ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಬಾನಲಿ ಚಿತ್ತಾರ ಮೂಡಿಸಿದ ಗಾಳಿಪಟ

100ಕ್ಕೂ ಅಧಿಕ ಬಾನಾಡಿಗಳ ಹಾರಾಟ: ಮೊಬೈಲ್‌ನಲ್ಲಿ ದೃಶ್ಯ ಸೆರೆಹಿಡಿದು ಸಂಭ್ರಮಿಸಿದ ಜನತೆ
ಶಿವರಾಯ ಪೂಜಾರಿ
Published 28 ಜನವರಿ 2024, 5:33 IST
Last Updated 28 ಜನವರಿ 2024, 5:33 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಪಕ್ಷಿಗಳಿಗಿಂತ ವೇಗವಾಗಿ ಬಾನೆತ್ತರಕ್ಕೆ ಹಾರುತ್ತಿದ್ದ ಗಾಳಿಪಟಗಳು, ಮತ್ತಷ್ಟು ಎತ್ತರಕ್ಕೆ ಹಾರಿಸಲು ನಾ ಮುಂದು, ತಾ ಮುಂದು ಎಂದು ಪೈಪೋಟಿಗಿಳಿದಿದ್ದ ಗಾಳಿಪಟ ಹಾರಿಸುವವರು, ಎತ್ತರಕ್ಕೆ ಹಾರಿದಾಗ ನೆರೆದಿದ್ದ ನೂರಾರು ಜನರಿಂದ ಓಹ್ ಎಂಬ ಉದ್ಘಾರ...

– ಈ ಎಲ್ಲ ದೃಶ್ಯಗಳು ಕಂಡುಬಂದಿದ್ದು ಹುಬ್ಬಳ್ಳಿಯಲ್ಲಿ ನಡೆದ ಅಂತರರಾಷ್ಟ್ರೀಯ ಮಟ್ಟದ ಗಾಳಿಪಟ ಉತ್ಸವದಲ್ಲಿ.

ಬಣ್ಣ ಬಣ್ಣದ, ಆಕರ್ಷಕ ವಿನ್ಯಾಸದ ಗಾಳಿಪಟಗಳು ಬಾನೆತ್ತರದಲ್ಲಿ ಹಾರಾಡುವ ದೃಶ್ಯ ಕಂಡು ನೆರೆದಿದ್ದವರು ಖುಷಿಪಟ್ಟರು. ತಮ್ಮ ಮೊಬೈಲ್‌ ಹಾಗೂ ಕ್ಯಾಮೆರಾಗಳಲ್ಲಿ ಉತ್ಸವದ ಕ್ಷಣಗಳನ್ನು ಸೆರೆಹಿಡಿದು ಸಂಭ್ರಮಿಸಿದರು.

ಗಾಳಿಪಟ ಉತ್ಸವದಲ್ಲಿ ರಾಜ್ಯವಲ್ಲದೆ, ದೇಶ– ವಿದೇಶದ ಒಟ್ಟು 45 ಗಾಳಿಪಟ ಪರಿಣತರು ಭಾಗವಹಿಸಿದ್ದರು. ಇಂಗ್ಲೆಂಡ್‌, ಇಂಡೋನೇಷ್ಯಾ, ಸ್ಲೋವೆನಿಯಾ, ನೆದರ್‌ಲ್ಯಾಂಡ್, ಗ್ರೀಸ್, ಹಾಲೆಂಡ್ ದೇಶದ 9 ಮಂದಿ ಹಾಗೂ ದೇಶದ ನಾಗ್ಪುರ, ಸೂರತ್, ರಾಜಸ್ತಾನ, ಪಂಜಾಬ್, ಓಡಿಸಾದಿಂದ ಪುಣೆ, ವಡೋದರಾದಿಂದ 21 ಹಾಗೂ ರಾಜ್ಯದ ದೊಡ್ಡಬಳ್ಳಾಪುರದಿಂದ 7, ಬೆಂಗಳೂರು–4, ಬೆಳಗಾವಿಯಿಂದ 4 ಮಂದಿ ಪಾಲ್ಗೊಂಡು ನೆಚ್ಚಿನ ಗಾಳಿಪಟಗಳನ್ನು ಹಾರಿಸಿದರು.

ಆಕ್ಟೋಪಸ್, ಲಿಫ್ಟರ್ಸ್, ರಿಂಗ್, ಡೆಲ್ಟಾ, ಟ್ರೇನ್, ಐ ಲವ್ ಇಂಡಿಯಾ, ಬೇಟಿ ಬಚಾವೋ ಬೇಟಿ ಪಡಾವೋ, ಮಾರಿಯೋ, ಟೈಗರ್, ಫಿಶ್, ಗರುಡ, ಸ್ಪೈಡರ್‌ಮ್ಯಾನ್, ಸೈನಿಕ, ಸ್ಟ್ರಾಬೇರಿ, ಕಾಂತಾರ ಸಿನಿಮಾದ ಪಂಜುರ್ಲಿ ಸೇರಿದಂತೆ ವಿವಿಧ ಚಿತ್ರವಿದ್ದ ಗಾಳಿಪಟಗಳು ಆಗಸದಲ್ಲಿ ಹಾರಾಡಿದವು.

ಗಾಳಿಪಟ ಉತ್ಸವದ ಪ್ರಮುಖ ಆಕರ್ಷಣೆಯಾಗಿದ್ದು ಪಂಜಾಬ್‌ನ ವರುಣ್ ಛೆಡ್ಡಾ ಹಾರಿಸಿದ ಜೈಶ್ರೀರಾಮ, ಅಯೋಧ್ಯೆ ರಾಮ ಮಂದಿರ ಹಾಗೂ ರಾಮನ ಚಿತ್ರವಿದ್ದ ಗಾಳಿಪಟಗಳು. 120 ಮೀಟರ್‌ಗೂ ಎತ್ತರಕ್ಕೆ ಗಾಳಿಪಟ ಹಾರಿಸಿ ವರುಣ್ ಗಮನ ಸೆಳೆದರು.

‘ಕಾಂತಾರ ಸಿನಿಮಾದ ಪಂಜುರ್ಲಿ, ಅಂಗಾಂಗ ದಾನದ ಮಹತ್ವ ಸಾರುವ ಗಾಳಿಪಟ ಹಾರಿಸುತ್ತಿದ್ದೇನೆ. ಅಂಗಾಂಗಗಳ ವೈಫಲ್ಯದಿಂದ ಎಷ್ಟೋ ಜನರು ಸಾವನ್ನಪ್ಪುತ್ತಿದ್ದಾರೆ. ಹೃದಯ, ಕಿಡ್ನಿ ಮತ್ತಿತರ ಅಂಗಗಳನ್ನು ದಾನ ಮಾಡುವ ವಿಷಯದ ಮೇಲೆ ಬೆಳಕು ಚೆಲ್ಲುತ್ತಿದ್ದೇನೆ’ ಎಂದರು ಬೆಳಗಾವಿಯ ಕೀರ್ತಿ ಸುರಂಜನ್‌.

ದಕ್ಷಿಣ ಯುರೋಪ್‌ನ ಗ್ರೀಸ್ ದೇಶದ ಕೋಸ್ತಾ ಅವರು ಸ್ನೇಕ್, ಶಾರ್ಕ್, ಆರ್ಟ್, ಸ್ಟಂಟ್ ವಿನ್ಯಾಸದ ಗಾಳಿಪಟಗಳನ್ನು ಹಾರಿಸಿ ಗಮನ ಸೆಳೆದರು.

ಹುಬ್ಬಳ್ಳಿಯ ಕೇಶ್ವಾಪುರದ ಆಕ್ಸ್‌ಫರ್ಡ್ ಕಾಲೇಜು ಬಳಿಯ ಮೈದಾನದಲ್ಲಿ ಆಯೋಜಿಸಿರುವ ಅಂತರರಾಷ್ಟ್ರೀಯ ಗಾಳಿಪಟ ಉತ್ಸವದಲ್ಲಿ ಆಗಸದಲ್ಲಿ ತೇಲಾಡಿದ ಗಾಳಿಪಟಗಳು
ಹುಬ್ಬಳ್ಳಿಯ ಕೇಶ್ವಾಪುರದ ಆಕ್ಸ್‌ಫರ್ಡ್ ಕಾಲೇಜು ಬಳಿಯ ಮೈದಾನದಲ್ಲಿ ಆಯೋಜಿಸಿರುವ ಅಂತರರಾಷ್ಟ್ರೀಯ ಗಾಳಿಪಟ ಉತ್ಸವದಲ್ಲಿ ಆಗಸದಲ್ಲಿ ತೇಲಾಡಿದ ಗಾಳಿಪಟಗಳು
ಬೇಟಿ ಬಚಾವೋ ಬೇಟಿ ಪಡಾವೋ ಯುವಕರು ದೇಶ ರಕ್ಷಣೆಗೆ ಭಾರತೀಯ ಸೇನೆ ಸೇರಿ ಹುಲಿಗಳನ್ನು ರಕ್ಷಿಸಿ ಎಂಬ ಸಂದೇಶ ಸಾರುವ ಗಾಳಿಪಟಗಳನ್ನು ಹಾರಿಸುವ ಮೂಲಕ ಜನರಲ್ಲಿ ಜಾಗೃತಿ ಮೂಡಿಸುವ ಕೆಲಸ ಮಾಡುತ್ತಿದ್ದೇನೆ
ವರುಣ್ ಛಡ್ಡಾ ಪಂಜಾಬ್
ಜೋಕರ್ ಫಿಶ್ ಜೋಕರ್ ಸೇರಿದಂತೆ 20 ಬಗೆಯ ಗಾಳಿಪಟ ಹಾರಿಸಲಾಗುವುದು. ಹುಬ್ಬಳ್ಳಿಯಲ್ಲಿ ನಡೆದ ಗಾಳಿಪಟ ಉತ್ಸವದಲ್ಲಿ ಇದೇ ಮೊದಲ ಬಾರಿಗೆ ಭಾಗವಹಿಸಿದ್ದು ಖುಷಿ ತಂದಿದೆ
ಸಿಸ್ಕಾ ನೆದರ್‌ಲ್ಯಾಂಡ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT