ಗುರುವಾರ, 20 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಡೂರು: ಭಾವೈಕ್ಯದ ಸಂಭ್ರಮ ತಂದ ‘ಇಮಾವಪ್ಪ’

ರಾಮು ಅರಕೇರಿ
Published 30 ಮೇ 2024, 22:59 IST
Last Updated 30 ಮೇ 2024, 22:59 IST
ಅಕ್ಷರ ಗಾತ್ರ

ಸಂಡೂರು (ಬಳ್ಳಾರಿ): ಇಲ್ಲಿನ ಕೃಷ್ಣಾನಗರ ಗ್ರಾಮದ ದರ್ಗಾದಲ್ಲಿ ‘ಮೊಹರಂ’ ದೇವರನ್ನು ಮುಸ್ಲಿಮರು ‘ಇಮಾವಪ್ಪ’ (ಇಮಾಮಪ್ಪ) ಎಂದು ಕರೆದರೆ, ಹಿಂದೂಗಳು ‘ಚಂದ್ರಶೇಖರ’ ಎಂದು ಪೂಜಿಸುತ್ತಾರೆ.

ಇಡೀ ಗ್ರಾಮಸ್ಥರು ಒಟ್ಟಾಗಿ ‘ಹಿರೇದೇವರು’ ಎನ್ನುತ್ತಾರೆ. ಈ ದೈವದ ಮೂರ್ತಿ ತಯಾರಿಕೆ ಕಾರ್ಯ ಪೂರ್ಣಗೊಂಡಿದ್ದು, ಊರಿನ ಗ್ರಾಮಸ್ಥರು ಸಂಭ್ರಮದಲ್ಲಿ ಇದ್ದಾರೆ.

ಸುಮಾರು ₹20 ಲಕ್ಷ ವೆಚ್ಚದಲ್ಲಿ ಸಿದ್ಧವಾದ ದೇವರ ಮೂರ್ತಿಗೆ ಸಂಡೂರಿನ ಒಂದಿಬ್ಬರು ದಾನಿಗಳು ದೊಡ್ಡ ಮೊತ್ತದ ದೇಣಿಗೆ ನೀಡಿದ್ದು ಹೊರತುಪಡಿಸಿದರೆ ಇನ್ನುಳಿದ ಖರ್ಚನ್ನು ಗ್ರಾಮಸ್ಥರೇ‌ ಭರಿಸಿದ್ದಾರೆ. ಮೂರ್ತಿ ತಯಾರಿಕೆಗೆಂದೇ ಪ್ರತಿ ಮನೆಯವರು ₹500 ರಿಂದ ₹1,000ವರೆಗೆ ದೇಣಿಗೆ ನೀಡಿದ್ದಾರೆ. ಇನ್ನೂ ಕೆಲವರು ₹5 ಸಾವಿರ, ₹10 ಸಾವಿರ ಕೊಟ್ಟಿದ್ದಾರೆ. ಕೆಲವರು ಅಗತ್ಯ ಬಂಗಾರ ಸೇರಿಸಿ, ಮೂರ್ತಿ ತಯಾರಿಕೆಗೆ ಕೈಜೋಡಿಸಿದ್ದಾರೆ.

ಹಿಂದೂಗಳಿಂದಲೂ ಪೂಜಿಸ ಲ್ಪಡುವ ಮೊಹರಂ ದೇವರ ಮೂರ್ತಿ ತಯಾರಿಕೆ ಕಾರ್ಯ ಪೂರ್ಣ ಗೊಂಡ ಕಾರಣ ಗ್ರಾಮದ ಸರ್ವ ಸಮುದಾಯದವರು ಸೇರಿ ಪೂಜಾ ವಿಧಿವಿಧಾನವನ್ನು ಗುರುವಾರ ನೆರವೇರಿಸಿದರು.

ಇಮಾವಪ್ಪನ ಮೂರ್ತಿ ಸಿದ್ಧ ವಾಗಿದ್ದಕ್ಕೆ ಗ್ರಾಮದ ಊರಮ್ಮ, ಈಶ್ವರ, ಆಂಜನೇಯ, ತಾಯಮ್ಮ, ಭರಮಪ್ಪ, ಭೀಮತೀರ್ಥ, ಬಾಬಾಯ್ಯ ದರ್ಗಾದಲ್ಲೂ ಪೂಜಾ ಕಾರ್ಯ ನಡೆದವು. ವಿವಿಧ ದರ್ಗಾಗಳಲ್ಲೂ ವಿಶೇಷ ಪೂಜೆ ನಡೆಯಿತು. ಹೀಗಾಗಿ ಇಡೀ ಊರಲ್ಲಿ ಹಬ್ಬದ ವಾತಾವರಣವಿತ್ತು.

ಸಂಭ್ರಮದ ಭಾಗವಾಗಿ ಹುಗ್ಗಿ, ಅನ್ನ ಸಂತರ್ಪಣೆ ನಡೆಯಿತು. ವಿಶೇಷವೆಂದರೆ, ಈ ದಾಸೋಹಕ್ಕೆ ಗ್ರಾಮದ ಪ್ರತಿ ಮನೆಗಳಿಂದಲೂ ಬೆಲ್ಲ, ಅಕ್ಕಿ, ತುಪ್ಪ, ಗೋಧಿ ನೀಡಲಾಗಿತ್ತು. ದೇವರ ಕಾರ್ಯಕ್ಕೆ ತಮ್ಮ ಪಾಲು ಸರ್ಮಪಿಸಿದ ಧನ್ಯತೆ ಗ್ರಾಮಸ್ಥರಲ್ಲಿ ಕಂಡು ಬಂತು.

ಮಾಬು ಸುಬಾನಿ ಹಬ್ಬವಿದ್ದರೆ ಹಿಂದೂಗಳೂ ಆಚರಿಸುತ್ತೇವೆ. ಯುಗಾದಿ, ದಸರಾ ಹಬ್ಬಗಳಲ್ಲಿ ಮುಸ್ಲಿಮರು ಹಿಂದೂ ದೇವರುಗಳಿಗೆ ಎಡೆ ಕೊಡುತ್ತಾರೆ. ಮನುಷ್ಯರೆಲ್ಲ ಒಂದೇ ಎಂಬ ನಂಬಿಕೆ ನಮ್ಮದು..
ಪೋತಲಿಂಗಪ್ಪ, ಮುಖಂಡ,ಕೃಷ್ಣಾನಗರ ಗ್ರಾಮ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT