉರುಳಿದವು, ವರ್ಷಗಳು ಉರುಳಿದವು. ಈತ ಹೇಗೋ ಬದುಕಿಕೊಂಡ.

ಸುಮಾರು ಇಪ್ಪತ್ತು ವರ್ಷ ಗತಿಸಿರಬೇಕು. ಒಂದು ದಿನ ಆ ಮಾರ್ಗವಾಗಿ ಸಾಗುತ್ತಿದ್ದ ಹಡಗೊಂದನ್ನು ಈತ ನೋಡಿದ. ತನ್ನ ಬಳಿ ಇದ್ದ ಬಟ್ಟೆಯನ್ನು ಹಾರಿಸಿ ಕೂಗಿದ, ಬೆಂಕಿ ಹಾಕಿ ಹೊಗೆ ಎಬ್ಬಿಸಿದ.
 
ಈತನ ಪುಣ್ಯ, ಇದು ಹಡಗಿನ ನಾಯಕನ ಗಮನಕ್ಕೆ ಬಂತು. ಆತ ಒಂದು ಪುಟ್ಟ ದೋಣಿಯನ್ನು ದ್ವೀಪಕ್ಕೆ ಕಳುಹಿಸಿ ಇವನನ್ನು ಪಾರು ಮಾಡಿಕೊಂಡು ಬಂದ. ಹಡಗಿನಲ್ಲೇ ಪಯಣಿಸಿ ತನ್ನ ಊರು ಸೇರಿಕೊಂಡ.

ಈತ ಸತ್ತೇ ಹೋಗಿದ್ದಾನೆಂದು ತಿಳಿದು ಇವನನ್ನು ಫೋಟೊ ಫ್ರೇಂನಲ್ಲಿ ಕೂಡ್ರಿಸಿದ್ದ ಹೆಂಡತಿ, ಮಕ್ಕಳು ಫ್ರೇಂನಿಂದ ಬಿಡುಗಡೆ ಮಾಡಿದರು. ಈ ಮನುಷ್ಯ ಒಂದೆರಡು ದಿನ ಸುಧಾರಿಸಿಕೊಂಡು ತಾನು ವ್ಯವಹಾರ ಮಾಡುತ್ತಿದ್ದ ಕಂಪೆನಿಗೆ ಫೋನ್ ಮಾಡಿದ. 

`ನನ್ನ ಷೇರುಗಳ ಬೆಲೆ ಹೇಗಿದೆ?~ ಅಧಿಕಾರಿ ಹೇಳಿದ,  `ಸಾರ್, ಅಂದು ನೀವು ಹಾಕಿದ್ದು ಕೆಲವೇ ಸಾವಿರ ರೂಪಾಯಿ. ಇಂದು ನಿಮ್ಮ ಷೇರುಗಳ ಬೆಲೆ 90 ಲಕ್ಷ ರೂಪಾಯಿಗಳು.~ ಇವನ ಹೃದಯ ಸಂತೋಷದಿಂದ ನಿಂತೇ ಹೋಯಿತು.
 
`ಹೌದೇ? ಹಾಗಾದರೆ ನನ್ನ ಎರಡು ಮನೆಗಳ ಬೆಲೆ ಎಷ್ಟು ಈಗ?~  ಕೇಳಿದ ಆತುರದಿಂದ.  `ಸರ್ ಆ ಮನೆಗಳು ಈಗ ನಗರದ  ಮಧ್ಯ ಭಾಗದಲ್ಲೇ ಬಂದುಬಿಟ್ಟಿವೆ. ಒಂದೊಂದರ ಬೆಲೆ ಈಗ ಹತ್ತು ಕೋಟಿ ರೂಪಾಯಿಗಳು~ ಎಂಬ ಉತ್ತರ ಬಂತು.

ಈತನ ಕೈಯಿಂದ ಫೋನ್ ಜಾರಿ ಕೆಳಗೆ ಬಿತ್ತು. ಹೆಂಡತಿ ಜೋರಾಗಿ ಕೂಗಿದಳು.  ಬೇಗ ಫೋನ್ ಬಂದ್ ಮಾಡಿ. ಈಗಾಗಲೇ ಮೂರು ನಿಮಿಷ ಮಾತನಾಡಿದ್ದೀರಿ. ಅದರ ಚಾರ್ಜೇ ಎರಡು ಲಕ್ಷ ರೂಪಾಯಿಯಾಯಿತು . ಈತ ದಂಗಾಗಿ ಕುಳಿತ. ಎಲ್ಲದರ ಬೆಲೆ ಹೆಚ್ಚಾಗಿದೆ!

ಷೇರ್ ದರಗಳು, ಮನೆಯ ದರ ಅದರಂತೆ ಪ್ರತಿಯೊಂದು ಖರ್ಚಿನ ದರವೂ ಏರಿದೆ.
ಈಗ ನಮ್ಮೆಲ್ಲರ ಗಮನಕ್ಕೂ ಬಂದ ವಿಷಯವಲ್ಲವೇ ಇದು? ಪ್ರತಿಯೊಂದರ ಬೆಲೆ ಹೆಚ್ಚಾಗಿದೆ. ನಮ್ಮಲ್ಲಿ ಬಹಳಷ್ಟು ಜನ ಇದನ್ನು ಚಿಂತಿಸಿ ಕೊರಗುತ್ತಾರೆ.

ನಾನು ಹುಡುಗನಾಗಿದ್ದಾಗ ಹತ್ತು ರೂಪಾಯಿಗೆ ಒಂದು ಮೂಟೆ ಅಕ್ಕಿ ದೊರಕುತ್ತಿತ್ತು, ಪೆಟ್ರೋಲ್ ಬೆಲೆ ಕೇವಲ ಎರಡು ರೂಪಾಯಿ ಲೀಟರಿಗೆ, ಐದು ರೂಪಾಯಿಗೆ ಒಂದು ಚೀಲ ತರಕಾರಿ ಸಿಗುತ್ತಿತ್ತು, ಹೀಗೆಲ್ಲ ನೆನೆಸಿಕೊಂಡು, ಈಗ ಎಲ್ಲದರ ಬೆಲೆ ಕೈಗೆ ಸಿಗದಷ್ಟು ಏರಿ ಹೋಗಿದೆ ಎಂದು ದುಃಖಿಸುತ್ತೇವೆ.

ದಯವಿಟ್ಟು ಇದರ ಇನ್ನೊಂದು ಮುಖವನ್ನೂ ಗಮನಿಸಿ. ನಿಮ್ಮ ಜೀವನದ ಅನುಭವ ಹೆಚ್ಚಾಗಿಲ್ಲವೇ? ತಮ್ಮ ಆತ್ಮವಿಶ್ವಾಸ ಹೆಚ್ಚಾಗಿಲ್ಲವೇ? ತಮ್ಮ ಓದು ಹೆಚ್ಚಾಗಿಲ್ಲವೇ? ಜ್ಞಾನದ ಮಟ್ಟ, ತಿಳುವಳಿಕೆ, ಕುಶಲತೆಗಳು ಹೆಚ್ಚಾಗಿಲ್ಲವೇ? ನಿಮ್ಮ ಸಾಧನೆಗೆ ಸಾಧ್ಯತೆಗಳು ಹೆಚ್ಚಾಗಿಲ್ಲವೇ? ಇವೆಲ್ಲ ಹೆಚ್ಚಾಗಿದ್ದರೆ ಏಕೆ ಚಿಂತೆ?

ಸಾಧ್ಯತೆಗಳು ವಿಸ್ತರಿಸಿದಂತೆ, ಮನಸ್ಸು ವಿಕಾಸಗೊಳ್ಳುತ್ತದೆ, ಜೀವನ ಸಮೃದ್ಧಿಯಾಗುತ್ತದೆ. ಬರೀ ಬೆಲೆ ಹೆಚ್ಚಾಗಬಾರದು, ನಮ್ಮ ಜೀವನದ ಸಾಧ್ಯತೆಗಳು ಹೆಚ್ಚಾಗಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT