ಒಳಿತಿಗಾಗಿ ‘ಸಂವಿಧಾನ’ಗಳು ಬದಲಾಗಲಿ!

7

ಒಳಿತಿಗಾಗಿ ‘ಸಂವಿಧಾನ’ಗಳು ಬದಲಾಗಲಿ!

Published:
Updated:
Deccan Herald

ಇದೇನಿದು? ಮನೆಗೂ ಸಂವಿಧಾನಾನ? ದೇಶಕ್ಕೆ ಇರುವ ಸಂವಿಧಾನದ ನೀತಿ–ನಿಯಮಗಳನ್ನು ಪಾಲಿಸಿದರೆ ಸಾಕಾಗಿದೆ. ಮನೆಗೂ ಯಾಕೆ ಅಂತೀರಾ? ಪ್ರತಿ ಮನೆಗೂ ಅದರದ್ದೇ ಆದ ಅಲಿಖಿತ ಸಂವಿಧಾನ ಇರತ್ತದೆ. ಸಾಮಾನ್ಯವಾಗಿ ಅದರ ಮಹತ್ವದ ಬಹುಪಾಲು ನೀತಿ–ನಿಯಮಗಳನ್ನು ಆ ಮನೆಯ ಹಿರಿಯ ವ್ಯಕ್ತಿ ನಿರ್ಧಾರ ಮಾಡುತ್ತಾನೆ; ಇದಕ್ಕೆ ಕಾರಣ ನಾವು ಇರೋದು ಪುರುಷಪ್ರಧಾನ ಸಮಾಜದಲ್ಲಾದ್ದರಿಂದ! ಹಲವು ಮನೆಗಳಲ್ಲಿ ಮಕ್ಕಳಾದಿಯಾಗಿ ಮಹಿಳೆಯನ್ನೂ ಸೇರಿದಂತೆ ಎಲ್ಲರನ್ನೂ ಮನುಷ್ಯರು ಎಂದು ಪರಿಗಣಿಸಿ, ಅವರ ಭಾವನೆಗಳಿಗೂ ಬೆಲೆಕೊಟ್ಟು ನಿಜಾರ್ಥದಲ್ಲಿ ಪ್ರಜಾಪ್ರಭುತ್ವ ಜಾರಿಯಲ್ಲಿರುತ್ತದೆ ಹಾಗೂ ಅಲಿಖಿತ ಸಂವಿಧಾನಕ್ಕೆ ಎಲ್ಲರದ್ದೂ ಕೊಡುಗೆಯಿರುತ್ತದೆ.

ಪ್ರತಿ ಮನುಷ್ಯನ ಮನಸ್ಸು ಅನನ್ಯವಾದ್ದರಿಂದ, ಆ ಮನುಷ್ಯನು ರೂಪಿಸುವ ಸಂವಿಧಾನವೂ ವಿಭಿನ್ನವೇ; ಕೆಲವು ಮನೆಗಳಲ್ಲಿ ಎದ್ದ ಕೂಡಲೇ ಸ್ನಾನ, ದೇವರ ಧ್ಯಾನಕ್ಕೆ ಆದ್ಯತೆಯಿದ್ದರೆ, ಕೆಲವರ ಮನೆಯಲ್ಲಿ ಬೆಡ್ ಕಾಫಿ ಬೇಕೇಬೇಕು! ಕೆಲವು ಮನೆಗಳಲ್ಲಂತೂ, ಉಸಿರಾಡಲೂ ಪುರುಸೊತ್ತಿಲ್ಲವೇನೋ ಎಂಬಂತೆ ಕಚೇರಿಗೆ ಓಡುವ ತರಾತುರಿಯಲ್ಲಿ ಮುಗಿಸಲೇಬೇಕಾದ ಮನೆಕೆಲಸಗಳನ್ನು ನಿಭಾಯಿಸೋ ಆತುರದಲ್ಲಿ ಬೆಳಗು ತೆರೆದುಕೊಳ್ಳುತ್ತದೆ. ಅವವೇ ಕೆಲಸಗಳೂ, ಅವವೇ ವಯಸ್ಸಿನ ಜನರಿರುವ ಬೇರೇ ಬೇರೇ ಮನೆಗಳಲ್ಲಿ, ಅವರ ಮನಃಸ್ಥಿತಿ ಹಾಗೂ ಪರಿಸ್ಥಿತಿಗಳ ಆಧಾರದ ಮೇಲೆ ಅಲಿಖಿತ ಸಂವಿಧಾನದ ರೂಪುರೇಷೆಯೂ ಬದಲಾಗುತ್ತದೆ. ಕೆಲವರ ಮನೆಯಲ್ಲಿ ಬೆಳಿಗ್ಗೆ ಎದ್ದ ಕೂಡಲೇ ಟಿ.ವಿ. ಆನ್ ಆದರೆ, ತಡರಾತ್ರಿ ಮಲಗುವ ಮುನ್ನವೇ ಆಫ್ ಮಾಡೋದಂತೆ! ಕೆಲವರಂತೂ ಅದನ್ನು ನಿಜಾರ್ಥದಲ್ಲಿ ಮೂರ್ಖರ ಪೆಟ್ಟಿಗೆ ಎಂದು ಪರಿಗಣಿಸಿ, ಮನೆಯಲ್ಲಿ ಅದಕ್ಕೊಂದು ಸ್ಥಾನವನ್ನೇ ಕಲ್ಪಿಸಿರುವುದಿಲ್ಲ ಅಥವಾ ಮನೆಯಲ್ಲಿ ಟಿ.ವಿ. ಇದ್ದರೂ, ಅದು ಆಫ್‌ ಆಗಿರುವಾಗಲೂ ಅದನ್ನು ನೋಡುವುದಿಲ್ಲ. ಕೆಲವರ ಮನೆಯಲ್ಲಿ ಎಲ್ಲರೂ ಪಿಸುಮಾತಿನ ಸರದಾರರೇ! ಹಲವು ಮನೆಗಳಲ್ಲಿ, ಪಾಪ ಪಕ್ಕದ ಮನೆಯವರು ಗೋಡೆಗೆ ಕಿವಿಯಾನಿಸಿ ಕೇಳಿಸಿಕೊಳ್ಳುವ ಕಷ್ಟ ಯಾಕೆ, ಅವರ ಮನೆಯಲ್ಲೆ ಅವರ ಕಿವಿ ತಮಟೆಯೂ ಹರಿದು ಹೋಗುವಂತೆ ಇವರು ಇಲ್ಲೇ ಕಿರುಚಿ ಮಾತಾಡ್ತಾರೆ. ಓದಿನ ಹವ್ಯಾಸದ ಮನೆಯೊಂದಾದರೆ, ಹಾಡಿನ ಹವ್ಯಾಸದ್ದು ಮತ್ತೊಂದು. ತಲೆಗೆ ಮಾತ್ರ ಕೊಬ್ಬರಿಯೆಣ್ಣೆ ಹಚ್ಚಿ ಗೊತ್ತಿರುವ ಮನೆಯೊಂದಾದರೆ, ಅಡುಗೆಯೂ ಸೇರಿದಂತೆ ಎಲ್ಲಕ್ಕೂ ತೆಂಗಿನೆಣ್ಣೆಯೇ ಶ್ರೇಷ್ಠ ಎನ್ನುವ ಮನೆ ಮತ್ತೊಂದು. ಯಾವುದೋ ಒಂದು ನ್ಯೂಸ್ ಚಾನಲ್ಲೇ ಸರಿ ಎಂಬ ಧೋರಣೆ ಒಂದು ಮನೆಯಲ್ಲಿ; ಮತ್ತೊಂದು ಮನೆಯಲ್ಲಿ ಮೂರು ಹೊತ್ತೂ ನ್ಯೂಸ್‌ನ ಬದಲಿಗೆ ಸ್ಪೋರ್ಟ್ಸ್, ಸಿನಿಮಾ ಚಾನೆಲ್‌ಗಳ ಮೆರೆದಾಟ. ಹೀಗೆ ಅವರವರ ಆಸಕ್ತಿ, ಆಸೆ, ಆಕಾಂಕ್ಷೆ, ಸಾಮಾಜಿಕ ಸ್ಥಿತಿಗತಿ, ಬೌದ್ಧಿಕ ಮಟ್ಟ, ಧಾರ್ಮಿಕ ನಂಬಿಕೆಗನುಗುಣವಾಗಿ ಅಲಿಖಿತ ಸಂವಿಧಾನ ಜಾರಿಯಲ್ಲಿರುತ್ತದೆ.

ಅದರದರ ಪಾಡಿಗೆ ಮನೆಗೊಂದು ಸಂವಿಧಾನವಿರುತ್ತೆ ನಿಜ; ಆದರೆ, ಸಾಮಾನ್ಯವಾಗಿ ಇದರ ಪ್ರಭಾವ ಹೆಚ್ಚು ಆಗೋದು ಹೆಣ್ಣುಮಕ್ಕಳ ಮೇಲೇನೇ ಅನ್ನುವುದು ಸೂಕ್ಷ್ಮವಾಗಿ ಗಮನಿಸಿದರೆ ತಿಳಿಯುತ್ತದೆ. ಅದರಲ್ಲೂ ಒಂದು ಮನೆಯ ಮಗಳು ಮತ್ತೊಂದು ಮನೆಯ ಸೊಸೆಯಾದಾಗ, ಒಂದು ಸಂವಿಧಾನ ಪಾಲಿಸೋ ದೇಶದಿಂದ ಮತ್ತೊಂದು ಸಂವಿಧಾನದ ದೇಶಕ್ಕೆ ವಲಸೆ ಹೋದಂತೆ ಭಾಸವಾಗುತ್ತೆ; ಒಂದೇ ಸಂಪ್ರದಾಯದ ಕುಟುಂಬಗಳ ನಡುವೆ ಮದುವೆಯಾದರೂ ಹೀಗಾಗುತ್ತದೆ. ಇನ್ನು, ಬೇರೆ ಬೇರೆ ಪ್ರಾಂತ್ಯದ, ಜಾತಿಯ, ಧರ್ಮದ, ದೇಶದ ಕುಟುಂಬಗಳ ನಡುವೆ ಮದುವೆಯಾದಾಗಂತೂ ರೀತಿ ರಿವಾಜುಗಳಲ್ಲಿ ಅಜಗಜಾಂತರ ವ್ಯತ್ಯಾಸವಿರುತ್ತದೆ. ಉದಾಹರಣೆಗೆ, ಉತ್ತರ ಭಾರತದ ವಧು, ದಕ್ಷಿಣ ಭಾರತದ ವರನನ್ನು ಮದುವೆಯಾಗುವಾಗ ಮದುವೆ ಹಗಲು ನಡೆಯಬೇಕೋ? ರಾತ್ರಿ ನಡೆಯಬೇಕೋ? ಅವರ ಮನೆಯಲ್ಲಿ ಮೂರು ಹೊತ್ತೂ ರೋಟಿ ದಾಲ್ ಸಬ್ಜಿ, ಇವರ ಮನೆಯಲ್ಲಿ ದೋಸೆ, ಇಡ್ಲಿ, ಅನ್ನ ಸಾರು;

ಅವರವರ ಮನೆಗಳ ಸಂವಿಧಾನ ಅವರವರಿಗೆ ಸರಿಯೆನಿಸಿದಾಗ, ಇದಕ್ಕೆ ಪರಿಹಾರ ಏನು? ಪ್ರತಿ ಹೊತ್ತಿನ ಅಡುಗೆಗೂ ತೆಂಗಿನಕಾಯಿಯ ತುರಿಯ ಅಲಂಕಾರ ಬೇಕೇಬೇಕು ಎನ್ನುವ ಮನೆಯಿಂದ ಬಂದವಳಿಗೆ ತೆಂಗಿನಕಾಯಿಯನ್ನು ಸುಮ್ಮನೆ ಶಾಸ್ತ್ರಕ್ಕೆ ಹೀಗೆ ತೋರಿಸಿದ ಹಾಗೆ ಮಾಡುವ ಅತ್ತೆ ಮನೆಯ ಸಂವಿಧಾನ ವಿಚಿತ್ರ ಅನಿಸುತ್ತದೆ. ಹಸಿ ಈರುಳ್ಳಿಯನ್ನು ರೊಟ್ಟಿಯೊಂದಿಗೆ ನೆಂಚಿಕೊಳ್ಳುವ ಮನೆಯ ಹುಡುಗಿಗೆ, ನಾಜೂಕಾಗಿ ಹೆಚ್ಚಿ ಬಾಯಿಗೆ ಸಿಗದಂತೆ ಎಣ್ಣೆಯಲ್ಲಿ ಮಾಯ ಮಾಡಿಬಿಡು ಅನ್ನೋ ಅತ್ತೆಯ ನೀತಿಯನ್ನು ಅರಗಿಸಿಕೊಳ್ಳೋದೇ ಕಷ್ಟ. ತನ್ನ ಮನೆಯ ಸಂವಿಧಾನದ ಯಾವುದೇ ನೀತಿನಿಯಮಗಳನ್ನು ಇಲ್ಲಿ ಜಾರಿಗೊಳಿಸುವಂತಿಲ್ಲ ಹಾಗೂ ಈ ಮನೆಯ ಸಂವಿಧಾನವನ್ನು ಅರ್ಥೈಸಿಕೊಂಡು ಸ್ವಲ್ಪವೂ ತಪ್ಪದೆ ಪಾಲಿಸಬೇಕು ಎಂಬುದನ್ನು ಮನಗಂಡು, ಹೊಂದಿಕೊಳ್ಳುವಷ್ಟರಲ್ಲಿ  ಹುಡುಗಿ, ಸುಸ್ತೋ ಸುಸ್ತು; ಹಲವು ಬಾರಿ ಏನೋ ಮಾಡಲು ಹೋಗಿ ಏನೋ ಆಗಿ ಬೇಸ್ತು ಬೀಳುವ ಪ್ರಸಂಗಗಳೂ ಇಲ್ಲದಿರಲ್ಲ. ಇದು ಆ ಹೊಸ ‘ಸೊಸೆ’ಯ ಪಾತ್ರ ನಿಭಾಯಿಸಲು ಹರಸಾಹಸ ಪಡುತ್ತಿರುವ ಹೆಣ್ಣುಮಗಳಿಗೆ ಮಾತ್ರವಲ್ಲದೇ, ಆಕೆ ಬಂದಿರುವ ಮನೆಯ ಸದಸ್ಯರಿಗೂ ಕಷ್ಟವೇ ಅಲ್ಲವೇ? ಅಮ್ಮನ ಕೈಯಡುಗೆಯಲ್ಲಿ ಸಣ್ಣಗೆ ಹೆಚ್ಚಿದ ಕೊತ್ತಂಬರಿಯು ಅಲ್ಲಲ್ಲಿ ಸಿಗುತ್ತಿದ್ದಾಗ ಚಪ್ಪರಿಸುತ್ತಿದ್ದ ಮಗರಾಯನಿಗೆ ಕೊತ್ತಂಬರಿಯ ಕಾಡನ್ನೇ ಸಾಂಬಾರಿಗಿಳಿಸುವ ಮಡದಿಯ ಅಭ್ಯಾಸ ಕಂಡು ಕಣ್ ಕಣ್ ಬಿಡುವ ಹಾಗಾಗುತ್ತೆ ಅಲ್ವೇ? ಅತ್ತೆಗೂ ತಾನು ಸೊಸೆಯಾಗಿ ಬಂದಾಗಿನಿಂದ ಅಭ್ಯಾಸವಾಗಿದ್ದ ರೀತಿನೀತಿಗಳಲ್ಲಿ ಓರೆಕೋರೆಯಾದಾಗ, ಸಹಿಸುವುದು ಸ್ವಲ್ಪ ಕಷ್ಟವೇ.

ಮೂರು ಹೊತ್ತೂ ಕುರುಕಲು ತಿನ್ನುವ ಅಭ್ಯಾಸದ ಮನೆಗೆ ಬಂದ ಡಯೆಟ್ ಕಾನ್ಶಿಯಸ್ ಸೊಸೆಗೆ, ಹೊಂದಿಕೊಳ್ಳೋಕೆ ಸಮಯ ಬೇಕೇಬೇಕು. ಕೆಲವು ಮನೆಗಳಲ್ಲಿ ಹಣವಿರೋದೇ ಖರ್ಚು ಮಾಡೋಕೆ ಅನ್ನುವ ಭಾವ; ಮತ್ತೂ ಕೆಲವು ಮನೆಗಳಲ್ಲಿ ಹೇಗೆ ಹೇಗೆ ಉಳಿತಾಯ ಮಾಡಬಹುದು ಅನ್ನುವ ಯೋಚನೆ-ಯೋಜನೆಯಲ್ಲೇ ಸಮಯ ಹಾಗೂ ಬುದ್ಧಿಯನ್ನು ಖರ್ಚು ಮಾಡುವ ಪರಿಯನ್ನು ಅನುಭವಿಸಿಯೇ ಅರಿಯಬೇಕು. ಕೆಲವು ಮನೆಗಳಲ್ಲಿ ಚಿನ್ನದ ಮೇಲೆ ಹೂಡಿಕೆ ಮಾಡೋದೇ ಕಷ್ಟದಲ್ಲಿ ಸಹಾಯವಾಗ್ಲೀ ಅಂತ; ಆ ಮನೆಯ ಹೆಣ್ಣುಮಕ್ಕಳಿಗೆ ಸಮಯ ಬಂದರೆ ಒಡವೆ ಮಾರೋದು ಯಾವ ದೊಡ್ಡ ವಿಷಯವೂ ಅನಿಸುವುದಿಲ್ಲ; ಆದರೆ, ಕೆಲವರ ಮನೆಯಲ್ಲಿ ಒಡವೆಗಳು ಹೆಣ್ಣುಮಕ್ಕಳ ಸೌಭಾಗ್ಯ, ಅದನ್ನು ಮಾರುವುದು ಅಂದರೆ ಅರಗಿಸಿಕೊಳ್ಳಲಾಗದ ಆಘಾತ ಎರಗಿದ ಹಾಗೇನೇ. ಕೆಲವರ ಮನೆಯಲ್ಲಿ ಎಲ್ಲವೂ ಕರಾರುವಾಕ್ಕಾಗಿ ಗಡಿಯಾರದ ಅಣತಿಗೆ ತಕ್ಕಂತೆ ನಡೆಯವುದು ಅಭ್ಯಾಸ; ಮತ್ತೂ ಕೆಲವರ ಮನೆಗಳಲ್ಲಿ ‘ಗಡಿಯಾರಾನಾ? ಹಾಗಂದ್ರೇನು?’ ಅನ್ನೋರೆ ಎಲ್ಲಾ! ಗಡಿಯಾರದ ಗೆಳತಿಯಂತೆ ಸಮಯ ಪರಿಪಾಲನೆ ಮಾಡುವ ಹೆಣ್ಣುಮಗಳು, ಸಮಯದ ಪರಿವೆಯೇ ಇಲ್ಲದಂತೆ ಬದುಕುವ ಜನರ ಮನೆಗೆ ಸೇರಿದರೆ, ಆಕೆಗೆ ಎಲ್ಲವೂ ಅಯೋಮಯ ಅನಿಸದೇ ಇರದು! ಇವೆಲ್ಲಾ ಸಣಪುಟ್ಟ ವ್ಯತ್ಯಾಸಗಳೇ ಇರಬಹುದು. ಆದರೆ ಸಣ್ಣ ಸಣ್ಣ ನೀತಿ ನಿಯಮಗಳ ಒಟ್ಟಂದವೇ ಸಂವಿಧಾನವಲ್ಲವೇ? ಹಾಗೇ, ಇವೆಲ್ಲಾ ಸಣ್ಣಪುಟ್ಟ ವ್ಯತ್ಯಾಸಗಳೊಂದಿಗಿನ ದಿನನಿತ್ಯದ ಜಂಜಾಟವೇ ಬದುಕು ತಾನೇ?

ಒಂದೇ ಮನೆಯ ಹಲವು ಹೆಣ್ಣುಮಕ್ಕಳು ಬೇರೇ ಬೇರೇ ಮನೆಗಳ ಸೊಸೆಯಂದಿರಾಗಿ ಹೋದಾಗ, ಒಂದು ಸಂವಿಧಾನದ ಮನೆಯಿಂದ ಹಲವು ವಿಭಿನ್ನ ಸಂವಿಧಾನಗಳ ಮನೆಯೊಳಗಿನ ಪಯಣ ಹಲವು ಮುಜುಗರಗಳ, ಗಲಿಬಿಲಿಗಳ, ಪಿರಿಪಿರಿಗಳ, ಹಾಸ್ಯಸನ್ನಿವೇಶಗಳ ಅನುಭವದ ಬುತ್ತಿ; ಇದನ್ನು ಉಂಡು ಸಾವರಿಸಿಕೊಂಡು ಹಬ್ಬದಲ್ಲೋ ಮದುವೆಯಲ್ಲೋ ಮತ್ತೆ ಒಟ್ಟಾಗಿ ಸೇರಿದಾಗ, ಈ ಸಂವಿಧಾನಗಳ ಚರ್ಚೆಯೇ ಮಾತಿಗೆ ಮೂಲವಸ್ತು! ಅದು ಅಕ್ಕ ತಂಗಿಯರ ನಡುವೆ ಮಾತ್ರವಲ್ಲ, ಅಮ್ಮ ಮಗಳ ಮಾತುಕತೆಯೂ ಇದರ ಸುತ್ತಲೇ ಗಿರಕಿ ಹೊಡೆಯುತ್ತದೆ. ಅವರಿಗೆ ಅವರದ್ದು ಸರಿ, ಮತ್ತೆ, ಇವರಿಗೆ ಇವರದ್ದು! ಆದರೆ, ಈ ಅಲಿಖಿತ ಸಂವಿಧಾನವು ಯಾವುದೇ ತಪ್ಪು–ಸರಿಗಳ ತಕ್ಕಡಿಗೆ ನಿಲುಕುವಷ್ಟು ಸರಳವಲ್ಲವಲ್ಲ? ಎಲ್ಲವೂ ಅವರವರ ಭಾವಕ್ಕೆ ದಕ್ಕಿದ ಹಾಗೆ.

ಹಲವು ಸದಸ್ಯರ ಪೀಠವು ಒಂದು ಸಂವಿಧಾನ ರಚಿಸುವಂತೆ, ಮನೆಮಂದಿಯೆಲ್ಲರ ಆದ್ಯತೆಗಳನ್ನೂ ಗೌರವಿಸಿ ಎಲ್ಲರೂ ಸೇರಿ ಮನೆಯ ನೀತಿನಿಯಮಗಳನ್ನು ರೂಪಿಸಿಕೊಂಡರೆ ಎಲ್ಲರೂ ನೆಮ್ಮದಿಯಾಗಿದ್ದು; ಒಟ್ಟಾರೆ ಕುಟುಂಬದ ಸೌಖ್ಯವನ್ನೂ ಕಾಪಾಡಿಕೊಳ್ಳಬಹುದು. ದೇಶದ ಸಂವಿಧಾನಕ್ಕೇ ತಿದ್ದುಪಡಿ ಮಾಡಲು ಸಾಧ್ಯವಿರುವಾಗ ಮನೆಯಲ್ಲೂ ಆ ನಿಯಮ ಸಡಿಲಿಕೆ, ತಿದ್ದುಪಡಿಗೆ ಅವಕಾಶವಿರಬೇಕಾದ್ದು ನ್ಯಾಯ ತಾನೇ? ಹಾಗಾಗಿ, ಮನೆಗೆ ಸೊಸೆ ಅಥವಾ ಯಾವುದೇ ಹೊಸ ಸದಸ್ಯರ ಆಗಮನದೊಂದಿಗೆ, ಹೊಸ ರೀತಿನೀತಿಗಳ ಸೇರ್ಪಡೆಗೆ ಕೂಡ ಅವಕಾಶ ಕಲ್ಪಿಸಿದರೆ, ಅನಗತ್ಯ ಕಿರಿಕಿರಿ ತಪ್ಪಿಸಬಹುದು. ಗಂಡ ಹೆಂಡತಿ ಇಬ್ಬರೂ ಮದುವೆಗೆ ಮುನ್ನ ತಮ್ಮ ತಮ್ಮ ಮನೆಯ ಸಂವಿಧಾನದಲ್ಲಿದ್ದ ಉತ್ತಮ ಅಂಶಗಳನ್ನು ಮಾತ್ರ ಸೇರಿಸಿ, ಮದುವೆಯ ನಂತರದ ಹೊಸ ಬದುಕಿಗೆ ತಮ್ಮದೇ ಹೊಸದೊಂದು ಸಂವಿಧಾನವನ್ನು ರಚಿಸಿಕೊಂಡರೆ, ‘ನಾನೇ ಸರಿ ನಾನೇ ಸರಿ’ ಎಂಬ ಅನಾವಶ್ಯಕ ಗುದ್ದಾಟದ ಬದಲು, ನಮಗಿದು ಸರಿ ಎಂಬ ಅರಿವಿನೊಳಗೆ ಬದುಕಿನ ಚಿತ್ರಕ್ಕೆ ಬಣ್ಣ ಹಚ್ಚಬಹುದು. ನಮ್ಮ ಮನೆಯ ಸಂವಿಧಾನವು ನಮ್ಮ ಆಶಯ ಹಾಗೂ ಅವಶ್ಯಕತೆಗೆ ತಕ್ಕಂತೆ ರೂಪುಗೊಂಡಿರುವ ಕಾರಣ ನಮಗೆ ನಾವೇ ಸರಿ, ನಮ್ಮ ಸಂವಿಧಾನವೂ ನಮಗೆ ಸರಿ; ಹಾಗೆಂದು ಮತ್ತೊಂದು ಮನೆಯ ಸದಸ್ಯರನ್ನು ನಮ್ಮ ಸಂವಿಧಾನದ ದೃಷ್ಟಿಯಲ್ಲಿ ನೋಡಿ ಟೀಕಿಸುವ ಮುನ್ನ, ನಾಲಿಗೆಗೆ, ಮನಸ್ಸಿಗೆ ಲಗಾಮು ಹಾಕುವುದು ಒಳಿತು; ಏಕೆಂದರೆ ಪ್ರತಿ ಮನೆಯ ಸಂವಿಧಾನವೂ ಬೇರೆ, ಅಲ್ಲವೇ? ಬೆಳಗು ಹರಿವಾಗ ಅರಳುವ ದಾಸವಾಳಕ್ಕೂ, ಸಂಜೆ ಅರಳುವ ನಿತ್ಯಮಲ್ಲಿಗೆಗೂ, ರಾತ್ರಿ ಅರಳಿ ಬೆಳಗು ಹರಿವ ಮೊದಲೇ ಭೂತಾಯಿಯ ಸಿಂಗರಿಸೋ ಪಾರಿಜಾತಕ್ಕೂ ನಿಸರ್ಗದ ನಿಯಮಗಳು ಬೇರೆ ಬೇರೆಯೇ; ಹಾಗೇ, ಪ್ರಾಣಿಗಳಲ್ಲೇ ಹೆಚ್ಚು ತಾರ್ಕಿಕ ಸಾಮರ್ಥ್ಯ ಇರುವ ಬುದ್ಧಿವಂತ ಪ್ರಾಣಿಯಾದ ಮನುಷ್ಯನ ನಿಯಮಗಳೂ, ಒಬ್ಬರಿಂದೊಬ್ಬರಿಗೆ ಭಿನ್ನ; ಇದನ್ನು ಅರ್ಥ ಮಾಡಿಕೊಂಡು ಪರಸ್ಪರ ಗೌರವದಿಂದ ಬದುಕಿದರೆ, ಜೀವನದ ಸಂತೋಷಗಳಿಗೆ, ಅಚ್ಚರಿಗಳಿಗೆ ನಮ್ಮನ್ನು ನಾವು ತೆರೆದುಕೊಳ್ಳಬಹುದು; ಇಲ್ಲವಾದರೆ, ಬದುಕಿನ ರಂಗೆಲ್ಲಾ ಜಗಳದ ಜಾಲರಿಯಲ್ಲಿ ಸೋರಿಹೋಗುವುದನ್ನು ಗಮನಿಸುವುದಕ್ಕೂ ವ್ಯವಧಾನವಿಲ್ಲದೇ ಆದೀತು!

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !