ರೈತರಿಗೆ ಬ್ಯಾಂಕ್‌ ನೋಟಿಸ್‌: ಆಕ್ರೋಶ

ಬುಧವಾರ, ಜೂನ್ 26, 2019
28 °C
ಚಾಮರಾಜನಗರ: ವಿಜಯಾ ಬ್ಯಾಂಕ್‌ನಲ್ಲಿ ಬೆಳೆ ಸಾಲ ಮಾಡಿದ್ದ ರೈತರು; ಕೋರ್ಟ್‌ಗೆ ಹಾಜರಾಗಲು ಸೂಚನೆ

ರೈತರಿಗೆ ಬ್ಯಾಂಕ್‌ ನೋಟಿಸ್‌: ಆಕ್ರೋಶ

Published:
Updated:
Prajavani

ಚಾಮರಾಜನಗರ: ತಾಲ್ಲೂಕಿನ ವೆಂಕಟಯ್ಯನ ಛತ್ರದಲ್ಲಿರುವ ವಿಜಯಾ ಬ್ಯಾಂಕ್‌ (ಈಗ ಬ್ಯಾಂಕ್‌ ಆಫ್‌ ಬರೋಡಾ) ಶಾಖೆಯಲ್ಲಿ ಕೃಷಿ ಉದ್ದೇಶಕ್ಕಾಗಿ ಸಾಲ ಪಡೆದ ಹಲವು ರೈತರಿಗೆ ಕೋರ್ಟ್‌ ನೋಟಿಸ್‌ ಬಂದಿದ್ದು, ಬ್ಯಾಂಕ್‌ ಹಾಗೂ ಸರ್ಕಾರದ ವಿರುದ್ಧ ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ. 

ಆದರೆ, ಈ ಪ್ರಕರಣ ಸಾಲ ಮನ್ನಾ ವ್ಯಾಪ್ತಿಗೆ ಬರುತ್ತಿಲ್ಲ ಎಂದು ಬ್ಯಾಂಕ್‌ ಅಧಿಕಾರಿಗಳು ಹೇಳುತ್ತಿದ್ದಾರೆ.

ವೆಂಕಟಯ್ಯನ ಛತ್ರ ಹೊಸೂರಿನ ನಿವಾಸಿಗಳಾದ  ಚಿನ್ನಮ್ಮ, ಮಹಾದೇವಸ್ವಾಮಿ, ನಾಗೇಂದ್ರಸ್ವಾಮಿ, ಶೋಭಾ ಹಾಗೂ ಇನ್ನಿಬ್ಬರಿಗೆ 20 ದಿನಗಳ ಹಿಂದೆ ನೋಟಿಸ್‌ ಬಂದಿದ್ದು, ಜೂನ್‌ 4ರಂದು ವಿಚಾರಣೆಗೆ ಹಾಜರಾಗುವಂತೆ ತಿಳಿಸಲಾಗಿದೆ.

ವೀರಣ್ಣ ಎಂಬುವವರು 2011–12ನೇ ಸಾಲಿನಲ್ಲಿ ₹ 1.5 ಲಕ್ಷ ಕೃಷಿ ಸಾಲ ಪಡೆದಿದ್ದರು. ಅವರ ನಿಧನಾನಂತರ, ಪತ್ನಿ ಚಿನ್ನಮ್ಮ ಹಾಗೂ ಮಕ್ಕಳು ಆ ಸಾಲಕ್ಕೆ ಬಾಧ್ಯಸ್ಥರಾಗಿದ್ದಾರೆ. ಈಗ ನೋಟಿಸ್‌ನಲ್ಲಿ ಅವರನ್ನು ಸುಸ್ತಿದಾರರು ಎಂದು ಹೆಸರಿಸಲಾಗಿದ್ದು, 2019 ಮಾರ್ಚ್‌ 19ರವರೆಗೆ ಬಡ್ಡಿ ಸಮೇತ ₹ 3.57 ಲಕ್ಷ ಬಾಕಿ ಪಾವತಿ ಇದೆ ಎಂದು ತಿಳಿಸಲಾಗಿದೆ. 

‘ನಮ್ಮೂರು ಮಾತ್ರವಲ್ಲದೇ ಬಸವಾಪುರದಲ್ಲಿನ ಕೆಲವರು ಸೇರಿದಂತೆ 20ಕ್ಕೂ ಹೆಚ್ಚು ರೈತರಿಗೆ ನೋಟಿಸ್ ಬಂದಿದೆ’ ಎಂದು ಚಿನ್ನಮ್ಮ ಅವರ ಸಂಬಂಧಿ ಅಶೋಕ್‌ ‘ಪ್ರಜಾವಾಣಿ’ಗೆ ತಿಳಿಸಿದರು.

‘ಸರ್ಕಾರದಿಂದ ಅಧಿಕೃತ ಋಣಪತ್ರ ಇನ್ನೂ ಬಂದಿಲ್ಲ. ಆದರೆ, ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರು ಸಾಲ ಮನ್ನಾಗೆ ಸಂಬಂಧಿಸಿದಂತೆ ವೈಯಕ್ತಿಕವಾಗಿ ಬರೆದಿರುವ ಪತ್ರ ಬಂದಿದೆ. ಸರ್ಕಾರ ಆದೇಶ ಹೊರಡಿಸಿದ್ದರೂ, ನೋಟಿಸ್‌ ಕಳಿಸಿರುವುದು ಎಷ್ಟು ಸರಿ? ಬ್ಯಾಂಕ್‌ ಸಿಬ್ಬಂದಿಯನ್ನು ಕೇಳಿದರೆ ಸರ್ಕಾರದಿಂದ ಇನ್ನೂ ಆದೇಶ ಬಂದಿಲ್ಲ, ಮುಖ್ಯಮಂತ್ರಿ ಅವರನ್ನು ನೋಡಿ ಸಾಲ ಕೊಟ್ಟಿಲ್ಲ; ನಿಮ್ಮನ್ನು ಹಾಗೂ ಜಮೀನನ್ನು ನೋಡಿ ಸಾಲಕೊಟ್ಟಿದ್ದೇವೆ ಎಂದು ಹೇಳುತ್ತಿದ್ದಾರೆ’ ಎಂದು ಅಲವತ್ತುಕೊಂಡರು.

ಪರಿಹಾರ ವಜಾ: ‘ತೆಂಗಿನ ಮರಗಳಿಗೆ ಆದ ಹಾನಿ, ಬೆಳೆ ವಿಮೆ ಸೇರಿದಂತೆ ಸರ್ಕಾರವು ರೈತರ ಖಾತೆಗೆ ನೇರವಾಗಿ ವರ್ಗಾಯಿಸುವ ಪರಿಹಾರ ಮೊತ್ತವನ್ನೂ ಬ್ಯಾಂಕ್‌ನವರು ಕೊಡದೆ, ಸಾಲಕ್ಕೆ ವಜಾ ಮಾಡಿಕೊಳ್ಳುತ್ತಿದ್ದಾರೆ’ ಎಂದು ಅವರು ದೂರಿದರು.

‌ಈ ಸಂಬಂಧ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ಲೀಡ್‌ ಬ್ಯಾಂಕ್‌ ಮ್ಯಾನೇಜರ್ ಸುನಂದಾ, ‘ಈ ಬಗ್ಗೆ ಬ್ಯಾಂಕ್‌ ಮ್ಯಾನೇಜರ್‌ ಬಳಿ ವಿಚಾರಿಸಿದ್ದೇನೆ. ಸಾಲ ವಸೂಲಾತಿಗೆ ಸಂಬಂಧಿಸಿದಂತೆ ಈ ಹಿಂದೆಯೇ ನ್ಯಾಯಾಲಯದಲ್ಲಿ ಪ್ರಕರಣ ದಾಖ‌ಲಾಗಿತ್ತು. ನ್ಯಾಯಾಲಯವೇ ನೋಟಿಸ್‌ ಹೊರಡಿಸಿದೆ. ಹೊಸದಾಗಿ ಯಾವುದೇ ನೋಟಿಸ್‌ ಹೊರಡಿಸಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ’ ಎಂದು ಹೇಳಿದರು. 

‘ಸಾಲ ಮನ್ನಾ ವ್ಯಾಪ್ತಿಗೆ ಬರುವುದಿಲ್ಲ’

‘ಪ್ರಜಾವಾಣಿ’ ಜೊತೆ ಮಾತನಾಡಿದ ಬ್ಯಾಂಕ್‌ ಮ್ಯಾನೇಜರ್‌ ವೆಂಕಟೇಶ್ವರ ರಾವ್‌, ‘ಈ ಪ್ರಕರಣ ಸಾಲಮನ್ನಾ ವ್ಯಾಪ್ತಿಗೆ ಬರುವುದಿಲ್ಲ. 2014–15ರಿಂದ ಕೋರ್ಟ್‌ನಲ್ಲಿ ಪ್ರಕರಣ ನಡೆಯುತ್ತಿದೆ. ಈ ಹಿಂದೆ ಅವರು ವಿಚಾರಣೆಗೆ ಹಾಜರಾಗಿರಲಿಲ್ಲ. ಈಗ ನ್ಯಾಯಾಲಯ ನೋಟಿಸ್‌ ನೀಡಿದೆ. ನಾನು ಇತ್ತೀಚೆಗೆ ಇಲ್ಲಿಗೆ ಬಂದಿದ್ದೇನೆ. ನಾನು ಬಂದ ನಂತರ ಯಾರಿಗೂ ನೋಟಿಸ್‌ ಕೊಟ್ಟಿಲ್ಲ’ ಎಂದು ಹೇಳಿದರು. 

 

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !