ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ತೆಕ್ಕಲಕೋಟೆ: ಇಕ್ಕಟ್ಟಾದ ಸ್ಥಳದಲ್ಲಿ ಅಂಚೆಕಚೇರಿ: ಪರದಾಟ

ದೊರೆಯದ ‘ನಿವೇಶನ‘: ಬಾಡಿಗೆ ಕಟ್ಟಡದಲ್ಲಿ ಕಚೇರಿ ಕಾರ್ಯನಿರ್ವಹಣೆ
ಚಾಂದ್ ಬಾಷ
Published 7 ಫೆಬ್ರುವರಿ 2024, 4:48 IST
Last Updated 7 ಫೆಬ್ರುವರಿ 2024, 4:48 IST
ಅಕ್ಷರ ಗಾತ್ರ

ತೆಕ್ಕಲಕೋಟೆ: ವಿಳಾಸ ಹುಡುಕಿ ಮನೆ ಮನೆಗೂ ಪತ್ರ ತಲುಪಿಸುವುದು ಅಂಚೆ ಇಲಾಖೆ ಸಿಬ್ಬಂದಿ ಕೆಲಸ. ಆದರೆ ಇಲ್ಲಿ ಅಂಚೆ ಇಲಾಖೆಗೆ ಹಲವು ವರ್ಷಗಳಿಂದ ತನ್ನ ವಿಳಾಸ ಸಿಗುತ್ತಿಲ್ಲ...!

ಪಟ್ಟಣದ ರಾಷ್ಟ್ರೀಯ ಹೆದ್ದಾರಿಯಲ್ಲಿ 100x108 ಅಳತೆ ಖಾಲಿ ನಿವೇಶನವನ್ನು 1972ರಲ್ಲಿಯೇ ಅಂಚೆ ಕಚೇರಿಯ ಹೆಸರಿನಲ್ಲಿ ಖರೀದಿಸಲಾಗಿತ್ತು. ಆದರೆ 2004ರಲ್ಲಿ ಜಿಲ್ಲಾಧಿಕಾರಿ ಆದೇಶದಂತೆ ಆ ನಿವೇಶನವನ್ನು ಪೊಲೀಸ್ ಠಾಣೆ ಮತ್ತು ವೃತ್ತ ನಿರೀಕ್ಷಕರ ಕಚೇರಿಯ ಹೆಸರಿಗೆ ವರ್ಗಾಯಿಸಲಾಯಿತು. ಇದರ ಬದಲಾಗಿ ಸ.ನಂ. 488ರ 115 ಸೆಂಟ್ಸ್ ಸರ್ಕಾರಿ ಜಾಗದಲ್ಲಿ 0.25 ಸೆಂಟ್ಸ್ ಜಾಗವನ್ನು ಅಂಚೆ ಕಚೇರಿ ಕಟ್ಟಡಕ್ಕಾಗಿ ಎಂದು ಕಾಲಂ 9ರಲ್ಲಿ ಸೇರ್ಪಡಿಸಲು ಆದೇಶಿಸಲಾಯಿತು.

ಆದರೆ ಆ ನಿವೇಶನವು ಖಾಸಗಿಯವರ ಪಾಲಾಗಿದ್ದು, ದನಕರುಗಳ ಕೊಟ್ಟಿಗೆಯಾಗಿ ಬಣವಿ ಹಾಕಲಾಗಿದೆ. ಈಗ ಅಂಚೆ ಕಚೇರಿಗೆ ತನ್ನದೇ ನಿವೇಶನ ದೊರೆಯದೆ ಅಲೆಮಾರಿಯಾಗಿದೆ. ಅಲ್ಲಿಂದೀಚೆಗೆ ಸ್ಥಳೀಯ ಆಡಳಿತ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮತ್ತು ಜಿಲ್ಲಾಧಿಕಾರಿಗೆ 13 ಬಾರಿ ಪತ್ರ ಬರೆದರೂ ಉಪಯೋಗವಾಗಿಲ್ಲ.

ಹೀಗೆ ಅಂಚೆ ಕಚೇರಿಯ ನಿವೇಶನದ ಸಮಸ್ಯೆ ಒಂದೆಡೆಯಾದರೆ, ಮತ್ತೊಂದೆಡೆ ಅಂಚೆ ಕಚೇರಿಯು ಸದ್ಯ ಒಂದನೆ ಮಹಡಿಯ ಬಾಡಿಗೆ ಕಟ್ಟಡದಲ್ಲಿ ನಡೆಯುತ್ತಿದ್ದು, ನಿತ್ಯ ವೃದ್ದಾಪ್ಯ ವೇತನಕ್ಕಾಗಿ ಅಲೆಯುವ ಹಿರಿಯ ನಾಗರಿಕರಿಗೆ ಮೇಲಿನ ಮಹಡಿಗೆ ತಲುಪುವುದು ಕಷ್ಟಕರವಾಗಿದೆ.

ಅಂಚೆ ಕಚೇರಿಯು ಇಂದು ಬ್ಯಾಂಕ್ ಆಗಿಯೂ ಕಾರ್ಯ ನಿರ್ವಹಿಸುತ್ತಿದ್ದು ಇದರಿಂದ ಪಡಿತರ ಹೆಚ್ಚುವರಿ ಅಕ್ಕಿ ಹಣ, ಉದ್ಯೋಗ ಖಾತ್ರಿ, ಪ್ರಧಾನ ಮಂತ್ರಿ ಕೃಷಿ ಸಮ್ಮಾನ್ ಯೋಜನೆ, ಗೃಹಲಕ್ಷ್ಮಿ, ವೃದ್ದಾಪ್ಯ ವೇತನ, ವಿಧವಾ ವೇತನ, ಮನಸ್ವಿನಿ ಸೇರಿದಂತೆ ವಿವಿಧ ಯೋಜನೆಗಳ ಫಲಾನುಭವಿಗಳು ಹಣ ಜಮಾವಣೆ ಇಲ್ಲವೆ  ಪಡೆಯಲು ಬರುವುದು ಸಾಮಾನ್ಯ. ಆದರೆ ಇಕ್ಕಟ್ಟಿನ ಹಾಗೂ ಚಿಕ್ಕದಾದ ಸ್ಥಳದಿಂದಾಗಿ ಸಾರ್ವಜನಿಕರು ಸಮಸ್ಯೆ ಅನುಭವಿಸುವಂತಾಗಿದೆ.

ಒಂದನೆ ಮಹಡಿಗೆ ತಲುಪಲು ಮೆಟ್ಟಿಲುಗಳು ಇಕ್ಕಟ್ಟಾಗಿದ್ದು ಹತ್ತಿ ಇಳಿಯಲು ಸಾಧ್ಯವಾಗದ ವೃದ್ದರು ಅಂಚೆ ಇಲಾಖೆ ಸಿಬ್ಬಂದಿ ಇಲ್ಲವೆ ಪೋಸ್ಟ್ ಮಾಸ್ಟರ್ ಕೆಳಗಿಳಿದು ಬರುವವರೆಗೆ ದಿನವಿಡೀ ಕಾಯುವ ಪರಿಸ್ಥಿತಿ ಇದೆ.

‘ಖಾಲಿ ನಿವೇಶನದಲ್ಲಿ ಅಂಚೆ ಕಚೇರಿ ಕಟ್ಟಡ ಕಟ್ಟಿಸುವವರೆಗೆ ಈಗಿರುವ ಸ್ಥಳದಿಂದ ಬೇರೆಡೆಗೆ ಸ್ಥಳಾಂತರಿಸಿ ವಯೋವೃದ್ಧರು, ಅಂಗವಿಕಲರು ಹಾಗೂ ಅಶಕ್ತರಿಗೆ ಅನುಕೂಲ ಕಲ್ಪಿಸಬೇಕು’  ಎನ್ನುತ್ತಾರೆ ವಕೀಲ ಉಪ್ಪಾರ ಗೋವಿಂದ.

ಅಂಚೆ ಕಚೇರಿಗೆ ಸ.ನಂ. 488 ರಲ್ಲಿ0 .25 ಸೆಂಟ್ಸ್ ನಿಗದಿಪಡಿಸಲಾಗಿದ್ದು ಸ್ಥಳ ನಕ್ಷೆ ನೀಡಲು ತಹಶೀಲ್ದಾರ್‌ಗೆ ಮನವಿ ಸಲ್ಲಿಸಲಾಗಿದೆ. ಇದರ ನಂತರವೆ ಕಟ್ಟಡ ನಿರ್ಮಾಣ ಕಾಮಗಾರಿ ಅನುಮೋದನೆಗೆ ಮೇಲಧಿಕಾರಿಗಳಿಗೆ ಮನವಿ ಸಲ್ಲಿಸಲಾಗುವುದು
ಎ.ಎಲ್. ಚಿತಕೋಟೆ ಅಂಚೆ ಅಧೀಕ್ಷಕ ಬಳ್ಳಾರಿ ವಿಭಾಗ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT