ಮಂಗಳವಾರ, 27 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೆಐಡಿಬಿ ಭೂಸ್ವಾಧಿನ: ನಿರ್ಜೀವಗೊಳ್ಳಲಿವೆ ಗ್ರಾಮಗಳು

971 ಎಕರೆ ಸ್ವಾಧೀನಕ್ಕೆ ರೈತರ ವಿರೋಧ । ವೈಜ್ಞಾನಿಕ ಬೆಲೆ ನಿಗದಿಗೆ ಆಗ್ರಹ
ನಟರಾಜ ನಾಗಸಂದ್ರ
Published 28 ಜನವರಿ 2024, 4:47 IST
Last Updated 28 ಜನವರಿ 2024, 4:47 IST
ಅಕ್ಷರ ಗಾತ್ರ

ದೊಡ್ಡಬಳ್ಳಾಪುರ: ‘ನಮ್ಮ ಹಿರಿಯರು ಬಾವಿಯಲ್ಲಿ ಏತ ಎತ್ತಿ ಬೆಳೆ ಬೆಳೆದು ಹೊಟ್ಟೆ, ಬಟ್ಟೆ ಕಟ್ಟಿ ಸಂಪಾದಿಸಿದ್ದ ಭೂಮಿಯಲ್ಲಿ ಬೆಳೆದಿದ್ದ ತೆಂಗು, ಮಾವು, ಹಲಸಿನ ಮರಗಳು. ತೋಟದಲ್ಲಿರುವ ನಮ್ಮ ಹಿರಿಯರ ಸಮಾಧಿಗಳು... ಎಲ್ಲವು ನಮ್ಮ ಕಣ್ಣ ಮುಂದೆಯೇ ನೆಲಸಮ ಆಗುವುದನ್ನ ನೆನಸಿಕೊಂಡರೆ ಊಟ ಸೇರುತ್ತಿಲ್ಲ. ರಾತ್ರಿ ನಿದ್ರೆಯೂ ಬರುತ್ತಿಲ್ಲ...’ ಹೀಗೆ ತಮ್ಮ ಒಡಲಾಳದ ನೋವು ಹಂಚಿಕೊಂಡವರು ಕೊನಘಟ್ಟ ಗ್ರಾಮದ ರೈತ ರಮೇಶ್‌.

ಇದು ರಮೇಶ್‌ ಅವರ ಸಂಕಟವಲ್ಲ. ತಾಲ್ಲೂಕಿನ ಕೊನಘಟ್ಟ, ಕೋಡಿಹಳ್ಳಿ, ನಾಗದೇನಹಳ್ಳಿ, ಆದಿನಾರಾಯಣಹೊಸಹಳ್ಳಿ ಗ್ರಾಮಗಳ ನೂರಾರು ಜನ ರೈತರು ಕತೆಯೂ ಆಗಿದೆ.

ಈ ಗ್ರಾಮಗಳ ವ್ಯಾಪ್ತಿಗೆ ಸೇರಿರುವ 971 ಎಕರೆ ಫಲವತ್ತಾದ ಕೃಷಿ ಭೂಮಿಯನ್ನು ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ (ಕೆಐಡಿಬಿ) ಭೂಸ್ವಾಧೀನ ಮಾಡಿಕೊಂಡಿದ್ದು, ಪರಿಹಾರದ ಹಣ ನೀಡಿ ಭೂಮಿ ವಶಕ್ಕೆ ಪಡೆಯಲು ಅಂತಿಮ ನೋಟಿಸ್‌ ಜಾರಿ ಮಾಡುತ್ತಿದೆ. ಕೆಐಡಿಬಿ ಏಕಪಕ್ಷೀಯ ನಿರ್ಧಾರ ಖಂಡಿಸಿ ಎರಡು ವಾರಗಳಿಂದಲೂ ಭೂಮಿ ಕಳೆದುಕೊಳ್ಳುತ್ತಿರುವ ರೈತರು ರಾತ್ರಿ ಹಗಲು ಧರಣಿ ಆರಂಭಿಸಿದ್ದಾರೆ.

ಕೊನಘಟ್ಟ ಗ್ರಾಮದಲ್ಲಿ ಒಟ್ಟು 600 ಕುಟುಂಬಗಳಿವೆ. ಇದರಲ್ಲಿ ಶೇ 70ರಷ್ಟು ಹಿಂದುಳಿದ ವರ್ಗದ ಕುಟುಂಬಗಳಾಗಿವೆ. 2,100 ಮತಗಳನ್ನು ಹೊಂದಿರುವ ದೊಡ್ಡ ಗ್ರಾಮ. ಪ್ರತಿ ದಿನ ಇಲ್ಲಿನ ಹಾಲು ಉತ್ಪಾದಕರ ಸಹಕಾರ ಸಂಘದಿಂದ 1,800 ಲೀಟರ್‌ ಹಾಲು ಬಮೂಲ್‌ಗೆ ಸರಬರಾಜು ಆಗುತ್ತಿದೆ.

ಈಗ ಭೂ ಸ್ವಾಧೀನವಾಗುತ್ತಿರುವ 970 ಎಕರೆ ಪ್ರದೇಶದ ಜಮೀನಿನ ಪೈಕಿ 400 ಎಕರೆ ಪ್ರದೇಶದ ಭೂಮಿಯಲ್ಲಿ ರೈತರು ಕೋಟ್ಯಂತರ ರೂಪಾಯಿ ಖರ್ಚು ಮಾಡಿ ಕೊಳವೆಬಾವಿಗಳ ಮೂಲಕ ನೀರಾವರಿ ಸೌಲಭ್ಯ ಮಾಡಿಕೊಂಡು ದ್ರಾಕ್ಷಿ, ವಿವಿಧ ಬೆಗೆಯ ತರಕಾರಿ, ಹಸಿರು ಮನೆಗಳಲ್ಲಿ ಹೂವು, ಬಾಳೆ, ರೇಷ್ಮೆ, ಮಾವು, ಕೋಳಿ ಶೇಡ್‌ಗಳು ಸೇರಿದಂತೆ ಹತ್ತಾರು ಬೆಗೆಯ ಬೆಳೆಗಳನ್ನು ಬೆಳೆಯುತ್ತಿದ್ದೇವೆ ಎನ್ನುತ್ತಾರೆ ಇಲ್ಲಿನ ರೈತರು.

ಈಗ ಗುರುತಿಸಿರುವ ಭೂಸ್ವಾಧೀನ ಪ್ರಕ್ರಿಯೆ ಪೂರ್ಣಗೊಂಡರೆ ಕೊನಘಟ್ಟ ಗ್ರಾಮ, ಸರ್ಕಾರಿ ಸ್ಮಾಶನ, ಊರಿನ ಮುಜರಾಯಿ ದೇವಾಲಯ, ಸರ್ಕಾರಿ ಶಾಲೆ, ಕಾಲೇಜು, ಸರ್ಕಾರಿ ಆಸ್ಪತ್ರೆ ಹೊರತು ಪಡಿಸಿದರೆ ಶೇ 95ರಷ್ಟು ಭೂಮಿ ಕೆಐಡಿಬಿ ವಶವಾಗುತ್ತಿದೆ.

‘ಗ್ರಾಮದ 600 ಕುಟುಂಬಗಳು ಭೂಮಿಯ ಮೇಲೆ ಅವಲಂಭಿತವಾಗಿವೆ. ಕೃಷಿಗೆ ಪೂರಕವಾಗಿ ಕುರಿ, ಹಸು, ಮೇಕೆ, ಹಂದಿಗಳ ಸಾಕಾಣಿಕೆ ಮಾಡುತ್ತಿದ್ದೇವೆ. ಗ್ರಾಮದಲ್ಲಿ ಜಮಿನು ಇಲ್ಲದವರಿಗೂ ಕೆಲಸ ದೊರೆಯುತಿತ್ತು. ಗ್ರಾಮದ ಇಡೀ ಭೂಮಿ ಕೈಗಾರಿಕೆಗೆ ಸ್ವಾಧಿನವಾದರೆ ಕುರಿ, ಹಸು ಸಾಕಾಣಿಕೆಗೆ ಮೇವು ಎಲ್ಲಿಂದ ತರುವುದು. ಹಾಗಾಗಿ ನಮ್ಮೂರು ನಿರ್ಜೀವಗೊಂಡ ದೇಹದಂತಾಗಲಿದೆ. ಊರು ವಯಸ್ಸಾದವರು, ದುಡಿಯಲು ಅಶಕ್ತರಾದವರು ವಾಸವ ಮಾಡುವ ಹಳ್ಳಿಯಾಗಲಿದೆ. ದುಡಿಮೆಗೆ ಪರ ಊರು, ಇಲ್ಲವೆ ನಗರಗಳತ್ತ ಗುಳೆ ಹೋಗುವುದು ಅನಿವಾರ್ಯವಾಗಲಿದೆ’ ಎನ್ನುತ್ತಾರೆ ಗ್ರಾಮದ ಹಿರಿಯರಾದ ಮುನಿಯಪ್ಪ.

ಈಗ ಸ್ವಾಧೀನಕ್ಕೆ ಒಳಪಡುತ್ತಿರುವ ಭೂಮಿಗೆ ಕೆಐಡಿಬಿ ಮೂರು ಹಂತದ ಬೆಲೆಗಳನ್ನು ನಿಗದಿಪಡಿಸಿದೆ. ರಾಷ್ಟ್ರೀಯ ಹೆದ್ದಾರಿ ಅಭಿಮುಖವಾಗಿರುವ ಜಮೀನುಗಳಿಗೆ ₹2.50 ಕೋಟಿ, ಗ್ರಾಮದ ಮುಖ್ಯರಸ್ತೆಗೆ ಅಭಿಮುಖವಾಗಿರುವ ಜಮೀನಿಗೆ ₹1.60 ಕೋಟಿ ಹಾಗೂ ಒಳ ಭಾಗದಲ್ಲಿ ಜಮೀನುಗಳಿಗೆ ₹1.50 ಕೋಟಿ. ಈ ಬೆಲೆಯು ಸರ್ಕಾರದ ಈಗಿನ ಮಾರ್ಗದರ್ಶಿ ದರಗಳಿಗೆ ಮೂರು ಪಟ್ಟು ಇಲ್ಲ, 2022ರಲ್ಲಿ ಇದ್ದ ದರ ಸೂಚಿ ಮಾರ್ಗದರ್ಶಿಗೆ ಮೂರು ಪಟ್ಟು ಇಲ್ಲ. ಇಷ್ಟೊಂದು ಕಡಿಮೆ ಬೆಲೆಗೆ ಕೃಷಿ ಅಭಿವೃದ್ಧಿಯಾಗಿರುವ ಭೂಮಿಯನ್ನು ಕೆಐಡಿಬಿಗೆ ಬಿಟ್ಟಕೊಟ್ಟುವು ಎಲ್ಲಿಗೆ ಹೋದರು ಮತ್ತೆ ಭೂಮಿ ಖರೀದಿಸಲು ಸಾಧ್ಯವೇ ಇಲ್ಲದಾಗಿದೆ ಎನ್ನುತ್ತಾರೆ ಭೂಮಿಯನ್ನು ಕಳೆದುಕೊಳ್ಳುತ್ತಿರುವ ರೈತರು.

ಅಂಕಿ ಅಂಶ:

600

ಕೃಷಿ ಭೂಮಿಯ ಮೇಲೆ ಅವಲಂಬಿತ ಕುಟುಂಬಗಳು


702

ಪಹಣಿ ಹೊಂದಿರುವ ರೈತರ ಸಂಖ್ಯೆ


1,800 ಲೀಟರ್‌


ಕೊನಘಟ್ಟ ಗ್ರಾಮದಿಂದ ಪ್ರತಿದಿನ ಹಾಲು ಸಂಗ್ರಹ

ಕೆಐಡಿಬಿ ಪ್ರತಿ ಎಕರೆಗೆ ನಿಗದಿಪಡಿಸಿರುವ ಬೆಲೆ(ಕೋಟಿಗಳಲ್ಲಿ)

₹ 2.50

ಹೆದ್ದಾರಿ ಸಮೀಪದ ಭೂಮಿಗಳಿಗೆ 

₹ 1.60

ಗ್ರಾಮದ ಮುಖ್ಯರಸ್ತೆಯ ಅಕ್ಕಪಕ್ಕದ ಭೂಮಿಗಳಿಗೆ

₹1.50

ಒಳ ಭಾಗದ ಭೂಮಿಗಳಿಗೆ 

ದೊಡ್ಡಬಳ್ಳಾಪುರ ತಾಲ್ಲೂಕಿನ ನಾಗದೇನಹಳ್ಳಿ ಸುತ್ತ ಕೆಐಡಿಬಿ ಸ್ವಾಧಿನಕ್ಕೆ ಒಳಪಡುತ್ತಿರುವ ಜಮೀನಿನಲ್ಲಿ ಬೆಳೆಯಲಾಗಿರುವ ದ್ರಾಕ್ಷಿ ತೋಟ
ದೊಡ್ಡಬಳ್ಳಾಪುರ ತಾಲ್ಲೂಕಿನ ನಾಗದೇನಹಳ್ಳಿ ಸುತ್ತ ಕೆಐಡಿಬಿ ಸ್ವಾಧಿನಕ್ಕೆ ಒಳಪಡುತ್ತಿರುವ ಜಮೀನಿನಲ್ಲಿ ಬೆಳೆಯಲಾಗಿರುವ ದ್ರಾಕ್ಷಿ ತೋಟ
ರಮೇಶ್‌
ರಮೇಶ್‌
ಆನಂದ್‌
ಆನಂದ್‌
ಜಿ.ಲಕ್ಷ್ಮೀಪತಿ
ಜಿ.ಲಕ್ಷ್ಮೀಪತಿ

ವೈಜ್ಞಾನಿಕ ಬೆಲೆ ನೀಡಿ ‘2022ರಲ್ಲಿ ಪ್ರಥಮ ಬಾರಿಗೆ ಭೂ ಸ್ವಾಧೀನ ಕುರಿತಂತೆ ಕೆಐಡಿಬಿ ಪತ್ರಿಕಾ ಪ್ರಕಟಣೆ ನೀಡಿದಾಗಿನಿಂದಲೂ ಗ್ರಾಮದ ಎಲ್ಲರೂ ಪಕ್ಷಾತೀತವಾಗಿ ಸಂಘಟಿತರಾಗಿ ಹೋರಾಟ ಮಾಡಿ ಭೂಸ್ವಾಧಿನವನ್ನು ವಿರೋಧಿಸುತ್ತಿದ್ದಾರೆ. ನಮ್ಮೂರಿನ ಸುತ್ತ ಇರುವ ಸುಮಾರು 300 ಎಕರೆಯಷ್ಟು ಸರ್ಕಾರಿ ಭೂಮಿಯನ್ನು ಪಡೆದು ನೀರಾವರಿ ಪ್ರದೇಶದ ಭೂಮಿಯನ್ನು ಸ್ವಾಧೀನದಿಂದ ಕೈಬಿಡಿ ಎಂದು ಹೋರಾಟಗಳನ್ನು ಪ್ರಾರಂಭಮಾಡಿದೆವು.ಆದರೆ ನಮ್ಮ ಎಲ್ಲಾ ಹೋರಾಟಗಳು ವಿಫಲವಾದವು. ಈಗ ಅಭಿವೃದ್ಧಿ ಪಡಿಸಿರುವ ಕೃಷಿ ಭೂಮಿ ಕಳೆದುಕೊಳ್ಳುತ್ತಿದ್ದೇವೆ’ ಎಂದು ಸಂಕಟ ವ್ಯಕ್ತಪಡಿಸಿದವರು ಹೋರಾಟ ಸಮಿತಿಯ ಮುಖಂಡರು ಹಾಗೂ ಟಿಎಪಿಎಂಸಿಎಸ್‌ ನಿರ್ದೇಶಕ ಆನಂದ್. ‘ಭೂಸ್ವಾಧಿನಕ್ಕೆ 2013ರಲ್ಲಿ ಕೇಂದ್ರ ಸರ್ಕಾರ ರೂಪಿಸಿರುವ ಕಾನೂನು ರೀತಿಯಲ್ಲಿ ಬೆಲೆ ನಿಗದಿಪಡಿಸಿ ಬೆಲೆ ನೀಡಿದರೆ ಬೇರೆ ಊರುಗಳ ಸಮೀಪವಾದರು ಭೂಮಿ ಖರೀದಿಸಿ ಮತ್ತೆ ಕೃಷಿ ಮಾಡುತ್ತೇವೆ. ಆದರೆ ನಮ್ಮ ಮನವಿಗೆ ಜನಪ್ರತಿನಿಧಿಗಳಿಂದ ಮೊದಲುಗೊಂಡು ಅಧಿಕಾರಿಗಳವರೆಗೂ ಯಾರೊಬ್ಬರಿಂದಲು ಇದುವರೆಗೂ ಸ್ಫಂದನೆ ದೊರೆತಿಲ್ಲ’ ಎಂದು ದೂರುತ್ತಾರೆ. ಯಾವ ಆಧಾರದಲ್ಲಿ ಬೆಲೆ ನಿಗದಿ? ‘ಕೆಐಡಿಬಿ ಅಧಿಕಾರಿಗಳು ಬೆಳೆಗಳನ್ನು ಬೆಳೆಯುತ್ತಿರುವ ಕೃಷಿ ಭೂಮಿಗೆ ದರ ನಿಗದಿ ಪಡಿಸುವಾಗ 2022ಕ್ಕೂ ಹಿಂದೆ ಸರ್ಕಾರ ನಿಗದಿ ಪಡಿಸಿದ್ದ ದರ ಮಾರ್ಗಸೂಚಿಯನ್ನು ಪಾಲಿಸಿಲ್ಲ. 2023ರಲ್ಲಿ ನಿಗದಿಪಡಿಸಿರುವ ಭೂಮಿ ದರ ಮಾರ್ಗಸೂಚಿಯನ್ನು ಪಾಲಿಲ್ಲ. ಕೆಐಡಿಬಿ ಅಧಿಕಾರಿಗಳು ಸರ್ಕಾರದ ಎಲ್ಲಾ ಕಾನೂನು ನಿಯಮ ಉಲ್ಲಂಘಸಿ ಮಾಡಿ ತಮಗೆ ಇಷ್ಟ ಬಂದ ರೀತಿಯಲ್ಲಿ ಕೃಷಿ ಜಮೀನಿಗೆ ಬೆಲೆ ನಿಗದಿಪಡಿಸಿದ್ದಾರೆ. ನಮ್ಮ ಜಮೀನುಗಳಿಗೆ ಯಾವ ಮಾನದಂಡದ ಆಧಾರದ ಮೇಲೆ ಬೆಲೆ ನಿಗದಿ ಪಡಿಸಲಾಗಿದೆ ಅನ್ನುವುದನ್ನು ಬಹಿರಂಗಪಡಿಸುತ್ತಿಲ್ಲ’ ಎಂದು ಆರೋಪಿಸುತ್ತಾರೆ ಲಿಂಗನಹಳ್ಳಿ ಗ್ರಾಮದ ಮುಖಂಡರಾದ ಜಿ.ಲಕ್ಷ್ಮೀಪತಿ. ಜಿಲ್ಲೆಯಲ್ಲಿ ಕೆಐಡಿಬಿ ಕಚೇರಿ ತೆರೆಯಿರಿ ಲಿಂಗನಹಳ್ಳಿಯಲ್ಲಿ 570 ಎಕರೆ ಕೊನಘಟ್ಟ ಗ್ರಾಮಗಳ 971 ಎಕರೆ ಭೂಮಿ ಸೇರಿದಂತೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನಾಲ್ಕು ತಾಲ್ಲೂಕುಗಳಲ್ಲಿ ನೂರಾರು ಎಕರೆ ಭೂಮಿಯನ್ನು ಕೆಐಡಿಬಿ ವಶಕ್ಕೆ ಪಡೆಯುತ್ತಿದೆ. ಆದರೆ ಭೂಸ್ವಾಧಿನ ವಿಶೇಷ ಅಧಿಕಾರಿಗಳ ಕಚೇರಿ ಮಾತ್ರ ಬೆಂಗಳೂರಿನಲ್ಲೇ ಇದೆ. ಸ್ವಾಧೀನಕ್ಕೆ ಒಳಪಡುವ ಜಮೀನಿನ ದಾಖಲೆಗಳು ಸೇರಿದಂತೆ ಇತರೆ ಸಣ್ಣ ಪುಟ್ಟ ಕೆಲಸಗಳಿಗು ರೈತರು ಬೆಂಗಳೂರಿನ ಕೆಚೇರಿಗೆ ಅಲೆದಾಡುವಂತಾಗಿದೆ. ಭೂಸ್ವಾಧಿನಕ್ಕೆ ಸಂಬಂಧಿಸಿದ ವಿಶೇಷ ಅಧಿಕಾರಿಗಳ ಕಚೇರಿಯನ್ನು ದೇವನಹಳ್ಳಿಯ ಜಿಲ್ಲಾ ಕಚೇರಿಗಳ ಸಂಕಿರಣದಲ್ಲೆ ಇರಬೇಕು. ಇದರಿಂದ ರೈತರು ಮಧ್ಯವರ್ತಿಗಳನ್ನು ಅವಲಂಭಿಸುವುದು ತಪ್ಪಲಿದೆ ಎನ್ನುತ್ತಾರೆ ಜಿ.ಲಕ್ಷ್ಮೀಪತಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT