ಶುಕ್ರವಾರ, 24 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಳ್ಳಾರಿ ಲೋಕಸಭಾ ಕ್ಷೇತ್ರ | ಅಭ್ಯರ್ಥಿಗಳ ಭವಿಷ್ಯ ಮತ ಯಂತ್ರಗಳಲ್ಲಿ ಭದ್ರ

ಹರಿಶಂಕರ್‌ ಆರ್‌.
Published 8 ಮೇ 2024, 7:20 IST
Last Updated 8 ಮೇ 2024, 7:20 IST
ಅಕ್ಷರ ಗಾತ್ರ

ಬಳ್ಳಾರಿ: ಬಳ್ಳಾರಿ ಲೋಕಸಭಾ ಕ್ಷೇತ್ರಕ್ಕೆ ಮಂಗಳವಾರ ಮತದಾನ ಪೂರ್ಣಗೊಂಡಿದೆ. ಮತದಾರ ಯಾರಿಗೆ ಮಣೆಹಾಕಿದ್ದಾನೆ ಎಂಬುದನ್ನು ತಿಳಿಯಲು ಫಲಿತಾಂಶಕ್ಕಾಗಿ ಜನರು ಬರೋಬ್ಬರಿ 28 ದಿನಗಳವರೆಗೆ ಕಾಯಲೇಬೇಕಾಗಿದೆ. 

ದೇಶದಲ್ಲಿ ಒಟ್ಟು 7 ಹಂತಗಳಲ್ಲಿ ಚುನಾವಣೆ ನಡೆಯುತ್ತಿದೆ. ಬಳ್ಳಾರಿ ಲೋಕಸಭಾ ಕ್ಷೇತ್ರಕ್ಕೆ ಮೂರನೇ ಹಂತದಲ್ಲಿ ಮತದಾನ ನಡೆದಿದೆ. ಇದರೊಂದಿಗೆ ಬಿರುಸಿನ ರಾಜಕೀಯ ಚಟುವಟಿಕೆಗಳಿಗೂ ತೆರೆ ಬಿದ್ದಿದೆ. ಸೋಲು–ಗೆಲುವಿನ ಲೆಕ್ಕಾಚಾರಗಳು ಶುರುವಾಗಿವೆ. 

ಕ್ಷೇತ್ರದಲ್ಲಿ ಕಾಂಗ್ರೆಸ್‌ನ ಇ.ತುಕಾರಾಂ ಮತ್ತು ಬಿಜೆಪಿಯ ಶ್ರೀರಾಮುಲು ಅವರ ನಡುವೆ ಹಣಾಹಣಿ ಕಂಡುಬಂದಿತ್ತು. ಆದ್ದರಿಂದ, ಇವರಿಬ್ಬರಲ್ಲಿ ಯಾರ ಕೈ ಮೇಲಾಗಿದೆ, ಯಾರಿಗೆ ಹೊಡೆತ ಬಿದ್ದಿದೆ, ಜನರು ಯಾರಿಗೆ ಜೈ ಎಂದಿದ್ದಾರೆ, ಅದಕ್ಕೆ ಕಾರಣವಾಗಿರುವ ಅಂಶಗಳೇನು ಎಂಬಿತ್ಯಾದಿ ವಿಷಯಗಳ ಮೇಲೆ ಚರ್ಚೆಗಳು ಮತ್ತು ವಿಶ್ಲೇಷಣೆಗಳು ಸಾರ್ವಜನಿಕರು ಹಾಗೂ ರಾಜಕೀಯ ಪಕ್ಷದವರ ವಲಯದಲ್ಲಿ ನಡೆಯುತ್ತಿವೆ. ಮತದಾನೋತ್ತರ ವಿಶ್ಲೇಷಣೆಗಳು–ಚರ್ಚೆಗಳು ಕುತೂಹಲ ಕೆರಳಿಸಿವೆ.  

ಪ್ರಮುಖ ರಾಜಕೀಯ ಪಕ್ಷಗಳಾದ ಕಾಂಗ್ರೆಸ್‌ ಹಾಗೂ ಬಿಜೆಪಿ–ಜೆಡಿಎಸ್‌ ಮೈತ್ರಿಕೂಟದವರು, ಆ ಪಕ್ಷಗಳ ಬೆಂಬಲಿಗರು ಮತ್ತು ಕಾರ್ಯಕರ್ತರು ತಮ್ಮದೇ ಆದ ವಿಶ್ಲೇಷಣೆ ಗಳನ್ನು ಮಾಡುತ್ತಾ ಫಲಿತಾಂಶವನ್ನು ನಿರೀಕ್ಷಿಸುತ್ತಿದ್ದಾರೆ. ಬೂತ್‌ ಮಟ್ಟದಲ್ಲಿ ಅಂಕಿ ಅಂಶಗಳನ್ನು ತರಿಸಿ ಲೆಕ್ಕಾಚಾರಗಳನ್ನು ಶುರುವಿಟ್ಟುಕೊಂಡಿ ದ್ದಾರೆ. ಸಾರ್ವಜನಿಕ ಸ್ಥಳಗಳಲ್ಲಿ ನಡೆಯು ತ್ತಿರುವ ಚರ್ಚೆಗಳಲ್ಲಿ ‘ಚುನಾವಣೆಯ ಸೋಲು–ಗೆಲುವಿನ ಲೆಕ್ಕಾಚಾರ’ದ್ದೇ ಪ್ರಮುಖ ಪಾತ್ರ ವಹಿಸಿದೆ.

ಬಳ್ಳಾರಿಯಲ್ಲಿ ಕಾಂಗ್ರೆಸ್‌ ಪರವಾಗಿ ಖುದ್ದು ರಾಹುಲ್‌ ಗಾಂಧಿ ಅವರೇ ಪ್ರಚಾರ ಸಮಾವೇಶದಲ್ಲಿ ಭಾಗಿಯಾಗಿದ್ದರು. ಬಿಜೆಪಿ ಪರವಾಗಿ ಪ್ರಧಾನಿ ನರೇಂದ್ರ ಮೋದಿ ಅವರೇ ಬಂದು ಪ್ರಚಾರ ಮಾಡಿದ್ದರು. ಇನ್ನುಳಿ ದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್‌ ಅವರು ತಮ್ಮ ಅಭ್ಯರ್ಥಿ ತುಕಾರಾಂ ಅವರ ಪರವಾಗಿ ಮತ ಕೇಳಿದ್ದರು. ಮಾಜಿ ಸಿಎಂಗಳಾದ ಬಿ.ಎಸ್‌ ಯಡಿಯೂರಪ್ಪ, ಎಚ್‌.ಡಿ.ಕುಮಾರಸ್ವಾಮಿ ಅವರೂ ಬಿಜೆಪಿ ಪ್ರಚಾರ ಸಭೆಗಳಲ್ಲಿ ಭಾಗವಹಿಸಿ ಹೋಗಿದ್ದಾರೆ.

ಸದ್ಯ ಅಭ್ಯರ್ಥಿಗಳ ಭವಿಷ್ಯ ವಿದ್ಯುನ್ಮಾನ ಮತಯಂತ್ರಗಳಲ್ಲಿ ಭದ್ರವಾ ಗಿದೆ. ಚುನಾವಣೆಯ ಸೋಲು, ಗೆಲುವಿನ ಲೆಕ್ಕಾಚಾರಗಳಿಗೆ ಜೂನ್‌ 4ರ ವರೆಗೆ ಕಾಯಲೇ ಬೇಕಾಗಿದೆ. 

ಮತಗಟ್ಟೆಯಲ್ಲಿ ಮಹಿಳೆಯರ ದಂಡು! ಬಿಜೆಪಿಗೆ ದುಗುಡ: ಬಳ್ಳಾರಿಯ ಬಹುತೇಕ ಮತಗಟ್ಟೆಗಳಲ್ಲಿ ಮಹಿಳಾ ಮತದಾರರು ಭಾರಿ ಸಂಖ್ಯೆಯಲ್ಲಿ ಬಂದು ಮತದಾನ ಮಾಡಿದ್ದಾರೆ. ಇದು ಯಾರಿಗೆ ವರವಾಗಲಿದೆ, ಯಾರಿಗೆ ಸಂಕಷ್ಟ ಸೃಷ್ಟಿಸಲಿದೆ ಎಂಬುದರ ಲೆಕ್ಕಾಚಾರ ಆರಂಭವಾಗಿದೆ. ಸಿದ್ದರಾಮಯ್ಯ ಅವರ ಸರ್ಕಾರದ ಗ್ಯಾರೆಂಟಿ ಯೋಜನೆಗಳಿಂದ ಮಹಿಳೆಯರು ಸಂತುಷ್ಟರಾಗಿದ್ದಾರೆ. ಹೀಗಾಗಿ ಮಹಿಳೆಯರ ಮತಗಳು ದೊಡ್ಡ ಪ್ರಮಾಣದಲ್ಲಿ ಕಾಂಗ್ರೆಸ್‌ಗೆ ವರ್ಗಾವಣೆ ಗೊಂಡಿವೆ ಎಂದು ಹಲವರು ವಿಶ್ಲೇಷಿಸಿ ದ್ದಾರೆ. ಇದು ಬಿಜೆಪಿಗೆ ದುಗುಡವುಂಟು ಮಾಡಿದೆ. ಇನ್ನೊಂದೆಡೆ ಕಾಂಗ್ರೆಸ್‌ ನಾಯಕರ ಮೊಗದಲ್ಲಿ ಸಂತಸ ಮೂಡಿಸಿದೆ.

ಮತದಾನ ಪ್ರಮಾಣ ಹೆಚ್ಚು! ಕಾಂಗ್ರೆಸ್‌ಗೆ ಭಯ...?

ಮತದಾನ ಪ್ರಮಾಣ ಹೆಚ್ಚಾದರೆ ಅದು ಬಿಜೆಪಿಗೆ ‘ಪ್ಲಸ್‌’ ಎಂದು ಯಾವಾಗಲೂ ವಿಶ್ಲೇಷಿಸಲಾಗುತ್ತದೆ. ಈ ಬಾರಿ ಕ್ಷೇತ್ರದಲ್ಲಿ ಕಳೆದ ಬಾರಿಗಿಂತಲೂ ಹೆಚ್ಚು ಕಡಿಮೆ ಶೇ 4ರಷ್ಟು ಮತದಾನ ಹೆಚ್ಚಳವಾಗಿದೆ. ಯುವ ಮತದಾರರು, ಮೊದಲ ಮತದಾರರು, ಮೇಲ್ವರ್ಗದವರು ಹೆಚ್ಚಿನ ಸಂಖ್ಯೆಯಲ್ಲಿ ಈ ಬಾರಿ ಮತದಾನ ಮಾಡಿದ್ದಾರೆ ಎಂದು ಬಿಜೆಪಿ ನಾಯಕರು ವಿಶ್ಲೇಷಣೆ ಮಾಡುತ್ತಿದ್ದು, ಗೆಲುವಿನ ವಿಶ್ವಾಸದಲ್ಲಿದ್ದಾರೆ.   

ಆದರೆ, ಕಾಂಗ್ರೆಸ್‌ ನಾಯಕರು ಹೇಳುವುದೇ ಬೇರೆ. ಗ್ಯಾರೆಂಟಿ ಯೋಜನೆಗಳನ್ನು ಪಡೆದಿರುವ ಮಹಿಳೆಯರು ಕಾಂಗ್ರೆಸ್‌ಗೆ ಋಣ ಸಂದಾಯ ಮಾಡಲು ಮತಗಟ್ಟೆಗೆ ಹೆಚ್ಚಿನ ಸಂಖ್ಯೆಯಲ್ಲಿ ಬಂದಿದ್ದಾರೆ ಎಂದು ಹೇಳುತ್ತಿದ್ದಾರೆ. ಇದುಕಾಂಗ್ರೆಸ್‌ಗೆ ವರವಾಗಲಿದೆ ಎಂದು ಅವರು ವಿಶ್ಲೇಷಿಸುತ್ತಾರೆ. ಕಳೆದ ಬಾರಿ ಶೇ 69.59ರಷ್ಟು ಮತದಾನವಾಗಿದ್ದರೆ, ಈ ಬಾರಿ 73.59 ರಷ್ಟು ಮತದಾನವಾಗಿದೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT