ಬುಧವಾರ, ಏಪ್ರಿಲ್ 14, 2021
23 °C

ಪಾರ್ಕಿಂಗ್‌ ತಾಣವಾಗುತ್ತಿದೆ ಕಬ್ಬನ್‌ ಉದ್ಯಾನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರಿನ ಪ್ರಮುಖ ಹೆಗ್ಗುರುತಾಗಿರುವ ಕಬ್ಬನ್‌ ಪಾರ್ಕ್‌ ವಾಹನಗಳ ಪಾರ್ಕಿಂಗ್‌ ತಾಣವಾಗಿ ಬದಲಾಗುತ್ತಿದೆ. ಉದ್ಯಾನದಲ್ಲಿರುವ ರಸ್ತೆಗಳಲ್ಲಿ ಎರಡೂ ಬದಿಗಳನ್ನೂ ಒಂದಿಂಚೂ ಜಾಗವಿಲ್ಲದಂತೆ ವಾಹನಗಳು ಅಕ್ರಮಿಸಿಕೊಂಡಿವೆ. 

ಬರೀ ಉದ್ಯಾನಕ್ಕೆ ಬರುವವರಷ್ಟೇ ಅಲ್ಲ, ವಿಧಾನಸೌಧ, ಹೈಕೋರ್ಟ್, ವಿಶ್ವೇಶ್ವರಯ್ಯ ಗೋಪುರ, ಎಂ.ಎಸ್‌. ಬಿಲ್ಡಿಂಗ್‌, ಮಹಾತ್ಮ ಗಾಂಧಿ ರಸ್ತೆ, ನಗರ ಕೇಂದ್ರ ಗ್ರಂಥಾಲಯಕ್ಕೆ ಹೋಗುವವರೆಲ್ಲ ಇಲ್ಲಿಯೇ ವಾಹನ ನಿಲ್ಲಿಸಿ ಹೋಗುವುದರಿಂದ ಇಡೀ ಕಬ್ಬನ್‌ ಪಾರ್ಕ್‌ ವಾಹನಗಳಿಂದ ತುಂಬಿ ತುಳುಕುತ್ತಿದೆ. ಹಲವರಿಗೆ ಕಬ್ಬನ್‌ ಪಾರ್ಕ್‌ ವಾಹನ ನಿಲ್ಲಿಸುವ ಪಾರ್ಕಿಂಗ್‌ ಲಾಟ್‌ ಆಗಿದೆ. 

ಬಾಲಭವನ ಸುತ್ತಲಿನ ಜಾಗ, ವೆಂಕಟಪ್ಪ ಆರ್ಟ್‌ ಗ್ಯಾಲರಿ ಹಿಂದೆ, ಸೆಂಟ್ರಲ್‌ ಲೈಬ್ರರಿ ಸಮೀಪದಲ್ಲಿ ವಾಹನಗಳ ಪಾರ್ಕಿಂಗ್‌ಗೆ ಸ್ಥಳ ಕಲ್ಪಿಸಲಾಗಿದೆ. ಈ ಸ್ಥಳಗಳನ್ನು ಹೊರತುಪಡಿಸಿ ಉದ್ಯಾನದಲ್ಲಿ ಎಲ್ಲಂದರಲ್ಲಿ ಎಗ್ಗಿಲ್ಲದೆ ಅಕ್ರಮವಾಗಿ ವಾಹನಗಳನ್ನು ನಿಲ್ಲಿಸುತ್ತಿರುವುದು ಸಮಸ್ಯೆಗೆ ಕಾರಣವಾಗಿದೆ. ಪಾರ್ಕಿಂಗ್‌ ಹೆಸರಲ್ಲಿ ಕೆಲವರು ಜನರಿಂದ ಹಣ ಸುಲಿಯುತ್ತಿದ್ದಾರೆ.  

 ಪ್ರತಿದಿನ ಲಕ್ಷಾಂತರ ವಾಹನಗಳು ಉದ್ಯಾನದಲ್ಲಿರುವ ಸಂಪರ್ಕ ರಸ್ತೆಗಳ ಮೂಲಕ ಓಡಾಡುತ್ತವೆ. ಇದರಿಂದಾಗಿ ವಿಪರೀತ ವಾಯುಮಾಲಿನ್ಯ, ಶಬ್ದಮಾಲಿನ್ಯ ಉಂಟಾಗುತ್ತಿದೆ. ಕಬ್ಬನ್‌ ಪಾರ್ಕ್‌ನಲ್ಲಿರುವ ಸಾವಿರಾರು ಪಕ್ಷಿ–ಗಿಡ ಮರಗಳ ಮೇಲೆ ನಕಾರಾತ್ಮಕ ಪರಿಣಾಮವಾಗುತ್ತಿದೆ. ಕಬ್ಬನ್‌ ಉದ್ಯಾನಕ್ಕೆ ವಾಯುವಿಹಾರಕ್ಕೆಂದು ಬರುವವರು ವಾಹನಗಳ ಓಡಾಟ, ಅವುಗಳು ಉಗುಳುವ ಹೊಗೆ, ಶಬ್ದದಿಂದ  ತೊಂದರೆ ಅನುಭವಿಸುತ್ತಿದ್ದಾರೆ. ಪ್ರಮುಖ ಸ್ಥಳಗಳನ್ನು ವಾಹನಗಳು ಆಕ್ರಮಿಸಿಕೊಂಡಿರುವ ಕಾರಣ ಜನರಿಗೆ ಉದ್ಯಾನದಲ್ಲಿ ನಿರಾಳವಾಗಿ ಓಡಾಡಲು ಸಾಧ್ಯವಾಗುತ್ತಿಲ್ಲ.  

ಹಲವಾರು ಆಡಳಿತ ಕಚೇರಿ ಮತ್ತು ವಾಣಿಜ್ಯ ಪ್ರದೇಶಗಳಿಗೆ ಕೂಗಳತೆ ದೂರದಲ್ಲಿರುವ ಕಬ್ಬನ್‌ ಉದ್ಯಾನದಲ್ಲಿ ವಾಹನಗಳ ಓಡಾಟ ಮತ್ತು ಪಾರ್ಕಿಂಗ್‌ ನಿಷೇಧಿಸಿದರೆ ವಿಧಾನಸೌಧ ಮತ್ತು ಹೈಕೋರ್ಟ್ ಸುತ್ತಮುತ್ತ ಸಂಚಾರ ದಟ್ಟನೆ ಹೆಚ್ಚುತ್ತದೆ. ಇದರ ನೇರ ಪರಿಣಾಮ ಸುತ್ತಮುತ್ತಲಿನ ಇತರ ರಸ್ತೆಗಳ ಮೇಲಾಗುತ್ತದೆ ಎನ್ನುವುದು ಸಂಚಾರ ಪೊಲೀಸರ ಆತಂಕ. 

ಉದ್ಯಾನದಲ್ಲಿ ವಾಹನ ಸಂಚಾರ ನಿರ್ಬಂಧಿಸಲು ಚಿಂತನೆ

ಕಬ್ಬನ್‌ ಪಾರ್ಕ್‌ನಲ್ಲಿ ವಾಹನ ಓಡಾಟ ಮತ್ತು ಪಾರ್ಕಿಂಗ್‌ ಸಂಪೂರ್ಣವಾಗಿ ನಿಷೇಧಿಸುವ ಮಾತು ಬಹಳ ದಿನಗಳಿಂದ ಕೇಳಿ ಬರುತ್ತಿದೆ. ಆದರೆ, ಕಾರ್ಯಗತವಾಗುತ್ತಿಲ್ಲ. ಪರಿಸರ ಪ್ರೇಮಿಗಳು ಪದೇ ಪದೇ ಈ ಬಗ್ಗೆ ಸರ್ಕಾರದ ಮೇಲೆ ಒತ್ತಡ ಹೇರುತ್ತಿದ್ದಾರೆ. ಉದ್ಯಾನದ ಉಸ್ತುವಾರಿ ಹೊತ್ತಿರುವ ತೋಟಗಾರಿಕೆ ಇಲಾಖೆ ಕೂಡ ಈ ಬಗ್ಗೆ ಸರ್ಕಾರ ಮತ್ತು ಸಂಚಾರ ವಿಭಾಗದ ಆಯುಕ್ತರಿಗೆ ಹಲವಾರು ಬಾರಿ ಮನವಿ ಸಲ್ಲಿಸಿದೆ. ಇದರಿಂದ ಯಾವುದೇ ಪ್ರಯೋಜನವಾಗಿಲ್ಲ. 

ಉದ್ಯಾನದಲ್ಲಿ ಸಂಪೂರ್ಣವಾಗಿ ವಾಹನ ಸಂಚಾರ ನಿಷೇಧಿಸುವ ಕುರಿತು ಸರ್ಕಾರದ ಮುಖ್ಯ ಕಾರ್ಯದರ್ಶಿಯ ಅಧ್ಯಕ್ಷತೆಯಲ್ಲಿ ಈಚೆಗೆ ಸಭೆ ನಡೆಸಲಾಗಿದೆ ಎಂದು ಮೂಲಗಳು ತಿಳಿಸಿವೆ. ಆದರೆ, ವಾಹನ ಓಡಾಟ ಮತ್ತು ಪಾರ್ಕಿಂಗ್‌ ಸಂಪೂರ್ಣ ನಿಷೇಧಿಸುವ ಬಗ್ಗೆ ಸಂಚಾರ ಪೊಲೀಸ್‌ ಇಲಾಖೆಯಿಂದ ಸಹಮತ ವ್ಯಕ್ತವಾಗಿಲ್ಲ ಎಂದು ತಿಳಿದು ಬಂದಿದೆ. ರಾಷ್ಟ್ರೀಯ ಮತ್ತು ಸ್ಥಳೀಯ ರಜಾ ದಿನಗಳಂದಾದರೂ ವಾಹನ ಸಂಚಾರ ನಿಷೇಧಿಸುವಂತೆ ತೋಟಗಾರಿಕಾ ಇಲಾಖೆ ಅಧಿಕಾರಿಗಳುಬೇಡಿಕೆ ಮುಂದಿಟ್ಟಿದ್ದಾರೆ. 

ಐದು ವರ್ಷದ ಹಿಂದೆಯೇ ಉದ್ಯಾನದಲ್ಲಿ ಪ್ರತಿ ಭಾನುವಾರ ಮತ್ತು ಎರಡನೇ ಶನಿವಾರದಂದು ವಾಹನ ಸಂಚಾರ ನಿರ್ಬಂಧಿಸಲಾಗಿದೆ. ಸಂಪೂರ್ಣವಾಗಿ ನಿಷೇಧಿಸುವಂತೆ ಸರ್ಕಾರವನ್ನು ಒತ್ತಾಯಿಸುತ್ತಿದ್ದೇವೆ. ನಗರ ಪೊಲೀಸ್‌ ಆಯುಕ್ತರು ಮತ್ತು ಸಂಚಾರ ಪೊಲೀಸ್‌ ಆಯುಕ್ತರಿಗೂ ಮನವಿ ಸಲ್ಲಿಸಲಾಗಿದೆ ಎಂದು ತೋಟಗಾರಿಕೆ ಇಲಾಖೆ ಸಹಾಯಕ ನಿರ್ದೇಶಕ ಮಹಾಂತೇಶ ಮುರಗೋಡ ತಿಳಿಸಿದರು.

ಉದ್ಯಾನದ ಪರಿಸರ ಮತ್ತು ಗಿಡ, ಮರಗಳಿಗೆ ಧಕ್ಕೆಯಾಗುತ್ತದೆ ಎಂದು ಫೋಟೊ ಶೂಟ್‌, ಸಿನಿಮಾ ಶೂಟಿಂಗ್‌ ನಿರ್ಬಂಧಿಸುವಂತೆ ಸರ್ಕಾರಕ್ಕೆ ಮನವಿ ಸಲ್ಲಿಸಲಾಗಿದೆ. ಇನ್ನೂ ಸರ್ಕಾರದಿಂದ ಅಧಿಕೃತ ಆದೇಶ ಹೊರಬಿದ್ದಿಲ್ಲ ಎಂದರು.

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು