ಬುಧವಾರ, ಜೂನ್ 23, 2021
22 °C
ನೀವೂ ಸಿದ್ಧಪಡಿಸಿ ಇಟ್ಟುಕೊಳ್ಳಿ

ಇಂಥದ್ದೊಂದು ‘ಆಪತ್ತಿನ ಚೀಲ’ ನಿಮ್ಮ ಮನೆಯಲ್ಲಿಯೂ ಇರಲಿ

ಗಣಪತಿ ಶರ್ಮ Updated:

ಅಕ್ಷರ ಗಾತ್ರ : | |

Deccan Herald

ಭೀಕರ ಮಳೆ ಹಾಗೂ ಪ್ರವಾಹದಿಂದ ಕೇರಳದ ಬಹುತೇಕ ಜನ ತತ್ತರಿಸಿದ್ದಾರೆ. ಭೂಕುಸಿತ, ನೆರೆಯಿಂದ ಕಂಗೆಟ್ಟ ಕೊಡಗು ಜಿಲ್ಲೆ ಚೇತರಿಸಿಕೊಳ್ಳಲು ವರ್ಷಗಳೇ ಬೇಕಾಬಹುದು ಎಂದು ಅಂದಾಜಿಸಲಾಗಿದೆ. ಕುಸಿದ ಗುಡ್ಡಗಳ ಮತ್ತು ಕಟ್ಟಡಗಳ ಅವಶೇಷಗಳ ಅಡಿಯಲ್ಲಿ ಸಿಕ್ಕಿಹಾಕಿಕೊಂಡವರ ರಕ್ಷಣಾ ಕಾರ್ಯ ನಡೆಯುತ್ತಿದೆ. ಸಂತ್ರಸ್ತರು ಅಲ್ಲಿ ಸಿಲುಕಿ ದಿನಗಳೇ ಕಳೆದು ಹೋಗಿವೆ. ರಕ್ಷಣಾ ಕಾರ್ಯಾಚರಣೆ ತಂಡದ ಸದಸ್ಯರು ವಿಪತ್ತು ಸಂಭವಿಸಿದ ಸ್ಥಳಕ್ಕೆ ತಲುಪುವವರೆಗೂ ಬದುಕುಳಿಯಲು ಆಹಾರ, ಬಟ್ಟೆ, ಕುಡಿಯುವ ನೀರು ಮತ್ತಿತರ ವಸ್ತುಗಳಿಗೆ ಸಂತ್ರಸ್ತರು ಏನು ಮಾಡಬೇಕು? ಸದ್ಯದ ಪರಿಸ್ಥಿತಿಯಲ್ಲಿ ಏನೂ ಮಾಡಲಾಗದು ಎಂಬುದು ವಾಸ್ತವ.

ಆದರೆ, ಇನ್ನು ಮುಂದೆಯಾದರೂ ಮನೆಯಲ್ಲಿ ಅಥವಾ ಕಚೇರಿಯಲ್ಲಿ ‘ಆಪತ್ತಿನ ಚೀಲ’ (ಡಿಸಾಸ್ಟರ್ ಸಪ್ಲೈ ಕಿಟ್)’ ಇಟ್ಟುಕೊಳ್ಳುವ ಮೂಲಕ ತುರ್ತು ಸಂದರ್ಭಗಳಲ್ಲಿ ಜೀವ ರಕ್ಷಿಸಿಕೊಳ್ಳುವ ಪ್ರಯತ್ನ ಮಾಡಬಹುದು.

ಅಮೆರಿಕ ಸೇರಿದಂತೆ ಹಲವು ಪಾಶ್ಚಾತ್ಯ ರಾಷ್ಟ್ರಗಳಲ್ಲೀಗ ಡಿಸಾಸ್ಟರ್ ಸಪ್ಲೈ ಕಿಟ್ ಇಟ್ಟುಕೊಳ್ಳುವುದು ಸಾಮಾನ್ಯ ಎನಿಸಿದೆ. ತುರ್ತು ಸಂದರ್ಭಗಳಲ್ಲಿ ಜೀವ ಉಳಿಸಿಕೊಳ್ಳುವ ಸಲುವಾಗಿ ಅವರು ಈ ಕ್ರಮಕ್ಕೆ ಮುಂದಾಗಿದ್ದಾರೆ. ಪ್ರಾಕೃತಿಕ ವಿಕೋಪಕ್ಕೆ, ದುರಂತಗಳಿಗೆ ನಾವೂ ಹೊರತಲ್ಲವಲ್ಲ? ಹೀಗಾಗಿ ನಾವೂ ಇಂತಹ ಕಿಟ್‌ ಅನ್ನು ಸಿದ್ಧಪಡಿಸಿ ಇಟ್ಟುಕೊಳ್ಳುವುದು ಭವಿಷ್ಯದ ದೃಷ್ಟಿಯಿಂದ ಉತ್ತಮ.

ಏನಿದು ಡಿಸಾಸ್ಟರ್ ಸಪ್ಲೈ ಕಿಟ್?

ಇದು ಪ್ರಾಕೃತಿಕ ವಿಕೋಪಗಳಂತಹ ತುರ್ತು ಸಂದರ್ಭಗಳಲ್ಲಿ ಬಳಸಬಹುದಾದ ಜೀವನಾವಶ್ಯಕ ವಸ್ತುಗಳನ್ನೊಳಗೊಂಡ ಕಿಟ್. ಕುಡಿಯುವ ನೀರಿನ ಬಾಟಲ್, ಸಿದ್ಧ ಆಹಾರ, ಬಟ್ಟೆ, ಟಾರ್ಚ್‌, ತುರ್ತು ಚಿಕಿತ್ಸೆಗೆ ಬಳಸುವ ಔಷಧ ಅಥವಾ ಪ್ರಥಮ ಚಿಕಿತ್ಸೆ ಪೆಟ್ಟಿಗೆ ಮತ್ತಿತರ ವಸ್ತುಗಳನ್ನು ಒಳಗೊಂಡಿರುತ್ತದೆ. ಕನಿಷ್ಠ 3 ದಿನಗಳ ಬಳಕೆಗೆ ಅಗತ್ಯವಿದ್ದಷ್ಟು ವಸ್ತುಗಳನ್ನು ಕಿಟ್ ಒಳಗೊಂಡಿರುತ್ತದೆ.

ಇವುಗಳು ಅವಶ್ಯವಾಗಿ ಇರಲಿ

* ಒಬ್ಬ ವ್ಯಕ್ತಿಗೆ ದಿನವೊಂದಕ್ಕೆ ಕನಿಷ್ಠ 3 ಲೀಟರ್‌ನಂತೆ ಮೂರು ದಿನಗಳಿಗೆ ಬೇಕಾಗುವಷ್ಟು ನೀರು.
* ಮೂರು ದಿನಗಳಿಗೆ ಬೇಕಾಗುವಷ್ಟು ಸಿದ್ಧ ಆಹಾರ
* ಟಾರ್ಚ್‌ ಲೈಟ್‌ ಮತ್ತು ಅದಕ್ಕೆ ಬೇಕಾಗುವ ಹೆಚ್ಚುವರಿ ಬ್ಯಾಟರಿ
* ಪ್ರಥಮ ಚಿಕಿತ್ಸೆ ಪೆಟ್ಟಿಗೆ
* ಸಹಾಯಕ್ಕಾಗಿ ದೂರ ಕೇಳಿಸುವಂತೆ ಮೊರೆಯಿಡಲು ಉಪಯೋಗಿಸಬಹುದಾದ ಉಪಕರಣ
* ಮೈ ಒರೆಸಲು ಬಳಸುವ ಬಟ್ಟೆಗಳು
* ಕರವಸ್ತ್ರಗಳು, ಸ್ವಚ್ಛತೆ ಕಾಪಾಡಲು ಅಗತ್ಯವಿರುವ ವಸ್ತುಗಳು
* ದೂಳಿನಿಂದ ರಕ್ಷಣೆ ಪಡೆಯಲು ಬಳಸುವ ಮಾಸ್ಕ್
* ಮೊಬೈಲ್‌ ಫೋನ್‌, ಬ್ಯಾಟರಿ ಬ್ಯಾಕ್‌ಅಪ್ ಅಥವಾ ಪವರ್‌ಬ್ಯಾಂಕ್
* ಆಹಾರ ಪೊಟ್ಟಣಗಳನ್ನು ತೆರೆಯಲು ಬಳಸುವ ಕತ್ತರಿ, ಚೂರಿ ಇತ್ಯಾದಿ

ಹೆಚ್ಚುವರಿಯಾಗಿ ಇವುಗಳೂ ಇರಲಿ

* ಆಂಟಸಿಡ್ಸ್ ಅಥವಾ ಲ್ಯಾಕ್ಸೇಟಿವ್ಸ್, ನೋವು ನಿವಾರಕ ಗುಳಿಗೆ ಹಾಗೂ ಇತರ ಅಗತ್ಯ ಔಷಧಗಳು
* ವಿಮೆ, ಶಾಲಾ–ಕಾಲೇಜು ಅಂಕಪಟ್ಟಿ, ಬ್ಯಾಂಕ್‌ ಖಾತೆಯ ಪಾಸ್‌ಬುಕ್‌ ಇನ್ನಿತರ ಅಗತ್ಯದಾಖಲೆಗಳನ್ನು ವಾಟರ್‌ಪ್ರೂಫ್‌ ಆಗಿ ಇಟ್ಟುಕೊಳ್ಳಿ ಅಥವಾ ಡಿಜಿಟಲ್ ರೂಪದಲ್ಲಿ ಸಂಗ್ರಹಿಸಿಟ್ಟುಕೊಳ್ಳಿ
* ಕುಟುಂಬದ ಪ್ರತಿಯೊಬ್ಬರಿಗೂ ಅನ್ವಯವಾಗುವಂತೆ ಸ್ಲೀಪಿಂಗ್ ಬ್ಯಾಗ್ ಅಥವಾ ಬೆಚ್ಚಗಿನ ಹೊದಿಕೆ ಇಟ್ಟುಕೊಳ್ಳಿ
* ಬೆಂಕಿ ಆರಿಸುವ ಸಾಧನ
* ವಾಟರ್‌ಪ್ರೂಫ್‌ ಹೊದಿಕೆಯಲ್ಲಿ ಅಥವಾ ಪ್ಲಾಸ್ಟಿಕ್‌ ಕವರ್‌ನಲ್ಲಿ ಮುಚ್ಚಿದ ಬೆಂಕಿ ಪೊಟ್ಟಣ
* ಪೇಪರ್ ಕಪ್‌ಗಳು, ಪ್ಲೇಟ್‌ಗಳು, ಟಿಶ್ಯೂ ಪೇಪರ್‌ ಇತ್ಯಾದಿ
* ಮಕ್ಕಳಿಗಾಗಿ ಪೇಪರ್, ಪೆನ್ಸಿಲ್ ಇತ್ಯಾದಿ ವಸ್ತುಗಳಿರಲಿ

ಕಿಟ್‌ ಅನ್ನು ಹೀಗೆ ನಿರ್ವಹಿಸಿ:

ಒಮ್ಮೆ ಕಿಟ್‌ ಸಿದ್ಧಪಡಿಸಿದ ಬಳಿಕ ಯಾವ ಕ್ಷಣದಲ್ಲೂ ಅದು ಕೈಗೆ ಸಿಗುವಂತೆ ಇಟ್ಟಿರಬೇಕು. ಹಾಗೆಯೇ ಅದು ಸುಸ್ಥಿತಿಯಲ್ಲಿರುವಂತೆ ನೋಡಿಕೊಳ್ಳುವುದೂ ಅಗತ್ಯ.
* ಪ್ಯಾಕ್ ಮಾಡಿದ ಆಹಾರ ವಸ್ತುಗಳನ್ನು ತಣ್ಣಗಿನ ಮತ್ತು ಒಣಗಿದ ಜಾಗದಲ್ಲೇ ಇಡಿ
* ಆಹಾರವಸ್ತುಗಳನ್ನು ಗಟ್ಟಿಯಾಗಿ ಮೆಟಲ್ ಪೆಟ್ಟಿಗೆಗಳಲ್ಲಿ ಅಥವಾ ಪ್ಲಾಸ್ಟಿಕ್ ಪೊಟ್ಟಣಗಳಲ್ಲಿ ಕಟ್ಟಿಡಿ.
* ಆಯಾ ಕಾಲಕ್ಕೆ ಅನುಗುಣವಾಗಿ ನಿಮ್ಮ ಅಗತ್ಯ, ಆದ್ಯತೆಗಳನ್ನು ಗಮನದಲ್ಲಿಟ್ಟುಕೊಂಡು ಕಿಟ್‌ ಅನ್ನು ಪರಿಷ್ಕರಿಸುತ್ತಾ ಇರಿ
* ಅವಧಿ ಮೀರಿದ ಆಹಾರ ಮತ್ತು ಇತರ ವಸ್ತುಗಳನ್ನು ಬದಲಾಯಿಸುತ್ತಾ ಇರುವುದು ಅತ್ಯಗತ್ಯ

ಕಿಟ್‌ ಇಡಬೇಕಾದ ಜಾಗಗಳು

ಯಾವ ಜಾಗದಲ್ಲಿರುವಾಗ ನಮಗೆ ಪ್ರಕೃತಿ ವಿಕೋಪದಂತಹ ತುರ್ತು ಸಂದರ್ಭ ಎದುರಾಗುತ್ತದೆ ಎಂಬುದನ್ನು ಊಹಿಸುವುದು ಅಸಾಧ್ಯ. ಹೀಗಾಗಿ ಮನೆ, ಕಚೇರಿ (ಅಥವಾ ಕೆಲಸ ಮಾಡುವ ಜಾಗ) ಮತ್ತು ನಮ್ಮ ಖಾಸಗಿ ವಾಹನದಲ್ಲಿ ಡಿಸಾಸ್ಟರ್ ಸಪ್ಲೈ ಕಿಟ್ ಇಟ್ಟುಕೊಳ್ಳುವುದು ಉತ್ತಮ
ಮನೆ: ನಿರ್ದಿಷ್ಟ ಸ್ಥಳವೊಂದರಲ್ಲಿ ಕಿಟ್ ಇಟ್ಟಿರಿ. ಯಾವುದೇ ಕ್ಷಣ ಮನೆ ಬಿಡಬೇಕಾಗಿ ಬಂದರೂ ಸುಲಭವಾಗಿ ಕಿಟ್ ಕೈಗೆ ಸಿಗುವಂತಹ ಜಾಗ ಅದಾಗಿರಲಿ. ಅಲ್ಲಿ ಇಟ್ಟಿರುವ ಬಗ್ಗೆ ಕುಟುಂಬದ ಎಲ್ಲ ಸದಸ್ಯರಿಗೂ ಮಾಹಿತಿ ಇರಲಿ.
ಕಚೇರಿ: ಕಚೇರಿ ಅಥವಾ ಕೆಲಸ ಮಾಡುವ ಸ್ಥಳದಲ್ಲಿಯೂ ಒಂದು ಕಿಟ್ ಇಟ್ಟಿರಿ. ಯಾವುದೇ ಕ್ಷಣದಲ್ಲೂ ಅದು ನಿಮ್ಮ ಕೈಗೆ ಸಿಗುವಂತಿರಲಿ.
ವಾಹನ: ಒಂದು ವೇಳೆ, ಪ್ರಯಾಣದ ವೇಳೆ ನಾವು ಸಮಸ್ಯೆಗೆ ಸಿಕ್ಕಿಹಾಕಿಕೊಂಡಲ್ಲಿ ಬಳಸಲು ಸಿದ್ಧವಿರುವಂತೆ ವಾಹನದಲ್ಲಿಯೂ ಒಂದು ಕಿಟ್ ಸಿದ್ಧವಾಗಿರಲಿ.

ಸಾಕು ಪ್ರಾಣಿಗಳಿಗೂ ಬೇಕೇ ಕಿಟ್?

ಅಮೆರಿಕದಂತಹ ದೇಶಗಳಲ್ಲಿ ಸಾಕು ಪ್ರಾಣಿಗಳಿಗೂ ಡಿಸಾಸ್ಟರ್ ಸಪ್ಲೈ ಕಿಟ್ ಸಿದ್ಧಪಡಿಸಿರುತ್ತಾರೆ. ಮುದ್ದಿನ ಸಾಕು ಪ್ರಾಣಿಗಳಿದ್ದಲ್ಲಿ ಅವುಗಳಿಗೂ ಒಂದು ಕಿಟ್‌ ಸಿದ್ಧ ಮಾಡಿಟ್ಟುಕೊಳ್ಳುವುದು ಉತ್ತಮ. ಸಾಕು ಪ್ರಾಣಿಗಳಿಗೆ ಚಿಕಿತ್ಸೆ ಕೊಡಿಸಿದ ವೈದ್ಯಕೀಯ ದಾಖಲೆಗಳು, ಅವುಗಳಿಗೆ ಅಗತ್ಯವಿರುವ ಔಷಧಗಳು, ಪ್ರಥಮ ಚಿಕಿತ್ಸೆ ಸಾಧನಗಳು ಅವಶ್ಯವಾಗಿ ಕಿಟ್‌ನಲ್ಲಿರಲಿ.

ಉಳಿದಂತೆ 3–7 ದಿನಗಳಿಗಾಗುವಷ್ಟು ಸಿದ್ಧ ಆಹಾರ (ಪ್ರತಿ ಎರಡು ತಿಂಗಳಿಗೊಮ್ಮೆ ಬದಲಾಯಿಸುತ್ತಿರಿ), ನೀರು ಇರಲಿ. ಸಾಕು ಪ್ರಾಣಿಗಳನ್ನು ಶುಚಿಯಾಗಿ ಇಟ್ಟುಕೊಳ್ಳಲು ಬೇಕಾದ ಸೋಪ್, ಬಟ್ಟೆ, ಟಿಶ್ಯೂ ಇತ್ಯಾದಿಗಳೂ ಇರಬೇಕು. ಜತೆಗೆ, ಅವುಗಳನ್ನು ಸಾಗಿಸಲು ಬೇಕಾದ ಚೀಲಗಳನ್ನೂ ಕಿಟ್‌ನಲ್ಲಿಡಬೇಕು.

(ವಿವಿಧ ಮೂಲಗಳಿಂದ)

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.