ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಬೈಲಹೊಂಗಲ | ಅಭಿವೃದ್ಧಿಯಿಂದ ದೂರವುಳಿದ ಆನಿಗೋಳ

ಮೂಲಸೌಕರ್ಯಕ್ಕಾಗಿ ಗ್ರಾಮಸ್ಥರ ಪರದಾಟ, ಸಾಂಕ್ರಾಮಿಕ ಕಾಯಿಲೆ ಹರಡುವ ಭೀತಿ
ರವಿಕುಮಾರ ಹುಲಕುಂದ
Published 10 ಜನವರಿ 2024, 5:51 IST
Last Updated 10 ಜನವರಿ 2024, 5:51 IST
ಅಕ್ಷರ ಗಾತ್ರ

ಬೈಲಹೊಂಗಲ: ‘ಮೇಲೆಲ್ಲ ಹೊಳಪು. ಒಳಗೆಲ್ಲ ಹುಳುಕು’ ಎಂಬ ಮಾತಿಗೆ ತಾಲ್ಲೂಕಿನ ಆನಿಗೋಳ ಗ್ರಾಮ ಹೇಳಿಮಾಡಿಸಿದಂತಿದೆ. ಬೈಲಹೊಂಗಲ ಪಟ್ಟಣದ ಮಗ್ಗುಲಲ್ಲಿದ್ದರೂ, ಅಭಿವೃದ್ಧಿಯಿಂದ ದೂರವುಳಿದಿದೆ.

ಹಿರೇಬಾಗೇವಾಡಿಯಿಂದ ಸವದತ್ತಿಗೆ ಸಂಪರ್ಕ ಕಲ್ಪಿಸುವ ರಾಜ್ಯ ಹೆದ್ದಾರಿ ಇದೇ ಊರಿನಲ್ಲಿ ಹಾಯ್ದುಹೋಗಿದೆ. ಸದಾ ವಾಹನ ದಟ್ಟಣೆಯಿಂದ ಕೂಡಿದ ಈ ರಸ್ತೆ ಉತ್ತಮವಾಗಿದೆ. ಆದರೆ, ಒಳರಸ್ತೆಗಳ ಇದಕ್ಕೆ ತದ್ವಿರುದ್ಧ. ರಸ್ತೆಬದಿ ಬಿದ್ದಿರುವ ಕಸದ ರಾಶಿ, ನಿರ್ವಹಣೆ ಕಾಣದ ಚರಂಡಿಗಳು, ರಸ್ತೆಮಧ್ಯೆ ಹರಿಯುವ ಕೊಳಚೆ ನೀರು ಹೀಗೆ... ಸಾಲು ಸಾಲು ಸಮಸ್ಯೆಗಳು ಕಣ್ಣಿಗೆ ಬೀಳುತ್ತವೆ.

ಸುಮಾರು 6 ಸಾವಿರ ಜನಸಂಖ್ಯೆಯ ಊರಲ್ಲಿ 1,200 ಮನೆಗಳಿವೆ. 3,300 ಮತದಾರರಿದ್ದಾರೆ. ಸ್ಥಳೀಯ ಗ್ರಾಮ ಪಂಚಾಯ್ತಿ ಹಾಗೂ ಜನಪ್ರತಿನಿಧಿಗಳ ನಿರ್ಲಕ್ಷ್ಯದಿಂದಾಗಿ ಗ್ರಾಮಸ್ಥರು ಹೆಜ್ಜೆ ಹೆಜ್ಜೆಗೂ ಸಮಸ್ಯೆ ಎದುರಿಸುತ್ತಿದ್ದಾರೆ. ಕನಿಷ್ಠ ಮೂಲಸೌಲಭ್ಯಕ್ಕಾಗಿ ಪರದಾಡುತ್ತಿದ್ದಾರೆ.

‘ರಸ್ತೆಬದಿ ಬಿದ್ದಿರುವ ಕಸವನ್ನು ಈ ಹಿಂದೆ ನಿಯಮಿತವಾಗಿ ವಿಲೇವಾರಿ ಮಾಡಲಾಗುತ್ತಿತ್ತು. ಈಗ ಆ ಪ್ರಕ್ರಿಯೆ ಸರಿಯಾಗಿ ನಡೆಯುತ್ತಿಲ್ಲ. ಎಲ್ಲೆಂದರಲ್ಲಿ ತಿಪ್ಪೆ ಗುಂಡಿಗಳಿದ್ದು, ಸುತ್ತಲಿನ ಪರಿಸರದಲ್ಲಿ ದುರ್ನಾತ ಹರಡುವುದು ಸಾಮಾನ್ಯವಾಗಿದೆ. ಹಾಗಾಗಿ ಮೂಗಿಗೆ ಕರವಸ್ತ್ರ ಕಟ್ಟಿಕೊಂಡೇ ಈ ಮಾರ್ಗದಲ್ಲಿ ಸಾಗುವ ಅನಿವಾರ್ಯತೆ ಇದೆ’ ಎಂದು ಗ್ರಾಮಸ್ಥರು ಅಳಲು ತೋಡಿಕೊಂಡರು.

ಊರಿನ ಎಲ್ಲ ಬಡಾವಣೆಗಳಲ್ಲಿ ಚರಂಡಿ ನಿರ್ಮಾಣವಾಗಿಲ್ಲ. ಹಾಗಾಗಿ ಕೆಲವು ಮನೆಗಳ ಕೊಳಚೆ ನೀರು ರಸ್ತೆ ಮೇಲೆ ನಿಲ್ಲುತ್ತಿದೆ. ಸೊಳ್ಳೆಗಳ ಹಾವಳಿ ಮಿತಿಮೀರಿದ್ದು, ಸಾಂಕ್ರಾಮಿಕ ಕಾಯಿಲೆ ಹರಡುವ ಭೀತಿ ನಮ್ಮನ್ನು ಕಾಡುತ್ತಿದೆ’ ಎಂದು ಸ್ಥಳೀಯ ಮಹಿಳೆ ಕಮಲಮ್ಮ ದೂರಿದರು.

ಜನರಿಗೆ ಉತ್ತರಿಸುವುದೇ ಕಷ್ಟವಾಗಿದೆ: ‘ಸರ್ಕಾರದಿಂದ ಬಿಡುಗಡೆಯಾಗುವ ಅನುದಾನ ಸರಿಯಾಗಿ ನಮ್ಮ ಕೈಗೆಟುಕುತ್ತಿಲ್ಲ. ಹಾಗಾಗಿ ಕ್ರಿಯಾಯೋಜನೆ ಅನುಸಾರವಾಗಿ ಅಭಿವೃದ್ಧಿ ಕೆಲಸ ಕೈಗೊಳ್ಳಲು ಅನನುಕೂಲವಾಗುತ್ತಿದೆ. ಜನರಿಗೆ ಉತ್ತರಿಸುವುದೇ ಕಷ್ಟವಾಗಿದೆ. ಲಭ್ಯವಿರುವ ಅನುದಾನದಲ್ಲಿ ಹಲವು ಅಭಿವೃದ್ಧಿ ಕಾರ್ಯ ಕೈಗೊಳ್ಳಲಾಗುತ್ತಿದೆ. ಬಾಕಿ ಉಳಿದಿರುವ ಕೆಲಸಗಳನ್ನು ಪೂರ್ಣಗೊಳಿಸಲಾಗುವುದು’ ಎಂದು ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಸಂತೋಷ ಮಾಲದಿನ್ನಿ ‘ಪ್ರಜಾವಾಣಿ’ಗೆ ತಿಳಿಸಿದರು.

ಆನಿಗೋಳ ಗ್ರಾಮಸ್ಥರಿಗೆ ಅಗತ್ಯವಿರುವ ಮೂಲಸೌಲಭ್ಯ ಒದಗಿಸುವಂತೆ ಪಿಡಿಒಗೆ ಸೂಚಿಸುತ್ತೇನೆ. ಗ್ರಾಮಸ್ಥರೂ ಶುಚಿತ್ವಕ್ಕೆ ಒತ್ತು ನೀಡಿ ಆಡಳಿತ ವ್ಯವಸ್ಥೆಯೊಂದಿಗೆ ಕೈಜೋಡಿಸಬೇಕು –ಸುಭಾಸ ಸಂಪಗಾಂವ ಕಾರ್ಯನಿವಾರ್ಹಕ ಅಧಿಕಾರಿ ಬೈಲಹೊಂಗಲ ತಾ.ಪಂ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT