ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವೇದವ್ಯಾಸರ ಶಿವಪುರಾಣಸಾರ: ಕಳಿಂಗರಾಜನಾದ ಗುಣನಿಧಿ

ಅಕ್ಷರ ಗಾತ್ರ

ಮಹಾಪಾಪಿಯಾಗಿದ್ದ ಗುಣನಿಧಿಯನ್ನು ನರಕಕ್ಕೆ ಕರೆದೊಯ್ಯಲು ಯಮನ ಭಟರಿಗೆ ಅವಕಾಶ ನೀಡದೆ, ಕೈಲಾಸಕ್ಕೆ ಕರೆದೊಯ್ದ ಶಿವಗಣಗಳ ವರ್ತನೆ ಸರಿ ಎನ್ನುತ್ತಾನೆ ಯಮಧರ್ಮ. ಯಾವುದೇ ಕಾರಣಕ್ಕೂ ಶಿವನ ಭಕ್ತರನ್ನು ಮುಟ್ಟಬೇಡಿ ಎಂದು ತನ್ನ ಕಿಂಕರರಿಗೆ ಎಚ್ಚರಿಸುವಾಗ, ‘ಅವರು ಡಂಭಾಚಾರಕ್ಕಾಗಿಯಾಗಲೀ, ಮತ್ತೊಬ್ಬರನ್ನು ಮೋಸಗೊಳಿಸಲೆಂದಾಗಲೀ, ಶಿವನ ವೇಷವನ್ನು ಧರಿಸಿದ್ದರೂ ಅವರನ್ನು ಬಿಟ್ಟುಬಿಡಿ. ಅಂಥವರನ್ನು ಶಿವಲೋಕವೇ ವಿಚಾರಣೆ ಮಾಡಿ ತೀರ್ಪು ನೀಡುತ್ತದೆ’ ಎಂದು ಅಪ್ಪಣೆ ಮಾಡುತ್ತಾನೆ.

ಹೀಗೆ, ಗುಣನಿಧಿ ಎಂಬ ಮಹಾಪಾಪಿಯು ಸಾಯುವ ಕೊನೆ ಘಳಿಗೆಯಲ್ಲಿ ಶಿವದೇಗುಲದಲ್ಲಿ ದೀಪ ಬೆಳಗಿದ್ದರಿಂದ ಯಮದೂತರ ಸೆರೆಯಿಂದ ಪಾರಾದ. ಶುದ್ಧ ಹೃದಯದಿಂದ ಕೈಲಾಸಕ್ಕೆ ತೆರಳಿ, ಶಿವಪಾರ್ವತಿಯರನ್ನು ಸೇವಿಸುತ್ತಿದ್ದ. ಕೊನೆಗೆ ಕಳಿಂಗದೇಶದ ಅರಸನಾದ ಅರಿಂದಮನೆಂಬ ದೊರೆಗೆ ‘ದಮ’ ಎಂಬ ಮಗನಾಗಿ ಹುಟ್ಟಿದ. ಅವನು ಬಾಲ್ಯದಿಂದಲೇ ತನ್ನ ಜೊತೆಯ ಹುಡುಗರಲ್ಲೆಲ್ಲಾ ಶಿವನಲ್ಲಿ ಭಕ್ತಿಯನ್ನು ಬೆಳೆಸುತ್ತಿದ್ದ. ತಂದೆ ಅರಿಂದಮ ತೀರಿಹೋದಮೇಲೆ ದಮ ರಾಜನಾದ. ದೇಶದ ಆಳ್ವಿಕೆಯನ್ನು ಉತ್ತಮವಾಗಿ ನಡೆಸುತ್ತಾ, ದೇಶದೆಲ್ಲೆಡೆ ಶೈವಧರ್ಮಗಳನ್ನು ಪ್ರಚಾರಗೊಳಿಸಿದ.

ಹಿಂದಿನ ಜನ್ಮದಲ್ಲಿ ಗುಣನಿಧಿ ಎಂಬ ಸಾಮಾನ್ಯನಾಗಿ ಜನಿಸಿದ್ದವ, ಈಗ ಶಿವನ ಕೃಪೆಯಿಂದ ಮತ್ತೊಬ್ಬರಿಂದ ಗೆಲ್ಲಲಸಾಧ್ಯವಾದ ಅರಸನಾಗಿ ಹುಟ್ಟಿದ. ಇಂಥ ಶಿವಭಕ್ತ ರಾಜ ದಮ, ಪ್ರತಿಯೊಂದು ಶಿವದೇವಾಲಯದಲ್ಲೂ ದೀಪ ಹಚ್ಚುವುದೊಂದನ್ನು ಬಿಟ್ಟು ಬೇರೆ ಧರ್ಮಮಾರ್ಗ ಅರಿಯದಾದ. ದೇಶದಲ್ಲಿರುವ ಪ್ರತಿಯೊಂದು ಊರಿನ ಮುಖಂಡರನ್ನೂ ಕರೆಸಿ, ‘ಶಿವಾಲಯಗಳಲ್ಲಿ ನಿತ್ಯವೂ ದೀಪಗಳನ್ನು ತಪ್ಪದೆ ಹಚ್ಚಬೇಕು‘ ಎಂದು ಆಜ್ಞಾಪಿಸಿದ. ರಾಜನ ಆಜ್ಞೆಯಿಂದ ಮತ್ತು ತಪ್ಪಿದರೆ ವಿಧಿಸುವ ಶಿಕ್ಷೆಯಿಂದ ಜನರೆಲ್ಲಾ ಪ್ರತಿ ಶಿವದೇವಸ್ಥಾನದಲ್ಲೂ ಅಂದಿನಿಂದ ದೀಪಗಳನ್ನು ಉರಿಸುತ್ತ ಬಂದರು. ಈ ರೀತಿ ದಮ ತಾನು ಬದುಕಿರುವವರೆಗೂ ಧರ್ಮಕೆಲಸವನ್ನು ಮಾಡುತ್ತಾ, ಪುಣ್ಯವನ್ನು ಸಂಪಾದಿಸಿ ಕೊನೆಗೆ ಮರಣವನ್ನು ಹೊಂದಿದ.

ಪೂರ್ವಜನ್ಮದಲ್ಲಿ ಗುಣನಿಧಿಯಾಗಿ ಹಚ್ಚಿದ ಒಂದು ದೀಪದ ಮಹಿಮೆಯಿಂದ ಕೈಲಾಸ ಸೇರಿದ. ಶಿವನ ಅನುಗ್ರಹದಿಂದ ಮತ್ತೆ ರಾಜನಾಗಿ ಜನಿಸಿ, ಶಿವದೇವಾಲಯಗಳೆಲ್ಲಾ ನಿತ್ಯ ದೀಪಗಳು ಬೆಳಗುವಂತೆ ಮಾಡಿದ. ಈ ಪುಣ್ಯದಿಂದ, ದೊಡ್ಡ ದೊಡ್ಡ ದೀಪ ಶಿಖೆಗಳಿಗೆ ಸದಾ ಆಶ್ರಯನಾಗಿ ಮರುಜನ್ಮದಲ್ಲಿ ಅಲಕಾ ನಗರಿಗೆ ಅಧಿಪತಿಯಾದ – ಎಂದು ನಾರದನಿಗೆ ಗುಣನಿಧಿಕಥೆ ಹೇಳಿದ ಬ್ರಹ್ಮ, ಗುಣನಿಧಿಯ ಶಿವಗುಣವನ್ನು ಈ ರೀತಿ ವರ್ಣಿಸಿತ್ತಾನೆ.

‘ವತ್ಸ ನಾರದ, ಗುಣನಿಧಿಯಂತೆ ಶಿವನಿಗೆಂದು ಮಾಡಿದ ಸಣ್ಣ ಪುಣ್ಯದ ಕೆಲಸವೂ ಕಾಲಾಂತರದಲ್ಲಿ ಒಳ್ಳೆಯ ಫಲವನ್ನೀಯುತ್ತದೆ. ಧರ್ಮಕಾರ್ಯಗಳೊಂದರಲ್ಲಿಯೂ ಆಸಕ್ತಿಯಿಲ್ಲದ ಗುಣನಿಧಿ, ದೈವಯೋಗದಿಂದ ಪುನೀತನಾದ. ಅವನು ನೈವೇದ್ಯವನ್ನು ಕದಿಯಬೇಕೆಂದು ಶಿವಾಲಯದೊಳಗೆ ಪ್ರವೇಶಿಸಿದ. ಶಿವನಿಗೆ ಇಟ್ಟ ನೈವೇದ್ಯವು ಚೆನ್ನಾಗಿ ಕಾಣಲೆಂದು ಬಟ್ಟೆಯಂಚಿನಿಂದ ದೀಪವನ್ನು ಹಚ್ಚಿದ, ಆ ಬೆಳಕು ಶಿವಲಿಂಗದ ಮೇಲೆ ಬಿದ್ದು ಮುಸುಕಿದ್ದ ಕತ್ತಲೆ ಮಾಯವಾಯಿತು. ಆ ಪುಣ್ಯದಿಂದ ಅವನು ಕಳಿಂಗದೇಶದ ದೊರೆಯಾಗಿ ಧರ್ಮಕಾರ್ಯಗಳನ್ನು ಮಾಡುತ್ತಾಬಂದ. ಪೂರ್ವಜನ್ಮವಾಸನೆಯಿಂದ ಶಿವದೇವಾಲಯಗಳಲ್ಲಿ ದೀಪಗಳನ್ನು ಸದಾ ಉರಿಯುವಂತೆ ಮಾಡಿದ. ಇದರ ಪುಣ್ಯಫಲದಿಂದ ಅಲಕಾ ನಗರಿ ರಾಜನಾಗಿ ಮುಂದೆ ಕುಬೇರನಾದ. ಈಗ ಅವನು ಕುಬೇರನಾಗಿ ಅನುಭವಿಸುತ್ತಿರುವ ದಿಕ್ಪಾಲಪದವಿಯು ಅವನ ಶಿವಪೂಜಾಫಲದಿಂದ ದೊರೆಯಿತು. ಯಜ್ಞದತ್ತನ ಮಗನಾದ ಗುಣನಿಧಿಯ ಚರಿತ್ರೆಯನ್ನು ಕೇಳಿದವರ ಮನೋರಥಗಳೆಲ್ಲವೂ ಸಿದ್ಧಿಸುವುವು’.

ಗುಣನಿಧಿಯಾಗಿ ಶಿವನ ಮುಂದೆ ಒಂದು ದೀಪ ಬೆಳಗಿದ್ದಕ್ಕೆ ಕಳಿಂಗದೇಶದ ರಾಜನಾದ. ದಮ ರಾಜನಾಗಿ ಶಿವದೇಗುಲಗಳಲ್ಲಿ ಸಾವಿರಾರು ದೀಪ ಬೆಳಗಿದ. ಇದರ ಪುಣ್ಯದಿಂದ ಅಲಕಾ ನಗರಿ ರಾಜನಾಗಿ ಘೋರ ತಪಸ್ಸು ಮಾಡಿ ಕುಬೇರನಾದ. ಇಂಥ ಕುಬೇರನಿಗೆ ಶಿವನೊಂದಿಗೆ ಸಖ್ಯವಾದ ಕಥೆ ಹೇಳುತ್ತೇನೆ, ಕೇಳು – ಎಂದು ನಾರದನಿಗೆ ಬ್ರಹ್ಮ ಹೇಳುವಲ್ಲಿಗೆ ಶ್ರೀಶಿವಮಹಾಪುರಾಣದ ರುದ್ರಸಂಹಿತೆಯ ಸೃಷ್ಟಿಖಂಡದಲ್ಲಿ ಕೈಲಾಸಗಮನೋಪಾಖ್ಯಾನದಲ್ಲಿ ಗುಣನಿಧಿಸದ್ಗತಿವರ್ಣನ ಎಂಬ ಹದಿನೆಂಟನೆಯ ಅಧ್ಯಾಯ ಮುಗಿಯುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT