ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ತೋರಣಗಲ್ಲು: ಮನೆ, ಖಾಲಿ ನಿವೇಶನಗಳಿಗೆ ನುಗ್ಗಿದ ಚರಂಡಿ ನೀರು

ಕುರೆಕುಪ್ಪ ಪುರಸಭೆ ಅಧಿಕಾರಿಗಳ ವಿರುದ್ಧ ಜನರಿಂದ ಆಕ್ರೋಶ
ಎರ‍್ರಿಸ್ವಾಮಿ ಬಿ.
Published 15 ಏಪ್ರಿಲ್ 2024, 4:13 IST
Last Updated 15 ಏಪ್ರಿಲ್ 2024, 4:13 IST
ಅಕ್ಷರ ಗಾತ್ರ

ತೋರಣಗಲ್ಲು: ಹೋಬಳಿಯ ಕುರೆಕುಪ್ಪ ಪುರಸಭೆಯ 17ನೇ ವಾರ್ಡ್‍ನ ಜನರ ಮನೆ, ಖಾಲಿ ನಿವೇಶನಗಳಿಗೆ ಪುರಸಭೆಯ 4ವಾರ್ಡ್‍ಗಳ ಚರಂಡಿಯ ಹೊಲಸು ನೀರು ನುಗ್ಗಿದ್ದರಿಂದ ವಾರ್ಡ್‍ನ ನಿವಾಸಿಗಳು ಹೆಚ್ಚಿನ ಆತಂಕಕ್ಕೆ ಒಳಗಾಗಿ ನಿತ್ಯ ಪರಿತಪಿಸುತ್ತಿದ್ದಾರೆ.

ಕುರೆಕುಪ್ಪ ಪುರಸಭೆಯ ನಾಲ್ಕು ವಾರ್ಡ್‍ಗಳ ಚರಂಡಿಯ ಕೊಳಚೆ ನೀರು ಸುಮಾರು ನಾಲ್ಕು ವರ್ಷಗಳಿಂದ ನಿರಂತರವಾಗಿ ಹರಿಯುತ್ತಿರುವ ಪರಿಣಾಮ ಕೆಲ ಮನೆ, ಖಾಲಿ ನಿವೇಶನ, ಪಾಳುಬಾವಿ ಸೇರಿದಂತೆ ಇತರೆ ತಗ್ಗು ಪ್ರದೇಶಗಳು ಹೊಲಸು ನೀರಿನಿಂದ ಆವೃತವಾಗಿದ್ದರಿಂದ ಜನರು ನಿತ್ಯ ಕಲುಶಿತ ನೀರಿನಲ್ಲೆ ಕಾಲ ಕಳೆಯುವ ದುಃಸ್ಥಿತಿ ನಿರ್ಮಾಣವಾಗಿದೆ.

ಪುರಸಭೆಯ ವ್ಯಾಪ್ತಿಯ ಚರಂಡಿಯ ನೀರನ್ನು ವ್ಯವಸ್ಥಿತವಾಗಿ ಹರಿಯಲು ನೂತನ ಚರಂಡಿ ಕಾಮಗಾರಿ ಹಮ್ಮಿಕೊಳ್ಳದೆ ಸುಮಾರು ವರ್ಷಗಳಿಂದ ಕಾಲ ಕಾಲಹರಣ ಮಾಡುತ್ತಿರುವ, ಜನರ ಜೀವನದ ಜೊತೆ ಚೆಲ್ಲಾಟವಾಡುತ್ತಿರುವ ಕುರೆಕುಪ್ಪ ಪುರಸಭೆಯ ಅಧಿಕಾರಿಗಳ, ಜನಪ್ರತಿನಿಧಿಗಳ ವಿರುದ್ಧ ನಿವಾಸಿಗಳು ಆಕ್ರೋಶಗೊಂಡಿದ್ದಾರೆ.

ಆಪಾರ ಪ್ರಮಾಣದ ಕೊಳಚೆ ನೀರು ನಿರಂತರವಾಗಿ ಹರಿಯುತ್ತಿರುವ ಪರಿಣಾಮ ಸುಮಾರು ಐದಾರು ಎಕರೆಯ ಖಾಲಿ ನಿವೇಶನವು ಹೊಲಸು ನೀರಿನಿಂದ ಜಲಾವೃತವಾಗಿ ಕೆರೆಯಂತೆ ಕಾಣುತ್ತಿದೆ. ಈ ಸ್ಥಳವು ಸೊಳ್ಳೆಗಳ ಆವಾಸಸ್ಥಾನವಾಗಿ ಮಾರ್ಪಟ್ಟು ಜನರ ಜೀವಕ್ಕೆ ಕಂಠಕವಾಗಿರುವುದು ಅತ್ಯಂತ ಶೋಚನೀಯ ವಿಚಾರ.

ಚರಂಡಿಯ ನೀರು ಹಲವಾರು ವರ್ಷಗಳಿಂದ ರೈಲ್ವೆ ಹಳಿಯ ಪಕ್ಕದ ಖಾಲಿ ಸ್ಥಳದಲ್ಲಿ ಹರಿದು ದರೋಜಿ ಕೆರೆಯ ಆವರಣಕ್ಕೆ ಸೇರುತ್ತಿದ್ದವು. ಆದರೆ ಖಾಲಿ ಸ್ಥಳವು ನಮಗೆ ಸೇರಿದ್ದು ಎಂದು ಖಾಸಗಿ ವ್ಯಕ್ತಿಯು ಆ ಸ್ಥಳವನ್ನು ಆಕ್ರಮಿಸಿ ಚರಂಡಿಯ ನೀರು ಹರಿಯುವ ಸ್ಥಳದಲ್ಲಿ ದೊಡ್ಡದಾದ ಮಣ್ಣಿನ ಒಡ್ಡು ಹಾಕಿ ತಡೆದಿದ್ದರಿಂದ ಎಲ್ಲ ವಾರ್ಡ್‍ಗಳ ಹೊಲಸು ನೀರು ಮುಂದೆ ಸಾಗದೇ ನಿಂತಲ್ಲೆ ನಿಂತು ವಾರ್ಡ್‍ನ ಜನ ವಸತಿ ಪ್ರದೇಶಕ್ಕೆ ಹಿಮ್ಮುಖವಾಗಿ ನುಗ್ಗಿದ್ದರಿಂದ ಈ ಅವಾಂತರ ಸೃಷ್ಟಿಯಾಗಿದೆ.

20 ಕಾರ್ಮಿಕರ ಮನೆಗಳು ಚರಂಡಿಯ ನೀರಿನಿಂದ ಸಂಪೂರ್ಣವಾಗಿ ಜಲಾವೃತವಾಗಿದ್ದು, ಆ ಕೊಳಚೆ ನೀರಿನಲ್ಲೆ ಬಡ ಕಾರ್ಮಿಕ ಕುಟುಂಬಗಳು ನಿತ್ಯ ವಾಸಮಾಡುತ್ತಿದ್ದಾರೆ. ಈ ಗಂಭೀರ ಸಮಸ್ಯೆಯಿಂದ ಸುಮಾರು 500ಕ್ಕೂ ಹೆಚ್ಚು ಕುಟುಂಬಗಳು ರೋಸಿಹೋಗಿದ್ದು, ಕಲುಶಿತ ನೀರು ಜನರ ಸ್ವಂತ ಕೊಳವೆ ಬಾವಿಗಳ ಅಂತರ್ಜಲಕ್ಕೆ ಸೇರಿ ಆ ನೀರು ಸಹ ಕಲುಶಿತವಾಗಿದ್ದರಿಂದ ನಿತ್ಯ ಜನರು ಬಳಕೆ, ಕುಡಿಯುವ ನೀರಿಗಾಗಿ ಪರದಾಡುವಂತಾಗಿದೆ.

‘ಪುರಸಭೆಯ ನಾಲ್ಕು ವಾರ್ಡ್‍ಗಳ ಚರಂಡಿಯ ನೀರು ಕಳೆದ ಹಲವಾರು ವರ್ಷಗಳಿಂದ ನಿರಂತರವಾಗಿ ಜನರ ವಸತಿಯ ಪ್ರದೇಶಕ್ಕೆ ಹರಿಯುತ್ತಿವೆ. ರಸ್ತೆಯ ಪಕ್ಕದಲ್ಲಿನ ತಗ್ಗು ಪ್ರದೇಶಗಳು ಹೊಲಸು ನೀರಿನಿಂದ ಭರ್ತಿಯಾಗಿದ್ದು, ಮಕ್ಕಳು, ವೃದ್ಧರು ನಿತ್ಯ ಪ್ರಾಣಭಯದಲ್ಲೆ ಸಂಚರಿಸಬೇಕಾಗಿದೆ’ ಎಂದು ವಾರ್ಡ್‍ನ ನಿವಾಸಿ ಮಂಜುಳಾ ಅಸಮಾಧಾನ ವ್ಯಕ್ತಪಡಿಸಿದರು.

ಪಾಳು ಬಾವಿಯು ಕೊಳಚೆ ನೀರಿನಿಂದ ತುಂಬಿ ಆಪಾಯವನ್ನು ಆಹ್ವಾನಿಸುವಂತಿದೆ
ಪಾಳು ಬಾವಿಯು ಕೊಳಚೆ ನೀರಿನಿಂದ ತುಂಬಿ ಆಪಾಯವನ್ನು ಆಹ್ವಾನಿಸುವಂತಿದೆ

ಚರಂಡಿ ಕಾಮಗಾರಿ ಹಮ್ಮಿಕೊಳ್ಳುವಂತೆ ಪುರಸಭೆ ಅಧಿಕಾರಿಗಳಿಗೆ ಹಲವಾರು ಬಾರಿ ಮನವಿ ಸಲ್ಲಿಸಿದರು ಪ್ರಯೋಜನವಾಗಿಲ್ಲ

–ಮಂಜುಳ ವಾರ್ಡ್‌ ನಿವಾಸಿ

ಸೊಳ್ಳೆಗಳ ಹಾವಳಿ ಹೆಚ್ಚಾಗಿ ಮಕ್ಕಳಿಗೆ ಮಲೇರಿಯ ಡೆಂಗಿಯಂತಹ ಕಾಯಿಲೆಗಳಿಗೆ ಒಳಗಾಗುವುದರಿಂದ ನಿತ್ಯ ಆಸ್ಪತ್ರೆಗೆ ತೆರಳ ಬೇಕಾಗಿದೆ

–ಮೆಹಬೂಬಿ ವಾರ್ಡ್‍ನ ನಿವಾಸಿ

ಹಲವು ವರ್ಷಗಳ ಈ ಜ್ವಲಂತ ಸಮಸ್ಯೆ ಗಂಭೀರವಾಗಿ ಪರಿಗಣಿಸಿ ಶೀಘ್ರವಾಗಿ ಪರಿಹರಿಸಬೇಕು. ಇಲ್ಲದಿದ್ದರೇ ಹೋರಾಟ ಆರಂಭಿಸಲಾಗುವುದು

–ಲೋಕೇಶ್ ವಾರ್ಡ್‌ ನಿವಾಸಿ

‘ಕಾನೂನು ಕ್ರಮ’

ಜನ ವಸತಿ ಪ್ರದೇಶಕ್ಕೆ ಚರಂಡಿಯ ನೀರು ನುಗ್ಗಿದ್ದರಿಂದ ನಿವಾಸಿಗಳಿಗೆ ದೊಡ್ಡ ಸಮಸ್ಯೆಯಾಗಿದೆ. ಸಂಗ್ರಹಗೊಂಡ ಕೊಳಚೆ ನೀರನ್ನು ಈಗಾಗಲೇ ತೆರವುಗೊಳಿಸಲಾಗಿತ್ತು. ಆದರೆ ಖಾಸಗಿ ವ್ಯಕ್ತಿಗಳು ಆ ಸ್ಥಳ ನಮಗೆ ಸೇರಿದ್ದು ಎಂದು ವಿರೋಧಿಸಿ ಚರಂಡಿ ನೀರಿಗೆ ಮಣ್ಣು ಹಾಕಿ ತಡೆದಿದ್ದಾರೆ. ಈ ಗಂಭೀರ ವಿಷಯವನ್ನು ಜಿಲ್ಲಾಧಿಕಾರಿ ಗಮನಕ್ಕೆ ತಂದಿದ್ದು ಖಾಸಗಿ ವ್ಯಕ್ತಿಗಳ ವಿರುದ್ಧ ಪೊಲೀಸ್ ಠಾಣೆಯಲ್ಲಿ ತ್ವರಿತವಾಗಿ ಪ್ರಕರಣ ದಾಖಲಿಸಿ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಕುರೆಕುಪ್ಪ ಪುರಸಭೆಯ ಮುಖ್ಯಾಧಿಕಾರಿ ಸತೀಶ್‍ಗುಡ್ಡೆ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT