ಮ್ಯಾನ್ಮಾರ್‌ನಲ್ಲಿ ಒಂದು ದಿನ

7

ಮ್ಯಾನ್ಮಾರ್‌ನಲ್ಲಿ ಒಂದು ದಿನ

Published:
Updated:
Deccan Herald

ಮಣಿಪುರದ ರಾಜಧಾನಿ ಇಂಫಾಲದಿಂದ ಮೂರು ಗಂಟೆ ಪ್ರಯಾಣಿಸಿದರೆ ಭಾರತದ ಈಶಾನ್ಯದ ತುತ್ತ ತುದಿಯಲ್ಲಿರುವ ನಗರ ಮೋರ್ಹೆ ತಲುಪುತ್ತೇವೆ. ಇಲ್ಲಿಂದ ಇಂಡೋ-ಮ್ಯಾನ್ಮಾರ್ ಫ್ರೆಂಡ್‍ಶಿಪ್ ಬ್ರಿಡ್ಜ್ ಮೂಲಕ ಮ್ಯಾನ್ಮಾರ್ ತಲುಪಬಹುದು. ಅಂದ ಹಾಗೆ ಈ ಸ್ವಾಗತ ಭಾರತೀಯರಿಗೆ ಮಾತ್ರ. ಉಳಿದವರಿಗೆ ವೀಸಾ ಕಡ್ಡಾಯ.

ಈ ಸೇತುವೆ ಭಾರತದಿಂದ ಮ್ಯಾನ್ಮಾರ್‌ಗೆ ಸಾಗಲು ಇರುವ ಹೆಬ್ಬಾಗಿಲು. ಇಲ್ಲಿ ನಮ್ಮ ಗುರುತಿನ ಚೀಟಿ, ಆಧಾರ್ ಕಾರ್ಡ್ ತೋರಿಸಿ, ಅನುಮತಿ ಪತ್ರ ಪಡೆದು ಸೇತುವೆ ದಾಟಿದರೆ ಮ್ಯಾನ್ಮಾರ್‌ನ ತಮು ನಗರದಲ್ಲಿರುತ್ತೇವೆ. ಸೇತುವೆ ದಾಟಲು ವಾಹನಗಳೇ ಬೇಕೆಂದಿಲ್ಲ. ನಡೆದುಕೊಂಡು ಸೇತುವೆ ದಾಟಬಹುದು. ಈ ನಗರದಲ್ಲಿ ಬೆಳಗಿನಿಂದ ಸಂಜೆಯವರೆಗೆ ಇಷ್ಟಬಂದಂತೆ ಸಂಚರಿಸಬಹುದು. ಸುತ್ತಾಟಕ್ಕೆ ಒಂದು ದಿನ ಮಾತ್ರ ಅವಕಾಶ. ಆದರೆ, ತಮು ನಗರ, ಮ್ಯಾನ್ಮಾರ್‌ನ ಎಲ್ಲ ಗುಣಲಕ್ಷಣಗಳ ಪ್ರಾತಿನಿಧಿಕ ಸ್ವರೂಪ ಮಾತ್ರ ಎನ್ನಲಾಗುತ್ತದೆ.

ನಾವು ಇಂಡೊ-ಮ್ಯಾನ್ಮಾರ್ ಸ್ನೇಹ ಸೇತುವೆ ದಾಟುತ್ತಿದ್ದಂತೆ ತಮು ನಗರದ ನಾಂಫಲಾಂಗ್ ಮಾರ್ಕೆಟ್ ತಲುಪಿದೆವು. ಅಲ್ಲಿನ ಅಂಗಡಿಗಳು ಗ್ರಾಹಕರಿಂದ ಕಿಕ್ಕಿರಿದಿದ್ದವು. ಇವನ್ನೆಲ್ಲ ನೋಡುತ್ತಾ ತುಸು ಮುಂದೆ ಹೋಗಿ ರಿಕ್ಷಾ ಹಿಡಿದು, ಹದಿನೈದು ನಿಮಿಷಗಳಲ್ಲಿ ಇಲ್ಲಿನ ಪ್ರಸಿದ್ಧ ಪುಂಗಿ ಚೌ ಮೊನಾಸ್ಟರಿ ತಲುಪಿದೆವು. ಇದು ಎತ್ತರದ ಬೆಟ್ಟದ ಮೇಲಿದೆ. ಇಲ್ಲಿ ತಲೆ ಎತ್ತಿ ನೋಡಬೇಕಾದ, ಬುದ್ಧನ ವಿವಿಧ ಸ್ವರೂಪದ ಪ್ರತಿಮೆಗಳಿವೆ.

ಕಮಲದ ಹೂವು, ಸುರುಳಿ ಸುತ್ತಿರುವ ಹಾವಿನ ನಡುವೆ ಇರುವ ಬುದ್ಧ ಹಾಗೂ ನಿಂತಿರುವ ಬುದ್ಧನ ವಿಗ್ರಹಗಳಿವೆ. ಮಿರಮಿರನೆ ಮಿಂಚುವ ಚಿನ್ನದ ಬಣ್ಣದ ಪಗೋಡಾಗಳ ಶಿಖರಗಳು, ಹೊಳೆವ ಬಿಳುಪಿನ ಪಗೋಡಾಗಳು, ವಿಶಾಲವಾದ ಬೌದ್ಧ ವಿಹಾರಗಳ ಜತೆಗೆ ಪ್ರಶಾಂತ ವಾತಾವರಣ ಮನಸ್ಸಿಗೆ ಮುದ ನೀಡಿತು. ಇಲ್ಲಿರುವ ಒಂದು ಸ್ತೂಪವನ್ನು ಹತ್ತಿ ನೋಡಿದಾಗ ಇಡೀ ತಮು ನಗರದ ವಿಹಂಗಮ ನೋಟ ಕಂಡಿತು. ಜತೆಗೆ ಭಾರತ-ಮ್ಯಾನ್ಮಾರಿನ ಗಡಿಯೂ ಕಂಡಿತು.

ಮುಂದೆ ನಮ್ಮ ಭೇಟಿ ವೈಕ್ಯಾಂವ್ ಎಂಬ ಕೊಳಕ್ಕೆ. ರಿಕ್ಷಾ ಚಾಲಕನೇ ಈ ಕೊಳದ ಬಳಿಗೆ ಕರೆದೊಯ್ದ. ಸೇತುವೆ, ಬಣ್ಣಬಣ್ಣದ ಕಮಾನುಗಳು, ಮಂಟಪಗಳು ಇರುವ ಆಕರ್ಷಕವಾದ ಕೊಳವಿದು. ಈ ಕೊಳಕ್ಕೂ ಮಣಿಪುರದ ಮೊಯಿರಾಂಗ್ ರಾಜಕುಮಾರಿ ತೋಯ್ಬಿಗೂ ಸಂಬಂಧ ಕಲ್ಪಿಸುವ ಒಂದು ದಂತಕಥೆಯಿದೆ. ಆಕೆ ಸಾಮಾನ್ಯನೊಬ್ಬನನ್ನು ಪ್ರೀತಿಸಿದ್ದಕ್ಕಾಗಿ ಅವಳನ್ನು ಗಡಿಪಾರು ಮಾಡಿ ಇಲ್ಲಿ ತಂದು ಬಿಡಲಾಗಿತ್ತಂತೆ!

ಈ ಕೊಳದಿಂದ ಸ್ವಲ್ಪ ದೂರದಲ್ಲಿ ಇನ್ನೂ ಕೆಲವು ಬೌದ್ಧ ವಿಹಾರಗಳಿವೆ. ಒಂದರಲ್ಲಿ ಜೇಡ್ ಬುದ್ಧನ ವಿಗ್ರಹವು ಕಲಾತ್ಮಕವಾದ ಮಿರುಗುವ ಮಂಟಪದ ನಡುವೆಯಿದೆ. ಈ ಬೌದ್ಧಾಲಯಗಳು ಬೌದ್ಧ ಭಿಕ್ಷುಗಳ ನಿವಾಸಗಳು. ಸಾವಿರಾರು ಭಿಕ್ಷುಗಳು ತಮ್ಮ ಭಿಕ್ಷು ಜೀವನವನ್ನು ಇಲ್ಲಿ ಪ್ರಾರಂಭಿಸುತ್ತಾರೆ. ಬೌದ್ಧ ಧರ್ಮದ ಬೋಧನೆಗಳು, ತತ್ವಗಳನ್ನು ಹಿರಿಯ ಭಿಕ್ಷುಗಳು ಇವರಿಗೆ ಧಾರೆಯೆರೆಯುತ್ತಾರೆ. ಕೈಯಲ್ಲಿ ಭಿಕ್ಷಾ ಪಾತ್ರೆ ಹಿಡಿದ ಹಿರಿಯ, ಎಳೆಯ ಭಿಕ್ಷುಗಳು ನಮಗೆ ಸುತ್ತಾಟದಲ್ಲಿ ಕಂಡುಬಂದರು.

ಮುಂದೆ ನಾವು ಗಲ್ಲಿಗಲ್ಲಿಗಳಂತಿದ್ದ ದೇಶದ ಅತಿ ದೊಡ್ಡ ಬರ್ಮಾ ಬಜಾರ್ ಪ್ರವೇಶಿಸಿದೆವು. ಇಲ್ಲಿ ‘ಏನುಂಟು ಏನಿಲ್ಲ’ ಎಂಬಂತೆ ತರಹೇವಾರಿ ವಿಭಾಗಗಳಲ್ಲಿ, ಅಷ್ಟೇ ತರಹೇವಾರಿ ವಸ್ತುಗಳಿದ್ದವು. ಅಲ್ಲಿನ ಕರೆನ್ಸಿ ‘ಕ್ಯಾಟ್’. ಆದರೆ, ನಮ್ಮ ರೂಪಾಯಿ ಸ್ವೀಕರಿಸುತ್ತಾರೆ. ನೇಪಾಳಿ, ಪಂಜಾಬಿ ವ್ಯಾಪಾರಿಗಳಲ್ಲದೆ ಬರ್ಮೀಯರೂ ವ್ಯಾಪಾರಕ್ಕೆ ಅಗತ್ಯವಾದ ಹಿಂದಿ ಭಾಷೆ ಮಾತಾಡುತ್ತಾರೆ.

ಬೆಳಗಿನಿಂದ ಸಂಜೆಯವರೆಗೆ ಒಂದು ದಿನ ಮಾತ್ರ ಮ್ಯಾನ್ಯಾರ್ ನಗರವೊಂದರಲ್ಲಿ ಸುತ್ತಾಡಿದರೂ, ಬರ್ಮೀಯರ ವಿಶಿಷ್ಟ ಜೀವನ ಶೈಲಿ, ಭವ್ಯ ವಿಹಾರಗಳು, ಪಗೋಡಗಳು, ಇಲ್ಲಿನ ಮಾರುಕಟ್ಟೆಗಳು ನಮ್ಮ ಪ್ರವಾಸದ ನೆನಪಲ್ಲಿ ಅಚ್ಚಳಿಯದೇ ಉಳಿದಿವೆ. ಮುಂದೊಮ್ಮೆ ಇಡೀ ಮ್ಯಾನ್ಮಾರ್ ಸುತ್ತಾಡಬೇಕೆಂದೂ ಎನ್ನಿಸಿದೆ.

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !